ನಾರಿ ಶಕ್ತಿ ವಂದನ ಅಧಿನಿಯಮ ಮಹಿಳಾ ಮೀಸಲಾತಿ – ರಾಷ್ಟ್ರೀಯ ನವನಿರ್ಮಾಣಕ್ಕೊಂದು ಹೆಜ್ಜೆ.

ವಿಜಯ ದರ್ಪಣ ನ್ಯೂಸ್

ಬೆಂಗಳೂರು ಸೆಪ್ಟೆಂಬರ್ 19

ಮಹಿಳಾ ಮೀಸಲಾತಿಯು ಸಮೃದ್ಧಭಾರತಕ್ಕೆ ಹೆಜ್ಜೆ. ಹಲವಾರು ವರ್ಷಗಳಿಂದ ಎಳೆದಾಟಕ್ಕೆ ಕಾರಣವಾಗಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಅಂತೂ ಇಂತೂ ಹೊಸ ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾಗಿದ್ದು ಅತ್ಯಂತ ಸಂತಸ. ಕಳೆದ ೩ ದಶಕದ ಹೋರಾಟಕ್ಕೆ ಸಂದ ಫಲ, ಕೇಂದ್ರ ಸಕಾರಕ್ಕೆ ಅದರಲ್ಲೂ ಪ್ರಧಾನಿ ಮೋದಿಯವರಿಗೆ ದೇಶದ ಸಮಸ್ತ ಮಹಿಳೆಯರಿಂದ ಧನ್ಯಾಭಿನಂದನೆಗಳು.
೨೦೧೪ ರಲ್ಲಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ೩೩% ಮೀಸಲಾತಿಯನ್ನು ಭರವಸೆ ನೀಡಿತ್ತು. ೨೦೧೯ ರ ಕಾರ್ಯಸೂಚಿಯಲ್ಲಿ ಮತ್ತೇ ಭರವಸೆಯನ್ನು ಪುನರಾವರ್ತಿಸಿತು. ಈಗ ಅದನ್ನು ಪೂರ್ಣಗೊಳಿಸಿದೆ. ಹೊಸ ಸಂಸತ್ ಭವನವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವುದರೊಂದಿಗೆ ಭಾರತದ ಮಹಿಳೆಯರಿಗೆ ನೀಡಿದ್ದ ತಮ್ಮ ಭರವಸೆಯನ್ನು ಪೂರ್ಣಗೊಳಿಸಿದ್ದಾರೆ.

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಆಧ್ಯತೆ, ಅವಕಾಶ ಸಿಗುವಂತಾಗಿದ್ದು ಸ್ವಾಗತಾರ್ಹ. ಬೆಳೆಯುತ್ತಿರುವ ಬಲವಾದ ಪುರುಷ ಸಮಾಜ ಸ್ತ್ರೀ ಬಳಗಕ್ಕೆ ಸಿಕ್ಕಿರುವ ಈ ಪ್ರಾತಿನಿಧ್ಯವನ್ನು ಹೇಗೆ ತಗೊಳ್ಳತ್ತೆ ಎನ್ನುವುದು ಮುಂದಷ್ಟೇ ಗೊತ್ತಾಗಬೇಕಿದೆ. ಮೀಸಲಾತಿ ಕ್ಷೇತ್ರಗಳಲ್ಲಿ ಈಗಾಗಲೇ ಬಲವಾಗಿ ತಳ ಊರಿರುವ ಪುರುಷರು ತಮ್ಮ ಹೆಂಡತಿ ಮಗಳು ಸೊಸೆತ॒ಮ್ಮ ಮನೆಯವರನ್ನೇ ನಿಲ್ಲಿಸುವ ಪ್ರಕ್ರಿಯೆಗೆ ಈಗಾಗಲೇ ಶುರುವಾಗಿರುತ್ತದೆ.

ಮಹಿಳಾ ಮೀಸಲಾತಿ ಸಿಗಲು ಕಾರಣ ಮತ್ತು ಅದರ ಹಿಂದಿನ ದಾರಿಯನ್ನೊಮ್ಮೆ ಅವಲೋಕಿಸೋಣ-
ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ೧೯೩೧ ರಲ್ಲಿ ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಗುರುತಿಸಬಹುದು. ಹೊಸ ಸಂವಿಧಾನದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಜಂಟಿಯಾಗಿ ಹೊರಡಿಸಿದ ಅಧಿಕೃತ ಜ್ಞಾಪಕ ಪತ್ರವನ್ನು ಬ್ರಿಟಿಷ್ ಪ್ರಧಾನಿಗೆ ಸಲ್ಲಿಸಿದ ತಮ್ಮ ಪತ್ರದಲ್ಲಿ ಸರೋಜಿನಿ ನಾಯ್ಡುರವರು ರಾಜಕೀಯ ಸ್ಥಾನಮಾನದ ಸಂಪೂರ್ಣ ಸಮಾನತೆಗಾಗಿ ಭಾರತೀಯ ಮಹಿಳೆಯರ ಸಾರ್ವತ್ರಿಕ ಬೇಡಿಕೆ ಎಂದು ಬರೆದಿದ್ದರು,

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಮೀಸಲಾತಿ ಕಲ್ಪಿಸಿಕೊಡುವ ಕುರಿತಾದ ಈ ಮಸೂದೆಗೆ ರಾಜಕೀಯ ಒಮ್ಮತ ಪಡೆಯುವಲ್ಲಿ ಹಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ಮಸೂದೆಯನ್ನು ಮೊದಲಿಗೆ ಸೆಪ್ಟೆಂಬರ್ ೧೨, ೧೯೯೬ ರಂದು ಸಂಸತ್ತಿನಲ್ಲಿ ಪರಿಚಯಿಸಲಾಗಿತ್ತು. ಮಸೂದೆ ಮಂಡನೆಯಾಗಿ ಹಲವು ವರ್ಷಗಳೇ ಕಳೆದಿತ್ತು, ಆದರೆ ಸಂಸತ್‌ನ ಉಭಯ ಸದನಗಳಲ್ಲಿ ಒಪ್ಪಿಗೆ ಲಭಿಸಿರಲಿಲ್ಲ.

ಶ್ರೀ ದೇವೇಗೌಡರ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರವು ಸೆಪ್ಟೆಂಬರ್ ೧೯೯೬ ರಲ್ಲಿ ೮೧ ನೇ ತಿದ್ದುಪಡಿ ಮಸೂದೆಯಾಗಿ ಲೋಕಸಭೆಯಲ್ಲಿ ಮೊದಲು ಪರಿಚಯಿಸಿತ್ತು.

೧೯೯೮ ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಸರ್ಕಾರವು ೧೨ ನೇ ಲೋಕಸಭೆಯಲ್ಲಿ ಮಸೂದೆಯನ್ನು ಮರು ಮಂಡಿಸಿತ್ತು.

೧೯೯೯ರ ಡಿಸೆಂಬರ್ ೨೩ರಂದು ಲೋಕಸಭೆಯಲ್ಲಿ ಪುನಃ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು ಆದರೆ ರಾಜಕೀಯವಾಗಿ ಸಹಮತ ಮೂಡದ ಕಾರಣ ಮಸೂದೆಯು ಅಂಗೀಕಾರ ಪಡೆಯಲು ವಿಫಲವಾಗಿತ್ತು.
೨೦೦೮ರಲ್ಲಿ, ಮನಮೋಹನ್ ಸಿಂಗ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಸರ್ಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿತ್ತು.

ಮಾರ್ಚ್ ೯, ೨೦೧೦ ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಯಿತಾದರೂ. ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಜೆಡಿಯು ನಾಯಕ ಶರದ್ ಯಾದವ್ ಮಹಿಳೆಯರಿಗೆ ೩೩% ಕೋಟಾದಲ್ಲಿ ಹಿಂದುಳಿದ ವರ್ಗಗಳಿಗೆ ೩೩% ಮೀಸಲಾತಿಯನ್ನು ಒತ್ತಾಯಿಸಿದ ಕಾರಣ ಮತ್ತೇ ಬಿದ್ದುಹೋಗಿತ್ತು.

ಅಂತಿಮವಾಗಿ ಇಂದು ೧೯ ಸೆಪ್ಟೆಂಬರ್ ೨೦೨೩ ರಂದು ಮಸೂದೆ ಮಂಡನೆ ಆಯ್ತು. ದೇಶದ ನವ ನಿರ್ಮಾಣಕ್ಕೆ ಮೋದಿಯವರು ಮತ್ತು ಅವರ ಸಹದ್ಯೋಗಿಗಳು ಸೇರಿ ಈ ನಿರ್ಣಯ ತೆಗೆದುಕೊಂಡರು ಮತ್ತು ಇಂತಹ ಮಹತ್ವದ ನಿರ್ಣಯಕ್ಕೆ ನಾರಿ ಶಕ್ತಿ ವಂದನ ಅಧಿನಿಯಮ ಮಾಡಲು ನನ್ನನ್ನು ಈಶ್ವರ ಆಯ್ಕೆ ಮಾಡಿದ್ದಾರೆಂದು ಮೋದಿಯವರು ಮಸೂದೆ ಮಂಡನೆಯ ಸಮಯದಲ್ಲಿ ಸಂಭ್ರಮದಿಂದ ತಿಳಿಸಿದರು. (ಇದರ ಅವಧಿ ಕೇವಲ ೧೫ ವರುಷಗಳು ಮಾತ್ರ). ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಲ್ಲದೆ, ಮಹಿಳಾ ಕಾಳಜಿಗಳಿಗೆ ಸ್ಪಂದಿಸುತ್ತದೆ. ಈ ಮಸೂದೆಯ ನಿಣೇಯದ ನಂತರ ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ೧೮೧ ಆಗಿದೆ.

ಮೀಸಲಾತಿಯಿಂದ ಸ್ಥಾನಗಿಟ್ಟಿಸಿದ ಮಹಿಳಾ ರಾಜಕಾರಣಿಯರನ್ನು ಅವರ ಮನೆಯವರು ಆಳುವುದು ನಿಲ್ಲಬೇಕಿದೆ, ಬಿಹಾರದಲ್ಲಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲೂಪ್ರಸಾದ್ ಯಾದವ್ ಜೈಲಿಗೆ ಹೋಗುವ ಸಂದರ್ಭದಲ್ಲಿ ತನ್ನ ಪತ್ನಿ ರಾಬ್ರಿದೇವಿಯನ್ನು ತಂದು ಮುಖ್ಯಮಂತ್ರಿ ಪಟ್ಟದಲ್ಲಿ ಕುಳ್ಳಿರಿಸಿದಂತೆ ಅಗಬಾರದು.

ಶಿಕ್ಷಿತ, ಸಾಮಾಜಿಕ ಕಳಕಳಿಯುಳ್ಳ, ಒಮ್ಮನಿಸ್ಸಿನ, ಧೃಡತೆಯುಳ್ಳ, ಆತ್ಮವಿಶ್ವಾಸ ಇರುವ ಮಹಿಳೆಯರಿಗೆ ನಮ್ಮಲ್ಲಿ ಕೊರತೆಯಿಲ್ಲ. ಯಾವುದೇ ಮೀಸಲಾತಿಯಿಲ್ಲದೇ ಇರುವ ಕ್ಷೇತ್ರದಲ್ಲಿ ಸಹ ಗೆಲ್ಲುವ ಛಾತಿ ಇರುವಂತಹ ಮಹಿಳೆಯರು ನಮ್ಮಲ್ಲಿದ್ದಾರೆ, ಯಾವುದೇ ಆಮಿಷಕ್ಕೆ ಒಳಗಾಗದೆ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡುತ್ತ, ಉತ್ತಮ ಆಡಳಿತ ನೀಡುತ್ತ ಭ್ರಷ್ಟಾಚಾರ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಹುಮ್ಮಸ್ಸಿನಿಂದ ಪ್ರಯತ್ನಿಸುತ್ತಾರೆ, ಹಾಗೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಮಹಿಳೆಯರು ರಾಜಕೀಂiಕ್ಕೆ ಇಂದು ಹೆಚ್ಚು ಹೆಚ್ಚು ಪ್ರವೇಶಿಸಬೇಕಾಗಿದೆ. ಅದಕ್ಕೆ ಕಾಲಾನು ಕಾಲದಿಂದಲೂ ತಮ್ಮ ಪ್ರಧಾನತೆಯಲ್ಲಿ ರಾಜಕೀಯ ಯಜಮಾನಿಕೆಯನ್ನು ಇಟ್ಟುಕೊಂಡಿರುವ ಪುರುಷ ಪ್ರಧಾನ ಗುಂಪಿಗೆ, ಮಹಿಳೆಯರನ್ನು ರಾಜಕೀಯದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಇಚ್ಛಾಶಕ್ತಿ ಬೇಕು. ಆಗ ಮಾತ್ರ ನಾವು ಮಹಿಳಾ ಹೆಜ್ಜೆಯನ್ನು ಹುಲುಸಾಗಿ ರಾಜಕೀಯದಲ್ಲಿ ನೋಡಲು ಸಾಧ್ಯ. ಮಹಿಳೆಯರು ನಿಲ್ಲುವ ಕ್ಷೇತ್ರಗಳಲ್ಲಿರುವ ಎಲ್ಲಾ ಮಹಿಳಾ ಮತದಾರರು ಅವರಿಗೆ ಬೆಂಬಲ ನೀಡಬೇಕು ಮತ್ತು ಮತ ಚಲಾಯಿಸಬೇಕು. ಮಹಿಳಾ ಪಾಲ್ಗೊಳ್ಳುವಿಕೆಯು ಪುರುಷರಂತೆಯೇ ಸಮನಾಗಿ ಮಹತ್ವದ್ದಾಗಿದೆ ಮಹಿಳೆಯರು ಕೇವಲ ಮತ ಚಲಾಯಿಸಲು ಅಷ್ಟೇ ಸೀಮಿತವಲ್ಲ, ಆಡಳಿತ ನಡೆಸಲು ಅರ್ಹರು ಎಂಬುದನ್ನು ತೋರಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಕೇಂದ್ರ ಸರ್ಕಾರದಲ್ಲಿ ಹಣಕಾಸು ವಿಭಾಗ ನಿರ್ವಹಿಸುತ್ತಿರುವ, ವಿದೇಶಾಂಗ ಮತ್ತು ಭಾರತದ ರಕ್ಷಣಾ ಸಚಿವ ಸ್ಥಾನಗಳನ್ನು ನಿರ್ವಹಿಸಿದ್ದ ಮಹಿಳೆಯರನ್ನು ನೋಡುತ್ತಿದ್ದೇವೆ, ಕಳೆದ ಬಾರಿ ಕೇಂದ್ರದಲ್ಲಿ ಮಹಿಳೆಯರಿಗೆ ಅತಿ ಮುಖ್ಯ ಮತ್ತು ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದನ್ನು ನೋಡುತ್ತಿದ್ದೇವೆ.

ಮಹಿಳಾ ಮೀಸಲಾತಿ ಮಸೂದೆಯು ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದ ಭಾರತೀಯ ರಾಜಕೀಯದಲ್ಲಿ ವ್ಯಾಪಕ ಚರ್ಚೆ ಮತ್ತು ಸಂವಾದದ ವಿಷಯವಾಗಿದೆ. ಈ ಮಸೂದೆಗೆ ಹಿಂದೆ ರಾಜ್ಯಸಭೆಯಿಂದ (ಸಂಸತ್ತಿನ ಮೇಲ್ಮನೆ) ಅನುಮೋದನೆ ಪಡೆದಿದ್ದರೂ, ಅಡೆತಡೆಗಳನ್ನು ಎದುರಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯ ಪ್ರಾಥಮಿಕ ಗುರಿಯು ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಐತಿಹಾಸಿಕ ಕಡಿಮೆ ಪ್ರಾತಿನಿಧ್ಯವನ್ನು ಸರಿಪಡಿಸುವುದಾಗಿದೆ. ಭಾರತೀಯ ಸಮಾಜಕ್ಕೆ ಮಹಿಳೆಯರು ಅಗಾಧವಾದ ಕೊಡುಗೆಗಳನ್ನು ನೀಡುತ್ತಿರುವ, ಆದಾಗ್ಯೂ ರಾಜಕೀಯ ಮತ್ತು ಶಾಸಕಾಂಗ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕಡಿಮೆ ಸೀಮಿತವಾಗಿದೆ. ಆದ್ದರಿಂದ ಮಹಿಳೆಯರನ್ನು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ನೀಡಲು, ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಧಿಕಾರ ನೀಡಲು ಈ ಮಸೂದೆಯು ನಿರ್ಣಾಯಕವಾಗಿದೆ.

ಪ್ರಸ್ತುತ ಲೋಕಸಭೆಯಲ್ಲಿ, ೭೮ ಮಹಿಳಾ ಸದಸ್ಯರಿದ್ದಾರೆ, ೫೪೩ರ ಒಟ್ಟು ಬಲದ ಶೇಕಡಾ ೧೫ ಕ್ಕಿಂತ ಕಡಿಮೆ ಮಹಿಳೆಯರು ಇದ್ದಾರೆ. ರಾಜ್ಯಸಭೆಯಲ್ಲಿ, ಮಹಿಳಾ ಪ್ರಾತಿನಿಧ್ಯವು ಶೇಕಡಾ ೧೪ ರಷ್ಟಿದೆ.

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಮೇಘಾಲಯ, ಮಣಿಪುರ, ಸಿಕ್ಕಿಂ, ಒಡಿಶಾ ಮತ್ತು ಪುದುಚೇರಿ ಇನ್ನೂ ಮುಂತಾದ ರಾಜ್ಯಗಳಲ್ಲಿ ಶೇಕಡಾ ೧೦ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ರಾಜ್ಯ ಅಸೆಂಬ್ಲಿಯಲ್ಲಿದೆ.

ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಬಿಹಾರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಡಿಸೆಂಬರ್ ೨೦೨೨ ರಿಂದ ಸರ್ಕಾರದ ಅಂಕಿಅಂಶಗಳ ಆಧಾರದ ಮೇಲೆ ೧೦-೧೨ ಪ್ರತಿಶತ ಮಹಿಳಾ ಶಾಸಕರನ್ನು ಹೊಂದಿವೆ. ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ೧೪.೪೪ ಮಹಿಳಾ ಪ್ರಾತಿನಿಧ್ಯದೊಂದಿಗೆ ಮುನ್ನಡೆ ಸಾಧಿಸಿವೆ.
ಸುದ್ದಿಯ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ನೆರೆಹೊರೆಯವರಿಗಿಂತ ಕೆಳಮನೆಯಲ್ಲಿ ಭಾರತವು ಕಡಿಮೆ ಶೇಕಡಾವಾರು ಮಹಿಳೆಯರನ್ನು ಹೊಂದಿದೆ.

೧೯೫೨ರಿಂದ ೧೯೯೬ರವರೆಗಿನ ಚುನಾವಣೆಗಳಲ್ಲಿ, ಮಹಿಳಾ ಪ್ರಾತಿನಿಧ್ಯ ಶೇ.೩೨ಕ್ಕೆ ಸೀಮಿತಗೊಂಡಿತ್ತು. ಗೆದ್ದವರ ಸಂಖ್ಯೆಯಂತೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯ್ತು. ೧೯೫೨ರಲ್ಲಿ ಶೇ.೪೩ರಷ್ಟು, ೧೯೫೭ರಲ್ಲಿ ಶೇ. ೫೦ರಷ್ಟು ಇದ್ದ ಮಹಿಳಾ ಪ್ರಾತಿನಿಧ್ಯ ೧೯೬೨ರಲ್ಲಿ ಅತ್ಯಂತ ಕಡಿಮೆ ಮಟ್ಟವಾದ ಶೇ.೭.೯ ತಲುಪಿತು.

ರಾಜ್ಯ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗಮನಿಸಿದರೆ, ೧೯೫೨ರಲ್ಲಿ ಶೇ.೧.೮, ೧೯೫೭ರಲ್ಲಿ ಶೇ.೬.೩ ಹೀಗೆ ಏರಿಳಿತ ಕಂಡುಬಂದಿದೆ. ರಾಜ್ಯ ಚುನಾವಣೆಗಳಲ್ಲೂ ೧೯೫೨ರಿಂದ ೧೯೯೭ರ ನಡುವೆ ಶೇ.೪ ಕಂಡುಬಂದಿದೆ.

ಒಂದು ಶಕ್ತಿಶಾಲಿ ಹಾಗೂ ಕಾರ್ಯಶೀಲ ಸಮಾಜವನ್ನು ಕಟ್ಟುವಲ್ಲಿ ಮಹಿಳಾ ಹೋರಾಟಗಾರರು ಮತ್ತು ಚುನಾಯಿತ ಪ್ರತಿನಿಧಿಗಳ ಪಾತ್ರ ಮಹತ್ತ್ವದ್ದಾಗಿರುತ್ತದೆ. ಮಹಿಳೆಯರು, ಮಕ್ಕಳು ಹಾಗೂ ಅವಕಾಶ ವಂಚಿತ ಗುಂಪುಗಳು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಮಹಿಳೆಯರು ಹೆಚ್ಚಿನ ಬದ್ಧತೆಯನ್ನು ತೋರುತ್ತಾರೆ ಹಾಗೂ ಅಗತ್ಯವಾದ ನೀತಿಯನ್ನು ರೂಪಿಸುತ್ತಾರೆ. ಪ್ರಾಮಾಣಿಕ ಮತ್ತು ಉತ್ತರದಾಯಿ ಸರ್ಕಾರವನ್ನು ರಚಿಸುವಲ್ಲಿ ಮಹಿಳೆಯರೇ ಹೆಚ್ಚು ಸಮರ್ಥರೆನ್ನುವುದು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರು ತೋರಿಸಬೇಕಿದೆ.
ಮಹಿಳಾ ಮೀಸಲಾತಿಯು ರಾಜಕೀಯ ಬದಲಾವಣೆಯಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಹುದು. ಮಹಿಳಾ ಮೀಸಲಾತಿಯು ಬರುವಂತಹ ದಿನಗಳಲ್ಲಿ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಮತ್ತು ರಾಷ್ಟ್ರೀಯ ನಿರ್ಮಾಣದಲ್ಲಿ ತೆಗೆದುಕೊಳ್ಳುವ ಸಮಯದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿರಬೇಕು ಎಂಬುದು ಎಲ್ಲರ ಆಶಯವಾಗಿದೆ.

– ಶೋಭಾ.ಹೆಚ್.ಜಿ
ಸಂಪಾದಕರು, ’ಸ್ತ್ರೀ ಜಾಗೃತಿ’ ಮಾಸಪತ್ರಿಕೆ, ಸಂ.೧೧೪, ಸಾಧನಾ ಮ್ಯೂಜಿಕ್ ಬಿಲ್ಡಿಂಗ್
ಹಯವದನರಾವ್ ರಸ್ತೆ, ಗವೀಪುರಂ ಬಡಾವಣೆ,
ಬೆಂಗಳೂರು-೫೬೦೦೧೯
ದೂ: ೦೮೦-೨೬೬೦೦೦೨೨/
ಜಂಗಮವಾಣಿ : ೯೪೪೮೯೪೫೩೬೭
Email:sthree . jagruthi@gmail.com