ವಿಜಯ ದರ್ಪಣ ನ್ಯೂಸ್…
ಜವಾರಿ ಕಾಳು ಮೇಳಕ್ಕೆ ಭರ್ಜರಿ ಚಾಲನೆ

ತಾಂಡವಪುರ ಏಪ್ರಿಲ್ 11 ಹಸಿರು ಕಡಲೆ, ಕರಿ ಹುರುಳಿ, ಕಪ್ಪು ಹೆಸರು, ಮಡಕೆಕಾಳು ,ಕಪ್ಪು ಹಲಸಂದೆ ಮೊದಲಾದ ಅಪರೂಪದ ನೂರಕ್ಕೂ ಹೆಚ್ಚಿನ ಕಾಳುಗಳು ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು.
ಮೈಸೂರಿನ ನಂಜರಾಜ ಬಹುದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ, ಸಹಜ ಸೀಡ್ಸ ಮತ್ತು ತೋಟಗಾರಿಕಾ ಇಲಾಖೆ, ಕಿಸಾನ್ ಮಾಲ್ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಜವಾರಿ ಕಾಳುಮೇಳದಲ್ಲಿ ನೂರಾರು ಕಾಳುಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. ಮೇಳಕ್ಕೆ ಫಿಲಂಫೇರ್ ಪ್ರಶಸ್ತಿ ಪುರಸ್ಕೃತ ಅಕ್ಷತಾ ಪಾಂಡವಪುರ ಚಾಲನೆ ನೀಡಿ ಮಾತನಾಡಿ, ನಿಜವಾದ ಭಾರತವನ್ನು ಜವಾರಿ ಕಾಳು ಮೇಳದಲ್ಲಿ ಕಾಣಬಹುದು. ನಾವು ಮರೆತಿರುವ ಹಲವಾರು ಬೇಳೆಕಾಳುಗಳು ಇಲ್ಲಿ ಪ್ರದರ್ಶನಕ್ಕೆ ಬಂದಿವೆ. ಇವು ನಮ್ಮ ಸ್ಥಳೀಯ ಕೃಷಿ ಸಂಸ್ಕೃತಿಯ ಪ್ರತೀಕ. ಜಂಕ್ ಪುಡ್ ತಿನ್ನುವ ಬದಲು , ನಮ್ಮ ಪರಂಪರೆಯ ಕಾಳು ಆಧಾರಿತ ಆಹಾರವನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ. ಕಾಳುಗಳು ದೇಹಕ್ಕೆ ಸಮತೋಲನದ ಪೌಷ್ಟಿಕಾಂಶಗಳನ್ನು ನೀಡುತ್ತವೆ; ಕಣ್ಮರೆಯಾಗುತ್ತಿರುವ ಕೃಷಿ ವೈವಿಧ್ಯ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂಗಡಿ ಬಿಡುಗಡೆ ಮಾಡಿ ಮಾತನಾಡಿ, ಕಿಸಾನ್ ಮಾಲ್ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ತಾಜ, ಶುದ್ಧ ಮತ್ತು ಆರೋಗ್ಯದಾಯಕ ಕೃಷಿ ಉತ್ಪನ್ನಗಳನ್ನು ತಲುಪಿಸುವ ಒಂದು ಮಹತ್ವದ ಪ್ರಯತ್ನವಾಗಿದೆ. ಮಧ್ಯವರ್ತಿಗಳಿಲ್ಲದೆ ರೈತರಿಗೆ ನ್ಯಾಯವಾದ ಬೆಲೆ ಸಿಗುವಂತಾಗುವುದರೊಂದಿಗೆ, ಗ್ರಾಹಕರಿಗೂ ಉತ್ತಮ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗುತ್ತವೆ ಎಂದು ಹೇಳಿದರು.
ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನ ಅಧ್ಯಕ್ಷ ಹೆಚ್.ಎಸ್.ಸುರೇಶ ಬಾಬು ಮಾತನಾಡಿ, ರಾಗಿಯನ್ನು ಬೀಸೋ ಕಲ್ಲಿನಲ್ಲಿ ಬೀಸುತ್ತಿದ್ದ ಕಾಲ ಇತ್ತು. ಆಗ ತೊಗರಿ, ಅವರೆ, ಹೆಸರನ್ನೂ ಬೀಸೋ ಕಲ್ಲಿಗೆ ಹಾಕಿ ಬೇಳೆ ಮಾಡಿಕೊಳ್ಳುತ್ತಿದ್ದರು. ಅವುಗಳ ರುಚಿ ಮರೆಯಲಾಗದು. ಮೊಳಕೆ ಕಾಳುಗಳ ಬಳಕೆ ಸಾಮಾನ್ಯವಾಗಿತ್ತು. ಇಂತಹ ಆಹಾರ ಪದ್ಧತಿಯನ್ನು ಪುನಃ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಸುತ್ತೂರಿನ ಐಸಿಎಆರ್-ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಷ್ ಮಾತನಾಡಿ, ಕಡಿಮೆ ಸಮಯದಲ್ಲಿ ,ನಗರಗಳ ಮನೆಗಳಲ್ಲೂ ಮೈಕ್ರೋ ಗ್ರೀನ್ಸ್ ಬೆಳೆಸಬಹುದು. ಮೊಳಕೆ ಬಂದ ಕಾಳಿನ ಎಳೆಯ ಪೈರನ್ನು ಸಲಾಡ್ ಮಾಡಿ ಅಥಾವ ಜ್ಯೂಸ್ ಮಾಡಿ ಸವಿಯಬಹುದು. ಇದು ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಜೀವನ ಶೈಲಿಗೆ ಸೂಕ್ತವಾಗಿದೆ. ಇವುಗಳಬಬಳಕೆ ಹೆಚ್ಚಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಹಜ ಸಮೃದ್ದದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಸಹಜ ಸೀಡ್ಸನ ನಿರ್ದೇಶಕ ಎಸ್.ಆರ್.ಶ್ರೀನಿವಾಸ ಮೂರ್ತಿ ಮಾತನಾಡಿದರು. ಸಿ.ಎನ್.ಕೇಶವಮೂರ್ತಿ ಇದ್ದರು. ಮೇಳದಲ್ಲಿ 30 ಮಾರಾಟ ಮಳಿಗೆಗಳು ಭಾಗವಹಿಸಿದ್ದು, ಸಾವಯವ ಪದಾರ್ಥ, ಬಿತ್ತನೆ ಬೀಜ, ಉಪ್ಪಿನ ಕಾಯಿ, ಗಾಣದ ಎಣ್ಣೆ, ಮೌಲ್ಯವರ್ಧಿತ ಪದಾರ್ಥಗಳು, ಬಿತ್ತನೆ ಬೀಜ ಮತ್ತು ಹಣ್ಣಿನ ಗಿಡಗಳು ಮಾರಾಟಕ್ಕೆ ಬಂದಿವೆ. ಜೋಳದ ರೊಟ್ಟಿ ಊಟ, ತೊಗರಿ ಬೇಳೆ, ಪಾಯಸ, ಬೇಳೆ ಪಾಯಸ ಹಾಗೂ ಬೇಳೆ ವಡೆ ಮತ್ತು ನಿರ್ಲಕ್ಷಿತ ಹಣ್ಣುಗಳ ಜ್ಯೂಸ್ ಚಪ್ಪರಿಸಲು ಸಿಗುತ್ತಿವೆ.

ಮೂತ್ರಕೋಶದ ಕಲ್ಲು ಕರಗಿಸುವ ಕಪ್ಪು ಕಡಲೆ!
ಧಾರವಾಡದ ರೈತರು ತಂದಿರುವ ಜವಾರಿ ಕರಿ ಕಡಲೆಗೆ ಔಷಧೀಯ ಗುಣವಿದೆ. ಸಾಮಾನ್ಯವಾಗಿ ಬೆಳೆಯುವ ಕೆಂಪು ಕಡಲೆ ಎಲ್ಲರಿಗೂ ಗೊತ್ತು. ಆದರೆ, ಕರಿ ಕಡಲೆಯ ಹೊರ ಪದರ ಕಪ್ಪು ಬಣ್ಣದಿಂದ ಕೂಡಿದ್ದು, ನೀರಿನಲ್ಲಿ ನೆನೆಸಿಟ್ಟರೆ ನೀರು ಕಪ್ಪುಬಣ್ಣಕ್ಕೆ ತಿರುಗುತ್ತದೆ. ಕರಿಕಡಲೆ ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಅದರ ನೀರು ಕುಡಿದರೆ ಮೂತ್ರಕೋಶದ ಕಲ್ಲು(ಕಿಡ್ನಿ ಸ್ಟೋನ್) ಕರಗಿಹೋಗುತ್ತವೆ. ಸುಲಭನಾಗಿ ಜೀರ್ಣವಾಗುವ ಕರಿಕಡಲೆ, ಗ್ಯಾಸ್ಟ್ರಿಕ್ ಸಮಸ್ಯೆ ತರದು. ಇಳುವರಿ ಕಡಿಮೆಯಾದರೂ ಔಷಧೀಯ ಗುಣಗಳಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.











