ವಿಜಯ ದರ್ಪಣ ನ್ಯೂಸ್….
ಕನಕಪುರದಲ್ಲಿ ವೈದ್ಯಕೀಯ ಕಾಲೇಜಿಗೆ ಡಿಕೆ ಸುರೇಶ್ ಭೂಮಿ ಪೂಜೆ

ಕನಕಪುರ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕೆಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕ್ಷೇತ್ರದ ಜನತೆಯ ಒತ್ತಾಸೆಗೆ ಹಲವಾರು ವಿಘ್ನಗಳು ಉಂಟಾಗಿದ್ದವು. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಬಿಜೆಪಿ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿತ್ತು. ಪುನಃ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಇಂದಿನ ಸರ್ಕರದಲ್ಲಿ 550 ಕೋಟಿ ರೂ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಅದ್ಧೂರಿಯಾಗಿ ಮತ್ತೊಮ್ಮೆ ಪೂಜೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಗುರುವಾರ ಕಸಬಾ ಹೋಬಳಿ ತುಂಗಣಿ ಗ್ರಾಮದ ರಾಷ್ಟ್ರಕವಿ ಕುವೆಂಪು ಬಡಾವಣೆ ಬಳಿ ಬಹುನಿರೀಕ್ಷಿತ ತಾಲ್ಲೂಕಿನ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲುಎನಿಸಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿ, ಇಂದು ಶುಭದಿನವಾದ ಕಾರಣ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ನಾಳೆಯಿಂದಲೇ ಕಾಮಗಾರಿಯನ್ನು ಆರಂಭಿಸಲಾಗುವುದು.
ಎರಡು ವರ್ಷಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡತೆ ಅಧಿಕೃತವಾಗಿ ನೂತನ ಕಾಲೇಜು ಉದ್ಘಾಟನೆಯಾಗಲಿರುವುದಾಗಿ ತಿಳಿಸಿದರು.
ಸರ್ಕಾರದಿಂದ ಮೆಡಿಕಲ್ ಕಾಲೇಜು ಮಂಜೂರಾತಿ ದೊರಕಿದ್ದರೂ ಹಲವಾರು ತಾಂತ್ರಿಕ ಕಾರಣದಿಂದ ಕಾಮಗಾರಿ ತಡವಾಗಿತ್ತು. ಎಲ್ಲಾ ವಿಘ್ನಗಳನ್ನು ಇನ್ನೊಂದು ನಿವಾರಣೆಗೊಳಿಸಿ, ವರ್ಷದಲ್ಲಿ ಕಾಲೇಜು ಪ್ರಾರಂಭಗೊಳಿಸಿ ಎರಡು ವರ್ಷದಲ್ಲಿ ಆಸ್ಪತ್ರೆ ಕಾಲೇಜು ಸಂಪೂರ್ಣವಾಗಿ ಕರ್ತವ್ಯ ನಿರ್ವಹಿಸಲಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಡಿ.ಎಂ.ವಿಶ್ವನಾಥ್, ಮುಖಂಡರಾದ ರಾಯಸಂದ್ರ ರವಿ, ಇತರರು ಇದ್ದರು.







