“ಅಕ್ಷರ ರಾಕ್ಷಸ ” ನೆಂದರೆ ಸುಮ್ನೇನಾ….❓ ಹಿರಿಯೂರು ಪ್ರಕಾಶ್

ವಿಜಯ ದರ್ಪಣ                                        ಬೆಂಗಳೂರು ಗ್ರಾ ಜಿಲ್ಲೆ . ಜುಲೈ 04

” ಅಕ್ಷರ ರಾಕ್ಷಸ ” ನೆಂದರೆ ಸುಮ್ನೇನಾ……?

‘ಪ್ರಾದೇಶಿಕತೆಯೇ ಜೀವಾಳ’ ವೆಂಬ‌ ಟ್ಯಾಗ್ ಲೈನಿನಲ್ಲಿ ಮಿರ ಮಿರ ಮಿಂಚುತ್ತಿರುವ ರಾಜ್ಯದ ಜನಪ್ರಿಯ “ಉದಯಕಾಲ” ದಿನಪತ್ರಿಕೆಯ ಸಂಪಾದಕ ಮಿತ್ರರಾದ ಪುಟ್ಟಲಿಂಗಯ್ಯನವರು ಇತ್ತೀಚೆಗೆ ಕರೆ ಮಾಡಿ ಅದೂ ಇದೂ ಮಾತನಾಡುವ ಸಂಧರ್ಭದಲ್ಲಿ ನನ್ನನ್ನು” ಅಕ್ಷರ ರಾಕ್ಷಸ ” ನೆಂದು ಕರೆದರು. ಅದನ್ನವರು ತಮಾಷೆಯಾಗಿ ಕರೆದರೋ, ಖುಷಿಯಿಂದ ಹೇಳಿದರೋ ಅಥವಾ ಮಾತಿನ‌ ಓಘದಲ್ಲಿ ಬಳಸಿದರೋ ಅಂತೂ ಇದಾವುದಪ್ಪ ಹೊಸ ಟೈಟಲ್ ಎಂದುಕೊಂಡು ” ಏನ್ ಸ್ವಾಮೀ ಹಾಗಂದ್ರೆ” ಎಂದೆ !

ಯಾರೋ ದೊಡ್ಡ ದೊಡ್ಡ ಬರಹಗಾರರನ್ನು ಅವರ ಅಗಾಧ ಸಾಹಿತ್ಯ ಸೇವೆಗಾಗಿ “ಅಕ್ಷರ ಬ್ರಹ್ಮ” ನೆಂದು ಗೌರವದಿಂದ ಕರೆದಿದ್ದು ನೆನಪಿತ್ತು. ಆದರೆ ಈ ಟೈಟಲ್ ಸ್ವಲ್ಪ ಡಿಫ಼ರೆಂಟಾಗಿ ಸೌಂಡ್ ಮಾಡಿದ್ದರಿಂದ ಹಾಗೆ ಸುಮ್ಮನೇ ಲೈಟಾಗಿ ಕೇಳಿದ್ದೆ. ಅದಕ್ಕೆ ಅವರು ” ದಿನಾ ಏನಾದ್ರೂ ಒಂದು ಪುಟಗಟ್ಟಲೆ ಬರೆದು ಪೋಸ್ಟ್ ಮಾಡ್ತಾನೇ ಕ್ರಿಯಾಶೀಲರಾಗಿರ್ತೀರಲ್ವಾ ! ಅದಕ್ಕೇ ಹೀಗೆಂದೆ. ! ಎಂದು ನಗುತ್ತಲೇ ಹೇಳಿದ್ದರು.

ಸ್ವಲ್ಪ ಸಮಾಧಾನವಾಗಿತ್ತು .

ಹಾಗೇ ನೋಡಿದಲ್ಲಿ ವಾರಕ್ಕೆ ಎರಡು ಮೂರು ಬರಹಗಳನ್ನು ಬರೆದು ಪೋಸ್ಟ್ ಮಾಡುವ ನನ್ನನ್ನೇ ‘ಅಕ್ಷರ ರಾಕ್ಷಸ’ ನೆಂದು ಕರೆದಲ್ಲಿ ಇನ್ನು‌ ನಿತ್ಯವೂ ಎರಡು ಮೂರು ಬರಹಗಳನ್ನು ಲೀಲಾಜಾಲವಾಗಿ ಬರೆಬರೆದು ಪೋಸ್ಟ್ ಮಾಡುವ ಸಾಮಾಜಿಕ ಜಾಲತಾಣದ ಅಸಂಖ್ಯಾತ ಬರಹಗಾರ ಪ್ರತಿಭೆಗಳಿಗೆ ಇನ್ನೆಂಥಾ ಅದ್ಭುತ ಬಿರುದುಗಳಿಂದ ಕರೆಯಬೇಕು…?

ಆದರೂ ಪತ್ರಿಕೋದ್ಯಮದಲ್ಲಿರುವವರೇ ಹಾಗೆ ಕರೆದ ಮೇಲೆ ಅದರ ಹಿಂದೆ ಏನಾದರೊಂದು ಅರ್ಥ ಇರಬಹುದೆಂಬ ಕೌತುಕದಿಂದ ಜಸ್ಟ್ ಅದರ ಬೆನ್ನು ಬಿದ್ದು ಹೀಗೆ ಅರ್ಥ ಮಾಡಿಕೊಂಡು, ಹಾಗೆ ನಿಮ್ಮ ಮುಂದೆ ಇಳಿಸಿದ್ದೇನೆ.

ಸಾಮಾನ್ಯವಾಗಿ ರಾಕ್ಷಸ ಎಂದರೆ ದೈತ್ಯ, ಕೆಟ್ಟವ, ಕ್ರೂರಿ, ಭಯಾನಕ ಆಕೃತಿಯವ, ಎಲ್ಲರಲ್ಲೂ ಹೆದರಿಕೆ ಹುಟ್ಟಿಸುವವ ಎಂಬುದು ಸಾಮಾನ್ಯ ಅರ್ಥ ! ಅಂದರೆ ಅದನ್ನು ಕೆಟ್ಟದ್ದನ್ನು‌, ದೋಷವಿರುವವರನ್ನು, ಭಯಾನಕವಾದದ್ದನ್ನು ಉಲ್ಲೇಖಿಸಲು ಬಳಸುವ ಪದ. ಉದಾಹರಣೆಗೆ ನರ ರಾಕ್ಷಸ ಎಂದರೆ ಮನುಷ್ಯರಲ್ಲೇ ಕೆಟ್ಟವನು ಎಂದೂ, ಮುದ್ರಾ ರಾಕ್ಷಸ ಎಂದರೆ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಿರುವುದೆಂದೂ ಹೇಳುತ್ತೇವೆ.

ಇದೇ ಜಾಡಿನಲ್ಲಿ ಯೋಚಿಸಿ ನನ್ನ ಬರಹಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡಾಗ ಅವರು ಹೇಳಿದ್ದು ಒಂಥರಾ ಕರೆಕ್ಟ್ ಎನಿಸಿತು ! ಯಾಕಂತೀರಾ ?

ಯಾವುದೇ ಒಂದು ಲೇಖನ, ಕವನ, ಕತೆ ಅಥವಾ ಸಾಹಿತ್ಯದ ಯಾವುದೇ ಪ್ರಕಾರವನ್ನಾಗಲೀ ಬರೆಯುವ ಮುನ್ನ ಅದಕ್ಕೆಂತಲೇ ಪೂರ್ವ ಸಿದ್ದತೆ ಬೇಕು, ಅಪಾರ ಅಧ್ಯಯನ ಮಾಡಬೇಕು, ವಿಷಯದ ಜ್ಞಾನ ಇರಬೇಕು ಹಾಗೂ ಅದು ಭಾಷಾ ಶುದ್ಧತೆಯಿಂದ ಕೂಡಿದ್ದು ಕಾಗುಣಿತ ವ್ಯಾಕರಣ ಬದ್ಧವಾಗಿರಬೇಕು‌. ಎಲ್ಲಕ್ಕಿಂತ ಮಿಗಿಲಾಗಿ ಒಂದು ಬರಹದ ಆರಂಭ, ತಿರುಳು, ಅಂತ್ಯ ಎಲ್ಲವೂ ಕ್ರಮಬದ್ಧವಾಗಿ ಓದುಗರನ್ನು ಹಿಡಿದಿಡುವಂತೆ ಸ್ವಾರಸ್ಯಕರವಾಗಿರಬೇಕು. ವಿಷಯ ಮಂಡನೆ, ನಿರೂಪಣೆ , ಬರಹದ ಒಟ್ಟಾರೆ ನಿರ್ವಹಣೆ ಅಚ್ಚುಕಟ್ಟಾಗಿರಬೇಕು. ಕೊನೆಗೆ ತಾನು ಬರೆದಿದ್ದು ಸರಿಯಿದೆಯೇ ಎಂಬ ಬಗ್ಗೆ ಒಮ್ಮೆ ಪುನರಾವಲೋಕನ ಮಾಡಿಕೊಂಡು ಸರಿ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ಇದು ಸಾಮಾನ್ಯವಾಗಿ ಒಂದು ಬರಹಕ್ಕೆ ಅತ್ಯಂತ ಮೂಲಭೂತವಾಗಿ ಬೇಕಾಗಿರುವ ರಂಜಕಗಳು !

ಆದರೆ ಮೇಲೆ‌ ತಿಳಿಸಿದಂತಹ ಬರಹದ ಯಾವ ನಿಯಮವನ್ನೂ ಪಾಲಿಸದೇ ಮನಸಿಗೆ ಬಂದಿದ್ದನ್ನು ಗೀಚುವುದೇ ಬರಹ ಎಂದುಕೊಂಡು ಬಸ್ಸು, ರೈಲು, ಕಾರುಗಳಲ್ಲಿನ‌ ಪ್ರಯಾಣದ ಅವಧಿಗೆ ಸಿಂಕ್ ಆಗುವಂತೆ ಬರಹದ ವಿಷಯ ಹಾಗೂ ಗಾತ್ರವನ್ನು ಹೊಂದಿಸಿ ಏನೋ ಒಂದನ್ನು ಬರೆದು ಯಾವುದೇ ಸೆನ್ಸಾರ್ ಇಲ್ಲದ ಫ಼ೇಸ್ ಬುಕ್ಕಲ್ಲಿ ಪೋಸ್ಟ್ ಮಾಡುವ ನನ್ನ ಬರಹಗಳ ಸಾಧನೆಗೆ ” ಅಕ್ಷರ ರಾಕ್ಷಸ ” ನೆಂಬ ಬಿರುದು ಸಕತ್ ಆಪ್ಟ್ ಆಗಿದೆ ಬಿಡಿ ! ಅದೊಂದೇ ಅಲ್ಲ, ಕನ್ನಡ ಭಾಷಾ ಪ್ರಯೋಗದಲ್ಲಿ ಅನ್ಯ ಭಾಷೆಗಳ ಕಲಬೆರಕೆಯ ಕಲಸುಮೇಲೋಗರದಿಂದ ಆವೀರ್ಭವಿಸುವ ಅಪಭ್ರಂಶಗಳ ಚಿತ್ತಾರವನ್ನು ಅಕ್ಷರಗಳ ರಾಕ್ಷಸರಷ್ಟೇ ಮಾಡಲು ಸಾಧ್ಯ ! ಅಲ್ಲವೇ.?

ನನ್ನ ಪುಣ್ಯ ! ಅವರು ‘ಅಕ್ಷರ ರಾಕ್ಷಸ ‘ ಎಂದು ಕರೆದಿದ್ದಾರೆ, ಆದರೆ ಅಕ್ಷರ ಹಂತಕ ಎಂದಿಲ್ಲ ! ಅದೊಂದೇ ಸಮಾಧಾನ .

ಎನಿ ವೇ…. ಥ್ಯಾಂಕ್ಯೂ ಸಾರ್ .

** ಮರೆಯುವ ಮುನ್ನ **

ವಾಸ್ತವವಾಗಿ ನಮ್ಮ‌ ಮೇಲೆ ಯಾರಿಗಾದರೂ ಅಭಿಮಾನ, ಅಕ್ಕರೆ, ಆಪ್ಯಾಯತೆ ಅಥವಾ ಪ್ರೀತಿ ಅನ್ನೋದು ಇದ್ದಾಗಲಷ್ಟೇ ಅಂಥವರಿಂದ ನಮ್ಮ ಅರ್ಹತೆಗೂ ಮೀರಿದ ಸ್ಕೋಪ್ ಸಿಗಲಿಕ್ಕೆ ಸಾಧ್ಯ . ಹೀಗಾಗಿಯೇ ನನ್ನ ಮೇಲಿನ‌ ಪ್ರೀತಿಯಿಂದ ಅವರ ದೃಷ್ಟಿಯಲ್ಲಿ ನಾನು ಅಕ್ಷರ ರಾಕ್ಷಸ ನಾಗಿದ್ದಿರಬಹುದು. ಅದು ಪಾಸಿಟಿವ್ ಆಗಿ ಪರಿಭಾವಿಸಿ ಹೇಳಿದ್ದು ಎಂಬುದರ ಸಾಮಾನ್ಯ ಅರಿವು ನನಗಿದೆ. ಇಷ್ಟಾಗಿಯೂ ಅದನ್ನೇ ಟ್ವಿಸ್ಟ್ ಮಾಡಿ ನನ್ನಂತರಂಗದ ಕದ ತಟ್ಟಿದ್ದಾಗ ಹೊರಬಿದ್ದ ನೈಜ ಚಡಪಡಿಕೆಗಳನ್ನು ಹಂಚಿಕೊಳ್ಳದಿದ್ದರೆ ಅದು ಅಕ್ಷರ ರಾಕ್ಷಸನ ಅಂತರಂಗದ ಮೋಸವಾಗಿಬಿಡುತ್ತದೆ.

ಸ್ವಲ್ಪ ಗಂಭೀರವಾಗಿ ಹೇಳುವುದಾದರೆ ಸಾಹಿತ್ಯ ಕ್ಷೇತ್ರವೆಂಬ ಮಹಾಸಾಗರದಲ್ಲಿ ಬರಿ ಬಿಂದುವಿನಷ್ಟಾಗಲೂ ಅರ್ಹತೆಯಿರದವರಿಗೂ ಸಾಧಕನ ಸ್ಥಾನ ಕೊಟ್ಟು ಆಪ್ತತೆಯಿಂದ ಗುರುತಿಸುವ ಗುಣವಿದೆಯಲ್ಲಾ…ಅದುವೇ ಬದುಕಿನಲ್ಲಿ ಖುಷಿ ಕೊಡುವ ಸಣ್ಣ ಸಣ್ಣ ಸಂಗತಿಗಳ ಗುಚ್ಛದ ಎಸಳು !!

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.