ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಸಹಕಾರಿ: ಸಿ.ಇ.ಒ ಡಾ.ಕೆಎನ್.ಅನುರಾಧ
ವಿಜಯ ದರ್ಪಣ ನ್ಯೂಸ್
ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಸಹಕಾರಿ: ಸಿ.ಇ.ಒ ಡಾ.ಕೆಎನ್.ಅನುರಾಧ
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 23 : ಸರ್ಕಾರದ ಬಿಸಿಯೂಟ ಯೋಜನೆಯಡಿ ಮಕ್ಕಳ ಅಪೌಷ್ಟಿಕತೆ ತಡೆಗಟ್ಟಲು ಶಾಲಾ ಮಕ್ಕಳಿಗೆ ಹಾಲಿನ ಜೊತೆ ರಾಗಿ ಮಾಲ್ಟ್ ನೀಡಲಾಗುವುದು. ಮಕ್ಕಳು ಪೌಷ್ಟಿಕಾಂಶ ಆಹಾರ ಸೇವನೆಯಿಂದ ಆರೋಗ್ಯವಾಗಿ ಬೆಳೆಯುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ.ಎಂ.ಎಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಒಂದರಿಂದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ಜಿಲ್ಲಾಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಸರ್ಕಾರವು ಈಗಾಗಲೇ ಬಿಸಿಯೂಟ, ಮೊಟ್ಟೆ,ಹಾಲು, ಚಿಕ್ಕಿ ನೀಡುತ್ತಿದೆ. ಇಂದಿನಿಂದ ಇವುಗಳ ಜೊತೆ ರಾಗಿ ಮಾಲ್ಟ್ ಸೋಮವಾರ, ಬುಧವಾರ, ಶುಕ್ರವಾರ ವಿತರಿಸಲಾಗುವುದು. ಇದರ ಉದ್ದೇಶ ಮಕ್ಕಳ ಅಪೌಷ್ಟಿಕತೆಯನ್ನು ತಡೆಗಟ್ಟಲು ಹಾಗೂ ಮಕ್ಕಳು ಮಧ್ಯಾಹ್ನ ಊಟ ಸೇವಿಸದೇ ಇರಬಾರದು ಎಂಬ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ. ಸಿರಿಧಾನ್ಯಗಳ ಸೇವನೆಯಿಂದ ಮಕ್ಕಳ ಬೆಳವಣಿಗೆ ಪೂರಕವಾಗಿ ಆರೋಗ್ಯವಂತರಾಗಿ ಬೆಳೆಯುತ್ತಾರೆ. ಇದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ವಾಗಿ ಆರೋಗ್ಯಯುತ ದೇಶ ನಿರ್ಮಾಣವಾಗುತ್ತದೆ ಎಂದು ಸಿ.ಇ.ಒ ಹೇಳಿದರು.
ರಾಗಿಯಲ್ಲಿ ಹೆಚ್ಚು ಕಬ್ಬಿಣಾಂಶ, ಪ್ರೋಟೀನ್, ಪೌಷ್ಟಿಕಾಂಶಗಳು ಇದೆ. ಇದರ ಸೇವನೆಯಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಸೇವಿಸಿ ಎಂದು ಹೇಳಿದರು. ಜಿಲ್ಲೆಯ 68000 ಶಾಲಾ ಮಕ್ಕಳಿಗೆ ಯೋಜನೆಯ ಸೌಲಭ್ಯ ದೊರಕಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಉಪನಿರ್ದೇಶಕ ಕೃಷ್ಣ ಮೂರ್ತಿ, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಪಿಎಂ ಪೋಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿ ಲಲಿತಮ್ಮ , ತಾಲ್ಲೂಕು ಶಿಕ್ಷಣಾಧಿಕಾರಿ ಸುಧಾ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.