📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹

ವಿಜಯ ದರ್ಪಣ ನ್ಯೂಸ್ 

📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹

ಅನಾದಿಕಾಲದಿಂದಲೂ ಮರು ವಿಮರ್ಶೆಗೆ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಿರುವ ರಾಮನೆಂದರೆ ಯಾರು? ಕಾಲ್ಪನಿಕ ವ್ಯಕ್ತಿಯೇ? ಜೀವೋದ್ಧರಣ ದೈವವೆ? ಸರ್ವಾಂತರ್ಯಾಮಿಯಾದ ಶಕ್ತಿಮೂಲವೆ? ಪೌರಾಣಿಕ ವ್ಯಕ್ತಿಯೇ ಅಥವಾ ಐತಿಹಾಸಿಕ ವ್ಯಕ್ತಿಯೇ? ಪುರಾಣೈತಿಹಾಸಿಕ ಅವತಾರಿಯೇ? ಮೌಖಿಕ ಕಾವ್ಯ ಪರಂಪರೆಯಿಂದ ಮೊದಲ್ಗೊಂಡು ನಂತರ ಶಿಷ್ಟ ಕಾವ್ಯಕ್ಕೆ ಸೀಮಿತನಾದ ಜೀವೋತ್ಕರ್ಷಕಾರಕ ಕಾವ್ಯ ಕಥಾನಾಯಕನೆ? ಮಧ್ಯ ಪ್ರಾಚ್ಯದಿಂದ ಬಂದವರೆಂದು ಹೇಳಲಾದ ಆರ್ಯ ಕುಲ ನಾಯಕನೇ? ಬ್ರಾಹ್ಮಣ್ಯವಾದಿಯೆ? ಸ್ತ್ರೀ ವಿರೋಧಿ ಮನೋಭಾವದ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿರೂಪವೇ? ದ್ರಾವಿಡ (ಸಂಸ್ಕೃತಿ) ವಿರೋಧಿಯೇ? ವರ್ಣವ್ಯವಸ್ಥೆಯ ಪಾಲಕನೇ?

ಸ್ವತಃ ರಾಮಾಯಣ ಕಾವ್ಯ ಮೂಲವೇ ಹೇಳುವಂತೆ ರಾಮನು ವಿಕಾರ ರಹಿತ ಆತ್ಮವುಳ್ಳವನು, ಸ್ವಯಂ ಪ್ರಕಾಶಿತ, ಜಿತೇಂದ್ರಿಯ, ನಿತ್ಯ ಸಂತುಷ್ಟ, ಸರ್ವಜ್ಞ, ನೀತಿಶಾಸ್ತ್ರ ವಿಶಾರದ, ಸರ್ವವೇದ ಪ್ರವರ್ತಕ, ಶತ್ರುವಿನಾಶಕ, ಸತ್ಯಪ್ರತಿಜ್ಞ, ಪ್ರಪಂಚವನ್ನೆಲ್ಲಾ ತನ್ನ ವಶದಲ್ಲಿ ಇಟ್ಟುಕೊಂಡಿರುವವನು, ಸದಾ ಪ್ರಜೆಗಳ ಹಿತದಲ್ಲಿ, ಆಶ್ರಿತರ ಹಿತರಕ್ಷಣೆಯಲ್ಲಿ ನಿರತನಾದವನು, ಸಕಲ ಪ್ರಾಣಿಗಳ ಮತ್ತು ಪ್ರಜೆಗಳ ಪೋಷಕ.ಚರಾಚರ ಜೀವಿಗಳ ಪೋಷಕ, ರಕ್ಷಕ, ಹಿತೈಷಿ. ಅವನಿಗೆ ಸ್ವಧರ್ಮವನ್ನೂ, ಸ್ವಜನರ ಧರ್ಮವನ್ನೂ ಸಮಾನವಾಗಿ ರಕ್ಷಿಸುವುದಕ್ಕೆ, ಶತ್ರುಗಳನ್ನು ಮರ್ದಿಸುವುದಕ್ಕೆ ಆಧಾರ. ವೇದ ವೇದಾಂಗಗಳ, ಸರ್ವಶಾಸ್ತ್ರಗಳ ತಾತ್ತ್ವಿಕ ಜ್ಞಾನ. ಅವನ ಕ್ಷಮಾಗುಣ ಪೃಥ್ವಿಯಂತೆ, ಧೈರ್ಯ ಹಿಮವತ್‌ ಪರ್ವತದಂತೆ. ಸತ್ಯಪಾಲನೆಯೇ ಅವನಿಗೆ ಪರಾಕ್ರಮ. ಸ್ವತಃ ಅವನೇ ಸತ್ಯ ಪರಾಕ್ರಮ. ಸತ್ಯದ ಆಧಾರದದಿಂದ ಸಾಮಾಜಿಕ ವ್ಯವಸ್ಥೆಯನ್ನೂ, ಕೌಟುಂಬಿಕ ವ್ಯವಸ್ಥೆಯನ್ನೂ ನೆಲೆಗೊಳಿಸಬಹುದೆಂದು ವಿಶ್ವಕ್ಕೆ ತೋರಿಸಿಕೊಟ್ಟ ಧರ್ಮಮೂರ್ತಿ. “ನಾಶ್ರೇಯಸಿ ರತೋ ಯಶ್ಚ ನ ವಿರುದ್ಧಕಥಾರುಚಿಃ” ಎನ್ನುವ ಉದಾರವಾದಿ ಪ್ರಜಾಪರಿಪಾಲಕ, ಜಗತ್ತಿನ ಮೊಟ್ಟ ಮೊದಲ ಉಲ್ಲೇಖಿತ ಪ್ರಜಾಪ್ರಭುತ್ವವಾದಿ. ಸ್ಮಿತಪೂರ್ವಭಾಷಿ’, ‘ಅಕ್ಲಿಷ್ಟ ಕರ್ಮಣಃ’ ಹಾಗೂ ‘ಅಪರಿಗ್ರಹ’. ಧರ್ಮ ವೃಕ್ಷದಲಿ ತಾನಾಗಿ ಮಾಗಿ ತೊಟ್ಟು ಕಳಚಿ ಬಿದ್ದ ಸವಿಯಾದ ಹಣ್ಣು. ಸಕಲ ಕಲ್ಯಾಣ ಗುಣಗಳುಳ್ಳವನು, ವೀರ್ಯವಂತ, ಧರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದಿರುವವನು, ಅನೂಚಾನವಾಗಿ ನಡೆದುಕೊಂಡು ಬಂದಿರುವ ಆಚಾರ ವ್ಯವಹಾರಗಳನ್ನು ಅನುಸರಿಸಿಕೊಂಡು ಹೋಗುತ್ತಿರುವವನು, ಸಕಲ ಪ್ರಾಣಿಗಳಲ್ಲಿಯೂ ದಯೆಯುಳ್ಳವನು, ಚತುರ್ದಶ ವಿದ್ಯೆಗಳಲ್ಲಿ ಪಾರಂಗತ ಆಗಿರುವವನು, ಸರ್ವಕಾರ್ಯ ದುರಂಧರನು, ಸರ್ವರಿಗೂ ಸರ್ವಕಾಲದಲ್ಲಿಯೂ ಮೋಹನರೂಪಿ ಆಗಿರುವವನು, ಅತ್ಯಂತ ಧೈರ್ಯಶಾಲಿ, ಕೋಪವನ್ನು ಗೆದ್ದಿರುವವನು, ಎಣೆಯಿಲ್ಲದ ಕಾಂತಿವಂತ, ಕುಪಿತನಾಗಿ ಯುದ್ಧಕ್ಕೆ ನಿಂತರೆ ದೇವತೆಗಳೇ ಮೊದಲಾಗಿ ಎಲ್ಲರನ್ನೂ ಭಯಭೀತರನ್ನಾಗಿಸುವವನು. ಇಂತಹವನು ರಾಮ.

ಇಂತಹ ರಾಮನ ಕುರಿತಾದ ಜಗತ್ತಿನ ಬೃಹದ್ಕಾವ್ಯಗಳಲ್ಲಿ ಒಂದಾದ ರಾಮಾಯಣ (ರಾಮ+ಅಯನ: ತತ್ಪುರುಷ ಸಮಾಸ) ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿ, ಶೃಂಗಾರ, ಹಾಸ್ಯ, ರೌದ್ರ, ವೀರ, ಅದ್ಭುತ, ಭಯಾನಕ, ಕರುಣೆ, ಶಾಂತ ರಸಗಳು ಔಚಿತ್ಯಪೂರಣವಾಗಿ ಸಮ್ಮಿಳಿತವಾಗಿರುವ ಸುಂದರ ಕಾವ್ಯ. ರಸತತ್ವ ಕಾವ್ಯದ ರಸ ಸತ್ವ ರಾಮ ಅಕ್ಷರಸ್ವರೂಪ.

ಜಗತ್ತಿನ ಮೊಟ್ಟ ಮೊದಲ ಮೌಖಿಕ ಕಾವ್ಯ ಹಾಡುಗಬ್ಬವಾಗಿ ಹೊರಹೊಮ್ಮಿದ್ದೆ ಕ್ರೌಂಚವಧೆಗೆ ಮರುಗಿದ ಕವಿಯ ಎದೆಯಿಂದ ಹರಿದ ಕಾವ್ಯರಸಗಂಗಾ ಪ್ರವಾಹ,

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಇದು “ಎದೆಯ ಮೊಗ್ಗರಳಿ ಮದು ದ್ರವಿಸಲಿ” ಎನ್ನುವ ಹಿತವಾದ ಮನಸ್ಥಿತಿಯ ಅಭಿವ್ಯಕ್ತಿ. ಕವಿಯ ಮಾತಿನಲ್ಲಿ ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು. ಅದೇ ಕಾರಣದಿಂದ ರಾಮಾಯಣವು ಸರ್ವ ರೀತಿಯಲ್ಲು “ಕಾವ್ಯಂ ಯಶಸೇರ್ಥಕೃತೇ ವ್ಯವಹಾರವಿದೇ ಶಿವೇತ ರಕ್ಷತಯೇ |ಸದ್ಯಃಪರನಿವೃತಯೆ ಕಾಂತಾಸಮ್ಮಿತತಪಯೋಪದೇಶಯುಜೇ ||” ಎನ್ನುವ ಸತ್ಯಕ್ಕೆ ಹತ್ತಿರವಾದದ್ದು. ಅಷ್ಟರಸಾಶ್ರಯವಾದ ಕಾವ್ಯವನ್ನು ಆಶ್ರಯಿಸುವುದರ ಮೂಲಕ ಅಗಣಿತ ಗುಣಾಶ್ರಯನಾದ ರಾಮನನ್ನು ಎಲ್ಲರು ಆಶ್ರಯಿಸುವಂತಾಗಲಿ ಎಂಬ ಸದಾಶಯ ದ ರಸತತ್ವ ಸೂತ್ರ ಸತ್ರವಿದು.

ಸ್ಥಾಯಿ ಸಂಚಾರಿ ಭಾವಗಳೆರೆಡರಲ್ಲೂ ಮೂಲ ಸ್ರೋತ ಸಹೃದಯ ಕವಿ ಸ್ಪಂದನೆಯೇ; ಎಲ್ಲರಲ್ಲೂ ಮನುಷ್ಯ-ಸಹಜ ಕರುಣೆ, ಅನುಕಂಪ, ಸ್ನೇಹ ಇತ್ಯಾದಿ ಭಾವುಕ ಸ್ಪಂದನೆಗಳು ಇರುತ್ತವೆ; ಆದರೆ ಆ ಸ್ಪಂದನೆಯನ್ನು ಮಾನವೀಯ ಮೌಲ್ಯ ಪ್ರತಿಪಾದಕ ಕಾವ್ಯವನ್ನಾಗಿಸುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ; ಕಾವ್ಯವು ಮೂಡಿಸುವ ಸಹೃದಯ ಸ್ಪಂದನೆಯಾಗಿ ರಸವು ಹೊರಹೊಮ್ಮುವುದಕ್ಕೆ; ಅಲಂಕಾರ, ಧ್ವನಿ, ವಕ್ರೋಕ್ತಿ ಮೊದಲಾದವುಗಳು ರಸೋತ್ಪಾದನೆಯ ಕರಣಗಳು. ಹಾಗಾಗಿ ರಾಮನ ಕಥೆ ಸೀತೆಯ ಕಥೆಯು ಹೌದು, ರಾವಣನ ಕಥೆಯು ಹೌದು, ಲಕ್ಷ್ಮಣ-ವಿಭೀಷಣಾದಿಗಳ ಹನುಮ-ಸೋಮರ ಕಥೆಯು ಹೌದು.

ರಾಮ ಕಥನವು ವಿವಿಧ ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತಮಿಳು, ಮಲಯಾಳಿ, ತೆಲುಗು,ಹಿಂದಿ, ಮರಾಠಿ, ಬೆಂಗಾಲಿ, ಗುಜರಾತಿ, ಒರಿಯಾ, ಅಸ್ಸಾಮಿ, ಕಾಶ್ಮೀರಿ, ಉರ್ದು ಇವೆ ಮೊದಲಾದ ಭಾಷೆಗಳಲ್ಲಿ ಅಲ್ಲದೆ ಪರ್ಷಿಯನ್, ಚೈನೀಸ್, ಥಾಯ್, ಟಿಬೆಟಿಯನ್, ಸಿಂಹಳೀ, ಜಾವಾ-ಸುಮಾತ್ರ ಭಾಷೆಗಳಲ್ಲೂ ಲಭ್ಯವಿರುವ ಕಥನ ಕವನ.ಭಾಷೆ ದೇಶ ಕಾಲ ಈ ಎಲ್ಲದರ ಗಡಿಯನ್ನು ದಾಟಿದ ಕಾವ್ಯವೇನಾದರೂ ಇದ್ದರೆ ಅದು ರಾಮಾಯಣ ಎಂದು ನಿಸ್ಸಂಶಯವಾಗಿ ಹೇಳಬಹುದು.

ರವಿಯು ಕಾಣಲಾಗದನ್ನು ಕಾಣುವ ಕವಿಕುಲ ರವಿಕುಲ ಸಂಜಾತನನನ್ನು ವಿಶಿಷ್ಟ ಹಾಗು ವಿಭಿನ್ನ ಆಯಾಮ ಮತ್ತು ದೃಷ್ಟಿಕೋಣದಲ್ಲಿ ಹೇಗೆಲ್ಲ ವರ್ಣಿಸಿದೆ ಅತ್ಯಂತ ಕುತೊಹಲವಾದುದು.

_“ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ/ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ”_
-ಪುರಂದರ ದಾಸ

_ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ?
ಪೊಣ್ಮಿದೆ ಸೃಷ್ಟಿ ರಸದಿಂದೆ;
ಬಾಳುತಿದೆ ರಸದಲ್ಲಿ;
ರಸದೆಡೆಗೆ ತಾಂ ಪರಿಯುತಿದೆ;
ಪೊಂದುವುದು ರಸದೊಳ್ ಐಕ್ಯತೆವೆತ್ತು ತುದಿಗೆ.
ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಂ ಅಮೃತಂ ರಸಂ!_

-ಕುವೆಂಪು

_ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಪೋಟಿಸಿತ್ತು ಸಿಡಿತಲೆ; ಗರಿಷ್ಟ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ_
-ಗೋಪಾಲಕೃಷ್ಣ ಅಡಿಗ

_“ರಾಮನಾಮಮು ಜನ್ಮ ರಕ್ಷಕ ಮಂತ್ರಮು । ತಾಮಸಮು ಸೇಯಗಾ ಭಜಿಂಪವೇ ಮನಸಾ ॥
ಸೋಮಾರುಣ ತೇಜು(ನೇತ್ರು)ಡೈನ ರಾಮಚಂದ್ರುನಿಕಿ ಸರಿ ಎವ್ವರೇ”_
-ತ್ಯಾಗರಾಜರು

“ಕಾವ್ಯದ ಕೊಂಬೆಯನ್ನೇರಿ ರಾಮ, ರಾಮಾ ಅನ್ನುವ ಅತ್ಯಂತ ಮಧುರವಾದ ಪದಗಳನ್ನು ಉಲಿಯುತ್ತಿರುವ ವಾಲ್ಮೀಕಿಯೆಂಬ ಕೋಗಿಲೆಗೆ ನಮಸ್ಕಾರ”_
– ಬುಧಕೌಶಿಕ ಋಷಿ

_‘ಎಂತಾದರೂ ನಿಂದಿಸಲಿ ಮಂದಿ ನನ್ನ / ತನುಮನವೆಲ್ಲ ರಾಮಪ್ರೇಮದಲಿ ಮಗ್ನ’_
-ಸಂತ ನಾಮದೇವ

_‘ಕಬೀರಾ ಕೂತಾ ರಾಮಕಾ ಮುತಿಯಾ ಮೇರಾ ನಾಉ/ಗಲೈ ರಾಮಕೀ ಜೇವಡೀ ಜಿತ ಖೀಂಚೈ ತಿತ ಜಾಂಉ”_
– ಸಂತ ಕಬೀರ

_“ಕಾಯದಲೇ ದೇವ/ಕಾಯದಲೇ ಜೀವ/ಕಾಯದಲೇ ಜಂಗಮ ಪ್ರಾಣಿ// ಬರಲಿಲ್ಲವೇನೂ, ಹೋಗಲಿಲ್ಲವೇನೂ ರಾಮನಾಣೆ!”_
-ಸಂತ ಪೀಪಾ

_“ನಮ್ಮ ಮತಕ್ಕೆ ಯಾರು ಬೇಕಾದರೂ ಬರಬಹುದು/ಸೀತಾರಾಮರ ನಾಮಜಪ ಹಾಡಿ ಸುಖ ಹೊಂದಬಹುದು”_
– ಗುರು ನಾನಕ

_“ನಾನು ತುಳಸಿ, ರಾಮನ ಗುಲಾಮ; ನಿನಗೆ ಇಷ್ಟವಾದದ್ದನ್ನು ನೀನು ಹೇಳು; ನಾನು ಬೇಡಿಕೊಂಡು ತಿನ್ನುತ್ತೇನೆ; ನಾನು ಮಸೀದಿಯಲ್ಲಿ ಮಲಗುತ್ತೇನೆ; ನಾನು ಕಾಳಜಿಯಿಲ್ಲ”_
-ಸಂತ ತುಳಸಿ ದಾಸ

_“ಹಿಂದ್‌ನ ಪಾತ್ರೆಯು ವಾಸ್ತವದ ದ್ರಾಕ್ಷಾರಸದಿಂದ ತುಂಬಿದೆ; ಪಶ್ಚಿಮದ ಎಲ್ಲಾ ತತ್ವಜ್ಞಾನಿಗಳನ್ನು ಹಿಂದ್‌ನ ರಾಮ್‌ನಿಂದ ತೆಗೆದುಕೊಳ್ಳಲಾಗಿದೆ (ಲಬ್ರೇಜ್ ಹೈ ಶರಾಬ್-ಇ ರಿಯಾಲಿಟಿ ಸೆ ಜಾಮ್-ಎ ಹಿಂದ್, ಆಲ್ ಫಲ್ಸಾಫಿ ಹೈ ಖಿತ್ತಾ-ಇ ಮಗ್ರಿಬ್ ಕೆ ರಾಮ್-ಎ ಹಿಂದ್)”_
-ಅಲ್ಲಾಮ ಮುಹಮ್ಮದ್ ಇಕ್ಬಾಲ್

_“ಸ್ವತಃ ರಾಮ ಕರೆದಾಗಲೂ ನಾನು ಹೋಗಲಿಲ್ಲ. ರಾಮನಾಮದ ಮುಂದೆ ಶ್ರೀರಾಮನಲ್ಲೂ ರುಚಿಯಿಲ್ಲ”_
-ಕಬೀರ

ಪಟ್ಟಾಭಿರಾಮ ಕಲ್ಯಾಣ ಗುಣ ಧಾಮ ಜಗದಾನಂದ ಧಾಮ
ಜಾನಕೀ ಹೃದಯಂಗಮ ಹನುಮತ್ಸೇವಿತ ಮಂಗಳ ನಾಮ_

-ಇಗೆ ಹಲವು ಕವಿ ಹೃದಯದಲ್ಲಿ ನೆಲೆಗೊಂಡ ರಾಮ ಹೃದಯಸಂವೇದನಾ ಸ್ವರೂಪಿ ಮತ್ತು ರಾಮನ ರಾಮಾಯಣ ಸರ್ವರಭ್ಯುದಯದ ಮಾರ್ಗ ಕಾವ್ಯ. ಕಾವ್ಯಮಾರ್ಗೀಯತೆಯ ನಿಯಂತ್ರಿಸುವ, ನಿರ್ದೇಶಿಸುವ, ಮುನ್ನಡೆಸುವ ತತ್ತ್ವ. ಎಲ್ಲರನ್ನು ಒಳಗೊಳ್ಳುವ ಆದರ್ಶ ಕವಿತೆ. ರೂಪಕ ಕಾವ್ಯದ ನೆಲೆಗಟ್ಟಿನಲ್ಲಿ ಅರ್ಥೈಸಲ್ಪಡುವ ಪರಿಕಲ್ಪನೆಗಳಾದ ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, ಸತಿಪತಿ ನಿಷ್ಠೆ, ಭ್ರಾತೃತ್ವ, ಸ್ನೇಹ, ವಿವೇಕ ಮಹದ್ಗುಣಗಳ ಆಕರ.

ಮೇಲೋಗರ: _ವಾಡಿಕೆಯಂತೆ ಮತದಾನದ ದಿನ ಸಿಕ್ಕ ರಜೆಯಲ್ಲಿ ಸಂಸಾರ ಸಮೇತ ಊಟಿ, ಕೊಡೈಕಿನಾಲ್ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿ ಬಂದು ರಾಮರಾಜ್ಯದ ಕನಸು ಕಾಣುತ್ತ ಮಲಗಿದ್ದ ಭಾರತೀಯ ಪ್ರಜೆಯೊಬ್ಬನಿಗೆ ಅರ್ಧರಾತ್ರಿಯಲ್ಲಿ ರಾಮ ತನ್ನ ಕೋದಂಡ ಸಮೇತನಾಗಿ ಪ್ರತ್ಯಕ್ಷನಾದ ಶ್ರೀರಾಮನನ್ನು “ಪ್ರಭು ನನ್ನ ಭಾರತ ರಾಮರಾಜ್ಯವಾಗುವುದು ಯಾವಾಗ”? ಎಂದ, ಆಗ ಶ್ರೀರಾಮ “ವತ್ಸ, ನಿನ್ನ ಕೈ ಬೆರಳಿನ ಮೂಲಕ ನೀನು ಒತ್ತುವ ಮತದಾನದ ಮುದ್ರೆಯ ಮೂಲಕ ಎಂದ. ಆಗ ಪ್ರಜೆ ನನ್ನದೊಂದು ಮತದಾನದಿಂದ ಏನಾದೀತು ಪ್ರಭು ಎಂದು ಮರು ಪ್ರಶ್ನಿಸಿದಾಗ ರಾಮ ಚಂದ್ರನು, “ನನ್ನದೊಂದು ಬಾಣ ರಾವಣನ ಕೊಂದಿತ್ತು, ನನ್ನದೊಂದು ಕರುಣೆ ಮಾರುತಿಯನ್ನು ಬೆಳೆಸಿತ್ತು, ನನ್ನದೊಂದು ನಡೆ ವಾಲಿಯನ್ನು ಅಳಿಸಿತ್ತು, ನನ್ನದೊಂದು ನುಡಿ ಸೀತೆಯನ್ನು ರಕ್ಷಿಸಿತ್ತು, ನನ್ನದೊಂದು ನಿರ್ಧಾರ ವಿಭೀಷಣನಿಗೆ ರಾಜ್ಯ ದಕ್ಕಿಸಿ ಕೊಟ್ಟಿತ್ತು ಹೀಗಿರುವಾಗ ನಿನ್ನದೊಂದು ಮತ ಎಲ್ಲವನ್ನು ಬದಲಾಯಿಸಲಾರದೇನು” ಎನ್ನುತ್ತಿದಂತೆ ನಿದ್ದೆಯಿಂದೆದ್ದ ಪ್ರಜೆ ಅರ್ಧ ರಾತ್ರಿಯಿಂದಲೇ ತನ್ನ ಸುತ್ತಲಿನವರಿಗೂ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾನೆ. ಅಂದ ಹಾಗೆ ನೀವೆಲ್ಲ ಈ ಚುನಾವಣೆಯಲ್ಲಿ ತಪ್ಪದೆ ಓಟ್ ಮಾಡುತ್ತೀರಲ್ಲ?_

✍🏻ರಾಜ್ ಆಚಾರ್ಯ
17/04/2024