ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರ ಪತ್ನಿ ಮತ್ತು ಸೊಸೆ ಬಂಧನ….?
ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪನವರ ಪತ್ನಿ ಲತಾ ರವೀಂದ್ರಪ್ಪ ಮತ್ತು ಸೊಸೆ ಶ್ವೇತಾ ಇಬ್ಬರನ್ನು ಐಟಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿರುವ ಘಟನೆ ಮತದಾನಕ್ಕೆ ಒಂದು ದಿನ ಬಾಕಿ ಇರುವಂತ ಸಂದರ್ಭದಲ್ಲಿ ದಿಢೀರ್ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಿರಿಯೂರು ನಗರದಲ್ಲಿ ಮಂಗಳವಾರ ಲತಾ ರವೀಂದ್ರಪ್ಪ ಅವರು ಮನೆ ಮನೆ ಭೇಟಿ ಮಾಡುತ್ತಿದ್ದ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಸ್ವಗ್ರಾಮ ಮುಂಗಸವಳ್ಳಿಗೆ ಕರೆದೊಯ್ದು ನಂತರ ಅಲ್ಲಿಂದ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಯಲ್ಲಿ ಅಭ್ಯರ್ಥಿ ರವೀಂದ್ರಪ್ಪ ಅವರ ಸಹೋದರ ರಮೇಶ್ ಅವರ ಮುಂಗಸವಳ್ಳಿಯ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಏಪ್ರಿಲ್ 22 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮನೆ ಮೇಲೆ ಐಟಿ ದಾಳಿ ಮಾಡಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದರು. ಅದರ ಬೆನ್ನಲ್ಲೇ ಮತದಾನಕ್ಕೆ ಒಂದು ದಿನ ಬಾಕಿ ಇರುವಂತ ಸಂದರ್ಭದಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಬಿಜೆಪಿ ಪಕ್ಷದ ಷಡ್ಯಂತ್ರ-
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರ ಪರ ಅಲೆ ಎದ್ದಿದ್ದು ಇದನ್ನು ಸಹಿಸದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಲು ಷಡ್ಯಂತ್ರ ಮಾಡಿ ಐಟಿ ದಾಳಿ ಮಾಡಿಸುತ್ತಿದ್ದಾರೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಅವರು 2008-2018ರವರೆಗೆ ಹತ್ತು ವರ್ಷಗಳ ಕಾಲ ಆಡಳಿತ ಮಾಡಿ ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದರು. ಚಳ್ಳಕೆರೆಗೆ ದೇವರ ಅಡ್ಡ ಬಂದರೂ ವಿವಿ ಸಾಗರದ ನೀರನ್ನು ಕೊಂಡೊಯ್ಯುತ್ತೇನೆಂದು ಶಪಥ ಮಾಡಿ ನೀರು ಕೊಂಡೊಯ್ದಿದ್ದರ ಫಲವಾಗಿ ನೂರಾರು ವರ್ಷಗಳ ಕಾಲ ಮಕ್ಕಳಂತೆ ಸಾಕಿದ್ದ ತೆಂಗು, ಅಡಿಕೆ ಇತರೆ ತೋಟಗಾರಿಕೆ ಫಸಲುಗಳು ಒಣಗಿ ಹೋಗಿ ರೈತರು ಭಿಕ್ಷೆ ಬೇಡುವ ಮಟ್ಟಕ್ಕೆ ಬಂದಿದ್ದರು. ಸುಧಾಕರ್ ಅವರು ಕೂಡಾ ಐಟಿ ದಾಳಿಯ ಹಿಂದೆ ಇದ್ದಾರೆಂದು ಆರೋಪಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷರು ಚುನಾವಣೆಯಲ್ಲಿ ನೈಜವಾಗಿ ಗೆಲ್ಲಬೇಕು, ಈ ರೀತಿಯ ಕುತಂತ್ರಗಳನ್ನು ಮಾಡಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಇದಲ್ಲದೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಮೇಲೆ ಬಿಜೆಪಿ ಪಕ್ಷದ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಅವರು ಒತ್ತಡ ಹೇರಿ ಬಿಜೆಪಿ ಸರ್ಕಾರದ ಕುತಂತ್ರದಿಂದಲೇ ಐಟಿ ದಾಳಿ ಮಾಡಿಸಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರು ಮತದಾರರ ಮನ ಗೆಲ್ಲಬೇಕು, ಈ ರೀತಿಯ ಕುತಂತ್ರಗಳ ಮೂಲಕ ಅಧಿಕಾರ ಹಿಡಿಯುವ ಷಡ್ಯಂತ್ರ ಮಾಡಬಾರದು ಎಂದು ಜಯಣ್ಣ ವಾಗ್ದಾಳಿ ಮಾಡಿದ್ದಾರೆ.
ಕ್ಷೇತ್ರದಲ್ಲಿ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಪಡೆಯೇ ಇದೆ. ಪಕ್ಷಕ್ಕಾಗಿ ಪ್ರಾಣ ನೀಡುವಂತ ಪಕ್ಷದ ಕಟ್ಟಾಳುಗಳು, ಅಭಿಮಾನಿಗಳು ಇದ್ದು, ಇಂತಹ ಕುತಂತ್ರಗಳಿಗೆ ಜಗ್ಗುವುದಿಲ್ಲ, ಇನ್ನೂ ಹೆಚ್ಚಿನ ಉತ್ಸಾಹದಿಂದ ಸೈನಿಕರಂತೆ ಸಮರೋಪಾದಿಯಲ್ಲಿ ಕೆಲಸ ಮಾಡಿ ಅತಿ ಹೆಚ್ಚಿನ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ರವೀಂದ್ರಪ್ಪನವರನ್ನು ಗೆಲ್ಲಿಸಿಕೊಂಡು ಬರುತ್ತೇವೆ, ಜೆಡಿಎಸ್ ಗೆಲ್ಲುವುದು ನಿಶ್ಚಿತ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.
ಸೋಲಿನ ಭೀತಿಯಿಂದ ಕೆಂಗೆಟ್ಟಿರುವ ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕಳೆದ ಐದು ವರ್ಷಗಳ ಆಡಳಿತ ವಿರೋಧಿ ಅಲೆ ಕಾಡುತ್ತಿದೆ, ನಿರಂತರವಾಗಿ ಮಾಡಿದ ಭ್ರಷ್ಟಾಚಾರ, ಕಮಿಷನ್ ದಂಧೆಯಿಂದ ಜನರ ಮನದಿಂದ ದೂರವಾಗಿರುವ ಶಾಸಕರು ಈಗ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಐಟಿ ದಾಳಿ ಮಾಡಿಸುವ ಕುತಂತ್ರ ಮಾಡುತ್ತಿದ್ದಾರೆ. ಇದಕ್ಕೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಎಚ್ಚರಿಸಿದ್ದಾರೆ.