ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ

ವಿಜಯ ದರ್ಪಣ ನ್ಯೂಸ್….

ನವೆಂಬರ್ 01 ರಂದು 70ನೇ ಕರ್ನಾಟಕ ರಾಜ್ಯೋತ್ಸವ

ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಅ 13 : 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 01 ರಂದು ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 70 ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನವೆಂಬರ್ 01 ರಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಿಗ್ಗೆ 07:30 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಬೆಳಿಗ್ಗೆ 9:00 ಗಂಟೆಗೆ ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 08:00 ಗಂಟೆಗೆ ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಕ್ರೀಡಾಂಗಣದವರೆಗೆ ತಾಯಿ ಭುವನೇಶ್ವರಿದೇವಿಯ ರಥದ ಮೆರವಣಿಗೆ ನಡೆಯಲಿದೆ ಎಂದರು.

ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಜನಪ್ರತಿನಿಧಿಗಳಿಗೆ ತಲುಪಿಸಿ, ವೇದಿಕೆ ಮತ್ತು ಧ್ವಜ ಕಟ್ಟೆ ಅಲಂಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿ, ಪಥ ಸಂಚಲನಕ್ಕೆ ಅಗತ್ಯ ಕ್ರಮ ವಹಿಸಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕುಡಿಯುವ ನೀರು, ಲಘು ಉಪಹಾರ ವ್ಯವಸ್ಥೆ ಸೇರಿದಂತೆ ಇನ್ನಿತರೆ ಜವಾಬ್ದಾರಿಗಳನ್ನು ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೃಷ್ಣಪ್ಪ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ದೊಡ್ಡಬಳ್ಳಾಪುರ: ಅಕ್ಟೋಬರ್ 15 ರಂದು ಕೈಗಾರಿಕೆಗಳಿಗೆ ತರಬೇತಿ ಕಾರ್ಯಗಾರ

ಬೆಂ.ಗ್ರಾ.ಜಿಲ್ಲೆ.ಅ.13 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಅಕ್ಟೋಬರ್ 15 ರಂದು ದೊಡ್ಡಬಳ್ಳಾಪುರದ ಕೈಗಾರಿಕಾ ಅಸೋಸಿಯೇಷನ್ ಸಭಾಂಗಣದಲ್ಲಿ ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ (Trade Receivables Discounting System) ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿದೆ.

ಕಾರ್ಯಗಾರದಲ್ಲಿ ಎಂ.ಎಸ್.ಎಂ.ಇ ಕೈಗಾರಿಕೆಗಳಿಗೆ ಮುಂಗಡ ಪಾವತಿಸುವ ಕುರಿತು ತಿಳುವಳಿಕೆ ನೀಡುವ ಜೊತೆಗೆ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸವಾಲುಗಳಿಗೆ ಪರಿಹಾರ ಸೂಚಿಸುವ ವೇದಿಕೆಯಾಗಲಿದೆ. ಕೈಗಾರಿಕೆಗಳು, ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉಪನ್ಯಾಸಗಳು, ಮತ್ತು ಪರಾಮರ್ಶಿಸುವ ಅಧಿವೇಶನಗಳು ನಡೆಯಲಿವೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಠಡಿ ಸಂಖ್ಯೆ 203, 2ನೇ ಮಹಡಿ ಜಿಲ್ಲಾಡಳಿತ ಭವನ ಬೀರಸಂದ್ರ ಗ್ರಾಮ ಕುಂದಾಣ ಹೋಬಳಿ ದೇವನಹಳ್ಳಿ ದೂರವಾಣಿ ಸಂಖ್ಯೆ 080-29787458 ಗೆ ಸಂಪರ್ಕಿಸಬಹುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ಸ್ಪರ್ಧೆ

ಬೆಂಗಳೂರು ಗ್ರಾ. ಜಿಲ್ಲೆ, ಅಕ್ಟೋಬರ್,13 :

2025-26ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ‘ನನ್ನ ಮತ ನನ್ನ ಹಕ್ಕು’ ಛಾಯಾಗ್ರಹಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಜಿಲ್ಲೆಯ ವ್ಯಾಪ್ತಿಗೊಳಪಡುವ ಕಾಲೇಜು ವಿದ್ಯಾರ್ಥಿಗಳು ಮಾತ್ರ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 15 ಸಾವಿರ,
ದ್ವಿತೀಯ ಸ್ಥಾನಕ್ಕೆ 10 ಸಾವಿರ, ತೃತೀಯ ಸ್ಥಾನಕ್ಕೆ 5 ಸಾವಿರ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 25 ಸಾವಿರ, ದ್ವಿತೀಯ ಸ್ಥಾನಕ್ಕೆ 15 ಸಾವಿರ, ತೃತೀಯ ಸ್ಥಾನಕ್ಕೆ 10 ಸಾವಿರ ಬಹುಮಾನವನ್ನು ನೀಡಲಾಗುವುದು.

ಇನ್ನೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 1 ಲಕ್ಷ, ದ್ವಿತೀಯ ಸ್ಥಾನಕ್ಕೆ 50 ಸಾವಿರ, ತೃತೀಯ ಸ್ಥಾನಕ್ಕೆ 25 ಸಾವಿರವನ್ನು ಬಹುಮಾನವನ್ನಾಗಿ ನೀಡಲಾಗುವುದು.

ಮತದಾನ ಹಕ್ಕಿನ ಕುರಿತಾಗಿ ಪೋಟೋಗಳನ್ನು ಸೆರೆಹಿಡಿದು http://www.democracydaykarnataka.in ವೆಬ್ಸೈಟ್ ನಲ್ಲಿ ಅಕ್ಟೋಬರ್ 28 ರೊಳಗೆ ಅಪ್ಲೋಡ್ ಮಾಡಬೇಕು. ಛಾಯಾಗ್ರಹಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನವೆಂಬರ್ 26ರ ಸಂವಿಧಾನ ದಿನಾಚರಣೆಯಂದು ಬಹುಮಾನವನ್ನು ವಿತರಿಸಲಾಗುವುದು. ಆಯ್ಕೆಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ, ದೂ. ಸಂಖ್ಯೆ:080-29787447 ಅಥವಾ 2ನೇ ಮಹಡಿ, ಕೊಠಡಿ ನಂ 217, ಜಿಲ್ಲಾಡಳಿತ ಭವನ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕಿಸಬಹುದು.
ಸಹಾಯಕ ನಿರ್ದೇಶಕರು ದೇವನಹಳ್ಳಿ ದೂ.ಸಂಖ್ಯೆ:080-27681784, ದೊಡ್ಡಬಳ್ಳಾಪುರ ತಾಲ್ಲೂಕು ದೂ.ಸಂಖ್ಯೆ:080-27623681, ಹೊಸಕೋಟೆ ತಾಲ್ಲೂಕು ದೂ.ಸಂಖ್ಯೆ:080-27931528, ನೆಲಮಂಗಲ ತಾಲ್ಲೂಕು ದೂ.ಸಂಖ್ಯೆ:080-27723172 ಇವರನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.