ವಿಜಯ ದರ್ಪಣ ನ್ಯೂಸ್…..
ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ದರ್ಶನ: ಥಾವರಚಂದ್ ಗೆಹ್ಲೋತ್

ತಾಂಡವಪುರ ಮಾರ್ಚ್ 25: ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಕೇವಲ ದಾರ್ಶನಿಕ ಉದಾಹರಣೆ ಮಾತ್ರವಾಗಿರದೆ ಬದಲಾಗಿ ಭಾರತದ ಆತ್ಮ, ಸಂಸ್ಕೃತಿ, ಯೋಚನೆ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದೆ. ಈ ವಿಚಾರಧಾರೆಯು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜೀವನ ಮೌಲ್ಯಗಳಾಧಾರಿತ ಸಮಗ್ರದೃಷ್ಟಿಕೋನವನ್ನು ಪ್ರಸ್ತುತ ಪಡಿಸುವ ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ಜೀವನದರ್ಶನವಾಗಿದೆ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋತ್ ಹೇಳಿದರು
ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಷಯದ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಭಾರತ ದೇಶ ತನ್ನ ಮಹಾನ್ ನಾಗರಿಕತೆ ಮತ್ತು ಸಂಸ್ಕೃತಿಯ ಕಾರಣ ಜಾಗತಿಕ ವೇದಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಕಾಲಕಾಲಕ್ಕೆ ಅನೇಕ ಮಹಾನ್ ವಿಭೂತಿಪುರುಷರು ಭಾರತದಲ್ಲಿ ಅವತರಿಸಿ ಇಲ್ಲಿನ ಮಹಾನ್ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ.
ಈ ಮಹಾನ್ ಪುರುಷರ ಮೂಲಕ ಸ್ಥಾಪಿತಗೊಂಡ ಮಹಾನ್ ಪರಂಪರೆಯು ಸಮಾಜ ಮತ್ತು ರಾಷ್ಟ್ರಕ್ಕೆ ಕಾಲಕಾಲಕ್ಕೆ ಪಥದರ್ಶಕದಂತೆ ಕಾರ್ಯನಿರ್ವಹಿಸಿದೆ. ಕುಶಲ ಸಂಘಟಕ, ದಾರ್ಶನಿಕ, ಪ್ರಖರ ವಾಗ್ಮಿ, ಆರ್ಥಿಕ ತಜ್ಞ, ಕಾರ್ಯಕರ್ತ ಪಂಡಿತ ದೀನ ದಯಾಳ ಉಪಾಧ್ಯಾಯರು ತಮ್ಮ ಐತಿಹಾಸಿಕ ವ್ಯಾಖ್ಯಾನಮಾಲೆಯಲ್ಲಿ ಏಕಾತ್ಮ ಮಾನವದರ್ಶನವೆಂಬ ಸಮಗ್ರದರ್ಶನದ ದೃಷ್ಟಿಕೋನವನ್ನು 60 ವರ್ಷಗಳ ಹಿಂದೆ ನೀಡಿದ್ದರು. ಅದು ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ನಡುವಿನ ಸಮನ್ವಯದ ಕುರಿತು ತಿಳಿಸುವ ಅದ್ಭುತ ದರ್ಶನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೀನ ದಯಾಳ ಉಪಾಧ್ಯಾಯರ ಚಿಂತನೆಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ಅನುಷ್ಠಾನಗೊಳಿಸುವುದಕ್ಕಾಗಿ ದೇಶದಾದ್ಯಂತ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಶ್ಲಾಘನೀಯ. ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ತಮ್ಮ ಜೀವನವನ್ನು ಮುನ್ನಡೆಸಿದರು.
ಅವರ ಕನಸು ಮತ್ತು ನನಸಿನಲ್ಲೂ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಿತ್ತು. ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಗತಿಯ ಜೊತೆಗೆ ಸಮಾನತೆ, ಸಹಕಾರ, ಪ್ರಕೃತಿಯೊಂದಿಗೆ ಸಮನ್ವಯದ ಕುರಿತು ತಿಳಿಸುವ ಭೌತಿಕ ಪ್ರಗತಿಯ ಜೊತೆಗೆ ಆಧ್ಯಾತ್ಮಿಕ ಮೌಲಗಳ ಮೇಳೈಸುವಿಕೆಯ ದೀನ ದಯಾಳರ ಏಕಾತ್ಮ ಮಾನವದರ್ಶನದ ಚಿಂತನೆಗಳು ಅತ್ಯಗತ್ಯ. ರಾಜಕೀಯದಲ್ಲಿ ಮೌಲ್ಯಾಧಾರಿತ ಪ್ರಜ್ಞೆಯನ್ನು ಮೂಡಿಸುವುದಕ್ಕೆ, ಗ್ರಾಮದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಮೂಡಿಸುವುದಕ್ಕೆ ದೀನದಯಾಳರ ಅಂತ್ಯೋದಯದ ಕಲ್ಪನೆ ಸಹಕಾರಿ. ಇಂದು ಇಡೀ ಜಗತ್ತು ಶಾಂತಿಯಿಂದ ಇರಬೇಕು ಎಂದು ಬಯಸುವ ಏಕೈಕ ರಾಷ್ಟ್ರ ಭಾರತ. ಅಂತಹ ಭಾರತೀಯ ಚಿಂತನೆಯ ಮೌಲ್ಯಗಳ ರೂಪ ದೀನದಯಾಳ ಉಪಾಧ್ಯಾಯರಾಗಿದ್ದರು ಎಂದು ನುಡಿದರು.
ವೀಡಿಯೋ ಮೂಲಕ ಮಾತನಾಡಿದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ದೀನದಯಾಳ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನದ 60ನೇ ವರ್ಷದ ನಿಮಿತ್ತ ಆಯೋಜಿಸಿರುವ ಈ ಕಾರ್ಯಕ್ರಮ ಒತ್ತಡ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಧರ್ಮದ ಮೂಲಕ ಜೀವನವನ್ನು ಸಮೃದ್ಧಗೊಳಿಸುವ ಕುರಿತು ತಿಳಿಸುತ್ತದೆ.
ದೀನ ದಯಾಳರ ಚಿಂತನೆಗಳು ನಮ್ಮ ಹಕ್ಕುಗಳು ಮಾತ್ರವಲ್ಲದೇ, ನಮ್ಮ ಕರ್ತವ್ಯದ ಕುರಿತು ತಿಳಿಸುತ್ತದೆ. 2047ರ ವಿಕಸಿತ ಭಾರತ ಕಲ್ಪನೆಯು ದೀನದಯಾಳ ಉಪಾಧ್ಯಯ ಅವರ ಏಕಾತ್ಮ ಮಾನವ ದರ್ಶನದ ಆಶಯವನ್ನು ಹೊಂದಿದೆ. ಅದು ಕೇವಲ ಆರ್ಥಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಿರದೇ ಸರ್ವಾಂಗೀಣ ವಿಕಾಸವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಜ್ಞಾಪ್ರವಾಹದ ಕರ್ನಾಟಕ ದಕ್ಷಿಣ ಸಂಯೋಜಕ ಡಾ.ಪ್ರದೀಪ ಭಾರದ್ವಾಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ನವೀನಕುಮಾರ ಎಸ್ ಕೆ, ನವದೆಹಲಿಯ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿನಯಕುಮಾರ್ ಸಿಂಗ ಉಪಸ್ಥಿತರಿದ್ದರು.
ಸರ್ಕಾರದ ರದ್ದು ಆದೇಶ ಧಿಕ್ಕರಿಸಿ ಕೆಎಸ್ಒಯುನಲ್ಲಿ ಸಮ್ಮೇಳನ
ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ‘ಏಕಾತ್ಮ ಮಾನವ ದರ್ಶನ-ಭಾರತದ ವಿಶ್ವದೃಷ್ಟಿ’ ಅಂತರರಾಷ್ಟ್ರೀಯ ಸಮ್ಮೇಳನವು ರಾಜ್ಯ ಸರ್ಕಾರದ ರದ್ದು ಆದೇಶವನ್ನು ಧಿಕ್ಕರಿಸಿ ಬುಧವಾರ ಆರಂಭವಾಯಿತು. ಪ್ರಜ್ಞಾ ಪ್ರವಾಹ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನವು ಆಯೋಜಿಸಿರುವ ಸಮ್ಮೇಳನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಚಾಲನೆ ನೀಡಿದರು.
ಇದು ವಿಶ್ವವಿದ್ಯಾಲಯದ ಅಧಿಕೃತ ಕಾರ್ಯಕ್ರಮ ಅಲ್ಲ. ಜಾಗವನ್ನು ಮಾತ್ರ ಬಾಡಿಗೆಗೆ ನೀಡಲಾಗಿದೆ’ ಎಂದು ಸರ್ಕಾರದ ನೋಟಿಸ್ ಗೆ ಉತ್ತರಿಸಿದ್ದ ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರೇ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರಜ್ಞಾ ಪ್ರವಾಹ ಸಂಸ್ಥೆಯ ದಕ್ಷಿಣ ಪ್ರಾಂತದ ಸಂಚಾಲಕ ಪ್ರದೀಪ್ ಭಾರದ್ವಾಜ್ ಪಾಲ್ಗೊಂಡಿದ್ದರು. ವರ್ಚುವಲ್ ಮೂಲಕ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಮಾತನಾಡಿದರು.
ಶೈಕ್ಷಣಿಕ ಸಮ್ಮೇಳನಕ್ಕೆ ದೇಶದ ೬೪೦ ಮಂದಿ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ೪೨೩ ಮಂದಿ ಭಾಗಿಯಾಗಿದ್ದು, ೧೧೮ ವಿವಿಧ ತಜ್ಞರು ಪ್ರಬಂಧ ಮಂಡಿಸುತ್ತಿದ್ದಾರೆ’ ಎಂದು ಪ್ರಜ್ಞಾ ಪ್ರವಾಹ ಸಂಸ್ಥೆಯ ಪ್ರದೀಪ್ ಭಾರದ್ವಾಜ್ ಹೇಳಿದರು. ಕೆಎಸ್ಒಯು ಶಿಷ್ಟಾಚಾರ ಉಲ್ಲಂಘಿಸಿ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲವೆಂದು ಕಾರ್ಯಕ್ರಮ ರದ್ದುಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಮಂಗಳವಾರ ಆದೇಶ ಹೊರಡಿಸಿತ್ತು









