ವಿಜಯ ದರ್ಪಣ ನ್ಯೂಸ್…
ಕುರುಕ್ಷೇತ್ರ ನಾಟಕ ಉದ್ಘಾಟನೆ ಮಾಡಿ ಭಾವನಾತ್ಮಕವಾಗಿ ನುಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ: ಕುಂದಾಣ ಗ್ರಾಮದ ಜೊತೆ ನನಗೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮಣ್ಣಿನ ಒಡನಾಟ ಮತ್ತು ಜನರ ಪ್ರೀತಿ ನನ್ನ ಜೀವನದ ಅಚ್ಚಳಿಯದ ನೆನಪುಗಳು ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಭಾವನಾತ್ಮಕವಾಗಿ ನುಡಿದರು.
ಕುಂದಾಣ ಗ್ರಾಮದಲ್ಲಿ ಕಳೆದ ರಾತ್ರಿ ಶ್ರೀ ಓಂ ಶಕ್ತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕುಂದಾಣದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮವಿರಲಿ, ಕುಂದಾಣಕ್ಕೆ ಬಂದರೆ ಸಾಕು ನನ್ನ ಹಳೆಯ ಚರಿತ್ರೆ ಕಣ್ಣ ಮುಂದೆ ಬರುತ್ತದೆ. ಸುಮಾರು 25-30 ವರ್ಷಗಳ ಹಿಂದೆ ನಾನು ಈ ಊರಿನಲ್ಲಿ ವಾಸವಿದ್ದೆ. ಗೋಪಾಲಣ್ಣ, ಅವರ ಮಗ ರಾಜಶೇಖರ್, ಕಾಳಪ್ಪ ಹಾಗೂ ಬಚ್ಚಣ್ಣನವರಂತಹ ಆತ್ಮೀಯರ ಜೊತೆ ಕಳೆದ ದಿನಗಳು ಇಂದಿಗೂ ನೆನಪಿವೆ. ಈ ಗ್ರಾಮದ ಜನರ ಸಹವಾಸ ಮತ್ತು ಪ್ರೀತಿಯೇ ನನ್ನನ್ನು ಇಂದು ಶಾಸಕನಾಗಿ ಬೆಳೆಸಿದೆ ಎಂದರೆ ತಪ್ಪಾಗಲಾರದು ಎಂದರು.
ಗ್ರಾಮದಲ್ಲಿ ಕಲಾವಿದರ ಮತ್ತು ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಮಣ್ಣಿನಲ್ಲಿ ಅತ್ಯುತ್ತಮ ಕಲಾವಿದರು ಸೃಷ್ಟಿಯಾಗುತ್ತಿದ್ದಾರೆ. ಕೇವಲ ನಾಟಕ ಆಡುವುದಷ್ಟೇ ಮುಖ್ಯವಲ್ಲ, ಅಂತಹ ಕಲೆಗೆ ಪ್ರೋತ್ಸಾಹ ನೀಡುವ ಕಲಾ ಪೋಷಕರು ನೀವಿರುವುದು ಬಹಳ ಸಂತೋಷದ ವಿಷಯ. ಪ್ರತಿ ವರ್ಷ ತಪ್ಪದೇ ಇಲ್ಲಿ ನಾಟಕಗಳು ನಡೆಯುತ್ತಿರುವುದು ಸಂಸ್ಕೃತಿಯ ಉಳಿವಿಗೊಂದು ದಾರಿದೀಪ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ಸಿ.ಮಂಜುನಾಥ್, ಕಿಶೋರ್, ಲಕ್ಷ್ಮಣ್, ಟಿ.ರವಿ, ಕೆ.ವಿ.ಸ್ವಾಮಿ, ಮುನಿಕೃಷ್ಣಪ್ಪ, ಕ್ಯಾತೇಗೌಡ, ಆನಂದ್ ಅಮರ್, ಪುನೀತ್ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ನೂರಾರು ಕಲಾಭಿಮಾನಿಗಳು ಭಾಗವಹಿಸಿದ್ದರು. ‘ಕುರುಕ್ಷೇತ್ರ’ ನಾಟಕದ ಅದ್ಭುತ ಪ್ರದರ್ಶನವು ಮನಸೂರೆಗೊಂಡಿತು.









