ಸುಂಡಹಳ್ಳಿಯಲ್ಲಿ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಶ್ರವಣಬೆಳಗೊಳ: ಗ್ರಾಮೀಣ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪರಂಪರೆಯನ್ನು ಉಳಿಸಿ ಬೆಳೆಸಲು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗುತ್ತವೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಆರ್.ರಘು ಹೇಳಿದರು.
ಶ್ರವಣಬೆಳಗೊಳ ಹೋಬಳಿಯ ಸುಂಡಹಳ್ಳಿ ಗ್ರಾಮದಲ್ಲಿ ಶ್ರೀ ಕೆರೆಕೋಡಮ್ಮ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಜನಾಂಗ ಪಾಶ್ಚಾತ್ಯ ತಿನಿಸುಗಳಿಗೆ ಮನಸೋತು ಆರೋಗ್ಯಕರವಾದ ದೇಸಿ ಆಹಾರವನ್ನು ನಿರ್ಲಕ್ಷಿಸುತ್ತಿದ್ದು, ಇಂತಹ ಸ್ಪರ್ಧೆಗಳ ಮೂಲಕ ರಾಗಿಯ ಮಹತ್ವವನ್ನು ಸಾರುವ ಕಾರ್ಯ ಶ್ಲಾಘನೀಯ ಎಂದರು.
ಈ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ 300 ರೂಪಾಯಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿತ್ತು. ನಾಟಿಕೋಳಿ ಸಾರು, ಮಾಂಸದ ಜತೆಗೆ 250 ಗ್ರಾಂ ತೂಕದ ಮುದ್ದೆಯನ್ನು ನೀಡಲಾಗಿದ್ದು, ಸ್ಪರ್ಧೆಗೆ 45 ನಿಮಿಷ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಸಮಯದಲ್ಲಿ ಹೆಚ್ಚು ಮುದ್ದೆ ಮತ್ತು ನಾಟಿ ಕೋಳಿ ಸಾರು ಸೇವಿಸಿದ ಸ್ಪರ್ಧಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಸ್ಪರ್ಧೆಯಲ್ಲಿ ಸುಂಡಹಳ್ಳಿ ಗ್ರಾಮದ ಯೋಗೇಶ ತಲಾ 250 ಗ್ರಾಂ ತೂಕದ 12 ಮುದ್ದೆಗಳನ್ನು (3 ಕೆ.ಜಿ.) ತಿಂದು ಪ್ರಥಮ ಸ್ಥಾನದೊಂದಿಗೆ 10 ಸಾವಿರ ಬಹುಮಾನ ಪಡೆದುಕೊಂಡರೆ. ಹಿರಿಬಿಳ್ತಿ ಗ್ರಾಮದ ನಾಗೇಗೌಡ 10 ಮುದ್ದೆಗಳನ್ನು (2.5 ಕೆ.ಜಿ.) ತಿಂದು ದ್ವಿತೀಯ ಸ್ಥಾನದೊಂದಿಗೆ 7 ಸಾವಿರ ಬಹುಮಾನ, ಹಳೆಬೆಳಗೊಳ ಗ್ರಾಮದ ದರ್ಶನ್ 9 ಮುದ್ದೆಗಳನ್ನು ತಿಂದು ತೃತೀಯ ಸ್ಥಾನದೊಂದಿಗೆ 5 ಸಾವಿರ ಬಹುಮಾನ ಹಾಗೂ ಹಳೆಬೆಳಗೊಳ ಗ್ರಾಮದ ಕವನ್‌ರಾಜ್ 9 ಮುದ್ದೆಗಳನ್ನು ತಿಂದು ತೃತೀಯ ಸ್ಥಾನದೊಂದಿಗೆ 3 ಸಾವಿರ ಬಹುಮಾನ ಹಾಗೂ ಪಾರಿತೋಷಕ ಪಡೆದುಕೊಂಡರು.
ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಸ್ಪರ್ಧೆಯು ಜನರ ಮೆಚ್ಚುಗೆಗೆ ಪಾತ್ರವಾಗಿ ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಕೆರೆಕೋಡಮ್ಮ ಯುವಕ ಸಂಘದ ಪದಾಧಿಕಾರಿಗಳಾದ ಜಯಕುಮಾರ್, ಗುರು, ರವಿಕುಮಾರ, ಚಂದು, ಸತೀಶ್ ಹಾಗೂ ಗ್ರಾಮಸ್ಥರು ಇದ್ದರು.