ವಿಜಯ ದರ್ಪಣ ನ್ಯೂಸ್….
ಅರ್ಜುನ ವಿನಾಯಕ ಗೆಳೆಯರ ಬಳಗದ ವಿಜೃಂಭಣೆಯ ಗಣೇಶೋತ್ಸವ: ಸಡಗರದಿಂದ ಮೂರ್ತಿ ವಿಸರ್ಜನೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ಅರ್ಜುನ ವಿನಾಯಕ ಗೆಳೆಯರ ಬಳಗದ ವತಿಯಿಂದ ಮೂರನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 11 ದಿನಗಳ ಕಾಲ ನಿರಂತರವಾಗಿ ಗಣೇಶನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರತಿದಿನ ಸಂಜೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹಾಗೂ ಗ್ರಾಮಸ್ಥರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಬೃಹತ್ ಗಣೇಶನ ವಿಗ್ರಹವು ಭಕ್ತರು ಹಾಗೂ ಸಾರ್ವಜನಿಕರ ಕಣ್ಮನ ಸೆಳೆಯುವಂತಿತ್ತು. ಕೊನೆಯ ದಿನವಾದ ಗುರುವಾರ ಸಂಜೆ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡ ವಿಶೇಷ ಪಲ್ಲಕ್ಕಿಯೊಂದಿಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ವಿಶೇಷ ವಾದ್ಯಮೇಳ ಹಾಗೂ ವೀರಗಾಸೆ ಕುಣಿತ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ತಾವರೆಕೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಡಗರದಿಂದ ಮೆರವಣಿಗೆ ಸಾಗಿದ ಬಳಿಕ ಗ್ರಾಮದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಭಕ್ತಿಭಾವದಿಂದ ವಿಸರ್ಜನೆ ಮಾಡಲಾಯಿತು.
ಅರ್ಜುನ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳಿಂದ ಗ್ರಾಮಸ್ಥರು, ಭಕ್ತರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಗಣೇಶೋತ್ಸವವು ಗ್ರಾಮದಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಸಂಭ್ರಮದ ವಾತಾವರಣ ಮೂಡಿಸುವಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದರು.









