ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!!

ವಿಜಯ ದರ್ಪಣ ನ್ಯೂಸ್.

ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!!

ಜಗತ್ತಿಗಿಂತಲೂ ಹಳೆಯದಾದ ಒಲವಿನ ವ್ಯಾಖ್ಯಾನಕ್ಕೆ ಸೃಜನಶೀಲ ಕಥೆಯ ಮೂಲಕ ಹೊಚ್ಚ ಹೊಸ ಆಖ್ಯಾನ ಬರೆದ ನನ್ನ ಭಾವಬಿಂಬದಂತಿರುವ ಆತ್ಮೀಯ ಗೆಳೆಯ, ಅಕ್ಷರಬಂಧು ಶ್ರೀರಾಜ್ ಆಚಾರ್ಯನಿಗೆ ನನ್ನ ಅನಂತ ಅಭಿನಂದನೆಗಳು. ಅಭಿವ್ಯಕ್ತಿಯ ಆಶಯಕ್ಕೆ ಅನುಗುಣವಾಗಿ ಸೃಷ್ಟಿಶೀಲ ಬರಹಗಾರ ಮತ್ತು ಒಬ್ಬ ಸಾಧಾರಣ ಓದುಗನ ನಡುವೆ ಏರ್ಪಟ್ಟ ಭಾವಸಂವೇದನೆಯ ಪ್ರಸ್ತಾವನೆ ಎಂದಷ್ಟೇ ಇದನ್ನು ಭಾವಿಸಬೇಕೆಂಬ ಅಫಿಡವಿಟ್ಟನ್ನು ಮುಂದಿಟ್ಟೇ ಮುಂದುವರೆಯುತ್ತೇನೆ.

ಕಥೆ, ಬರಿಯ ಲೋಕಾನುಭವದ ಸಂಕಥನವಲ್ಲ, ಕಲ್ಪನಾ ವಿವರಣೆ ಮಾತ್ರವೂ ಅಲ್ಲ. ಅದು ಅನುಭವದ ಮೂಸೆಯಲ್ಲರಳಿ ವಾಸ್ತವದ ಸುವಾಸನೆ ಬೀರುವ ಕಲ್ಪನಾಕುಸುಮ. ನನ್ನ ಗ್ರಹಿಕೆಗೆ ನಿಲುಕಿದಂತೆ ಆಧುನಿಕ ಕನ್ನಡ ಕಥಾ ಪರಂಪರೆ ತನ್ನ ವಿಭಿನ್ನತೆ ಮತ್ತು ವಿಶಿಷ್ಟತೆಗಳಿಂದರೆ ಜಾಗತಿಕವಾಗಿ ತನ್ನದೇ ಆದ ಉತ್ಕೃಷ್ಟ ಸ್ಥಾನದಲ್ಲಿದೆ. ಈ ಕಾಲಘಟ್ಟದ ಜಾಗತೀಕರಣ, ಉದಾರಿಕರಣ, ಖಾಸಗೀರಣದ ವಿರುದ್ಧದ ಅಕ್ಷರರೂಪದ ಚಳುವಳಿಯಾಗಿ ಕಥಾ ಸಾಹಿತ್ಯ ಹೊರಹೊಮ್ಮುತ್ತಿರುವುದೇ ಇದಕ್ಕೆ ಕಾರಣ. ಅಭಿಜಾತ ಮಾರ್ಗಿಯಾದ ಕಥಾ ಪರಂಪರೆ ಭಾವ-ಜೀವ ಸಂವೇದಿಯಾಗಿ ಹೊಸ ನೆಲೆಗಳ ಸಾಧ್ಯತೆಗಳನ್ನು ಕಾಲಕಾಲಕ್ಕೆ ನವನೋನ್ಮೇಷಶಾಲಿನಿಯಂತೆ ತೌಲನಿಕವಾಗಿ ತೆರೆದಿಡುತ್ತಾ ಸಾಗಿರುವುದು ಗಮನಾರ್ಹವಾದುದು.

ಏನಕೇನ, ಸೃಜನಾತ್ಮಕ ಕಾವ್ಯ ನವ್ಯೋತ್ತರ, ನವ್ಯ, ಪ್ರಗತಿಶೀಲ, ಬಂಡಾಯ, ಆಧುನಿಕ ನೆಲೆಯಲ್ಲಿ ಸ್ಥಾಪಿತವಾದುದನ್ನು ಕಂಡ ‘ನಲ್’ ದೃಷ್ಟಿಯೇ ಕನ್ನಡ ಕಥಾ ಸಾಹಿತ್ಯವನ್ನು ಯಥಾವತ್ತಾಗಿ ಆಯಾ ನೆಲೆಯಲ್ಲಿಯೇ ನಾನು ನೋಡುವಂತೆ ಮಾಡಿದೆ. ಹಾಗಾಗಿ ಇದು ಕವಿ ಕಂಡಂತೆ ಕಥೆ.

ಕರೋನಾನಂತರದ ಕಾಲಘಟ್ಟದಲ್ಲಿ ಬದಲಾದ ಸನ್ನಿವೇಶಗಳು ಒಂದು ರೀತಿಯ ಅವ್ಯಕ್ತಭಯವನ್ನು ಹುಟ್ಟುಹಾಕಿ ಅಸಹಜಗಳು ತೀರ ಸಹಜವೆಂಬಂತೆ ಭಾಸವಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಿಂದ ಹಿಡಿದು, ಪತ್ರಿಕೆ, ಸುದ್ಧಿ ಮಾಧ್ಯಮಗಳಲ್ಲಿ ನ್ಯೇತ್ಯಾತ್ಮಕ ವಿಚಾರಗಳು ದಿನಂಪ್ರತಿ ಎಗ್ಗಿಲ್ಲದೆ ಪ್ರಚಾರ ಮತ್ತು ಪ್ರಸಾರವಾಗುತ್ತಿರುವುದು ಕಳವಳಕಾರಿ ಎಂಬುದು ನಾವೆಲ್ಲ ಒಪ್ಪಲೇ ಬೇಕಾದ ಸತ್ಯ. ಸಂಬಂಧಗಳ ನಡುವೆ ಅತಿಯಾದ ಅಹಂ, ಸ್ವಾರ್ಥ, ಸಂವೇದನಾಶೂನ್ಯತೆ ಏರ್ಪಟ್ಟು ಇದರ ನಡುವೆ ಭುಗಿಲೆದ್ದಿರುವ ಜಾತಿ-ಧರ್ಮಗಳ ನಡುವಿನ ಅಸಹಿಷ್ಣುತೆ ಅಪಾಯದ ಅಂಚನ್ನು ತಲುಪಿ ನಾಗರೀಕ ಸಮಾಜವನ್ನು ಮತ್ತೆಂದೂ ಮೇಲೇಳದಷ್ಟು ಆಳದ ಪ್ರಪಾತಕ್ಕೆ ಇಗಾಗಲೇ ತಳ್ಳಿವೆ. ತಳ್ಳುತ್ತಲೇ ಇವೆ. ಇಂತಹ ಅದೆಷ್ಟೋ ಕ್ಲೀಷೆಗಳಿಗೆ ಈ ಕಥೆಯಲ್ಲಿ ಉತ್ತರವಿದೆ.

ಗಾಯದ ಮೇಲೆ ಬರೆ ಎಂಬಂತೆ ಹೆಚ್ಚುತ್ತಿರುವ ಹದಿಹರೆಯದವರ ಆತ್ಮಹತ್ಯೆ ಪ್ರಕರಣಗಳು, ಆಧುನೀಕತೆ ತಂದೊಡ್ಡಿದ ಅಸಂಗತಿಗಳು, ಯುವ ಸಮೂಹ ಎದುರಿಸುತ್ತಿರುವ ಅಸಹಾಯಕತೆ, ವಿಷಣ್ಣತೆ, ಉದ್ವಿಗ್ನತೆ, ಅನಾಥಪ್ರಜ್ಞೆ ಎಲ್ಲವನ್ನು ಬೆರೆಸಿ ಎರಕಹೊಯ್ದಂತ ಕಥಾವಸ್ತುವಿನ ಆಯ್ಕೆಯಲ್ಲಿ ರಾಜ್ ಗೆದ್ದಿದ್ದಾರೆ. ಇಲ್ಲಿಯ ಪಾತ್ರಗಳು ಬರಿಯ ನೆಪಕಷ್ಟೇ. ಪರಿಪೋಷಣೆಯಿಂದ ಮೊದಲ್ಗೊಂಡು ಅವುಗಳ ಮೂಲನೆಲೆಯಿಂದ ನಿರೂಪಿತವಾಗುವ ಸಾಪೇಕ್ಷ ಸತ್ಯದ ಮೇಲೆ ಬೆಳಕು ಚಲ್ಲುವ, ಆ ಮೂಲಕ ಲೋಕಸಂವಾದಕ್ಕೆ ತೆರೆದುಕೊಳ್ಳುವ ಕಥೆಗಾರನ ಉದ್ದೇಶ ಓದುಗರಿಗೆ ಗೋಚರಿಸದಿರದು. ಮೇಲ್ನೋಟಕ್ಕೆ ಇದು ‘ಪ್ರೀತಿ-ಪ್ರೇಮ-ಪ್ರಣಯ’ ಕಥಾನಕ ಎಂದೇ ಕಂಡರೂ ಆಂತರ್ಯದಲ್ಲಿ ಮನುಷ್ಯ ಸಂಬಂಧಗಳ ಜೀವಪರತೆಯ ಅಕ್ಷರಗನ್ನಡಿಯಾಗಿ ಕಾಣಸಿಗುತ್ತದೆ. ಭ್ರಮೆ ಮತ್ತು ವಾಸ್ತವಗಳ ನಡುವಿನ ಭಾವ ಸೇತುವಾಗಿ ಕಥೆ ನಮ್ಮಲ್ಲಿ ಒಂದು ಗಾಢ ವಿಷಾದದ ಜೊತೆ ವಿಕ್ಷಿಪ್ತತತೆಯನ್ನು ಸಹ ಉಳಿಸುತ್ತದೆ.

ವ್ಯಕ್ತಿಕೇಂದ್ರೀಕೃತ ನೆಲೆಯಿಂದಲೇ ಸಮಕಾಲೀನ ಸಮಾಜದ ದರ್ಶನ ಹೊರಗೆಡುಹಲು ಸಾಧ್ಯ ಎಂಬುದಕ್ಕೆ ಈ ಕಥೆ ಉತ್ತಮೋತ್ತಮ ಉದಾಹರಣೆಯಾಗಬಹುದು. ಸಾಮಾನ್ಯವಾಗಿ ಎಲ್ಲರ ಬದುಕಿನ ಪುಟಗಳನ್ನು ತಿರುವು ಹಾಕಿದರೆ ಇಂತಹ ಅದೆಷ್ಟೋ ಕಥೆಗಳು ಹೇರಳವಾಗಿ ಸಿಗುತ್ತವೆ. ‘ಪ್ರೇಮ-ಕಾಮ’ದ ವಸ್ತು-ವಿಷಯ ಹಳೆಯದೆನಿಸಿದರೂ ಸೃಜನಶೀಲತೆಯ ಕುಲುಮೆಯಲಿ ಅದನ್ನೇ ತಿಕ್ಕಿ-ತಿದ್ದಿ-ತೀಡಿ, ಹೊಸದೆನಿಸುವಂತೆ ಬೆರಗಾಗುವಂತಹ ಹೊಳಪನ್ನು ಮೂಡಿಸಿ ನಮ್ಮ ಮುಂದಿಟ್ಟಿರುವ ಕಥೆಗಾರನ ಜಾಣ್ಮೆಗೆ ತಲೆದೂಗಲೇ ಬೇಕು.

ಸುತ್ತಲಿನ ವಿದ್ಯಮಾನಗಳನ್ನು ಬಳಸಿಕೊಂಡು ಮುನ್ನಡೆಯುವ ಮೊದಲು ಪಾತ್ರಗಳ ಸಂಭಾಷಣೆಯ ಭಾಷೆ ಹಾಗೂ ಸನ್ನಿವೇಶ ನಿರ್ಮಾಣದ ಭಾಷೆಯನ್ನು ಎಚ್ಚರದಿಂದ ಬಳಸಬಹುದಾದ ಸಾಧ್ಯತೆಗಳನ್ನು ಕಥೆಗಾರ ತಳ್ಳಿಹಾಕಿದ್ದು ಕಥೆಯನ್ನು ಓದುತ್ತಾ ಹೋದಂತೆ ಗೋಚರವಾಗಿತ್ತದೆ. ಪ್ರತಿರೋಧದ ಪರಿಚಯವೇ ಇಲ್ಲದಂತೆ ಲುಪ್ತವಾದ ಭಾವಸಮೀಕರಣಕ್ಕೆ ಮುಂದಾಗಿರುವುದು ಪ್ರಯತ್ನವಾದಿಯಾದ ಶ್ರೀರಾಜ್ ಆಚಾರ್ಯರವರ ಈ ಚೊಚ್ಚಲ ಕಥೆಯ ವಿಸ್ತಾರಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಯಾಗಬಹುದು. ಅದನ್ನವರು ನಿರ್ವಿವಾದವಾಗಿ ಒಪ್ಪುತ್ತಾರೆ ಎಂದುಕೊಳ್ಳುತ್ತೇನೆ.

ಅನುಭವನಿಷ್ಟತೆಯನ್ನೇ ಇಲ್ಲಿನ ಕಥಾ ನಿರೂಪಣೆಗೆ ಬಳಸಿಕೊಂಡಿದ್ದರ ಬಗ್ಗೆ ನನ್ನ ತಕರಾರುಗಳೇನೂ ಇಲ್ಲದೇ ಹೋದರೂ ಕೂಡ ಕಥೆಯ ವಸ್ತು-ವಿಷಯ-ವ್ಯಕ್ತಿ ಈ ಮೂರರ ನೆಲೆಯಲ್ಲಿ ತಾರ್ಕಿಕ ಅಂಶಗಳನ್ನು, ಸಾಂಕೇತಿಕ ಭಾಷ ಸಂಜ್ಞೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು ಎನ್ನಿಸುತ್ತದೆ. ಹಾಗೆ ಬಳಸಿಕೊಂಡಿದ್ದರೆ ಈ ಕಥೆಗೆ ಇನ್ನಷ್ಟು ಹೊಸ ಆಯಾಮಗಳು ನಿಸ್ಸಂಶಯವಾಗಿಯೂ ದೊರಕುತ್ತಿದ್ದವು ಎಂಬುದು ಒಬ್ಬ ನಿಷ್ಟಾವಂತ ಓದುಗನಾದ ನನ್ನ ಅಭಿಮತ.

ಸಾಹಿತ್ಯಮುಖಿಯ ವೈಯಕ್ತಿಕ ನೆಲೆಗಟ್ಟಿನಲ್ಲಿ ವ್ಯಕ್ತವಾದ ನೀತಿಸತ್ಯಗಳು ಸಾಮಾಜಿಕ ನೆಲೆಯಲ್ಲಿ ಪರಿಗಣನೆಗೆ ಬಂದರೆ ಅದು ಅವನ ಸಾಹಿತ್ಯದ ಗೆಲುವು. ಜಾತಿ-ವರ್ಣ-ವರ್ಗಗಳ ಮೇಲಿನ ಸಂಘರ್ಷಕ್ಕೆ ಶತಮಾನಗಳ ಇತಿಹಾಸವಿದೆ. ಈ ಸಂಘರ್ಷದಲ್ಲಿ ನಮ್ಮೊಳಗಿನ ಜೀವದ್ರವ್ಯ ಆಕುಂಚನವಾಗದಂತೆ ನೋಡಿಕೊಳ್ಳುವ ಅನಿವಾರ್ಯ ಮತ್ತು ಅವಶ್ಯಕತೆ ಎಂದಿಗಿಂತಲೂ ಇಂದು ತುಸು ಹೆಚ್ಚೇ ಇದೆ. ಮುಂದಿನ ದಿನಗಳಲ್ಲಿ ರಾಜ್ ಇದರ ಬಗ್ಗೆ ಖಂಡಿತವಾಗಿಯೂ ಗಮನಹರಿಸುತ್ತಾರೆ ಎಂಬ ನಂಬಿಕೆಯಿದೆ.

ಸ್ತ್ರೀಸಂವೇದಾನತ್ಮಕ ದೃಷ್ಟಿಯಿಂದ ಕಥೆ ಮಹತ್ವವಾದದ್ದೇನನ್ನೂ ಹೇಳದೇ ಹೋದರು ಪುರುಷಪ್ರಾಧಾನ್ಯತೆ ತಂದೊಡ್ಡಿದ ಹೆಣ್ಣಿನ ಮಾನಸಿಕ ತುಮುಲಗಳನ್ನು ಹಾಗೆ ಆಕೆ ಸಾಮಾಜಿಕ ಕಟ್ಟುಪಾಡುಗಳ ಕಪಿಮುಷ್ಟಿಯಲ್ಲಿ ಸಿಕ್ಕು ಇಂದಿಗೂ ನಲುಗುತ್ತಿರುವ ಕಟು ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಜೊತೆಜೊತೆಗೆ ನಮ್ಮ ಸಾಮಾಜಿಕ ಸ್ಥರದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತೀಯತೆಯ ವಿಷಬೇರುಗಳನ್ನು ಪರಿಚಯಿಸುತ್ತದೆ.

ಅತಿಯಾದ ಭಾವುಕತೆ ಅಪಾಯಕಾರಿ ಎಂಬ ಸತ್ಯದ ಸುತ್ತ ಗಿರಕಿಹೊಡೆಯುವ ಕಥೆ, ಇತ್ತ ಅಂತ್ಯವೂ ಆಗದ ಅತ್ತ ಆರಂಭವಿರದ ಅನೇಕಾನೇಕ ಸಂಗತಿಗಳು ಕಥೆಯ ಮೂಲಕ ಓದುಗರೆದುರು ಅನಾವರಣಗೊಳ್ಳುತ್ತವೆ. ಪ್ರೇಮ ವೈಫಲ್ಯದಂತಹ ಸೂಕ್ಷ್ಮ ಸಂಗತಿಗಳನ್ನು ಮತ್ತೆ ಅದು ತಂದೊಡ್ಡುವ ಶೂನ್ಯತೆಯನ್ನು, ಒಂಟಿತನವನ್ನು ನೀಗಿಕೊಳ್ಳುವ ಉಪಾಯವನ್ನು ಒಳಗೊಂಡ ಕಥೆ, ನಿಸ್ವಾರ್ಥ ಮಾನವಪ್ರೇಮದ ಔಚಿತ್ಯಪೂರ್ಣ ಮಾರ್ಗದರ್ಶಿತ್ವಕ್ಕೆ ಮುನ್ನುಡಿ ಬರೆಯಲಿ ಎಂಬ ಸದಾಶಯ ನನ್ನದು ಮತ್ತೆ ನಮ್ಮೆಲ್ಲರದ್ದು ಎಂದು ನಾನು ವಿನಮ್ರನಾಗಿ ಭಾವಿಸುತ್ತೇನೆ. ಶುಭವಾಗಲಿ.

ವಿ.ಸೂ:ಪ್ರತಿಗಳಿಗಾಗಿ ಸಂಪರ್ಕಿಸಿ-

ನಪ್ರತಿನಿಧಿ ಪ್ರಕಾಶನ,ಕುಂದಾಪುರ,ಮೊಬೈಲ್ ಸಂಖ್ಯೆ: (೮೬೬೦೭೮೬೨೨೬).ಕೃತಿಯ ಬೆಲೆ ರೂ. ೧೦೦ (ಅಂಚೆ ವೆಚ್ಚವನ್ನು ಒಳಗೊಂಡು).

 

ಮೇಲೋಗರ:

ತಮ್ಮ ಗ್ಲಾಸ್ ಮೇಟ್ ಕವಿಗಳ ಬಗ್ಗೆ ವೈ ಎನ್ ಕೆ ಆಗಾಗ ಹೀಗೆ ಹೇಳುತ್ತಿದ್ದರಂತೆ: “ಒ೦ದು ಪೆಗ್ ಹಾಕಿದ್ರೆ ನವ್ಯ, ಎರಡು ಪೆಗ್ ಹಾಕಿದ್ರೆ ನವೋದಯ, ಮೂರು ಪೆಗ್ ಹಾಕಿದ್ರೆ ಬ೦ಡಾಯ, ನಾಕು ಪೆಗ್ ಹಾಕಿದ್ರೆ ಸರ್ವೋದಯ”.ಅಂದಹಾಗೆ ನಾವೆಲ್ಲ ನವ್ಯರಾ? ನವ್ಯೋತ್ತರದವ? ಬಂಡಾಯಗಾರರ ಅಥವಾ….? ನೀವೇನಂತೀರಿ?

✍🏻ರಾಜ್ ಆಚಾರ್ಯ
೨೮-೦೮-೨೦೨೩