ನಗುತಿರು ಕಹಿ ನೆನಪುಗಳ ಮರೆತು

 

ಜಯಶ್ರೀ ಜೆ. ಅಬ್ಬಿಗೇರಿ

’ಸವಿ ಸವಿ ನೆನಪು ಸಾವಿರ ನೆನಪು.’ ಎನ್ನುವ ಗೀತೆಯ ಸಾಲುಗಳನ್ನು ಗುನುಗದವರು ತುಂಬಾ ಕಡಿಮೆ. ಪ್ರತಿಯೊಬ್ಬರಿಗೂ ಮರೆಯದೆ ಮೆಲುಕು ಹಾಕುವ ನೂರಾರು ನೆನಪುಗಳು ಇರುತ್ತವೆ. ’ಸವಿ ನೆನಪುಗಳು ಬೇಕು ಸವಿಯಲೇ ಬದುಕು’ ಎಂಬ ಹಾಡನ್ನು ಕೇಳದವರು ವಿರಳ.

ನನಗೆ ಈ ಸಂದರ್ಭದಲ್ಲಿ ದೇಜಗೌ ಅವರು ಅನುವಾದಿಸಿದ ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ ’ನೆನಪು ಕಹಿಯಲ್ಲ’ ಶೀರ್ಷಿಕೆ ನೆನಪಿಗೆ ಬರುತ್ತಿದೆ. ಬದಲಾಗುವ ಜನರ ನಡುವೆ ಬದಲಾಗದೆ ಉಳಿಯುವ ನೆನಪುಗಳೇ ಶಾಶ್ವತ. ನೆನಪುಗಳಿಗೆ ಸಂದರ್ಭ ಸನ್ನಿವೇಶ ಘಟನೆ ಎಲ್ಲವೂ ಮುಖ್ಯವಾಗಿರುತ್ತದೆ. ನೆನಪುಗಳ ಕುರಿತಾಗಿ ನೆನಪಿಸಿಕೊಂಡು ಹೇಳಬೇಕೆಂದರೆ ಜ್ಞಾಪಕ ಶಕ್ತಿ ಮಹತ್ವದ್ದೆನಿಸುತ್ತದೆ. ಕಹಿ ನೆನಪುಗಳು ಯಾರನ್ನೂ ಬಿಡವು ಎನ್ನುವ ಮಾತಿನಲ್ಲಿ ಸತ್ಯವಿದೆ. ಬಡವರು ಸಿರಿವಂತರು ಅಕ್ಷರಸ್ಥರು, ಅನಕ್ಷರಸ್ಥರು ಯಾರೇ ಇರಲಿ ಇದರ ತಾಪದಿಂದ ಉಳಿದುಕೊಳ್ಳುವಂತಿಲ್ಲ. ಕೆಲವರಿಗಂತೂ ಈ ತಾಪ ತಡೆದುಕೊಳ್ಳಲಾಗದ ಮಟ್ಟಕ್ಕೆ ಏರಬಹುದು. ಅಂತಹ ಸಮಯದಲ್ಲಿ ಕೋಪ, ಭಯ, ಭೀತಿ, ಹತಾಶೆ, ಜಿಗುಪ್ಸೆಯ ವರ್ತನೆಗಳು ಸಾಮಾನ್ಯ ನಡೆನುಡಿಗಳೊಂದಿಗೆ ವ್ಯಕ್ತಗೊಳ್ಳುವವು. ಕೆಲವು ನೆನಪುಗಳು ನಮ್ಮನ್ನು ಮುಜುಗರದಿಂದ ಕುಗ್ಗುವಂತೆ ಮಾಡುತ್ತವೆ. ಹಾಗೆ ಇನ್ನೂ ಕೆಲವು ನೆನಪುಗಳು ದುಃಖದಿಂದ ನರಳುವಂತೆ ಮಾಡುತ್ತವೆ. ಕೆಲವಂತೂ ಆಘಾತಕಾರಿಯಾಗಿರುತ್ತವೆ. ಬಹುಶಃ ಮನಸಿಗೆ ನೋವು ತರುವಂತಹ ನೆನಪುಗಳನ್ನು ನೆನಪಿಸಿಕೊಳ್ಳಲು ಮನಸ್ಸು ಬಯಸುವುದಿಲ್ಲ. ಹಲವರಿಗೆ ಸಮಯ ಕಳೆದಂತೆ ನೆನಪುಗಳು ಮರೆಯಾಗುತ್ತವೆ ಆದರೆ ಅನೇಕರು ಜೇಡರ ಹುಳುವಿನಂತೆ ತನ್ನ ಸುತ್ತಲೂ ಹಿಂದಿನ ಕಹಿ ನೆನಪುಗಳ ಬಲೆಯನ್ನು ಕಟ್ಟಿಕೊಂಡು ಅದೇ ನೆನಪುಗಳಲ್ಲಿ ಸಿಕ್ಕಿ ಹಾಕಿಸಿಕೊಂಡು ಇಲ್ಲವೇ ಮೆಲುಕು ಹಾಕುತ್ತ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ.
ಕಹಿ ನೆನಪುಗಳನ್ನು ಮರೆಯಲು ಯತ್ನಿಸಿದರೂ ಅವು ಮನದ ಗೋಡೆಯ ಮೇಲೆ, ಕಣ್ಣಿಗೆ ರಾಚುವಂತೆ ಕಾಣುತ್ತವೆ. ಮೇಲಿಂದ ಮೇಲೆ ಮನಸ್ಸನ್ನು ಕೆದಕಿ ನೋಯಿಸುತ್ತವೆ. ಕೆನ್ನೆಯನ್ನೂ ತೋಯಿಸುತ್ತವೆ. ಆಘಾತ ಸಂಬಂಧಿತ ನೆನಪುಗಳಿದ್ದರೆ ಆತಂಕದ ಸ್ಥಿತಿಯನ್ನು ಉಂಟುಮಾಡುತ್ತದೆ. ಹಠಾತ್ತನೆ ನೆನಪುಗಳು ಮರುಕಳಿಸುವುದರಿಂದ ಆಳವಾಗಿ ಗೊಂದಲವನ್ನು ಉಂಟುಮಾಡಬಹುದು. ಇಲ್ಲವೇ ಮನಸ್ಸನ್ನು ದುರ್ಬಲಗೊಳಿಸಬಹುದು. ನಿಜವೇ ಅಲ್ಲವೇ?
ಹೀಗೆ ನಮ್ಮನ್ನು ಕೆಳಕ್ಕೆ ತಳ್ಳುವ ಕಹಿನೆನಪುಗಳನ್ನು ಮರೆಯುವುದಾದರೂ ಹೇಗೆ ಎನ್ನುವುದಕ್ಕೆ ಇಲ್ಲಿವೆ ಕೆಲ ತಂತ್ರಗಳು. ಅದಕ್ಕೂ ಮುನ್ನ ಜ್ಞಾಪಕ ಶಕ್ತಿ ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ತಿಳಿದುಕೊಳ್ಳುವುದು ಉಚಿತ.

ಜ್ಞಾಪಕ ಶಕ್ತಿ
ಮೆಮೊರಿಯ ಮೂಲಭೂತ ಕಾರ್ಯಗಳು ಎನ್ಕೋಡಿಂಗ್, ಸಂಗ್ರಹಿಸುವುದು ಮತ್ತು ಮರುಪಡೆಯುವಿಕೆ. ಎನ್ಕೊಡಿಂಗ್ ಎನ್ನುವುದು ನಾವು ಮಾಹಿತಿಯನ್ನು ಕಲಿಯುವ ಪ್ರಕ್ರಿಯೆಯಾಗಿದೆ.. ನಂತರ ನಮ್ಮ ಮೆದುಳು ಅಲ್ಪಾವಧಿಯ ಸ್ಮರಣೆ ಅಥವಾ ದೀರ್ಘಾವಧಿಯ ಸ್ಮರಣೆಯಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅಲ್ಪಾವಧಿಯ ನೆನಪುಗಳು ಹೆಚ್ಚು ಕಾಲ ಮೆದುಳಿನಲ್ಲಿ ಉಳಿಯದಿದ್ದರೂ, ಕೆಲವು ನಮ್ಮ ದೀರ್ಘಾವಧಿಯ ಸ್ಮರಣೆಗೆ ಹಾದುಹೋಗುತ್ತವೆ, ಅಲ್ಲಿ ಅಪಾರ ಸ್ಥಳವಿದೆ. ಮರುಪಡೆಯುವಿಕೆ ಎಂದರೆ ನಮ್ಮ ನೆನಪುಗಳನ್ನು ನೆನಪಿಸಿಕೊಳ್ಳುವ ಪ್ರಕ್ರಿಯೆ. ನಮ್ಮ ಪರಿಸರದಲ್ಲಿನ ದೃಶ್ಯಗಳು ಮತ್ತು ಶಬ್ದಗಳು ನಮ್ಮ ಮೆದುಳನ್ನು ದೀರ್ಘಾವಧಿಯ ಸ್ಮರಣೆಯನ್ನು ಹಿಂಪಡೆಯಲು ಪ್ರಚೋದಿಸಬಹುದು.
ಮರುಪಡೆಯುವಿಕೆ
ನಾವು ಪ್ರಾಪಂಚಿಕ ಮಾಹಿತಿಯನ್ನು ಮರೆತು ಬಿಡುತ್ತೇವೆ, ಆದರೆ ನಮ್ಮ ಮೆದುಳುಗಳು ಬಲವಾದ ಭಾವನೆಗಳನ್ನು ಲಗತ್ತಿಸಲಾದ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಉದಾಹರರಣೆಗೆ ತಟಸ್ಥ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಕ್ಕಿಂತ ಉತ್ತಮವಾಗಿ ನಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳಿಗೆ ಸಂಬಂಧಿಸಿರುವ ಮಾಹಿತಿಯನ್ನು ಮರುಪಡೆಯಲು ಹೆಚ್ಚು ಸಾಧ್ಯತೆಗಳಿವೆ ಎಂದು ಅಧ್ಯಯನಗಳ ಸರಣಿಯು ಕಂಡು ಹಿಡಿದಿದೆ. ಜನರು ಉದ್ದೇಶಪೂರ್ವಕವಾಗಿ ಮರೆಯಲು ಸಹಾಯ ಮಾಡುವ ಮಾರ್ಗಗಳನ್ನು ಸಂಶೋಧಕರು ಬಹಳ ಹಿಂದಿನಿಂದಲೂ ಹುಡುಕುತ್ತಿದ್ದಾರೆ. ನಮ್ಮ ಮೆದುಳಿನಿಂದ ಅನಗತ್ಯ ನೆನಪುಗಳನ್ನು ತೆಗೆದುಹಾಕಲು ನಮಗೆ ಸಾಧ್ಯವಾಗದಿದ್ದರೂ ನಮ್ಮ ಸ್ಮರಣೆಯನ್ನು ಗುರುತಿಸುವುದು, ನಮ್ಮ ಭಾವನೆಗಳನ್ನು ಪ್ರಕ್ರಿಯೆಗೊಳಿಸುವುದು ಮತ್ತು ನಮ್ಮ ಸ್ಮರಣೆಯನ್ನು ನಮ್ಮ ಜೀವನವನ್ನು ಅಡ್ಡಿಪಡಿಸುವುದನ್ನು ತಡೆಯಲು ನಮ್ಮ ಸ್ಮರಣೆಯನ್ನು ಕಂಡು ಹಿಡಿಯುವುದು ಮುಂತಾದ ತಂತ್ರಗಳನ್ನು ಬಳಸಿಕೊಳ್ಳಬಹುದು.

ಭಾವನಾತ್ಮಕ ಪ್ರಭಾವ
ನೆನಪು ಒಮ್ಮೆಲೇ ಮಸಕಾಗುವುದಿಲ್ಲ ಮರೆಯುವುದಿಲ್ಲ. ಮೆಮಮೊರಿಯ ಭಾವನಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಅದನ್ನು ಕಡಿಮೆ ಒಳನುಗ್ಗುವಂತೆ ಮಾಡಲು ನೀವು ತೆಗೆದುಕೊಳ್ಳಬೇಕಾದ ಹಂತಗಳಿವೆ. ಕಹಿನೆನಪುಗಳು ಮಸುಕಾಗಲು ಮರೆಯಾಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಮತ್ತು ಅಭ್ಯಾಸವನ್ನು ಬೇಡುತ್ತದೆ. ಆದ್ದರಿಂದ ನೀವು ಬಯಸಿದಷ್ಟು ಬೇಗ ಅದು ಸಂಭವಿಸದಿದ್ದರೆ ನಿರುತ್ಸಾಹಗೊಳ್ಳಬೇಡಿ. ಸ್ಮರಣಶಕ್ತಿಯನ್ನು ಮಸುಕಾಗಿಸಲು ಸಲಹೆಗಳು ಇಲ್ಲಿವೆ.

ನಿಮ್ಮ ಸ್ಮರಣೆಯನ್ನು ಗುರುತಿಸಿ
ಇದು ವಿರೋಧಾಭಾಸವೆಂದು ತೋರುತ್ತದೆ, ಆದರೆ ನೀವು ಏನನ್ನಾದರೂ ಮರೆಯಲು ಬಯಸಿದರೆ, ಅದನ್ನು ಮೊದಲು ನೆನಪಿಟ್ಟುಕೊಳ್ಳುವುದು ಸಹಾಯಕವಾಗಿದೆ. ಸ್ಮೃತಿಗೆ ಹೊಂದಿಕೊಂಡಿರುವ ದೃಶ್ಯಗಳು, ಶಬ್ದಗಳು ಮತ್ತು ಭಾವನೆಗಳು ಯಾವವು? ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ.

ಭಾವನೆಗಳನ್ನು ಪ್ರಕ್ರಿಯೆಗೊಳಿಸಿ
ನೆನಪಿಗೆ ಸಂಬಂಧಿಸಿದ ಯಾವುದೇ ಅನಗತ್ಯ ಭಾವನೆಗಳನ್ನು ತಪ್ಪಿಸಲು ಪ್ರಯತ್ನಿಸುವ ಬದಲು ಅವುಗಳನ್ನು ನೀವೇ ಅನುಭವಿಸಲು ಬಿಡಿ. ಪ್ರಚೋದನೆ ಕಂಡು ಹಿಡಿಯಿರಿ. ನೀವು ಮರೆಯಬೇಕೆನಿಸುವ ಮಾಜಿ ಗೆಳೆಯ ಓಡಿಸಿದ ಕಾರಿನ ಪ್ರಕಾರವನ್ನು ನೋಡಿದಾಗೆಲೆಲ್ಲ, ನಿಮ್ಮ ಮೆದುಳು ನಿಮ್ಮ ವಿಘಟನೆಯ ನೆನಪನ್ನು ಹಿಂಪಡೆಯುತ್ತದೆ. ರೊಟ್ಟಿ ಸಪ್ಪಳ, ಒಗ್ಗರಣೆಯ ವಾಸನೆಯು ತಾಯಿಯನ್ನು ನೆನಪಿಗೆ ತರುತ್ತದೆ.

ಒತ್ತಡ ನಿಯಂತ್ರಣ
ನೆನಪುಗಳು ಎಂದೂ ಬದಲಾಗುವುದಿಲ್ಲ. ಆದರೆ ಅವು ನಮ್ಮನ್ನೇ ಬದಲಿಸುತ್ತವೆ.
ನಾಳೆಯ ಬದುಕಿಗೆ ಭದ್ರಬುನಾದಿ ಹಾಕುವ ತಾಕತ್ತು ನೆನಪುಗಳಿಗಿದೆ. ಕಹಿ ನೆನಪುಗಳು ಎಲ್ಲವನ್ನೂ ಅಯೋಮಯವಾಗಿಸುತ್ತವೆ. ಬದುಕಲ್ಲಿ ಕಾರ್ಗತ್ತಲ್ಲನ್ನು ತಂದು ಸುರಿಯುತ್ತವೆ. ಇಂದಿನ ಬದುಕಿನ ಶೈಲಿಯಲ್ಲಿ ಇವುಗಳ ಜೊತೆ ಜೊತೆಗೆ ಒತ್ತಡಗಳ ಒತ್ತಡವೂ ಸಾಮನ್ಯವಾಗಿ ಹೋಗಿದೆ. ದಿನ ನಿತ್ಯದ ಪ್ರತಿಯೊಂದು ಚಟುವಟಿಕೆಯಲ್ಲಿ ಮನೋ ಒತ್ತಡವನ್ನು ಏರಿಸುವಂತಹ ಲಕ್ಷಣಗಳು ಇದ್ದೇ ಇರುತ್ತವೆ. ಕಹಿನೆನಪುಗಳ ಒತ್ತಡವನ್ನು ತಡೆಗಟ್ಟುವುದು ನಿರ್ವಹಿಸುವುದು ಸಾಧ್ಯವೆನಿಸಿದರೂ ಸುಲಭವಲ್ಲ. ಹಾಗಂದ ಮಾತ್ರಕ್ಕೆ ಒತ್ತಡವನ್ನು ನಿಯಂತ್ರಿಸುವುದು ಅಸಾಧ್ಯ ಅಂತಲ್ಲ. ಯೋಗ ಧ್ಯಾನ ಇತ್ಯಾದಿಗಳ ಮುಖಾಂತರ ಒತ್ತಡವನ್ನು ನಿಯಂತ್ರಿಸಿಕೊಳ್ಳಬೇಕು
.
ಹೆಚ್ಚು ಗಮನ
ಕಹಿನೆನಪುಗಳ ಒತ್ತಡದಿಂದ ವ್ಯಕ್ತಿಯ ಮಾನಸಿಕ ಶಕ್ತಿ ಕುಗ್ಗುವುದಂತೂ ಸಹಜ. ಇದರಿಂದಾಗಿ ನಮ್ಮ ನಡೆ ನುಡಿ, ಆತ್ಮವಿಶ್ವಾಸದ ಮೇಲೆ ಬಲವಾದ ಪೆಟ್ಟು ಬೀಳುತ್ತದೆ. ಆತ್ಮವಿಶ್ವಾಸ ಕುಸಿದಾಗ ಸಣ್ಣಪುಟ್ಟ ಸಮಸ್ಯೆಗಳೂ ಪೆಡಂಭೂತವಾಗಿ ಕಾಣುತ್ತವೆ. ಇದರ ಪರಿಣಾಮವಾಗಿ ಮನಸ್ಸಿನಲ್ಲಿ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ತಾಳ್ಮೆಯಿಂದ ವಿಚಾರ ಮಾಡುವ ಮೂಲಕ ಮಾನಸಿಕ ಶಕ್ತಿಗಳಿಗೆ ಹೆಚ್ಚು ಗಮನ ನೀಡುವುದರ ಮೂಲಕ ಮುಂದೆ ಸಂಭವಿಸಬಹುದಾದ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಕರಿನೆರಳಾಗಿ ಖಿನ್ನತೆಗೆ ದೂಡುವುದನ್ನು ತಪ್ಪಿಸಬಹುದು.

ಕೊನೆ ಹನಿ
ಕಾಡುವ ಕಹಿ ನೆನಪುಗಳ ದೋಣಿಗೆ ವಿದಾಯ ಹೇಳುವುದು ಹೇಗೆ?

ಕಹಿನೆನಪುಗಳ ಸಹವಾಸವೇ ವಿಚಿತ್ರ. ಮರೆಯಬೇಕೆಂದರೆ ಮತ್ತೆ ಮತ್ತೆ ಮುಂದೆ ಬಂದು ನಿಲ್ಲುತ್ತವೆ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಅಂದಂತೆ. ಜೀವನದಲ್ಲಿ ನಾವು ಅನುಭವಿಸುವ ನೆನಪುಗಳು ಒಂದರ ಹಾಗೆ ಮತ್ತೊಂದಿಲ್ಲ. ಅವುಗಳು ನಮ್ಮ ಬೆನ್ನು ಬಿಡುವುದಿಲ್ಲ. ಹಾಗಂತ ಕಹಿನೆನಪುಗಳು ಬಟ್ಟೆಗಂಟಿದ ರಕ್ತದ ಕಲೆಯಂತೆ ಹಾಗೆ ಉಳಿದುಕೊಂಡು ಬಿಡುತ್ತವೆ ಅಂತೇನಿಲ್ಲ. ಮರೆಯುವ ಗಟ್ಟಿ ಮನಸ್ಸಿರಬೇಕಷ್ಟೆ. ನೋವು ಹೆಚ್ಚಿಸುವ, ದುರ್ಬಲಗೊಳಿಸುವ, ಕೆಳಕ್ಕೆ ತಳ್ಳುವ ನೆನಪುಗಳ ಒಂದು ವಲಯ ಸೃಷ್ಟಿಸಿಕೊಂಡಾಗ ಅನುಭವಿಸುವ ಯಾವುದೇ ಕಹಿ ನೆನಪನ್ನು ಮರೆಯಲು ಸಜ್ಜಾಗುತ್ತೇವೆ. ಮನೋಸ್ಥೈರ್ಯ ಕುಗ್ಗಿಸುವ ನೆನಪುಗಳನ್ನು ಮರೆವಿನ ಪೆಟ್ಟಿಗೆಯಲ್ಲಿ ಎಸೆಯಬೇಕು. ನಿನ್ನೆಯ ಸಿಹಿನೆನಪುಗಳನ್ನು ಇಂದಿನ ಕಹಿ ಜೀವನಕ್ಕೆ ಬೆಸೆಯಬೇಕು. ಸಿಹಿನೆನಪಿಗೆ ಕಹಿನೆನಪುಗಳು ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತವೆ ಹಾಗಂತ ಅವುಗಳಿಗೆ ಪ್ರಾಮುಖ್ಯತೆ ನೀಡಿದರೆ ಹಣೆ ಗಟ್ಟಿಯಿದೆ ಅಂತ ಬಂಡೆಗಲ್ಲಿಗೆ ಜಜ್ಜಿಕೊಂಡಂತಾಗುತ್ತದೆ. ಅವುಗಳ ಹಾವಳಿ ಹೆಚ್ಚಾಗಿ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುತ್ತದೆ. ಅವುಗಳನ್ನು ನಿರ್ಲಕ್ಷಿಸಿ ತುಸು ತಡವಾದರೂ ಸರಿ ಕೊಂಚ ಆರಿಸಿ ಸವಿನೆನಪುಗಳ ಸರಮಾಲೆಯನ್ನು ಕಟ್ಟುವುದು ಒಳಿತು. ಕಹಿ ಬಿಟ್ಟು ಸಿಹಿನೆನಪುಗಳತ್ತ ವಾಲಿದರೆ ಸವಿಜೀವನದ ಸವಿಯನ್ನು ಮೆದ್ದಂತೆಯೇ ಸರಿ ಅಲ್ಲವೇ?