ವಿಶ್ವಕ್ಕೆ ಶೇ.60ರಷ್ಟು ಭಾರತ ಲಸಿಕೆ ಪೂರೈಕೆ: ಸಂಸದ ಡಾ.ಸಿ ಎನ್ ಮಂಜುನಾಥ್
ತಾಂಡವಪುರ ಜೂನ್ 13 ವಿಶ್ವಕ್ಕೆ ಔಷಧಗಳ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ೩ನೇ ಸ್ಥಾನವನ್ನು ಹೊಂದಿದ್ದು, ಮೌಲ್ಯದಲ್ಲಿ ೧೧ನೇ ಸ್ಥಾನವನ್ನು ಹೊಂದಿದೆ. ಪ್ಯಾರಾಸಿಟಮಲ್ ಮಾತ್ರೆಯನ್ನು ಇಡೀ ಜಗತ್ತಿಗೆ ಭಾರತ ಪೂರೈಕೆ ಮಾಡುತ್ತಿದೆ. ವಿಶ್ವಕ್ಕೆ ಶೇ.೬೦ ರಷ್ಟು ವಿವಿಧ ಲಸಿಕೆಗಳನ್ನು ಭಾರತವೇ ಪೂರೈಕೆ ಮಾಡುತ್ತಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಮೈಸೂರಿನ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾವೇರಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಔಷಧ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದ್ದು, ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಔಷಧಗಳು ಮಾರಾಟವಾಗುತ್ತಿದೆ. ಅಲೋಪಥಿ, ನ್ಯಾಚೊರೋಪಥಿ ಅಥವಾ ಹೋಮಿಯೋಪಥಿಗಿಂತ ‘ಸಿಂಪಥಿ’ ಅತ್ಯಂತ ಮುಖ್ಯ. ದಯೆ ವ್ಯಕ್ತಿಯನ್ನು ಅಂತ್ಯಂತ ಸುಂದರಗೊಳಿಸುತ್ತದೆ. ಹಾಗಾಗಿ ರೋಗಿಗಳ ಬಗ್ಗೆ ನೀವು ಕರುಣೆಯನ್ನು ಹೊಂದಬೇಕು. ನೀವು ಗಳಿಸಿದ ಪದವಿ, ರಾಜ್ಯ ರ್ಯಾಂಕ್‌ಗಳು ಮುಖ್ಯವಲ್ಲ, ನಿಮ್ಮ ಪರಿಶ್ರಮ, ಬದ್ಧತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಮೊಗದಲ್ಲಿ ನಗು ಅರಳುವಂತೆ ಮಾಡಿದರೆ ಅದುವೇ ನಿಜವಾದ ಯಶಸ್ಸು ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಎರಡು, ಮೂರು ದಶಕಗಳ ಅವಧಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಸಂಭವಿಸಿವೆ. ವೈದ್ಯಕೀಯ ಕ್ಷೇತ್ರಕ್ಕೆ ಸುಂದರವಾದ ಮುಖಗಳ ಅವಶ್ಯಕತೆ ಇಲ್ಲ, ಸುಂದರವಾದ ಹೃದಯದ ಅವಶ್ಯಕತೆ ಇದೆ. ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
ದೇಶದ ವೈದ್ಯಕೀಯ ಕ್ಷೇತ್ರ ಎಷ್ಟೊಂದು ಬೆಳವಣಿಗೆ ಹೊಂದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದೇಶದಲ್ಲಿ ೧೪ ಲಕ್ಷ ಅಲೋಪಥಿ ವೈದ್ಯರು, ೭.೫ ಲಕ್ಷ ಆಯುಷ್ ವೈದ್ಯರು, ೩೭ ಲಕ್ಷ ನರ್ಸ್‌ಗಳು ಇದ್ದಾರೆ. ಕಳೆದ ೧೨ ವರ್ಷಗಳಿಂದ ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ೧೨ ವರ್ಷಗಳ ಹಿಂದೆ ದೇಶದಲ್ಲಿ ೨೫೦ ನವೋದ್ಯ ಮಗಳು ಮಾತ್ರ ಇದ್ದವು. ಆದರೆ, ಪ್ರಸ್ತುತ ೨.೫ ಲಕ್ಷ ನವೋದ್ಯಮಗಳು ಇವೆ. ನವೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಅಮೆರಿಕದಲ್ಲಿ ಭಾರತದ ಮೊಬೈಲ್‌ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಂಸ್ಥಾಪಕ ಡಾ ಜಿ ಆರ್ ಚಂದ್ರಶೇಖರ್, ಡೀನ್ ಪ್ರೊ ಎಸ್ ಶ್ರೀಕಂಠಸ್ವಾಮಿ, ಸರಳ ಚಂದ್ರಶೇಖರ್, ಶ್ರೀನಿವಾಸನ್, ಪ್ರೊ ದೀಪ್ತಿ, ಡಾ ಲೋಕೆಶ್, ಡಾ ಪ್ರದೀಪ್, ಕೃಷ್ಣ ಪ್ರಸಾದ್ ಪೂರ್ಣಿಮಾ ಇದ್ದರು.
ನರ್ಸಿಂಗ್ ವಿಭಾಗದಲ್ಲಿ ಸನ್ರಾಸನ್ನಿ , ಎಸ್.ಮಾನಸ, ಎಲ್.ಕುಸುಮಾ, ಹೆಲ್ಸ್ ಸೈನ್ಸ್ ವಿಭಾಗದಲ್ಲಿ ಹೈಬಾ ಮಹಮ್ಮದ್, ಅಫ್ರ ಅಶ್ರಫ್, ಎಸ್.ಅಂಜನಾ, ಇಶಾ ಇಬ್ರಾಹಿಂ,ಅಲ್ಫಿನಾ ಅಬ್ದುಲ್ಲಾ, ಮಹಿನ್ ಫಾತಿಮಾ, ಸಾನಿಯಾ ಮ್ಯಾಥ್ಯೂ, ಶಿವಾನಿಚಂದ್ರ ,ಝೈನಬ್ ಸೇಠ್, ಎಂ ಎಸ್ ಪ್ರಿಯಾಂಕ, ಫಾರ್ಮಸಿ ವಿಭಾಗದಲ್ಲಿ ಅಮ್ರೀನಾ ಖಾಟೂನ್, ಎಂ.ಎಸ್.ಹರ್ಷಿತಾ, ಎಂ.ಹೇಮಲತಾ, ಅಲೈಡ್ ಹೆಲ್ಸ್ ಸೈನ್ಸ್ ವಿಭಾಗದಲ್ಲಿ ಪಿ.ವಿ.ಆದಿತ್ಯ, ಹೈಮನ್ ಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.