ವಿಜಯ ದರ್ಪಣ ನ್ಯೂಸ್…..
2.09 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ : ಶೇ. 88.19ರಷ್ಟು ಮಾಹಿತಿ ಡಿಜಿಟಲೀಕರಣ : ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್

ಶಿಡ್ಲಘಟ್ಟ : ಜೂನ್ 30ರಿಂದ ಆಗಸ್ಟ್ 17ರವರೆಗೆ ಬಿ.ಎಲ್.ಒ.ಗಳು, ಸೂಪರ್ ವೈಸರ್ ಗಳು ಹಾಗೂ ಇತರೆ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿದ್ದರು. ಕ್ಷೇತ್ರದ ಒಟ್ಟು 2,09,752 ಮತದಾರರಿಗೆ ಶೇ 100ರಷ್ಟು ನಮೂನೆ ವಿತರಣೆ ಪೂರ್ಣಗೊಂಡಿದ್ದು, ಈ ಪೈಕಿ 1,84,975 ಮತದಾರರ ಮಾಹಿತಿ ಡಿಜಿಟಲೀಕರಣಗೊಂಡಿದೆ. ಇದು ಶೇ 88.19ರಷ್ಟಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತದಾರರ ನೋಂದಣಾಧಿಕಾರಿ ಅವರು ಮಾಹಿತಿ ನೀಡಿದರು.
142–ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಆಗಸ್ಟ್ 17ರ ನಂತರ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗಿದೆ. ಅಲ್ಲದೆ, ಗ್ರಾಮ ಪಂಚಾಯಿತಿಗಳು, ವಾರ್ಡ್ ಕಚೇರಿಗಳು, ತಾಲ್ಲೂಕು ಕಚೇರಿ ಹಾಗೂ ಮತಗಟ್ಟೆಗಳಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕರಡು ಪಟ್ಟಿಯಲ್ಲಿನ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಆಕ್ಷೇಪಣೆಗಳಿಗೆ ಸೆಪ್ಟೆಂಬರ್ 23ರವರೆಗೆ ಅವಕಾಶವಿದೆ ಸ್ವೀಕರಿಸುವ ಹಕ್ಕು–ಆಕ್ಷೇಪಣೆಗಳ ಇತ್ಯರ್ಥಕ್ಕೆ ವಿಚಾರಣೆ ಪ್ರಕ್ರಿಯೆಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಗೈರುಹಾಜರು, ಕಾಯಂ ವಿಳಾಸ ಬದಲಾವಣೆ, ಮೃತ ಹಾಗೂ ನಕಲಿ ಮತದಾರರನ್ನು ಎ.ಎಸ್.ಡಿ (ASD) ವಿಭಾಗದಲ್ಲಿ ಗುರುತಿಸುವ ಪ್ರಕ್ರಿಯೆಯನ್ನೂ ಪಾರದರ್ಶಕವಾಗಿ ನಡೆಸಲಾಗಿದೆ ಎಂದರು.
ಈ ಪ್ರಕ್ರಿಯೆಯಲ್ಲಿ 5,582 ಮೃತ ಮತದಾರರನ್ನು ಗುರುತಿಸಲಾಗಿದೆ, 2,250ಕ್ಕೂ ಹೆಚ್ಚು ನಕಲಿ ಹೆಸರುಗಳು ಹಾಗೂ ಬಿ.ಎಲ್.ಒಗಳು ಐದರಿಂದ ಎಂಟು ಬಾರಿ ಭೇಟಿ ನೀಡಿದರೂ ಪತ್ತೆಯಾಗದ 3,189 ಕಾಯಂ ಗೈರುಹಾಜರಿ ಅಥವಾ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಲಾಗಿದೆ,ಒಟ್ಟಾರೆ ಕ್ಷೇತ್ರದಲ್ಲಿ ಶೇ.11.81ರಷ್ಟು ಮತದಾರರನ್ನು ಎ.ಎಸ್.ಡಿ.ವಿಭಾಗದಲ್ಲಿ ಗುರುತಿಸಲಾಗಿದೆ ಎಂದು ವಿವರಿಸಿದರು.
ಆದರೆ, ಇದು ಅಂತಿಮ ಮತದಾರರ ಪಟ್ಟಿಯಲ್ಲ, ಕರಡು ಪಟ್ಟಿ ಮಾತ್ರ ಎಂದು ಸ್ಪಷ್ಟಪಡಿಸಿದ ಅವರು, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅರ್ಹ ಮತದಾರರಿಗೆ ಚುನಾವಣಾ ಆಯೋಗದ ನಿಯಮಾವಳಿಯಂತೆ ಮರುಸೇರ್ಪಡೆಗೆ ಅವಕಾಶವಿದೆ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರುಗಳ ವ್ಯತ್ಯಾಸ, ತಂದೆ–ತಾಯಿ ಮತ್ತು ಮಕ್ಕಳ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇರುವಂತಹ ಅಸಂಗತತೆಗಳನ್ನೂ ಪರಿಶೀಲಿಸಲಾಗಿದೆ ಈ ಹಿಂದೆ ಗುರುತಿಸಲಾಗಿದ್ದ ಸುಮಾರು 35 ಸಾವಿರ ಅಸಂಗತತೆಗಳನ್ನು ದಾಖಲೆಗಳ ಪರಿಶೀಲನೆಯ ಮೂಲಕ 9,234ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
2002ರ ಮತದಾರರ ಪಟ್ಟಿಗೆ ಸಂಬಂಧಿಸಿದ 2,842 “ನೋ–ಮ್ಯಾಪಿಂಗ್” ಪ್ರಕರಣಗಳೂ ಗುರುತಿಸಲಾಗಿವೆ, ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಕಳುಹಿಸಲಾಗುವುದು. ಬಳಿಕ ವಿಚಾರಣೆ ನಡೆಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು, ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ, ಮತದಾರರ ಪಟ್ಟಿಯನ್ನು ನಿಖರ ಮತ್ತು ಪಾರದರ್ಶಕವಾಗಿ ಸಿದ್ಧಪಡಿಸುವ ಕಾರ್ಯ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಗಗನಸಿಂಧು ಹಾಜರಿದ್ದರು.








