ವಿಜಯ ದರ್ಪಣ ನ್ಯೂಸ್…..
ಅಮಾವಾಸ್ಯೆ ಪ್ರಯುಕ್ತ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ವಿಶೇಷ ಪೂಜೆ ಹಾಗೂ ಮಹಾ ಪ್ರತ್ಯಂಗಿರಾ ಹೋಮ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಪ್ಪನಹಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಶ್ರೀ ಪ್ರತ್ಯಂಗಿರಾ ಶಕ್ತಿ ಪೀಠದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಹಾಗೂ ಪ್ರತ್ಯಂಗಿರಾ ಹೋಮ.
ಅಮಾವಾಸ್ಯೆಯ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು, ಶ್ರೀ ಭದ್ರಕಾಳಿ ಅಮ್ಮನವರಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ಸೇವೆ ನೆರವೇರಿಸಲಾಯಿತು. ವಿವಿಧ ಪುಷ್ಪಗಳಿಂದ ಅಮ್ಮನವರನ್ನು ಅಲಂಕರಿಸಿ, ವಿಶೇಷ ಪೂಜೆ ಹಾಗೂ ಆರಾಧನೆ ಸಲ್ಲಿಸಲಾಯಿತು. ಬಳಿಕ ಅಮ್ಮನವರ ಪ್ರಾಕಾರೋತ್ಸವವನ್ನು ಭಕ್ತಿಭಾವದಿಂದ ನಡೆಸಲಾಯಿತು.
ದೇವಾಲಯದ ಪ್ರಧಾನ ಅರ್ಚಕರು ಹಾಗೂ ಪೀಠಾಧಿಪತಿಗಳಾದ ನಾಗರಾಜ್ ಶಾಸ್ತ್ರಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಮಹಾ ಪ್ರತ್ಯಂಗಿರಾ ಹೋಮವನ್ನು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಹೋಮದ ಸಂದರ್ಭದಲ್ಲಿ ವೇದಮಂತ್ರಗಳ ಘೋಷ, ಮಂಗಳವಾದ್ಯ ಹಾಗೂ ಧಾರ್ಮಿಕ ಆಚರಣೆಗಳಿಂದ ದೇವಾಲಯದ ವಾತಾವರಣ ಭಕ್ತಿಮಯವಾಗಿತ್ತು.
ಪೀಠಾಧಿಪತಿ ನಾಗರಾಜ್ ಶಾಸ್ತ್ರಿಗಳು, ಮಾತನಾಡಿ ಪ್ರತ್ಯಂಗಿರಾ ದೇವಿಯ ಆರಾಧನೆ ಹಾಗೂ ಪ್ರತ್ಯಂಗಿರಾ ಹೋಮದ ಧಾರ್ಮಿಕ ಮಹತ್ವವನ್ನು ಭಕ್ತರಿಗೆ ವಿವರಿಸಿದರು. ಪ್ರತ್ಯಂಗಿರಾ ದೇವಿಯ ಆರಾಧನೆಯು ದುಷ್ಟಶಕ್ತಿಗಳ ನಿವಾರಣೆ, ನಕಾರಾತ್ಮಕ ಶಕ್ತಿಗಳ ದೂರೀಕರಣ ಹಾಗೂ ಭಕ್ತರ ಮನಸ್ಸಿನಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸುವ ನಂಬಿಕೆಯನ್ನು ಹೊಂದಿದೆ ಎಂದು ತಿಳಿಸಿದರು.

ಅಮಾವಾಸ್ಯೆಯ ದಿನದಂದು ವಿಶೇಷ ಪೂಜೆ, ಹೋಮ ಹಾಗೂ ದೇವಿಯ ಆರಾಧನೆಯಲ್ಲಿ ಭಾಗವಹಿಸುವುದರಿಂದ ಭಕ್ತರಲ್ಲಿ ಆಧ್ಯಾತ್ಮಿಕ ಶಾಂತಿ ಮತ್ತು ಧನಾತ್ಮಕ ಚಿಂತನೆ ಮೂಡುತ್ತದೆ. ಭಕ್ತರು ಶ್ರದ್ಧೆ, ನಂಬಿಕೆ ಹಾಗೂ ಭಕ್ತಿಭಾವದಿಂದ ದೇವಿಯ ಆರಾಧನೆ ಮಾಡುವ ಮೂಲಕ ತಮ್ಮ ಕುಟುಂಬದ ನೆಮ್ಮದಿ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ನಾಗರಾಜ್ ಶಾಸ್ತ್ರಿಗಳು ತಿಳಿಸಿದರು.
ವಿಶೇಷ ಪೂಜಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಳಪ್ಪನಹಳ್ಳಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.











