ಭಯೋತ್ಪಾದಕರ ವಿರುದ್ಧದ ಯುದ್ಧ……….

ವಿಜಯ ದರ್ಪಣ ನ್ಯೂಸ್…

ಭಯೋತ್ಪಾದಕರ ವಿರುದ್ಧದ ಯುದ್ಧ……….

ರಕ್ತ ಕುದಿಯುತ್ತಿದೆ……
ಮುಯ್ಯಿಗೆ ಮುಯ್ಯಿ…..
ಸೇಡಿಗೆ ಸೇಡು……
ಪಾಕಿಸ್ತಾನ ಧ್ವಂಸ ಮಾಡೋಣ……
ಭಯೋತ್ಪಾದಕರಿಗೆ ಪಾಠ ಕಲಿಸೋಣ……
ಇದೇ ಅವರ ಕೊನೆಯ ಯಶಸ್ಸಾಗಲಿ…..

ಎಂದು ಹೇಳುತ್ತಿರುವ ನನ್ನ ಗೆಳೆಯರೆ, ದಯವಿಟ್ಟು ತಾಳ್ಮೆಯಿಂದ ಗಮನಿಸಿ….

ಕಿರಾತಕ – ರಾಕ್ಷಸ ಭಯೋತ್ಪಾದಕರನ್ನು ಮತ್ತು ಅವರ ಬೆಂಬಲಿಗರನ್ನು ಹುಡುಕಿಕೊಂಡು ಹೋಗಿ ಅವರನ್ನು ಸಂಪೂರ್ಣ ನಾಶ ಮಾಡುವುದನ್ನು ಮನುಷ್ಯತ್ವ ಇರುವ ಯಾರೂ ತಡೆಯುವುದಿಲ್ಲ ಮತ್ತು ಅದಕ್ಕೆ ಪೂರ್ಣ ಬೆಂಬಲ ಕೊಡುತ್ತಾರೆ.

ಆದರೆ,
ಅದು ಸೈನ್ಯ ಮಾತ್ರದಿಂದ ಸಾಧ್ಯವೇ ? ಅದು ಸುಲಭವೇ ? ಮತ್ತೆ ಎಷ್ಟೊಂದು ಸೈನಿಕರು ಸಾಯುವರು ತಿಳಿದಿದೆಯೇ ? ಅವರು ಯೋಚಿಸಲು – ಯೋಜಿಸಲು ಬಿಡದೆ ದೇಶಭಕ್ತಿಯ ಹೆಸರಲ್ಲಿ ಅವರ ಮೇಲೆ ಅಸಾಮಾನ್ಯ ಒತ್ತಡ ಹೇರಿ ಮತ್ತಷ್ಟು ಸಾವಿಗೆ ನಾವೇ ಕಾರಣವಾಗಬೇಕೆ ?
ಯುದ್ದದ ಕಾರ್ಯಾಚರಣೆ ಎಂದರೆ ಉರಿ ಚಲನಚಿತ್ರ ನಿರ್ಮಿಸಿದಷ್ಟು ಸುಲಭವೇ ?

ಒಮ್ಮೆ ಏಕಾಂತದಲ್ಲಿ ಕುಳಿತು ಭಾವುಕರಾಗದೆ ಎಲ್ಲಾ ದೃಷ್ಟಿಕೋನದಿಂದ ಯೋಚಿಸಿ…………

ಭಾರತಕ್ಕೆ ಪದೇ ಪದೇ ತೊಂದರೆ ಕೊಡುತ್ತಿರುವ ಭಯೋತ್ಪಾದಕರು ಯಾರು ? ಅವರು ಎಲ್ಲಿದ್ದಾರೆ ? ಅವರು ಹೇಗೆ ಸೃಷ್ಟಿಯಾಗಿತ್ತಾರೆ ? ಅದರ ಮೂಲಕ್ಕೆ ಸೈನ್ಯ ಹೋಗಲು ಸಾಧ್ಯವೇ ?

ಸ್ನೇಹಿತರೆ,
ಬಹುತೇಕ ಎಲ್ಲರೂ ತಿಳಿದಿರುವಂತೆ ಭಾರತದ ವಿರುದ್ಧ ಭಯೋತ್ಪಾದನೆ ಮಾಡುತ್ತಿರುವವರು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಒತ್ತಾಯಿಸುತ್ತಿರುವವರು, ಧರ್ಮದ ಅಮಲಿಗೆ ಬಿದ್ದ ಒಂದಷ್ಟು ಜಿಹಾದಿಗಳು, ಪಾಕಿಸ್ತಾನ ಪರವಾದ ಕಾಶ್ಮೀರಿಗಳು ಮತ್ತು ಇವರನ್ನು ಸಂಪೂರ್ಣವಾಗಿ ಹಾಗೂ ಪರೋಕ್ಷವಾಗಿ ಪ್ರಾಯೋಜಿಸಿತ್ತಿರುವವರು ಪಾಕಿಸ್ತಾನದ ಸೈನ್ಯ ಮತ್ತು ಐಎಸ್ಐ……..

ಅಂದರೆ ದೇಶದ ಒಳಗೆ ಮತ್ತು ಹೊರಗೆ ಹರಡಿರುವ ಇವರುಗಳಲ್ಲಿ ಗಡಿಯಾಚೆಗಿನ ಭಯೋತ್ಪಾದಕರೇ ಅತ್ಯಧಿಕ. ಒಳಗಿರುವವರನ್ನು ಮನಸ್ಸು ಮಾಡಿದರೆ‌ ಸಂಪೂರ್ಣ ಹೊಡೆದು ಹಾಕಬಹುದು.
ಆದರೆ ಹೊರಗಿನವರನ್ನು ???????

ಸಮಸ್ಯೆ ಇರುವುದು ಇಲ್ಲಿಯೇ.

ಭಯೋತ್ಪಾದಕರು ಯಾವುದೋ ಒಂದು ಪ್ರದೇಶದಲ್ಲಿ ನಿರ್ಧಿಷ್ಟವಾಗಿ ಇರುವುದಿಲ್ಲ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕೆಲವೊಮ್ಮೆ ಒಂಟಿಯಾಗಿ ದೇಶದ ಹೊರಗೆ ಇರುತ್ತಾರೆ. ಅವರು ಬಹಳಷ್ಟು ಬಾರಿ ಪಾಕಿಸ್ತಾನ ಸೈನ್ಯದ ನೆರಳಲ್ಲಿ ಅಡಗಿರುತ್ತಾರೆ. ಆಫ್ಘಾನಿಸ್ತಾನದ ಎಲ್ಲೋ ಅಜ್ಞಾತ ಸ್ಥಳದಲ್ಲಿ ತರಭೇತಿ ಹೊಂದುತ್ತಾರೆ. ಅವರಿಗೆ ಹಣ ಮತ್ತು ‌ಧರ್ಮದ ಅಮಲನ್ನು ತಿನ್ನಿಸಲಾಗುತ್ತದೆ.

ಅಂದರೆ ನಮ್ಮ ದೇಶದ ಗಡಿಯಾಚೆ ಅದರಲ್ಲೂ ಪಾಕಿಸ್ತಾನದ ನೆಲದಲ್ಲಿ ಅಡಗಿರುವ ಭಯೋತ್ಪಾದಕರನ್ನು ಹೊಡೆಯಬೇಕಾದರೆ ಅವರ ನೆಲಕ್ಕೆ ಕಾಲಿಡಬೇಕು. ನಮ್ಮ ದೇಶದ ಸೈನ್ಯದ ಸಾಮರ್ಥ್ಯಕ್ಕೆ ಇದು ಸುಲಭವಿರಬಹುದು. ಆದರೆ ಅದು ಪಾಕಿಸ್ತಾನದೊಂದಿಗೆ ನೇರ ಯುದ್ಧ ಮಾಡಿದಂತೆ ಆಗುತ್ತದೆ. ಅಲ್ಲಿಗೆ ವಿಷಯ ಬೇರೆಯದೇ ಆಯಾಮ ಪಡೆಯುತ್ತದೆ. ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಬೇರೆ ಯುದ್ದವೇ ಬೇರೆ.

ಯುದ್ಧ ನೇರವಾಗಿ ಮಾಡಬಹುದು. ಆದರೆ ಭಯೋತ್ಪಾದಕರೊಡನೆ ಹೋರಾಟ ಪರೋಕ್ಷವಾಗಿ ಇರುತ್ತದೆ ಮತ್ತು ವಿಶ್ವದ ಯಾವುದೇ ಒಂದು ದೇಶ ಅದರ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಅದು ಜಾಗತಿಕವಾಗಿ ವಿಷದಂತೆ ಹರಡಿದೆ.

ಅಮೆರಿಕ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಇರಾಕ್, ಇಸ್ರೇಲ್ ಮುಂತಾದ ದೇಶಗಳು ಮತ್ತು ಸ್ವತಃ ಪಾಕಿಸ್ತಾನ – ಆಫ್ಘಾನಿಸ್ತಾನ ಸಹ ಭಯೋತ್ಪಾದನೆಗೆ ನಲುಗಿದೆ. ಕೇವಲ ಸೈನಿಕ ಕಾರ್ಯಾಚರಣೆಯಿಂದ ಇದನ್ನು ನಿಯಂತ್ರಿಸಲು ಅಸಾಧ್ಯ.

ಒಳ್ಳೆಯವರಿಗೆ ಕೆಲವು ಮಿತಿಗಳು ಇರುತ್ತವೆ. ಆದರೆ ದುಷ್ಟರಿಗೆ ಯಾವ ನಿಯಮಗಳೂ ಇರುವುದಿಲ್ಲ. ಒಳ್ಳೆಯದನ್ನು ಮಾಡುವುದು ತುಂಬಾ ಕಷ್ಟ. ಕೆಟ್ಟದ್ದನ್ನು ಬಹುಬೇಗ ಸುಲಭವಾಗಿ ಮಾಡಬಹುದು. ಈ ಅನುಕೂಲಗಳು ಭಯೋತ್ಪಾದಕರಿಗೆ ಇದೆ. ಸಾವಿರ ಜನ ಒಳ್ಳೆಯವರನ್ನು ಒಬ್ಬ ಭಯೋತ್ಪಾದಕ ಎದುರಿಸಿ ಓಡಿಸಬಲ್ಲ. ಒಳ್ಳೆಯವರು ಹೇಡಿಗಳು ಅಥವಾ ಸೌಮ್ಯ ಸ್ವಭಾವದವರಾಗಿರುವುದನ್ನು ಮತ್ತು ಭಯೋತ್ಪಾದಕರು ಆಕ್ರಮಣಕಾರಿಯಾಗಿರುವುದನ್ನು ನಾವು ಗಮನಿಸಬಹುದು.

ಅಮೆರಿಕ, ರಷ್ಯಾ, ಇಸ್ರೇಲ್, ಚೀನಾ ಮಾಡಿದಂತೆ ನಾವು ಮಾಡುವುದು ಸಾಧ್ಯವಿಲ್ಲ. ಭಾರತೀಯರು ಮೂಲಭೂತವಾಗಿ ಸೌಮ್ಯ ಸ್ವಭಾವದ ಶಾಂತಿ ಪ್ರಿಯರು. ಹೆದರಿಕೆ ಸ್ವಲ್ಪ ಹೆಚ್ಚೇ ಇದೆ. ಯುದ್ಧ ಎಂದರೆ ಎಷ್ಟೋ ಜನ ಸಾಮಾನ್ಯರು ನಿಂತಲ್ಲೇ ನಡುಗುತ್ತಾರೆ. ಕಳೆದ ೫೦ ವರ್ಷಗಳಲ್ಲಿ ಭಾರತ ಯಾವ‌ ದೊಡ್ಡ ಯುದ್ದವನ್ನೂ ನೋಡಿಲ್ಲ. ಕಾರ್ಗಿಲ್ ಯುದ್ಧ ಸಣ್ಣ ಪ್ರಮಾಣದಲ್ಲಿ ಕೆಲವೇ ದಿನ ನಡೆಯಿತು.

ಈ ಯುವ ಜನಾಂಗ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಉಡಾಫೆಯಿಂದ ಪಾಕಿಸ್ತಾನದ ಮೇಲೆ ಯುದ್ದದ ಮಾತನಾಡುತ್ತಿದೆ. ಪಾಕಿಸ್ತಾನವನ್ನು ವಿಶ್ವ ಭೂಪಟದಿಂದ ಇಲ್ಲವಾಗಿಸಬೇಕು ಎನ್ನುತ್ತಿದೆ. ಇದು ಕಮರ್ಷಿಯಲ್ ಸಿನಿಮಾ ಅಲ್ಲ. ಅಮಿತಾಭ್ ರಜನಿಕಾಂತ್ ಸಲ್ಮಾನ್ ಖಾನ್ ಗಳೆಂಬ ಸೂಪರ್ ಸ್ಟಾರ್ ಗಳ ನಟನೆ – ಸ್ಟಂಟ್ ಗಳು ಇಲ್ಲಿ ನಡೆಯುವುದಿಲ್ಲ.

ಸದ್ಯದ ಭಾರತದ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ಆಗಾಗ ನಡೆಯುತ್ತಲೇ ಇದೆ. ಎಷ್ಟೇ ಪ್ರಯತ್ನ ಪಟ್ಟರೂ ಕಳೆದ ೨೫ ವರ್ಷಗಳಿಂದ ಇದರ ಮೂಲೋಚ್ಚಾಟನೆ ಸಾಧ್ಯವಾಗಿಲ್ಲ. ಸಾವು ನೋವು ಸಂಭವಿಸುತ್ತಲೇ ಇದೆ. ಇದರ ವಿರುದ್ಧ ಹೋರಾಡಲೇ ಬೇಕು ನಿಜ. ಆದರೆ ಅದು ಭಾವನಾತ್ಮಕವಾಗಿರದೆ ವಾಸ್ತವದ ನೆಲೆಯಲ್ಲಿರಬೇಕು. ಇಲ್ಲದಿದ್ದರೆ ಇನ್ನಷ್ಟು ಅಪಾಯ ಹೆಚ್ಚಾಗುತ್ತದೆ. ಸೈನ್ಯಕ್ಕಿಂತ ರಾಜಕೀಯ ಹೋರಾಟವೇ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

ಈಗ ಯುದ್ಧದ ಬಗ್ಗೆ ಮಾತನಾಡುವ ಉತ್ತರ ಕುಮಾರರು ಕೆಲವೇ ದಿನಗಳಲ್ಲಿ ಅದರ ಭೀಕರತೆಗೆ ಬಳಲಿ ಬೆಂಡಾಗಿ ಅಯ್ಯೋ ಸಾಕಪ್ಪ ಎನ್ನುತ್ತಾರೆ. ಯುದ್ಧದಿಂದ ನಾವು ಬಹಳಷ್ಟು ಹಿಂದೆ ಹೋಗುತ್ತೇವೆ.

ಗೆಳೆಯರೆ,
ಯುದ್ದ ಕೊನೆಯ ಅಸ್ತ್ರ. ನಮ್ಮ ರಕ್ಷಣೆಗೆ ಅದು ಅನಿವಾರ್ಯವಾದರೆ ಸೃಷ್ಟಿಯ ಎಲ್ಲಾ ಪ್ರಾಣಿಗಳು ಹೋರಾಡಲೇ ಬೇಕು. ಇಲ್ಲದಿದ್ದರೆ ಅವು ಅಳಿಯುತ್ತವೆ. ಆದರೆ ಭಾರತದ ಪರಿಸ್ಥಿತಿ ಇನ್ನೂ ಅಷ್ಟು ಹದಗೆಟ್ಟಿಲ್ಲ. ೧೦ ಜನರ ಸಾವಿನ ಪ್ರತಿಕಾರಕ್ಕಾಗಿ ೫೦೦೦೦ ಜನರನ್ನು ಬಲಿ ಕೊಡುವುದು ಬೇಡ.

ಕೆಲವೇ ಕೆಲವು ಭಯೋತ್ಪಾದಕರೆಂಬ ಹುಚ್ಚರ ಕಾರಣಕ್ಕೆ ನಾವು
ಧೃತಿಗೆಡುವುದು ಬೇಡ. ನಮ್ಮ ಸೈನ್ಯಕ್ಕೆ ಜವಾಬ್ದಾರಿ ಇದೆ. ಅದು ಎಂದಿನಂತೆ ಸಹಜವಾಗಿ ಕಾರ್ಯ ನಿರ್ವಹಿಸಲಿ. ಭಯೋತ್ಪಾದಕರನ್ನು ಸದೆ ಬಡಿಯಲಿ. ನಮ್ಮ ಬೆಂಬಲ ಅದಕ್ಕೆ ಸದಾ ಇರುತ್ತದೆ.

ಅದು ಬಿಟ್ಟು ಮತಿ ಹೀನರಂತೆ ವರ್ತಿಸುವುದು ಬೇಡ. ಅಣು ಬಾಂಬುಗಳ ಜೊತೆ ಸರಸ ಬೇಡ. ಭಯೋತ್ಪಾದಕರು ಕೂಡ ಹುಚ್ಚಿನಲ್ಲಿ ಅಸಮಾನ್ಯ ಕುತಂತ್ರ ಮಾಡುತ್ತಾರೆ. ಆಗ ಆಕ್ರೋಶಕ್ಕಿಂತ ನಮ್ಮ ತಂತ್ರ ಹೆಚ್ಚು ಉಪಯುಕ್ತ ಎಂಬುದನ್ನು ಮರೆಯದಿರಿ.

ಬದುಕಲು ಹೋರಾಡೋಣ
ಸಾಯುವುದಕ್ಕಲ್ಲ.

ಭಾರತದಂತೆ ಪಾಕಿಸ್ತಾನದಲ್ಲೂ ಶಾಂತಿ ಬಯಸುವ ಅಪಾರ ಜನ ಇದ್ದಾರೆ. ಅವರಿಗೂ ಗೌರವ ಕೊಡೋಣ.

ಕೆಟ್ಟ ಘಟನೆ ನಡೆದಿದೆ. ಅದಕ್ಕೆ ಸೈನ್ಯ ಉತ್ತರ ಕೊಡುತ್ತದೆ. ನಾವುಗಳು ಮಾತ್ರ ಸಂಯಮದಿಂದ ಆಂತರಿಕ ಸಾಮರಸ್ಯ ಕಾಪಾಡಿಕೊಂಡು ಅಭಿವೃದ್ಧಿಯ ಕಡೆ ಗಮನ ಕೊಡೋಣ.

ನಮ್ಮ ಸಾಮಾಜಿಕ ವ್ಯವಸ್ಥೆಯ ಒಂದೊಂದು ನಡೆಯನ್ನು, ಗಟ್ಟಿತನವನ್ನು, ಹುಳುಕುಗಳನ್ನು ಶತ್ರುಗಳು ಗಮನಿಸಿ ನಮ್ಮನ್ನು ಉದ್ರೇಕಿಸಿ – ವಿಭಜಿಸಿ ಲಾಭ ಪಡೆಯಲು ಭಯೋತ್ಪಾದಕರನ್ನು ಉಪಯೋಗಿಸಿಕೊಳ್ಳುತ್ತಾರೆ.

ಆತ್ಮೀಯರೆ ,
ಅವರ ಬಲೆಗೆ ನಾವು ಬಿದ್ದು ಮೂರ್ಖರಾಗದಿರೋಣ.
ನಮ್ಮ ನಮ್ಮಲ್ಲಿನ ಪಕ್ಷ – ಪಂಥ ಸಿದ್ದಾಂತಗಳನ್ನು ಪಕ್ಕಕ್ಕಿಟ್ಟು ದೇಶಕ್ಕಾಗಿ ಒಂದಾಗೋಣ.

ಜಗತ್ತು ನಡೆಯುತ್ತಿರುವುದೇ ನಂಬಿಕೆಗಳ ಆಧಾರದಲ್ಲಿ, ಭಾವನೆಗಳ ಪ್ರವಾಹದಲ್ಲಿ, ಭಕ್ತಿಯ ಆರಾಧನೆಯಲ್ಲಿ, ದೇವರ ಶಕ್ತಿಯಲ್ಲಿ, ಧರ್ಮದ ಆಚರಣೆಯಲ್ಲಿ ಎಂಬ ಭ್ರಮೆಗಳಿಂದ ಮಾನವ ಹೊರಬಂದು ವಾಸ್ತವಿಕ ನೆಲೆಯಲ್ಲಿ, ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಮಾನವ ಸಮಾಜ ಭಯೋತ್ಪಾದಕರ ಬಾಂಬು ಬಂದೂಕುಗಳಿಂದ ನಾಶವಾಗುವ ದಿನಗಳು ದೂರವಿಲ್ಲ.

ಧರ್ಮದ ಅಫೀಮು ಸಂವಿಧಾನ, ಕಾನೂನು, ಪೋಲೀಸ್, ಸೈನ್ಯ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ‌ಸಾಧ್ಯತೆ ದಿನೇ ದಿನೇ ಹೆಚ್ಚಾಗುತ್ತಿದೆ.

ಕಲ್ಲು ಮಣ್ಣಿನ ವಿಗ್ರಹಕ್ಕೆ, ಯೇಸು ಮೇರಿಯ ಶಿಲ್ಪಗಳಿಗೆ, ಮಸೀದಿಯ ಒಂದು ರೂಪಕ್ಕೆ ದೈವತ್ವದ ಶಕ್ತಿ ತುಂಬಿ, ಅದನ್ನು ಸರ್ವ ಶಕ್ತ, ಸರ್ವವ್ಯಾಪಿ, ಸೃಷ್ಟಿಕರ್ತ ಎಂದು ಆರೋಪಿಸಿ, ಅದರ ನೆರಳಲ್ಲಿ ಧರ್ಮ ಬೋಧನೆ ಮಾಡಿ ಶತ ಶತಮಾನಗಳಿಂದ ಜನರನ್ನು ವಂಚಿಸುತ್ತಾ ಬಂದು ಸತ್ಯವನ್ನು ಸಮಾಧಿ ಮಾಡಿ ಈಗ ಅದೇ ಧರ್ಮಗಳ ಕುರುಡು ನಂಬಿಕೆಗಳು ಶ್ರೇಷ್ಠತೆಯ ವ್ಯಸನಕ್ಕೆ ದಾಸರಾಗಿ ಭಯೋತ್ಪಾದನೆಗೆ ಇಳಿದು ಸಿಕ್ಕ ಸಿಕ್ಕವರನ್ನು, ಎಲ್ಲೆಂದರಲ್ಲಿ ಕೊಲ್ಲುತ್ತಿರುವಾಗ ಬಾಯಿ ಬಾಯಿ ಬಡಿದುಕೊಂಡರೆ ಪ್ರಯೋಜನವೇನು ?

ಎಲ್ಲಿ ಹೋದ ನಿಮ್ಮ ಸತ್ಯನಾರಾಯಣ,
ಎಲ್ಲಿ ಹೋದ ನಿಮ್ಮ ಅಲ್ಲಾ,
ಎಲ್ಲಿ ಹೋದ ನಿಮ್ಮ ಜೀಸಸ್………..

ಈ ಕಾಡುವ ಪ್ರಶ್ನೆಗೆ
” ಮಾಡಿದ್ದುಣ್ಣೋ ಮಹಾರಾಯ ” ಎಂದು ಕರೆದು ಪಲಾಯನ ಮಾಡೋಣವೇ ?
ಕರ್ಮ ಫಲ ಎಂದು ಸಮಾಧಾನ ಮಾಡಿಕೊಳ್ಳೋಣವೇ ?

ಇಲ್ಲ ಖಂಡಿತವಾಗಿಯೂ ಇದಕ್ಕೆ ಪರಿಹಾರವಿದೆ.

ಒಂದು ಕಾಲದಲ್ಲಿ ಮನುಷ್ಯನನ್ನು ನಾಗರಿಕರನ್ನಾಗಿ ಮಾಡಿ ಸಮಾಜದ ಬೆಳವಣಿಗೆಗೆ ಬಹುಮುಖ್ಯ ಕಾಣಿಕೆ ನೀಡಿರುವುದು ದೇವರು ಮತ್ತು ಧರ್ಮ ಎಂಬ ಕಾಲ್ಪನಿಕ ಅನುಭವದ ನೀತಿ ನಿಯಮಗಳು.

ಆದರೆ ಸಮಾಜ ಬೆಳೆದಂತೆಲ್ಲಾ, ತಂತ್ರಜ್ಞಾನ, ಆಧುನಿಕತೆ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ, ಜನಸಂಖ್ಯೆಯ ಸ್ಫೋಟದಿಂದಾಗಿ ಮನುಷ್ಯನ ಬೇಡಿಕೆಗಳು ಬೃಹದಾಕಾರವಾಗಿ ಬೆಳೆದವು. ಅದನ್ನು ನಿಯಂತ್ರಿಸುವ ಶಕ್ತಿ ಹಳೆಯ ಕಾಲದ ದೇವರು ಧರ್ಮಗಳಿಗೆ ಇಲ್ಲ. ಅದು ನಿಂತ ನೀರಿನಂತೆ ಕೊಳೆತು ನಾರುತ್ತಿದೆ. ಶೋಷಣೆಯ ಮಾರ್ಗವಾಗಿದೆ.
ಕಾನೂನು ಮತ್ತು ಸಂವಿಧಾನ ಸಹ ಈ ಸಮಾಜವನ್ನು ಸಂಪೂರ್ಣವಾಗಿ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅದನ್ನು ಮೀರಿದ ಹೊಸ ವ್ಯವಸ್ಥೆತ್ತ ವಿಶ್ವ ಗಮನಹರಿಸಬೇಕಿದೆ.

ದೇವರು ಧರ್ಮಗಳಿಗೆ ಪರ್ಯಾಯವಾಗಿ, ಸಂವಿಧಾನಗಳಿಗೆ ಪೂರಕವಾಗಿ ಒಂದು ಬಲವಾದ ಆಡಳಿತ ವ್ಯವಸ್ಥೆ ರೂಪಗೊಳ್ಳಬೇಕಿದೆ.

ಆಗ ಮಾತ್ರ ಈ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯ. ಇಲ್ಲದಿದ್ದರೆ ಕೇವಲ ಒಬ್ಬನೇ ಭಯೋತ್ಪಾದಕ ನೂರಾರು ಸಾಮಾನ್ಯ ಜನರನ್ನು ಕೊಲ್ಲಬಲ್ಲ.

ಭಯೋತ್ಪಾದನೆಯ ಬೇರುಗಳಿರುವುದೇ ಧರ್ಮಗಳಲ್ಲಿ….
ಹಾಗೆಂದು ಯಾವುದೋ ಒಂದು ಧರ್ಮವನ್ನು ಟಾರ್ಗೆಟ್ ಮಾಡಿ ನಿಂದಿಸಿದರೆ ಈ ಭಯೋತ್ಪಾದನೆ ಮತ್ತಷ್ಟು ಹೆಚ್ಚಾಗುತ್ತದೆ. ಈಗ ಬೇಕಾಗಿರುವುದು ಅತ್ಯಂತ ವಿವೇಚನೆಯಿಂದ ಕೂಡಿದ ಸಂಯಮ ಮತ್ತು ಹೃದಯ ಶ್ರೀಮಂತಿಕೆ. ಈ ಸಮಸ್ಯೆಯನ್ನು ಎಲ್ಲಾ ದೃಷ್ಟಿಕೋನದಿಂದ ನೋಡಬೇಕಿದೆ. ಆಕ್ರೋಶ ಭರಿತರಾಗಿ ಯೋಚಿಸಿದರೆ ಮತ್ತಷ್ಟು ಅನಾಹುತಗಳು ಗ್ಯಾರಂಟಿ.

ಮನುಷ್ಯ ಉಳಿಯಬೇಕಾದರೆ ಭಯೋತ್ಪಾದನೆ ಅಳಿಯಬೇಕು. ಅದನ್ನು ಅತ್ಯಂತ ಸಹಾನುಭೂತಿಯಿಂದ ಪರಿಶೀಲಿಸಿದರೆ ಮಾತ್ರ ಪರಿಹಾರ ಸಾಧ್ಯ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……