ಸಂವಿಧಾನ ಪೀಠಿಕೆ: ಮುಂಗಾಣ್ಕೆಯ ಕನ್ನಡಿ 

ವಿಜಯ ದರ್ಪಣ ನ್ಯೂಸ್

ಸಂವಿಧಾನ ಪೀಠಿಕೆ: ಮುಂಗಾಣ್ಕೆಯ ಕನ್ನಡಿ 

ಭಾರತದ ಸಂವಿಧಾನವು ಒಂದು ಪುಟ್ಟ ಪೀಠಿಕೆಯಿಂದ ಆರಂಭವಾಗುತ್ತದೆ. ಇದು ನಮ್ಮ ಪ್ರಾಚೀನ ಕಾವ್ಯಗಳ ನಾಂದಿ ಪದ್ಯದಂತಿದೆ. ಕಾರಣ, ಅಲ್ಲಿ ಮೊದಲು ಪದ್ಯವು ಇಡೀ ಕಾವ್ಯದ ಆಶಯವನ್ನು ಹೇಳುತ್ತದೆ- ಹನಿ ಇಡೀ ಹೊಳೆಯ ಬಗ್ಗೆ ಹೇಳುವಂತೆ. ಅದರಂತೆ, ಸದರಿ ಪೀಠಿಕೆಯು ಸಂವಿಧಾನದ ಆಶಯವನ್ನು ಮಾತ್ರವಲ್ಲದೆ, ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನೇ ಮುಂದಿಡುತ್ತದೆ. ಎಂತಲೇ ಇದನ್ನು ಬಾಬಾಸಾಹೇಬರು ‘ಭಾರತದ ಭವಿಷ್ಯದ ಜೀವನವಿಧಾನದ ಕನ್ನಡಿ’ ಎಂದು ಬಣ್ಣಿಸಿದರು.

ಪೀಠಿಕಾ ಪುಟವನ್ನು ಶಾಂತಿನಿಕೇತನದ ಕಲಾವಿದ ರಾಮಮನೋಹರ್ ಸಿನ್ಹಾ ತಮ್ಮ ಚಿತ್ರಕಲೆಯ ಮೂಲಕ ಸಿಂಗರಿಸಿದರು. ಈ ಮೂಲಕ ಅಂಬೇಡ್ಕರರ ಬೌದ್ಧಿಕ ಪ್ರಖರತೆ ಮತ್ತು ದಾರ್ಶನಿಕತೆಗೆ, ಧಾರ್ಮಿಕ ರಾಷ್ಟ್ರವಾದದ ಕಟು ವಿಮರ್ಶಕರಾಗಿದ್ದ ಟಾಗೂರರ ಶಾಂತಿನಿಕೇತನದ ಅಂಶವೂ ಮಿಳಿತವಾದಂತಾಯಿತು. ಸಂವಿಧಾನ ಸಭೆಯು ಪೀಠಿಕೆಯನ್ನು 1949ರ ನ. 26ರಂದು ಅಳವಡಿಸಿತು; ಜನವರಿ 26ರಂದು ಇದು ಜಾರಿಯಾಯಿತು.

ಭಾರತೀಯರಿಗೆ ‘ಸತ್ಯ’ ಅರ್ಥಾತ್ ನ್ಯಾಯವು ನಮ್ಮ ಕಡೆಯಿದೆ; ಅಸತ್ಯದ ಸಂಕೇತವಾಗಿರುವ ಬ್ರಿಟಿಷರನ್ನು ಸೋಲಿಸಿ ನಾವೇ ಗೆಲ್ಲುತ್ತೇವೆ ಎಂದು ಭರವಸೆ ನೀಡುವುದು ಇದರ ಇರಾದೆಯಾಗಿತ್ತು. ಗಾಂಧಿ, ಇದೇ ಶಬ್ದವನ್ನಿಟ್ಟುಕೊಂಡು ‘ಸತ್ಯಾಗ್ರಹ’ದ ಪರಿಕಲ್ಪನೆ ರೂಪಿಸಿದರು; ‘ಸತ್ಯದೊಡನೆ ನನ್ನ ಪ್ರಯೋಗಗಳು’ ಎಂಬ ಆತ್ಮಕಥೆಯನ್ನೂ ಬರೆದರು. ವಾಸ್ತವವಾಗಿ ತಾರತಮ್ಯ ನಡಾವಳಿಯಿರುವ ಸಮಾಜಗಳಲ್ಲಿ ಸರ್ವಸಮ್ಮತ ಸತ್ಯವೆಂಬುದು ಇರುವುದಿಲ್ಲ. ಅದು ಸದಾ ಸಾಪೇಕ್ಷ (ರಿಲೇಟಿವ್) ಆಗಿರುತ್ತದೆ. ಇಂಥ ಸನ್ನಿವೇಶದಲ್ಲಿ ದುರ್ಬಲರ ದೃಷ್ಟಿಕೋನದಲ್ಲಿ ಕಂಡ ‘ಸತ್ಯ’ವೇ ಗೆಲ್ಲಬೇಕು; ಅಧಿಕಾರಸ್ಥರ ಕಣ್ಣೋಟದ ಸತ್ಯವಲ್ಲ. ಹೀಗೆ ಪೀಠಿಕಾ ಚಿಹ್ನೆ ಮತ್ತು ಧ್ಯೇಯವಾಕ್ಯಗಳು ಬೌದ್ಧ ಮತ್ತು ಉಪನಿಷತ್ ದರ್ಶನದ ಧಾರೆಗಳ ಸಂಗಮಗೊಳಿಸುತ್ತವೆ.

ನಮ್ಮ ಪರಂಪರೆಯಲ್ಲಿದ್ದ ಮೌಲ್ಯಗಳನ್ನು ಪಶ್ಚಿಮದ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಹಕ್ಕುಪ್ರಜ್ಞೆ ಹಾಗೂ ಧರ್ಮಾತೀತತೆಗಳ ಜತೆ ಕಸಿಗೊಳಿಸಿ ಹೊಸ ಪರಿಕಲ್ಪನೆಗಳನ್ನಾಗಿ ಸೃಷ್ಟಿಸಲಾಯಿತು ಮತ್ತು ಪೀಠಿಕೆಯಲ್ಲಿ ಹಾಕಿ ಅಧಿಕೃತಗೊಳಿಸಲಾಯಿತು. ಹೀಗಾಗಿ ಇಲ್ಲಿರುವ ಆದರ್ಶ ಮೌಲ್ಯಗಳು, ಪಾಶ್ಚಿಮಾತ್ಯ ನಾಗರಿಕ ಸಮಾಜದ ಅದಿರನ್ನು ಭಾರತೀಯ ಪರಂಪರೆಯ ಕುಲುಮೆಯಲ್ಲಿ ಕರಗಿಸಿ ಅಚ್ಚುಹಾಕಿದ ನಾಣ್ಯಗಳು; ಗತದ ವಿವೇಕದಿಂದ ಮಾಡಿದ ಭವಿಷ್ಯದ ಹಾದಿಗಳು.

ಪ್ರಶ್ನೆಯೆಂದರೆ, ಈ ಆಶಯಗಳು ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಎಷ್ಟರಮಟ್ಟಿಗೆ ನೆರವೇರಿದವು? ಇಲ್ಲವಾದರೆ ಇಂಥ ಉದ್ಘೋಷಣೆಯ ಪ್ರಸ್ತುತತೆ ಏನು? ನಿಜ, ಇಲ್ಲಿರುವ ಆಶಯಗಳು ಪೂರ್ಣ ಸಾಕಾರಗೊಂಡಿಲ್ಲ. ಧರ್ಮಾತೀತ ಗುಣವು ಕಳೆದ ಮೂರು ದಶಕಗಳಲ್ಲಿ ಹಿಂದೆಂದೂ ಇಲ್ಲದಷ್ಟು ಜಖಂಗೊಂಡಿದೆ; ಮಹಿಳೆಯರು, ದಲಿತರು, ಬುಡಕಟ್ಟಿನವರು, ಅಲೆಮಾರಿಗಳು, ಧಾರ್ಮಿಕ ಅಲ್ಪಸಂಖ್ಯಾತರು ಅಸಮಾನತೆ-ಶಂಕೆ-ಅಪಮಾನಗಳಿಂದ ಬಿಡುಗಡೆಯಾಗಿಲ್ಲ; ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಒಪ್ಪಿಕೊಂಡ ಬಳಿಕ ಸಂಪತ್ತೆಂಬುದು ಕೆಲವೇ ಉದ್ಯಮಿಗಳ ಕೈವಶವಾಗುತ್ತಿದೆ. ಧರ್ಮಗಳು ತಮ್ಮ ವಿಕಾರಗಳನ್ನು ಉತ್ಪತ್ತಿ ಮಾಡಿ ಬೀದಿಗಿಳಿಸಿವೆ. ದೇಶದ ನಾಲ್ಕನೇ ಸ್ಥಂಭವೆನಿಸಿದ ಮಾಧ್ಯಮಗಳು ಬಿಕರಿಗೊಂಡಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅರೆಜೀವವಾಗಿದೆ. ಕುವೆಂಪು ಹೇಳುವ ನಿರಂಕುಶಮತಿತ್ವವು ಧರ್ಮದ್ರೋಹ ದೇಶದ್ರೋಹವಾಗಿ, ಚಿಂತಕರ ಹತ್ಯೆಯಾಗುತ್ತಿದೆ. ಜನ ಉಣ್ಣುವ ಆಹಾರವು ತಿರಸ್ಕಾರಕ್ಕೆ ಗುರಿಯಾಗುತ್ತಿದೆ. ಮುಖ್ಯವಾಗಿ, ಸಂವಿಧಾನದ ಹೆಸರಲ್ಲಿ ಅಧಿಕಾರ ಸ್ವೀಕರಿಸಿದವರೇ ಪೀಠಿಕೆಯ ಆಶಯಕ್ಕೆ ಸಲ್ಲದಂತೆ ವರ್ತಿಸುತ್ತಿದ್ದಾರೆ. ನಾವು ಒಂದು ದೇಶವಾಗಿ, ಸಮಾಜವಾಗಿ, ಮೌಲ್ಯಾದರ್ಶಗಳ ದೃಷ್ಟಿಯಿಂದ ವಿರುದ್ಧ ಹಾದಿಯಲ್ಲಿದ್ದೇವೆಂದು ಅನಿಸುತ್ತದೆ. ಆದರೆ, ಈ ಪೀಠಿಕೆಯ ಚೌಕಟ್ಟಿನಲ್ಲಿ ಅನೇಕ ಇಕ್ಕಟ್ಟುಗಳಲ್ಲೂ ನಾವು ಕಳೆದ ಮುಕ್ಕಾಲು ಶತಮಾನದಲ್ಲಿ ಸ್ವಾತಂತ್ರ್ಯ, ನ್ಯಾಯ, ಸಮಾನತೆಗಳನ್ನು ಅರೆಬರೆಯಾಗಿಯಾದರೂ ಅನುಭವಿಸಿರುವುದು ಸುಳ್ಳಲ್ಲ. ಯಾವುದೇ ಮೌಲ್ಯಾದರ್ಶಗಳು ತಾವು ಬದುಕುವ ಸಾಮಾಜಿಕ ಚಾರಿತ್ರಿಕ ಸನ್ನಿವೇಶದಲ್ಲಿ ಅರ್ಥವನ್ನು ಪಡೆಯುತ್ತವೆ. ಅವನ್ನು ಬರೆದು ಇರಿಸಿಕೊಳ್ಳುವುದು ದೊಡ್ಡ ವಿಚಾರವಲ್ಲ. ಬದುಕುವುದು ಮುಖ್ಯ.

ಈ ಅರ್ಥದಲ್ಲಿ ಸಂವಿಧಾನದ ಆದರ್ಶಗಳು ಇನ್ನೂ ಪೂರ್ಣವಾಗಿ ನಿಜಗೊಂಡಿಲ್ಲ. ಅವು ಸಾಕಾರಗೊಳ್ಳಲು ಶತಮಾನಗಳೇ ಬೇಕಾಗಬಹುದು. ಅದಕ್ಕಾಗಿ ಪ್ರಭುತ್ವವೂ ಸಮಾಜವೂ ಪ್ರಾಮಾಣಿಕವಾಗಿ ಯತ್ನಿಸಬೇಕು. ಸಮಸ್ಯೆಯೆಂದರೆ, ಈ ಯತ್ನದ ಹಾದಿಯಲ್ಲಿರುವಾಗಲೇ, ಪ್ರಭುತ್ವಗಳು ಸಂವಿಧಾನದ ಆಶಯಗಳ ವಿರುದ್ಧವಾಗಿ ಹೊರಳಿಕೊಳ್ಳುತ್ತಿರುವುದು. ಈಗ ಸಂವಿಧಾನದ ಪೀಠಿಕೆಯಲ್ಲಿರುವ ಕೆಲವು ಪರಿಕಲ್ಪನೆಗಳು ಸನಾತನ ಪರಂಪರೆಗೆ ಬಾಹಿರ ಎನ್ನಲಾಗುತ್ತಿದೆ. ಇವನ್ನು ಕಿತ್ತುಹಾಕಬೇಕು. ಧರ್ಮಾಧಾರಿತ ದೇಶಕ್ಕೆ ಬೇಕಾಗುವಂತೆ ಸಂವಿಧಾನವನ್ನು ಪುನರಾರೂಪಿಸಬೇಕು ಎಂದು ಹವಣಿಸಲಾಗುತ್ತಿದೆ.

ಪೌರತ್ವ ಕುರಿತ ಹೊಸ ಕಾನೂನುಗಳು ಈ ಪ್ರಶ್ನೆಯನ್ನು ತರ್ಕದ ಇನ್ನೊಂದು ತುದಿಗೆ ಒಯ್ಯಲು ನಿರ್ಧರಿಸಿವೆ. ಸುಪ್ರೀಂಕೋರ್ಟ್‌ ಕೇಶವಾನಂದ ಪ್ರಕರಣದಲ್ಲಿ (1973) ಯಾವುದೇ ಸಂವಿಧಾನದ ಅನುಚ್ಛೇದಗಳ ವಿಷಯದಲ್ಲಿ ಭಿನ್ನಮತ ಬಂದರೆ, ಅವನ್ನು ಪೀಠಿಕಾ ನುಡಿಗಳ ಆಧಾರದಲ್ಲಿ ಬಗೆಹರಿಸಿಕೊಳ್ಳಬೇಕೆಂದು ತೀರ್ಪಿತ್ತಿದೆ. ಹೀಗಾಗಿ ಈ ಪೀಠಿಕೆಯ ಈ ಮಾತುಗಳು ಮತ್ತೆಮತ್ತೆ ನೆನಪಾಗುತ್ತವೆ-ಹಾದಿತಪ್ಪಿದಾಗ ಕೈಮರ ನೆನಪಾಗುವಂತೆ. ಕಣ್ಣು ಮಂಜಾದಾಗ ಕನ್ನಡಕ ನೆನಪಾಗುವಂತೆ. ನಾವೆ ಅಲೆಗಳಲ್ಲಿ ಬಿದ್ದು ಹೊಯ್ದಾಡುವಾಗ ದೂರದ ದೀಪಸ್ಥಂಭ ಕಾಣುವಂತೆ.

– ರಹಮತ್ ತರೀಕೆರೆ