ವಿಜಯ ದರ್ಪಣ ನ್ಯೂಸ್….
ಲಲಿತಾದ್ರಿಪುರದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡಿದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ತಾಂಡವಪುರ ಏಪ್ರಿಲ್ 28: ನಗರದ ಲಲಿತಾದ್ರಿಪುರ ಗ್ರಾಮದಲ್ಲಿ ಸೋಮವಾರ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಲಲಿತಾದ್ರಿಪುರದ ಶ್ರೀ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪುತ್ಥಳಿ ಅನಾವರಣಗೊಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, “ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ನಗರ ನಿರ್ಮಾಣ ಆಯಿತು. ಅಂದಿನ ಕಾಲಘಟ್ಟದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟುವ ಮೂಲಕ ನೀರಿನ ಸಂರಕ್ಷಣೆಗೆ ಮುನ್ನುಡಿ ಬರೆದರು. ನಮಗೆ ಕೆಂಪೇಗೌಡರು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದರು.
ಕೇವಲ ಅಧಿಕಾರಕ್ಕೋಸ್ಕರ ರಾಜಕಾರಣಕ್ಕೆ ಬರಬಾರದು. ಸೇವಾ ಮನೋಭಾವನೆ ಇರಬೇಕು. ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾನು ಚಿರ ಋಣಿಯಾಗಿರುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಅಧಿಕಾರ ಬದಲಾಗುತ್ತದೆ. ಚಾಮುಂಡೇಶ್ವರಿ ಭಕ್ತನಾಗಿ ಒಂದು ಮಾತನ್ನು ಹೇಳುತ್ತೇನೆ. ನೆನೆಗುದಿಗೆ ಬಿದ್ದಿರುವ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಪ್ರೀತಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜೆ.ಗಂಗಾಧರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಶ್ರೀಧರ್, ಎಸ್.ಬಿ.ಎಂ. ಮಂಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮದನ್ ಸೇರಿ ಇತರರು ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ರವರು ಚೇತನ್ ಚುನಾವಣೆಗೆ ಸ್ಪರ್ಧಿಸಲಿ: ನಿಖಿಲ್ ಕುಮಾರಸ್ವಾಮಿ
ಮೈಸೂರು: ಚೇತನ್ ಅಹಿಂಸಾಗೆ ತಾಕತ್ತಿದ್ದರೆ ಯಾವುದಾದರೊಂದು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
ಡಾ.ರಾಜಕುಮಾರ್ ಸ್ಮಾರಕಕ್ಕೆ ಸರ್ಕಾರ ನೀಡಿರುವ ಜಾಗದ ಕುರಿತು ನಟ ಚೇತನ್ ಅಹಿಂಸಾ ಮಾಡಿರುವ ಆಕ್ಷೇಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡದ ಮೇರು ನಟ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇದೇ ಕಾರಣದಿಂದ ಇವರೆಲ್ಲ ನಿಧನರಾದಾಗ ರಾಜ್ಯ ಸರ್ಕಾರ ಸೂಕ್ತ ಗೌರವ ನೀಡಿದೆ.
ಡಾ.ರಾಜಕುಮಾರ್ ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಣ್ಣ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಿದರು. ಅಂಬರೀಶಣ್ಣ ನಿಧನರಾದಗಲೂ ಕುಮಾರಣ್ಣ ಸಿಎಂ ಆಗಿದ್ದರು. ಆಗಲೂ ಅಂಬರೀಶ್ ಅವರಿಗೆ ಸೂಕ್ತ ಗೌರವ ನೀಡಿದರು. ಇದರಲ್ಲಿ ತಪ್ಪೇನಿದೆ? ಎಂದರು.
ಚೇತನ್ ಅಹಿಂಸಾ ಟ್ವಿಟರ್ ನಲ್ಲಿ ಅದು ಇದು ಬರೆದುಕೊಂಡಿದ್ದಾರೆ. ಇದರ ಬದಲು ಅವರಿಗೆ ತಾಕತ್ತು ಇದ್ದರೆ ಯಾವುದಾದರೊಂದು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಹೇಳಿದರು.











