ಕರುನಾಡಿನ ಸಾಧಕರು: ಈ ದಿನ ಈ ನಾಡು ಕಂಡ ವೀರವನಿತೆ ಒನಕೆ ಒಬ್ಬವ ಅವರ ಜನುಮ ದಿನ.

 

ವಿಜಯ ದರ್ಪಣ ನ್ಯೂಸ್ ,ನವೆಂಬರ್ 11

ಕರುನಾಡಿನ ಸಾಧಕರು 

ಈ ನಾಡು ಕಂಡ ವೀರವನಿತೆ, ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ರಕ್ಷಕಿ ಒನಕೆ ಒಬ್ಬವ ಅವರ ಜನುಮ ದಿನ.


ಆ ಮಹಾಮಾತೆಗೆ ಶಿರಭಾಗಿ ನಮಿಸುತ್ತಾ, ಈ ಮುಂದಿನ ಗೀತೆಯ ಮೂಲಕ ನನ್ನ ನುಡಿನಮನಗಳು…
ಕನ್ನಡ ನಾಡಿನ ವೀರರಮಣಿಯ

ಗಂಡು ಭೂಮಿಯ ವೀರ ನಾರಿಯ

ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ

ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ

ಮದಿಸಿದ ಕರಿಯ ಮದವಡಗಿಸಿದ

ಮದಕರಿ ನಾಯಕರಾಳಿದ ಕೋಟೆ

ಪುಣ್ಯ ಭೂಮಿಯ ಈ ನಾಡು

ಸಿದ್ಧರು ಹರಸಿದ ಸಿರಿನಾಡು

ವೀರ ಮದಕರಿ ಆಳುತಲಿರಲು

ಹೈದರಾಲಿಯು ಯುದ್ಧಕೆ ಬರಲು

ಕೋಟೆ ಜನಗಳ ರಕ್ಷಿಸುತಿರಲು

ಸತತ ದಾಳಿಯು ವ್ಯರ್ಥವಾಗಲು

ವೈರಿ ಚಿಂತೆಯಲಿ ಬಸವಳಿದ

ದಾರಿ ಕಾಣದೆ ಮಂಕಾದ

ಗೂಢಚಾರರು ಅಲೆದು ಬಂದರು

ಹೈದರಾಲಿಗೆ ವಿಷಯ ತಂದರು

ಚಿತ್ರದುರ್ಗದ ಕೋಟೆಯಲಿ

ವಾಯುವ್ಯ ದಿಕ್ಕಿನೆಡೆ ನೋಡು ಎಂದರು

ಕಳ್ಳಗಂಡಿಯ ತೋರಿದರು

ಲಗ್ಗೆ ಹತ್ತಲು ಹೇಳಿದರು

ಸುತ್ತಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು

ವೀರ ಕಾವಲುಗಾರ ಭೋಜನಕೆ ನಡೆದಿರಲು

ಸಿಹಿನೀರ ತರಲೆಂದು ಅವನ ಸತಿ ಬಂದಿರಲು

ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು

ಆಲಿಸಿದಳು, ಇಣುಕಿದಳು

ವೈರಿ ಪಡೆ ಕೋಟೆಯತ್ತ ಬರುವುದನ್ನು ಕಂಡಳು

ಕೈಗೆ ಸಿಕ್ಕಿದ ಒನಕೆ ಹಿಡಿದಳು

ವೀರಗಚ್ಚೆಯ ಹಾಕಿ ನಿಂದಳು

ದುರ್ಗಿಯನ್ನು ಮನದಲ್ಲಿ ನೆನೆದಳು

ಕಾಳಿಯಂತೆ ಬಲಿಗಾಗಿ ಕಾದಳು

ಯಾರವಳು? ಯಾರವಳು?

ವೀರ ವನಿತೆ ಆ ಓಬವ್ವ

ದುರ್ಗವು ಮರೆಯದ ಓಬವ್ವ

ತೆವಳುತ ಒಳಗೆ ಬರುತಿರೆ ವೈರಿ

ಒನಕೆಯ ಬೀಸಿ ಕೊಂದಳು ನಾರಿ

ಸತ್ತವನನ್ನು ಎಳೆದು ಹಾಕುತ

ಮತ್ತೆ ನಿಂತಳು ಹಲ್ಲು ಮಸೆಯುತ

ವೈರಿ ರುಂಡ ಚಂಡಾಡಿದಳು

ರಕುತದ ಕೋಡಿ ಹರಿಸಿದಳು

ಸತಿಯ ಹುಡುಕುತ ಕಾವಲಿನವನು

ಗುಪ್ತದ್ವಾರದ ಬಳಿಗೆ ಬಂದನು

ರಣಚಂಡಿ ಅವತಾರವನು

ಕೋಟೆ ಸಲಹಿದ ತಾಯಿಯನು

ರಣಕಹಳೆಯ ಊದುತಲಿರಲು

ಸಾಗರದಂತೆ ಸೈನ್ಯ ನುಗ್ಗಲು

ವೈರಿ ಪಡೆಯು ನಿಶ್ಶೇಷವಾಗಲು

ಕಾಳಗದಲ್ಲಿ ಜಯವನು ತರಲು

ಅಮರಳಾದಳು ಓಬವ್ವ

ಚಿತ್ರದುರ್ಗದ ಓಬವ್ವ