ವಿಜಯ ದರ್ಪಣ ನ್ಯೂಸ್…..
ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವ

ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ ನಯನ ಸಭಾಂಗಣದಲ್ಲಿ ಇಂದು ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ ) ವತಿಯಿಂದ 2 ದಿನಗಳ ಕಾಲ ರಣದುಂದುಭಿ ಹಾಗೂ ವರ ಭ್ರಷ್ಟ ಎಂಬ ಸುಂದರ ಐತಿಹಾಸಿಕ ನಾಟಕೋತ್ಸವ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಕೆ ವಿ ನಾಗರಾಜ್ ಮೂರ್ತಿ, ಹಿರಿಯ ಪತ್ರಕರ್ತ ಚಂದ್ರಶೇಖರ್ ಯಲಬುರ್ತಿ ಆವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಆವರು ಇಂದಿನ ಒತ್ತಡದ ಬದುಕಿನಲ್ಲಿ ಜೀವನದ ಮೌಲ್ಯಗಳನ್ನು ತಿಳಿಸುವ ಇಂತಹ ಐತಿಹಾಸಿಕ ನಾಟಕಗಳು ಈ ಮಾಯನಗರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಷಯ, ಜೊತೆಗೆ ಏಐ ಯುಗದಲ್ಲಿ ರಂಗಭೂಮಿ ಎಂದೆಂದಿಗೂ ಪ್ರಸ್ತುತ ಎಂದು ನಾಟಕೋತ್ಸವ ಆಯೋಜಿಸಿರುವ ಅಮ್ಮನ ಮಡಿಲು ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪತ್ರಕರ್ತ ಚಂದ್ರಶೇಖರ್ ಯಲಬುರ್ತಿ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಇಂತಹ ನಾಟಕಗಳನ್ನು ಏರ್ಪಡಿಸಿ ಕಲೆಯನ್ನು ನಿರಂತರವಾಗಿ ಮುಂದಿನ ಪೀಳಿಗೆಗೆ ಜೀವಂತವಾಗಿ ಇಡಲು ಶ್ರಮಿಸುತ್ತಿರುವ ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ವರಲಕ್ಷ್ಮಿ ಅವರಿಗೆ ಅಭಿನಂದನೆಗಳು. ಮೂಲತಃ ವರಲಕ್ಷ್ಮಿ ರಂಗಭೂಮಿ, ಹಾಗೂ ಚಲನಚಿತ್ರ ಕಲಾವಿದರು, ನೂರಾರು ನಾಟಕ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಲಾವಿದೆಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಇಂತವರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಇವರ ಕಲಾಸೇವೆ ಗುರುತಿಸಿ ಸರ್ಕಾರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರ ಹಾಗೂ ನಾಟಕ ಅಕಾಡೆಮಿ ಯನ್ನು ಒತ್ತಾಯಿಸಿದರು.











