ವಿಜಯ ದರ್ಪಣ ನ್ಯೂಸ್…..
ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ
26 ಲಕ್ಷ ರೂ.ಗಳ ಮೌಲ್ಯದ 2 ಹೊಸ ಬಸ್

ಶಿಡ್ಲಘಟ್ಟ : ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯ ಸುತ್ತಮುತ್ತಲಿನ 20 ಗ್ರಾಮಗಳ 180ಕ್ಕೂ ಹೆಚ್ಚು ಮಕ್ಕಳು ಎರಡು ಬಸ್ ಮಾರ್ಗಗಳ ಮೂಲಕ ಪ್ರತಿದಿನ ಶಾಲೆಗೆ ಬರುತ್ತಿದ್ದಾರೆ ಇದರಿಂದ ಶಾಲೆ ದಾಖಲಾತಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಪ್ರಸಕ್ತ 2026-27ನೇ ಸಾಲಿನಲ್ಲಿ 228 ಮಕ್ಕಳು ದಾಖಲಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ಈ ಶಾಲೆಯ ಮಕ್ಕಳನ್ನು ಶಾಲೆಗೆ ಕರೆತರಲು ಚಿಕ್ಕ ಗೂಡ್ಸ್ ವಾಹನವನ್ನು ಅವಲಂಬಿಸಿತ್ತು ಇಂದು 52 ಅಸನಗಳ ಹೊಸ ಬಸ್ ಹೊಂದಿದೆ.
2019-20 ರಲ್ಲಿ 82 ಇದ್ದ ದಾಖಲಾತಿ 2024-25 ರಲ್ಲಿ 155ಕ್ಕೆ ಏರಿತು ನಂತರ ಮತ್ತಷ್ಟು ಹೆಚ್ಚಳ ಕಂಡು ಪ್ರಸಕ್ತ ಸಾಲಿನಲ್ಲಿ 228ಕ್ಕೆ ತಲುಪಿದೆ 2022-23ರಲ್ಲಿ 5 ಲಕ್ಷ ರೂ.ಗಳ ಮೌಲ್ಯದ 35 ಆಸನಗಳ ಸೆಕೆಂಡ್ ಹ್ಯಾಂಡ್ ಬಸ್ ಒದಗಿಸಲಾಗಿತ್ತು ,
ಮಕ್ಕಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಗೌಡನಹಳ್ಳಿ ಮಂಜುನಾಥ್ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಅವರ ಸಹಕಾರದಿಂದ 26 ಲಕ್ಷ ರೂ.ಗಳ ಮೌಲ್ಯದ 52 ಅಸನಗಳ ಹೊಸ ಬಸ್ ಶಾಲೆಗೆ ದೊರೆತಿದೆ ಗಾಂಧಿ ಜಯಂತಿಯಂದು ಬಸ್ ಹಸ್ತಾಂತರಿಸಲಾಯಿತು.

ಪಠ್ಯದ ಜತೆಗೆ ಕ್ರೀಡೆ, ಪ್ರತಿಭಾ ಕಾರಂಜಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಒತ್ತು ನೀಡಲಾಗುತ್ತಿದೆ 2023-24ನೇ ಸಾಲಿನಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಕಾರ್ಯನಿರ್ವಹಣೆಗೆ ‘ಪುಷ್ಟಿ’ ಪ್ರಶಸ್ತಿ ದೊರೆತಿದೆ.
ಶಾಲೆಯಲ್ಲಿ 2022-23ರಿಂದ ಎಲ್.ಕೆ.ಜಿ. ಮತ್ತು ಯು.ಕೆ. ಜಿ.ತರಗತಿಗಳೂ ನಡೆಯುತ್ತಿವೆ ಆರಂಭದಲ್ಲಿ ಇಲಾಖೆ ಆರ್ಥಿಕ ನೆರವಿಲ್ಲದೆ ಎಸ್.ಡಿ.ಎಂ.ಸಿ.ಮತ್ತು ಪೋಷಕರ ಸಹಕಾರದಿಂದ ನಡೆಯುತ್ತಿತ್ತು 2024-25ರಿಂದ ಇಲಾಖೆ ಅನುಮೋದನೆಯೊಂದಿಗೆ ಅನುದಾನ ಹಾಗೂ ವೇತನ ದೊರೆಯುತ್ತಿದೆ.
ಶಿಕ್ಷಕರ ಪ್ರಯತ್ನ, ಪೋಷಕರ ಸಹಕಾರ, ಎಸ್.ಡಿ.ಎಂ.ಸಿ. ಬೆಂಬಲ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ದಾನಿಗಳ ನೆರವಿನಿಂದ ಶಾಲೆ ದಾಖಲಾತಿ ಹೆಚ್ಚಳವಾಗಿದೆ, ಗೂಡ್ಸ್ ವಾಹನದ ಮೇಲೆ ಅವಲಂಬಿತವಾಗಿದ್ದ ಶಾಲೆ ಇಂದು
ಹೊಸ ಬಸ್ ಮೂಲಕ ಗ್ರಾಮೀಣ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ ಇದು ಶಾಲೆ ಮತ್ತು ಸಮುದಾಯದ ಒಟ್ಟುಗೂಡಿದ ಹೆಜ್ಜೆಗೆ ಸಾಕ್ಷಿ. ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಅವರ ಸಹಕಾರದೊಂದಿಗೆ ಎಂಒಯು ಒಪ್ಪಂದ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ವಾಹನದ ನಿರ್ವಹಣೆಗಾಗಿ ಶಾಲಾ ವಾಹನ ಉಸ್ತುವಾರಿ ಸಮಿತಿ ರಚಿಸಲಾಗಿದೆ,ಚಾಲಕ ಮತ್ತು ಸಹಾಯಕ ವೇತನ, ಇಂಧನ ಹಾಗೂ ವಾಹನ ನಿರ್ವಹಣೆಯನ್ನು ದಾನಿಗಳು, ಎಸ್.ಡಿ.ಎಂ.ಸಿ.ಮತ್ತು ಪೋಷಕರ ಸಹಕಾರದಿಂದ ನಿರ್ವಹಿಸುವ ಉದ್ದೇಶ ಹೊಂದಲಾಗಿದೆ.
ಈ ಶಾಲೆಯ ಅಭಿವೃದ್ಧಿಗೆ ಕಾಯಾ ,ವಾಚಾ ಶಕ್ತಿ ಮೀರಿ ಶ್ರಮಿಸಿದ ಶಿಕ್ಷಕರೊಬ್ಬರು ಎಲ್ಲಾ ಮಾಹಿತಿ ನೀಡಿದ ನಂತರ ಅವರ ಹೆಸರು ಪತ್ರಿಕೆಯಲ್ಲಿ ಪ್ರಚುರ ಪಡಿಸಲು ಇಷ್ಟ ಪಡಲಿಲ್ಲ, ಈ ಡಿಜಿಟಲ್ ಯುಗದಲ್ಲಿ ಇಂತಹ ಎಲೆಮರೆಯ ಕಾಯಿಯಂತೆ ಶ್ರಮಿಸುವ ಈ ಶಿಕ್ಷಕ ಅವರ
ಕಾರ್ಯ ವೈಖರಿಯನ್ನು ಇತರ ಶಿಕ್ಷಕರು ಮಾದರಿಯಾಗಿ ತೆಗೆದುಕೊಳ್ಳಲಿ.









