ವಿಜಯ ದರ್ಪಣ ನ್ಯೂಸ್…..
ಸಾರ್ವಜನಿಕರ ಖಾತೆಗಳು ಮಾಡಲು ವಿಳಂಬ: ಅಧಿಕಾರಿಗಳ ವಿರುದ್ಧ ಪುರಸಭಾ ಸದಸ್ಯರ ಪ್ರತಿಭಟನೆ

ವಿಜಯಪುರ ದೇವನಹಳ್ಳಿ ತಾಲ್ಲೂಕು : ವಿಜಯಪುರ ಪುರಸಭೆಯಲ್ಲಿ, ಖಾತೆ ಬದಲಾವಣೆಗಾಗಿ ಸಾರ್ವಜನಿಕರು ಕೊಡುವಂತಹ ಅರ್ಜಿಗಳನ್ನು, ವಿನಾಕಾರಣ, ಬಾಕಿ ಉಳಿಸಿಕೊಂಡು, ಸುತ್ತಾಡಿಸುವುದರ ಜೊತೆಗೆ ಒಂದೇ ವರ್ಷಕ್ಕೆ ಎರಡು ಬಾರಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್ ಅವರು, ಪುರಸಭೆಯ ಮುಂಭಾಗದಲ್ಲಿ, ಅರ್ಜಿದಾರರೊಟ್ಟಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಲಲಿತಮ್ಮ ಎಂಬ ವೃದ್ಧೆ, ಖಾತೆ ಬದಲಾವಣೆಗಾಗಿ ಕಳೆದ ವರ್ಷ 8 ನೇ ತಿಂಗಳಿನಲ್ಲಿ, ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಖಾತೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಕ್ರಮವಾಗಿ ತೆರಿಗೆ ಕಟ್ಟುವಂತಹ ನಾಗರಿಕರನ್ನು, ಅವರ ಕೆಲಸ ನಿಮಿತ್ತವಾಗಿ ಬಂದಾಗ, ಕನಿಷ್ಟ ಅವರಿಗೆ ಕುಳಿತುಕೊಳ್ಳುವುದಕ್ಕೆ ಕುರ್ಚಿಗಳನ್ನೂ ನೀಡದೇ, ಅಗೌರವ ತೋರಿಸಿದ್ದಾರೆ. ನಾಗರಿಕರಿಗೂ ಕನಿಷ್ಟ ಗೌರವ ಸಿಗುತ್ತಿಲ್ಲ.
ನಾಗರಿಕರು ಖಾತೆಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದಾಗ, ಯಾವುದಾದರೂ ದಾಖಲೆಗಳ ಕೊರತೆಯಿದ್ದರೆ, ಅವರಿಗೆ ತಿಳಿಸಿ, ಖಾತೆ ಮಾಡಲು ತೊಡಕುಗಳಿದ್ದರೆ ಅವರಿಗೆ ಹಿಂಬರಹ ಕೊಡಿ ಎಂದು ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹಾ, ಇನ್ನೆರಡು ದಿನಗಳಲ್ಲಿ ಖಾತೆ ಮಾಡಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ತಿಂಗಳುಗಳೇ ಕಳೆದರೂ ಇದುವರೆಗೂ ಖಾತೆ ಮಾಡಿಕೊಟ್ಟಿಲ್ಲ. ಬಹಳಷ್ಟು ಅರ್ಜಿದಾರರ ಆರೋಪವೂ ಇದೆ ಆಗಿದೆ.
ಅಧಿಕಾರಿಗಳು ನಿಗದಿತ ಸಮಯದಲ್ಲಿ ಖಾತೆಗಳು ಮಾಡಿಕೊಡದೇ ಹೋದರೆ, ಅವರು ಇಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದು ಬೇಡ. ಸಾರ್ವಜನಿಕರೇನು ಇವರಿಗೆ ಗುಲಾಮರಾ? ಇವರು ಕರೆದಾಗಲೆಲ್ಲಾ ಬರೋದಕ್ಕೆ? ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಸಿ.ಎಂ.ರಾಮು ಮಾತನಾಡಿ, ಅಧಿಕಾರಿಗಳಿಗೆ ಸಾರ್ವಜನಿಕರ ಬಗ್ಗೆ ಕಿಂಚಿತ್ತೂ ಕಾಳಜಿಯೂ ಇಲ್ಲ. ಬದ್ಧತೆಯು ಇಲ್ಲ. ಬಹಳಷ್ಟು ಮಂದಿ ನಾಗರಿಕರ ಬಳಿಯಲ್ಲಿ, ಅರ್ಜಿಗಳನ್ನೂ ಪಡೆಯುವುದಿಲ್ಲ. ಕೆಲವರು ತೆರಿಗೆ ಕಟ್ಟಿದ್ದರೂ, ಅದನ್ನು ಆಪ್ ಗ್ರೇಡ್ ಮಾಡುವುದಿಲ್ಲ. ಪುನಃ ನಾಗರಿಕರು ಬಂದು ತೆರಿಗೆ ಕಟ್ಟಿರುವುದು ಅಪ್ ಗ್ರೇಡ್ ಮಾಡಿಕೊಡಿ ಎಂದರೆ, ಹಿಂದೆ ಕಟ್ಟಿರುವ ರಸೀದಿ ಕೊಡಿ ಎನ್ನುತ್ತಾರೆ. ರಸೀದಿ ಇಲ್ಲದಿದ್ದರೆ, ಪುನಃ ತೆರಿಗೆ ಕಟ್ಟಬೇಕು. ಇದು ಸಂಪೂರ್ಣವಾಗಿ ಅಧಿಕಾರಿಗಳ ನಿರ್ಲಕ್ಷ್ಯತನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಮಾತನಾಡಿ, ಪುರಸಭೆಯಲ್ಲಿ, ಅರ್ಹ ಅರ್ಜಿದಾರರು, ನೇರವಾಗಿ ಬಂದು ಖಾತೆಗಾಗಿ ಅರ್ಜಿ ಕೊಟ್ಟರೆ, ಇಲ್ಲಿ ಖಾತೆಗಳಾಗುವುದಿಲ್ಲ. ಮಧ್ಯವರ್ತಿಗಳು, ಪ್ರಭಾವಿಗಳ ಮೂಲಕ ಬಂದರೆ ಅಧಿಕಾರಿಗಳು ಮೂರೇ ದಿನಕ್ಕೆ ಖಾತೆ ಮಾಡಿಕೊಡುತ್ತಾರೆ. ಬಡವರ ಖಾತೆಗಳಿಗೆ ಸರ್ವರ್ ಸಮಸ್ಯೆ ಕಾಡುತ್ತದೆ. ಪ್ರಭಾವಿಗಳು ತಂದು ಕೊಡುವ ಖಾತೆಗಳು ಬೇಗನೆ ಆಗುತ್ತವೆ ಇಂತಹ ವ್ಯವಸ್ಥೆ ಇಲ್ಲಿದೆ ಎಂದು ಆರೋಪ ಮಾಡಿದರು.
ಸಾರ್ವಜನಿಕರಿಗೆ ಅಧಿಕಾರಿಗಳ ಕಡೆಯಿಂದ ಆಗಿರುವಂತಹ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವುದರ ಜೊತೆಗೆ, ಮುಂದೆ ಇಂತಹ ಸಮಸ್ಯೆ ಉದ್ಭವವಾಗದಂತೆ ಮುಂಜಾಗ್ರತೆ ವಹಿಸುತ್ತೇವೆ. ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅವರು, ಮನವಿ ಮಾಡಿಕೊಂಡ ನಂತರ, ಪ್ರತಿಭಟನೆ ಕೈ ಬಿಟ್ಟರು.
ಪ್ಲಾಸ್ಟಿಕ್ ತಯಾರಿಕೆಯನ್ನು ನಿಲ್ಲಿಸುವುದರ ಬದಲಿಗೆ, ಸಣ್ಣ, ಪುಟ್ಟ ವ್ಯಾಪಾರಿಗಳು, ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಳ್ಳುತ್ತಿದ್ದರೆ, ಅಂತಹವರ ಬಳಿಗೆ ಹೋಗಿ, ಪ್ಲಾಸ್ಟಿಕ್ ರೈಡ್ ಮಾಡಿ, ಅವರಿಗೆ ದಂಡ ವಿಧಿಸುವುದು ಸರಿಯಲ್ಲ. ಮೊದಲು ಉತ್ಪಾದನೆ ನಿಲ್ಲಿಸಿ, ಬಡಪಾಯಿಗಳ ಹೊಟ್ಟೆಯ ಮೇಲೆ ಹೊಡೆಯುವಂತಹ ಕೆಲಸ ಮಾಡಬೇಡಿ.ಪ್ಲಾಸ್ಟಿಕ್ ಬಳಕೆ ಮಾಡದಂತೆ ಜನರಿಗೆ ಅರಿವು ಮೂಡಿಸಿ, ಅದನ್ನು ಬಿಟ್ಟು, ಸಣ್ಣ, ಪುಟ್ಟ ವ್ಯಾಪಾರಿಗಳಿಗೆ ದಂಡ ವಿಧಿಸಿದರೆ ಸಹಿಸುವುದಿಲ್ಲ ಎಂದು ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್ ಎಚ್ಚರಿಕೆ ನೀಡಿದರು.










