ರೈತರ ಕಷ್ಟಕ್ಕೆ ಸ್ಪಂದಿಸಲು ಜೆಡಿಎಸ್ ಗೆ ಅಧಿಕಾರ ನೀಡಿ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮನವಿ

ದೇಶದಲ್ಲಿ ರೈತರ ಸಾಲ ರೂ 25,000 ಕೋಟಿಯನ್ನು ಮನ್ನಾ ಮಾಡಿರುವ ಏಕೈಕ ಮುಖ್ಯಮಂತ್ರಿ  ಹೆಚ್ ಡಿ ಕುಮಾರಸ್ವಾಮಿ ಮಾತ್ರ ರಾಜ್ಯ ಹಾಗೂ ತಾಲೂಕಿನ ಜನರ ಸಂಕಷ್ಟಕ್ಕೆ ನೆರವಾಗಲು ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಸಹಕಾರ ನೀಡಬೇಕೆಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರು ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ  ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಮುನೇಗೌಡರ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನ ಜೆಡಿಎಸ್ ಮುಖಂಡರು ಐಕ್ಯತೆಯ ಪ್ರದರ್ಶನ ಮಾಡುವ ಮೂಲಕ ಬಿ.ಮುನೇಗೌಡ ಅವರನ್ನು ವಿಜೇತರನ್ನಾಗಿಸಿ ವಿಧಾನಸೌಧಕ್ಕೆ ಕಳಿಸಬೇಕು. ಮೂರು ಬಾರಿ ಸೋತಿರುವ ಬಿ.ಮುನೇಗೌಡ ಅವರಿಗೆ ಕ್ಷೇತ್ರದ ಜನತೆ ಮತ ನೀಡಬೇಕು ಎಂದು ಕೋರಿದರು

ಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್ ಮಾತನಾಡಿ ಬಿಬಿಎಂಪಿ ತ್ಯಾಜ್ಯದ ವಿರುದ್ಧದ ಹೋರಾಟದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದವರು ಹೆಚ್ ಡಿ  ಕುಮಾರಸ್ವಾಮಿ ಮಾತ್ರ ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಿಬಿಎಂಪಿ ತ್ಯಾಜ್ಯ ಘಟಕವನ್ನು ಬಂದ್ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ಕಳೆದ ಹಲವು ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಮುನೇಗೌಡ ಅವರು ಪರಾಜಿತರಾದ ಕಾರಣ ಜೆಡಿಎಸ್ ಕಾರ್ಯಕರ್ತರು ಅನುಭವಿಸುತ್ತಿರುವ ನೋವಿಗೆ ಈ ಚುನಾವಣೆಯಲ್ಲಿ ಅಂತ್ಯ ಕಾಣಲಿದೆ ಎಂದರು.

ಪ್ರಚಾರ ಸಭೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಅಪ್ಪಯಣ್ಣ , ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ. ಎಚ್ ಜೆ ವಿಜಯಕುಮಾರ್, ಹುಸ್ಕೂರ್ ಆನಂದ್, ತಾಲೂಕು ಘಟಕದ ಅಧ್ಯಕ್ಷ ಎಂ ಲಕ್ಷ್ಮೀಪತಿ, ನಗರ ಘಟಕದ ಅಧ್ಯಕ್ಷ ವಡ್ಡರಲ್ಲಿ ರವಿ, ಟಿಎಪಿಸಿಎಂಎಸ್ ಅಧ್ಯಕ್ಷ ವಿ ಅಂಜನ ಗೌಡ, ಮುಖಂಡರಾದ ಆರ್ ಗೋವಿಂದರಾಜು, ಎ. ನರಸಿಂಹಯ್ಯ, ಎಪಿ ರಂಗನಾಥ್, ರಮೇಶ್ ಗೌಡ ತ.ನ. ಪ್ರಭುದೇವ್, ಪದ್ಮಾವತಿ ಬಿ ಮುನೇಗೌಡ, ಸುನಿಲ್ ಕುಮಾರ್ ,ಆನಂದ್, ಆರ್ ಕೆಂಪರಾಜ್, ಸಿಎಚ್ ರಾಮಕೃಷ್ಣ, ಧರ್ಮೇಂದ್ರ, ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.