ಸಂಸತ್ತು ಮತ್ತು ವಿಧಾನಸಭಾ ಅಧಿವೇಶನಗಳು……

ವಿಜಯ ದರ್ಪಣ ನ್ಯೂಸ್…

ಸಂಸತ್ತು ಮತ್ತು ವಿಧಾನಸಭಾ ಅಧಿವೇಶನಗಳು……

ಇಷ್ಟೊಂದು ಹೊಸ ಅಥವಾ ತಿದ್ದುಪಡಿ ಮಸೂದೆಗಳ ಅವಶ್ಯಕತೆ ಇದೆಯೇ….

ಬೀಳುತ್ತಿರುವ ಗೋಡೆಯನ್ನು ಹಿಡಿದು ನಿಲ್ಲಿಸುವುದೇ ಒಂದು ದೊಡ್ಡ ಮತ್ತು ನಿರಂತರ ಕೆಲಸವಾದರೆ ಅದರ ಮೇಲೆ ಕಟ್ಟಡವನ್ನು ಕಟ್ಟುವುದು ಹೇಗೆ ? ಯಾವಾಗ ?

ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ನೋಡಿದರೆ, ಅಧಿವೇಶನಗಳಲ್ಲಿ ಅವರು ಮಂಡಿಸುತ್ತಿರುವ ವಿವಿಧ ಹೊಸ ಮತ್ತು ತಿದ್ದುಪಡಿ ಮಸೂದೆಗಳನ್ನು ನೋಡಿದರೆ ಇದು ಮತ್ತೆ ಮತ್ತೆ ನೆನಪಾಗುತ್ತಿದೆ. ಏಕೆಂದರೆ ಪ್ರತಿಬಾರಿಯೂ ಸರ್ಕಾರಗಳು, ವಿರೋಧ ಪಕ್ಷಗಳ ಮೇಲೆ ಸೇಡು, ದ್ವೇಷ, ಅಸೂಯೆ ತೀರಿಸಿಕೊಳ್ಳಲು, ಅವರ ಧ್ವನಿಯನ್ನು ಅಡಗಿಸಲು ಹಿಂದಿನ ಮಸೂದೆಗಳಿಗೆ ಬೇಕಂತಲೇ ತಿದ್ದುಪಡಿ ಮಾಡುವುದು ಅಥವಾ ಹೊಸಮಸೂದೆ ಮಂಡಿಸುವುದು ನಡೆಯುತ್ತಲೇ ಇದೆ.

ವಾಸ್ತವದಲ್ಲಿ ಸರ್ಕಾರಗಳಿಗೆ ಆಡಳಿತಾತ್ಮಕವಾಗಿ ಮತ್ತು ಆಧುನಿಕ ಕಾಲಕ್ಕೆ ತಕ್ಕಂತೆ ಕಾನೂನುಗಳಿಗೆ ಕೆಲವು ಸಣ್ಣಪುಟ್ಟ ಬದಲಾವಣೆಗಳ ಅವಶ್ಯಕತೆ ಇರಬಹುದು. ಆದರೆ ಅದನ್ನು ಮೀರಿ ಅನಾವಶ್ಯಕ ಹೊಸ ಮಸೂದೆ ಮತ್ತು ತಿದ್ದುಪಡಿಗಳ ಅವಶ್ಯಕತೆ ಇಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವ ವಿಷಯವೆಂದರೆ ಈ ದೇಶಕ್ಕೆ ಹೊಸ ಹೊಸ ಕಾನೂನು ಅಥವಾ ತಿದ್ದುಪಡಿಗಳಿಗಿಂತ ಇಂದು ಬೇಕಾಗಿರುವುದು ಇರುವ ಕಾನೂನುಗಳ ಪ್ರಾಮಾಣಿಕ, ದಕ್ಷ, ಪಾರದರ್ಶಕ ಅನುಷ್ಠಾನ ಮಾತ್ರ.

ಅನುಷ್ಠಾನದಲ್ಲಿ ತಮ್ಮ ಎಲ್ಲಾ ಸಮಯ, ಸಾಮರ್ಥ್ಯ, ಸಂಪನ್ಮೂಲಗಳನ್ನು ಕೇಂದ್ರೀಕರಿಸಿದರೆ ಖಂಡಿತವಾಗಲೂ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸುಗಮವಾಗಿ ನಡೆಯುತ್ತದೆ. ಜನರ ಜೀವನಮಟ್ಟ ಸುಧಾರಿಸುತ್ತದೆ.

ಉದಾಹರಣೆಗೆ, ಇತ್ತೀಚೆಗೆ ಕರ್ನಾಟಕ ಸರ್ಕಾರ ಹೊಸದಾಗಿ ಅಂಗೀಕರಿಸಿರುವ ದ್ವೇಷ ಭಾಷಣ ತಡೆ ಮಸೂದೆಯಾಗಲಿ, ಸಾರ್ವಜನಿಕ ಸಾಮೂಹಿಕ ಬಹಿಷ್ಕಾರ ನಿಷೇಧ ತಿದ್ದುಪಡಿಯಾಗಲಿ, ಕೇಂದ್ರ ಸರ್ಕಾರ ಅಂಗೀಕರಿಸಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿ ಮತ್ತು ಹೆಸರಿನ ಬದಲಾವಣೆಯಾಗಲಿ, ಚುನಾವಣಾ ಆಯೋಗ ಮಾಡುತ್ತಿರುವ ಮತದಾರರ ಪರಿಷ್ಕರಣೆ ಪಟ್ಟಿಯಾಗಲಿ ತೀರಾ ಅನಿವಾರ್ಯವೇನು ಅಲ್ಲ. ಇರುವ ಕಾನೂನುಗಳನ್ನೇ ಬಳಸಿಕೊಂಡು ಅತ್ಯುತ್ತಮ ಅನುಷ್ಠಾನ ಯೋಜನೆಯನ್ನು ರೂಪಿಸಿದ್ದರೆ ಸಹಜವಾಗಿಯೇ ಈ ಅನಾವಶ್ಯಕ ಕಸರತ್ತುಗಳು ಬೇಕಾಗಿರಲಿಲ್ಲ.

ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಆಡಳಿತ ವೈಖರಿಯೇ ದ್ವೇಷ, ಅಸೂಯೆ, ಮುಂದಿನ ಚುನಾವಣೆಗೆ ತಮ್ಮ ಪಕ್ಷದ ಪರವಾಗಿ ಮತದಾರರನ್ನು ಓಲೈಸುವುದು. ಮೂಲ ಉದ್ದೇಶವೇ ಹೀಗಾದರೆ ಆದರೆ ದೇಶದ, ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ಅವರ ಪಕ್ಷಗಳ ವಕ್ತಾರರು, ಕಾರ್ಯಕರ್ತರು, ಬೆಂಬಲಿಗರು ಇದನ್ನು ಬೇರೆ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ.

ಇದನ್ನು ಅರ್ಥಮಾಡಿಕೊಳ್ಳಲು ಸಮಕಾಲೀನ ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಒಮ್ಮೆ ಚೀನಾದ ಅಭಿವೃದ್ಧಿಯನ್ನು ಅವಲೋಕಿಸಿ. ಚೀನಾದ ಮೇಲಿರುವ ಇತರ ಬೇರೆ ಬೇರೆ ಸರ್ವಾಧಿಕಾರದ ಆರೋಪಗಳ ನಡುವೆಯೂ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸಿದಾಗ ಇಡೀ ಜಗತ್ತೇ ಸೋಜಿಗಪಡುವಂತೆ ಅಭಿವೃದ್ಧಿ ಸಾಧಿಸುತ್ತಿದೆ. ಅದರಲ್ಲೂ ಇತ್ತೀಚಿನ ವರದಿಗಳ ಪ್ರಕಾರ ಕೃತಕ ಬುದ್ಧಿಮತ್ತೆಯಲ್ಲಿ ಅದು ಅಮೆರಿಕ ಮತ್ತು ಯುರೋಪ್ ದೇಶಗಳನ್ನೇ ಮೀರಿಸುವಂತೆ ಬೆಳವಣಿಗೆ ಸಾಧಿಸುತ್ತಿದೆ. ಅದರ ರಕ್ಷಣಾತ್ಮಕ ತಂತ್ರಗಳು, ಅಕ್ರಮಣಕಾರಿ ತಂತ್ರಜ್ಞಾನ ಅಮೆರಿಕವನ್ನೇ ಬೆಚ್ಚಿ ಬೀಳಿಸುವಂತಿದೆ. ಅದಕ್ಕೆ ಕಾರಣ ಆ ದೇಶಕ್ಕಿರುವ ಅಭಿವೃದ್ಧಿಯ ಹಸಿವು, ಶ್ರಮ ಮತ್ತು ಅನಾವಶ್ಯಕ ರಾಜಕೀಯ ಚಟುವಟಿಕೆಗಳಿಂದ ದೂರವಿರುವುದು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ, ಉತ್ತರ ಕೋರಿಯಾ ಅಧ್ಯಕ್ಷ ಕಿಂಗ್ ಜಾನ್ ಉನ್, ಕೆನಡಾ ಹಿಂದಿನ ಅಧ್ಯಕ್ಷ ಜಸ್ಟಿನ್ ಟ್ರುಡೋ, ಪಾಕಿಸ್ತಾನದ ಪ್ರಧಾನಿ ಶಹಾಬಾದ್ ಷರೀಫ್ ಮುಂತಾದವರ ನಡವಳಿಕೆಗಳೇ ವಿಚಿತ್ರವಾಗಿವೆ ಮತ್ತು ಜಾಗತಿಕ ಶಾಂತಿಗೆ ಭಂಗ ತರುವಂತಿದೆ.

ಟ್ರಂಪ್ ಅವರ ಅಮೆರಿಕ ಮೊದಲು, ಮೋದಿಯವರ ಭಾರತ ವಿಶ್ವಗುರು, ನೆತನ್ಯಾಹು ಅವರ ಯಹೂದಿ ಶ್ರೇಷ್ಠತೆ, ನವಾಬ್ ಶರೀಫರ ಧಾರ್ಮಿಕ ಮತಾಂಧತೆ, ರಷ್ಯಾ ಅಧ್ಯಕ್ಷರ ಸರ್ವಾಧಿಕಾರ ಎಲ್ಲವೂ ಸಂಕುಚಿತ ಮನೋಭಾವದ, ವಿಶ್ವ ಮಾನವ ಪ್ರಜ್ಞೆಗೆ ವಿರುದ್ಧವಾದ, ತಮ್ಮದೇ ದೇಶಗಳ ಹಿತಾಸಕ್ತಿಗೆ ಮಾರಕವಾದ ಆಡಳಿತದ ವಿಧಾನಗಳಾಗಿವೆ.

ನಮ್ಮ ದೇಶವೇ ಮೊದಲು ಎಂಬುದು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಹುಚ್ಚು ರಾಷ್ಟ್ರೀಯವಾದವೇ ಹೊರತು ಬೇರೇನೂ ಅಲ್ಲ. ಮುಕ್ತ ಮಾರುಕಟ್ಟೆಯ ನಂತರ ಇಡೀ ಜಗತ್ತಿನ ಮನುಜಕುಲ, ಅವರ ಭಾವನೆಗಳು, ಅವರ ಅಗತ್ಯಗಳು, ಮೂಲಭೂತ ಸೌಕರ್ಯಗಳು, ಅವಲಂಬನೆಗಳು ಬಹುತೇಕ ಎಲ್ಲವೂ ಈ ಸಮೂಹ ಸಂಪರ್ಕ ಕ್ರಾಂತಿಯ ಫಲವಾಗಿ ಏಕೀಕೃತಗೊಂಡಿದೆ. ದಿನನಿತ್ಯ ಎಲ್ಲರೂ ಬಳಸುತ್ತಿರುವ ವಸ್ತುಗಳು, ಆಹಾರಗಳು ಹೆಚ್ಚು ಕಡಿಮೆ ರೂಪ ಬೇರೆಯಾದರು ಒಂದೇ ಗುಣಲಕ್ಷಣಗಳನ್ನು ಹೊಂದಿವೆ.

ವಿಶ್ವದ ಯಾವುದೇ ಭಾಗದಲ್ಲೂ ಯಾವುದೇ ರೀತಿಯ ತಂತ್ರಜ್ಞಾನದ ಅಭಿವೃದ್ಧಿಯೇ ಇರಲಿ, ವಾಹನಗಳೇ ಇರಲಿ, ಮೊಬೈಲ್ ಇರಲಿ, ವಸ್ತ್ರ ವಿನ್ಯಾಸಗಳೇ ಇರಲಿ, ಔಷಧಿಯೇ ಇರಲಿ ಹೆಚ್ಚುಕಡಿಮೆ ವಿಶ್ವದ ಎಲ್ಲ ಮೂಲೆಗೂ ಏಕಕಾಲದಲ್ಲಿ ತಲುಪುತ್ತದೆ. ಸಾಮರ್ಥ್ಯ ಇರುವವರು ಅದನ್ನು ಖರೀದಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಾವೇ ಶ್ರೇಷ್ಠ ಎನ್ನುವ ಪರಿಕಲ್ಪನೆಯೇ ಹುಚ್ಚುತನದ್ದು .

ಭಾರತವನ್ನೇ ತೆಗೆದುಕೊಳ್ಳುವುದಾದರೆ, ಉತ್ಪಾದನೆ, ರೋಬೋಟ್ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಚೀನಾ ಅಷ್ಟೊಂದು ಅಭಿವೃದ್ಧಿಯ ಪಥದಲ್ಲಿ ಚಲಿಸುತ್ತಿರುವಾಗ ನಾವಿನ್ನೂ ಸಂವಿಧಾನ ರಕ್ಷಣೆ, ಅಯೋಧ್ಯೆಯಲ್ಲಿ ಧರ್ಮ ಧ್ವಜ ಹಾರಾಟ, ಮಂದಿರ ಮಸೀದಿ, ಹಿಂದೂ ಮುಸ್ಲಿಂ, ಕಾಂಗ್ರೆಸ್ ಬಿಜೆಪಿ ಕಮ್ಯುನಿಸ್ಟ್, ಬಲಪಂಥ ಎಡಪಂಥ, ನಮ್ಮ ದೇವರು ಅವರ ದೇವರು, ದೇವಸ್ಥಾನ ಮುಂದೆ ಕಾಲ್ತುಳಿತ, ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ, ಗಾಂಧಿ ಸಾರ್ವಕರ್, ನೆಹರು ಪಟೇಲ್ ಹೀಗೆ ಸದಾ ಕಾಲ ಯುವಶಕ್ತಿಯನ್ನು ಗೊಂದಲಕ್ಕೆ ದೂಡುತ್ತಿದ್ದರೆ ಸುಸ್ಥಿರ ಅಭಿವೃದ್ಧಿ ಹೇಗೆ ಸಾಧ್ಯ.

ಇತಿಹಾಸ ಘಟಿಸಿ ಹೋಗಿರುತ್ತದೆ. ಈಗ ಅದೇ ಇತಿಹಾಸವನ್ನು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ವಿಮರ್ಶಿಸುತ್ತಾ, ಟೀಕಿಸುತ್ತಾ ಇತಿಹಾಸದಲ್ಲಿ ನಡೆದ ಘಟನೆಗಳ ಅರ್ಥವನ್ನೇ ಬದಲಾಯಿಸುತ್ತಾ ಸಾಗಿದರೆ ನಾವು ಸಾಗುತ್ತಿರುವ ದಿಕ್ಕು ಹೇಗಿರುತ್ತದೆ ಯೋಚಿಸಿ ನೋಡಿ. ತೀರಾ ಆತಂಕಕಾರಿ ಪರಿಸ್ಥಿತಿಯಲ್ಲಿ ರಾಜ್ಯ ಮತ್ತು ದೇಶವಿದೆ.

ಕಳೆದ ಕೆಲವು ವರ್ಷಗಳ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸತ್ ಮತ್ತು ವಿಧಾನಸಭಾ ಅಧಿವೇಶನದಲ್ಲಿ ನಡೆದ ಚರ್ಚೆಗಳ ಗುಣಮಟ್ಟವನ್ನು ವೀಕ್ಷಿಸಿ. ನಾವು ಸಾಗುತ್ತಿರುವ ದಿಕ್ಕಿನ ಸ್ಪಷ್ಟ ಚಿತ್ರಣ ಗೊತ್ತಾಗುತ್ತದೆ. ಇದು ಅವಸಾನದತ್ತ ಸಾಗುತ್ತಿರುವುದೇ ಹೊರತು ಅಭಿವೃದ್ಧಿಯ ಕಡೆಗಲ್ಲ. ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಇದರ ಹೊಣೆ ಹೊರಬೇಕಾಗುತ್ತದೆ. ಜನರನ್ನು ಮಾನಸಿಕವಾಗಿ ಸೈದ್ಧಾಂತಿಕ ಘರ್ಷಣೆಗೆ ಬಿಟ್ಟು ಇವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಮತ್ತು ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕಾದರೆ
ಶಿಕ್ಷೆಗಿಂತ ಶಿಕ್ಷಣ ಮುಖ್ಯವಾಗಬೇಕು. ಶಿಕ್ಷೆ ಕೇವಲ ಪರಿಸ್ಥಿತಿ ನಿಯಂತ್ರಿಸಲು ಸಾಂದರ್ಭಿಕ ಅಸ್ತ್ರವೇ ಹೊರತು ಅದೇ ಮುಖ್ಯವಾಗಬಾರದು. ಜನರನ್ನು ಸುಶಿಕ್ಷಿತರನ್ನಾಗಿ ಮಾಡದೆ, ಪ್ರಜ್ಞಾವಂತರನ್ನಾಗಿ ಮಾಡದೆ ಜಾರಿಗೆ ಬರುವ ಯಾವುದೇ ಕಾನೂನು ನಿಷ್ಪ್ರಯೋಜಕ.

ಕಾನೂನುಗಳು ಹೆಚ್ಚಾದಷ್ಟು ಅಪರಾಧಗಳು ಹೆಚ್ಚಾಗುತ್ತವೆ. ಆದ್ದರಿಂದ ಹೊಸ ಕಾನೂನು ಅಥವಾ ತಿದ್ದುಪಡಿಗಳಿಗಿಂತ ಅನುಷ್ಠಾನದ ಕಡೆ ನಾವು ಗಮನ ಕೇಂದ್ರೀಕರಿಸದಿದ್ದರೆ ದೇಶದ ಒಟ್ಟು ಪರಿಸ್ಥಿತಿ ಅದೋಗತಿ ಹೋಗುವುದು ನಿಶ್ಚಿತ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……