ವಿಜಯ ದರ್ಪಣ ನ್ಯೂಸ್….
ಸಂಸದ ಯಧುವೀರ ಅವರಿಗೆ ಮಕ್ಕಳ ಆಸ್ಪತ್ರೆ ಅವ್ಯವಸ್ಥೆ ದರ್ಶನ : ಚೆಲುವಾಂಬ ಬಾಣಂತಿಯರ ಬಿಸಿ ನೀರು ಬೇಡಿಕೆ ಸ್ಥಳದಲ್ಲೇ ಪರಿಹಾರ

ತಾಂಡವಪುರ ಏಪ್ರಿಲ್ 24 ಮೈಸೂರು ಜಿಲ್ಲಾ ಮತ್ತು: ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ದರ್ಶನ ಮಾಡಿದರಲ್ಲದೆ ಬಾಣಂತಿಯರ ಬಿಸಿನೀರ ಬೇಡಿಕೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ನೆರವಾದರು.
ಒಂದು ತಿಂಗಳ ಅವಧಿಯಲ್ಲಿ ಅತಿಹೆಚ್ಚು ಮಕ್ಕಳ ಸಾವನ್ನಪ್ಪಿರುವ ಪ್ರಕರಣ ಹಾಗೂ ನಿನ್ನೆ ಮಗುವೊಂದಕ್ಕೆ ಇರುವೆ ಕಚ್ಚಿ ಸಾವನ್ನಪ್ಪಿರುವ ಆರೋಪದ ಹಿನ್ನೆಲೆಯಲ್ಲಿ ಭೇಟಿ ನೀಡಿ ಅಲ್ಲಿನ ಮಹಿಳೆಯರಿಂದ ವಸ್ತುಸ್ಥಿತಿ ಅರಿಯುವ ಪ್ರಯತ್ನ ನಡೆಸಿದರು. ಈ ವೇಳೆ ನರ್ಸ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ರೋಗಿಗಳ ಸಂಬಂಧಿಗಳಿಂದ ವಿನಾಕಾರಣ ಹಣ ವಸೂಲಿ, ಬಾಣಂತಿಯರ ವಾರ್ಡಿನಲ್ಲಿ ಸ್ವಚ್ಛತೆ, ಸೂಕ್ತ ಸೌಲಭ್ಯ ಇಲ್ಲದಿರುವುದು ಹಾಗೂ ಮಕ್ಕಳಿಗೆ ಹಾಸಿಗೆ ಕೊರತೆ ಇರುವ ಬಗ್ಗೆ ಮಹಿಳೆಯರು ದೂರು ನೀಡಿದರು.
ಬಳಿಕ ಮಾತನಾಡಿ, ತಾಯಿ, ಮಕ್ಕಳ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು. ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು, ಹೆಚ್ಚುತ್ತಿರುವ ಮರಣ ಪ್ರಮಾಣ ಸಂಖ್ಯೆಗಳ ಕುರಿತು ವರದಿಯಾಗಿರುವುದು ವಿಷಾದನೀಯ. ಜನರ ಕುರಿತು ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಇದೇ ರೀತಿಯ ಧೋರಣೆ ಮುಂದುವರಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು. ಎನ್‌ಐಸಿಯು ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಎಲ್ಲ ವಿಭಾಗದಲ್ಲೂ ಎಲ್ಲ ವೈದ್ಯಕೀಯ ಸಾಧನಗಳನ್ನು ಸೂಕ್ತ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಿರ್ವಹಣೆಗಾಗಿ ಮೀಸಲಿರುವ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಸ್ಥಳದಲ್ಲೇ ಪರಿಹಾರ: ರೋಗಿಗಳೊಂದಿಗೆ ಸಂಸದ ಯದುವೀರ್ ಒಡೆಯರ್ ಸಮಾಲೋಚನೆ ನಡೆಸಿದಾಗ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ದೂರು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಂಸದ ಯದುವೀರ್ ಒಡೆಯರ್ ಕೂಡಲೇ ಬಿಸಿನೀರಿನ ಡಿಸ್ಪೆನ್ಸರ್ ಅನ್ನು ತಮ್ಮ ವೈಯಕ್ತಿಕ ಹಣದಿಂದ ತರಿಸಿ ರೋಗಿಗಳಿಗೆ ನೀಡಿದರು. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು. ಮಾಜಿ ಶಾಸಕ ಎಲ್.ನಾಗೇಂದ್ರ, ಕೆ.ಆರ್.ಆಸ್ಪತ್ರೆ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ ಸೇರಿ ಅನೇಕರು ಉಪಸ್ಥಿತರಿದ್ದರು.










