ವಿಜಯ ದರ್ಪಣ ನ್ಯೂಸ್…..
ಗುರುಕೃಪೆ ಇಲ್ಲದೆ ಸಾಧನೆ ಸಾಧ್ಯವಿಲ್ಲ : ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್

ಶಿಡ್ಲಘಟ್ಟ : ಆತ್ಮವಿದ್ಯೆಯ ಸಾಧನೆಯನ್ನು ಮಾಡಬೇಕಾದರೆ ಗುರುಕೃಪೆ ಬೇಕೆ ಬೇಕು ಗುರುಕೃಪೆ ಇಲ್ಲದೆ ಸಾಧನೆ ಸಾಧ್ಯವಿಲ್ಲ ಗುರುಕೃಪೆ ಪಡೆಯುವವರೆಗೂ ನಾವು ಅಜ್ಞಾನದಲ್ಲಿಯೇ ಇರುತ್ತೇವೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ತಿಳಿಸಿದರು.
ನಗರದ ಶ್ರೀಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಕೈವಾರ ಯೋಗಿನಾರೇಯಣ ಮಠದಿಂದ ಹಮ್ಮಿಕೊಂಡಿರುವ ಕೈವಾರ ತಾತಯ್ಯ ಜಯಂತಿ ಅಂಗವಾಗಿ ಪೋತನ ಭಾಗವತ, ಶ್ರೀಅಮರನಾರಾಯಣ ಶತಕದ ಪ್ರವಚನ ಸಪ್ತಾಹದಲ್ಲಿ ಬಾಗವಹಸಿ ಅವರು ಮಾತನಾಡಿದರು.
ಶಿಷ್ಯನ ಆತ್ಮ ಪ್ರಕಾಶ ಮಾಡುವ ಗುರುವೇ ಶ್ರೇಷ್ಠ ಗುರುಗಳು ಶಿಷ್ಯನ ಆತ್ಮ ಪ್ರಕಾಶವನ್ನು ಮಾಡಬೇಕಾದರೆ ಗುರುವಿನ ಅನುಭವ ಅಗಾಧವಾಗಿರಬೇಕು ಎಂದು ಹೇಳಿದರು.
ಭಾಗವತವು ಗುರುಶಿಷ್ಯರ ಪರಂಪರೆಯನ್ನು ಹೇಳುತ್ತದೆ ಇದು ಒಂದು ಸಾಧನೆಯ ಮಾರ್ಗ ಸಾಧನೆಗೂ ಶಾಸ್ತ್ರದ ಓದಿಗೂ ಸಂಬಂಧವಿಲ್ಲ ಸಾಧನೆಯೇ ಬೇರೆ ಓದೇ ಬೇರೆ ಎಂದು ನುಡಿದರು.
ಅಜ್ಞಾನದ ಅಂಧಕಾರದಲ್ಲಿರುವ ನಮಗೆ ಭಾಗವತದ ಭಕ್ತಿ ಜ್ಞಾನದ ಮಿಶ್ರಣವು ನಮಗೆ ಜ್ಞಾನ ಬೋಧೆಯನ್ನು ಮಾಡುತ್ತಾ ದಾರಿ ತೋರುತ್ತದೆ ಎಂದರು.
ಭಾಗವತ ಪ್ರವಚನಕಾರ ಮಂಕಾಲ ಶ್ರೀಹರಿಶರ್ಮ ಪೋತನ ಪ್ರವಚನವನ್ನು ನೀಡಿದರು, ಪ್ರವಚನದಲ್ಲಿ ಪೋತನ ಭಾಗವತದ ಭಾಗವತ, ಅಮರನಾರೇಯಣ ಶತಕದ ಹಲವಾರು ಘಟ್ಟಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಇದೇ ವೇಳೆ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು, ವಿದುಷಿ ಮಂಜುಳಾ ಜಗದೀಶ್ ತಂಡದವರಿಂದ ನಾಮ ಸಂಕೀರ್ತನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೈವಾರ ಯೋಗಿನಾರೇಯಣ ಟ್ರಸ್ಟ್ನ ಉಪಾಧ್ಯಕ್ಷ ಜಿ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಶ್ರೀಸೋಮೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಡಾಲ್ಫಿನ್ ಎ.ನಾಗರಾಜ್, ಮುಖಂಡರಾದ ಎಸ್.ವಿ.ನಾಗರಾಜರಾವ್, ಡಾ.ಸತ್ಯನಾರಾಯಣರಾವ್, ರಾಘವೇಂದ್ರ (ಬಳೆರಘು), ಮುರಳಿ, ಶ್ರೀನಾಥ್ ಮುಂತಾದವರು ಹಾಜರಿದ್ದರು.










