ವಿಜಯ ದರ್ಪಣ ನ್ಯೂಸ್….
ತುಟಿಭತ್ಯೆ ತಡೆ ಖಂಡಿಸಿ ಬಿಎಸ್‌ಎನ್‌ಎಲ್ ಪಿಂಚಣಿದಾರರ ಪ್ರತಿಭಟನೆ

ತಾಂಡವಪುರ ಏಪ್ರಿಲ್ 16 ಮೈಸೂರಿನಲ್ಲಿ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ಜ.೧ರಿಂದ ಕೊಡಬೇಕಿರುವ ತುಟ್ಟಿ ಭತ್ಯೆ ತಡೆ ಹಿಡಿದಿರುವುದನ್ನು ಖಂಡಿಸಿ ಬಿಎಸ್‌ಎನ್‌ಎಲ್ ಪಿಂಚಣಿದಾರ ಜಂಟಿ ವೇದಿಕೆವತಿಯಿಂದ ಜಯಲಕ್ಷ್ಮಿಪುರಂನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ತುಟ್ಟಿ ಭತ್ಯೆ ತಡೆ ಹಿಡಿದಿರುವ ಕ್ರಮ ನಿರಾಧಾರ, ಅರ್ಥಹೀನ ಮತ್ತು ಅಸಂಬದ್ಧ. ಡಿಒಟಿ ಸೇವೆಯಿಂದ ಬಿಎಸ್‌ಎನ್‌ಎಲ್‌ಗೆ ಅಭಿಯುಕ್ತಿಗೊಂಡ ನೌಕರರನ್ನು ನಿವೃತ್ತಿಯ ನಂತರ ಕೇಂದ್ರ ಸರ್ಕಾರದ ಪಿಂಚಣಿದಾರರೆಂದು ಪರಿಗಣಿಸುವುದಾಗಿ ಬಿಎಸ್‌ಎನ್‌ಎಲ್ ಸ್ಥಾಪನೆಯಾದ ವರ್ಷದ(೨೦೦೦) ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನವಾಗಿದೆ.
ಅವರ ಪಿಂಚಣಿ ಮತ್ತು ತುಟ್ಟಿ ಭತ್ಯೆಯನ್ನು ನೌಕರರು ಸೇವೆಯಲ್ಲಿದ್ದಾಗ ವಂತಿಗೆ ರೂಪದಲ್ಲಿ ಕೊಟ್ಟಿರುವ ಸಂಚಿತ ನಿಧಿ ಯಿಂದ ಕೊಡಲ್ಪಡುತ್ತದೆಯೇ ವಿನಃ, ಯಾವುದೇ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಯಿಂದ ಪಿಂಚಣಿ ಕೊಡುವುದಿಲ್ಲ.
ಹೀಗಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯ ಲಾಭ-ನಷ್ಟದ ಆಧಾರದ ಮೇಲೆ ಪಿಂಚಣಿದಾರರ ತುಟ್ಟಿ ಭತ್ಯೆ ತಡೆಹಿಡಿಯುವುದು ಅನೈತಿಕ ಮತ್ತು ಅಸಂಬದ್ಧ. ಈ ಕೂಡಲೇ ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ಜ.೧ರಿಂದ ಕೊಡಬೇಕಿರುವ ತುಟ್ಟಿ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ವಿಷಕಂಠಮೂರ್ತಿ, ರಾಜಶೇಖರ್, ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.











