ವಿಜಯ ದರ್ಪಣ ನ್ಯೂಸ್……
ಎರಡು ಕೋಟಿ ಅನುದಾನ ಬಂದರೂ ಮಡಿಕೇರಿ ದಸರಾದಲ್ಲಿ ವಿದ್ಯುತ್ ಅಲಂಕಾರದ ಕೊರತೆ !

ಅನುದಾನದ ವೆಚ್ಚದ ವಿವರ ಬಹಿರಂಗಪಡಿಸಲು ನಗರಸಭೆಗೆ ಕೊಡಗು ಜನ ಅಭಿವೃದ್ಧಿ ಸಮಿತಿಯ ಆಗ್ರಹ
ಮಡಿಕೇರಿ: ದಸರಾ ಉತ್ಸವಕ್ಕೆ ಎರಡು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎನ್ನಲಾಗುತ್ತಿದ್ದರೂ ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಮಡಿಕೇರಿ ನಗರ ಈ ಬಾರಿ ನಿರೀಕ್ಷಿತ ವಿದ್ಯುತ್ ಅಲಂಕಾರವಿಲ್ಲದೆ ಕಳೆಗುಂದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ ಪ್ರತಿವರ್ಷ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ನಗರದಲ್ಲಿ ಈ ಬಾರಿ ನಿರೀಕ್ಷಿತ ಮೆರುಗು ಕಾಣದಿರುವುದು ಪ್ರವಾಸಿಗರಲ್ಲಿಯೂ ನಿರಾಸೆ ಮೂಡಿಸಿದೆ
ಮೈಸೂರು ದಸರಾ ನಂತರ ರಾಜ್ಯದ ಗಮನ ಸೆಳೆಯುವ ಮಡಿಕೇರಿ ದಸರಾ ಕೊಡಗಿನ ಸಾಂಸ್ಕೃತಿಕ ಪರಂಪರೆ ಹಾಗೂ ಪ್ರವಾಸೋದ್ಯಮದ ಹೆಮ್ಮೆಯ ಸಂಕೇತವಾಗಿದೆ. ಇಂತಹ ಮಹತ್ವದ ಉತ್ಸವಕ್ಕೆ ಅನುದಾನ ಮಂಜೂರಾಗಿದ್ದರೂ ನಗರದ ವಿದ್ಯುತ್ ಅಲಂಕಾರ ನಿರೀಕ್ಷಿತ ಮಟ್ಟದಲ್ಲಿ ಕಾಣದಿರುವುದು ಅನುದಾನದ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದ 2026ರ ದಸರಾಕ್ಕೆ ಎರಡು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂಬ ಹಿನ್ನೆಲೆಯಲ್ಲಿ ಅನುದಾನದ ಬಳಕೆ ಹಾಗೂ ಉತ್ಸವದ ವ್ಯವಸ್ಥೆಗಳ ಕುರಿತು ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕೆಂದು ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹಿಸಿದೆ.
ಸಮಿತಿಯು ಮಡಿಕೇರಿ ನಗರಸಭೆ ಹಾಗೂ ದಸರಾ ಉತ್ಸವದ ಸಂಬಂಧಪಟ್ಟ ಆಯೋಜಕರಲ್ಲಿ ಅನುದಾನದ ಅಧಿಕೃತ ವಿವರ, ವಿದ್ಯುತ್ ಅಲಂಕಾರಕ್ಕೆ ಮೀಸಲಿಟ್ಟ ಮೊತ್ತ, ವಿವಿಧ ಕಾರ್ಯಕ್ರಮಗಳಿಗೆ ಮಾಡಿರುವ ವೆಚ್ಚ ಹಾಗೂ ಒಟ್ಟು ಖರ್ಚಿನ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸುವಂತೆ ಮನವಿ ಮಾಡಿದೆ.
ಸರ್ಕಾರದ ಅನುದಾನ ಜನರ ಹಿತಕ್ಕಾಗಿ ಬಳಕೆಯಾಗಬೇಕು. ಅನುದಾನ ಮಂಜೂರಾಗಿರುವುದನ್ನು ಸಾಧನೆಯಾಗಿ ಬಿಂಬಿಸುವುದಕ್ಕಿಂತ ಆ ಹಣದಿಂದ ಜನರಿಗೆ ದೊರೆತ ಪ್ರಯೋಜನವನ್ನು ತೋರಿಸುವುದು ಮುಖ್ಯ ವಿದ್ಯುತ್ ಅಲಂಕಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದಕ್ಕೆ ಕಾರಣವೇನು ಎಂಬುದನ್ನು ನಗರಸಭೆ ಸ್ಪಷ್ಟಪಡಿಸಬೇಕು ಎಂದು ಸಮಿತಿ ಒತ್ತಾಯಿಸಿದೆ
ಅನುದಾನದ ಬಳಕೆಯಲ್ಲಿ ಯಾವುದೇ ಲೋಪದೋಷಗಳಿವೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ವೆಚ್ಚದ ವಿವರಗಳು ಕಾಮಗಾರಿಗಳ ದಾಖಲೆಗಳು ಹಾಗೂ ಸಂಬಂಧಿತ ಬಿಲ್ಗಳನ್ನು ಪರಿಶೀಲನೆಗೆ ಲಭ್ಯವಾಗುವಂತೆ ಮಾಡುವ ಮೂಲಕ ಸಾರ್ವಜನಿಕರಲ್ಲಿರುವ ಅನುಮಾನಗಳಿಗೆ ತೆರೆ ಎಳೆಯಬೇಕು ಎಂಬುದು ಸಮಿತಿಯ ನಿಲುವಾಗಿದೆ.
ಸಾರ್ವಜನಿಕರ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಡ್ಡಾಯ ಮಡಿಕೇರಿ ದಸರಾದ ಘನತೆ ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅನುದಾನದ ಸಂಪೂರ್ಣ ಲೆಕ್ಕಪತ್ರದೊಂದಿಗೆ ಸ್ಪಷ್ಟನೆ ನೀಡಬೇಕು ಎಂದು ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹಿಸಿದೆ
ಚಿಕ್ಕಂಡ ಪ್ರಭು ಮಾದಪ್ಪ
ಜಿಲ್ಲಾ ಅಧ್ಯಕ್ಷರು
ಕೊಡಗು ಜನ ಅಭಿವೃದ್ಧಿ ಸಮಿತಿ
✍🏽 ಎಂಎಂ ದಾವುದ್
ಸಂಸ್ಥಾಪಕರು ಕೊಡಗು ಜನ ಅಭಿವೃದ್ದಿ ಸಮಿತಿ
9945375180











