ವಿಜಯ ದರ್ಪಣ ನ್ಯೂಸ್…
ಅರಣ್ಯಾಧಿಕಾರಿಗಳ ರೈತ, ದಲಿತ ವಿರೋಧಿ ನೀತಿಯನ್ನು ಖಂಡಿಸಿ ಜೂನ್-29ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

ಶಿಡ್ಲಘಟ್ಟ – ಅರಣ್ಯಾಧಿಕಾರಿಗಳ ರೈತ, ದಲಿತ ವಿರೋಧಿ ನೀತಿಯನ್ನು ಖಂಡಿಸಿ ಇದೇ ಜೂನ್-29ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಸಾಕಷ್ಟು ಕಡೆ ಅರಣ್ಯ ಇಲಾಖೆ
ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಿ ವಿನಾಕಾರಣ ಕಿರುಕುಳ ನೀಡುತ್ತಿದ್ದು ,ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ಸಿಂಗಾಟಕದಿರೇನಹಳ್ಳಿ ಬಳಿ 1995ರಲ್ಲೇ 7 ಮಂದಿ ದಲಿತ ಕುಟುಂಬಗಳಿಗೆ ಸರ್ಕಾರಿ ಜಮೀನು ಮಂಜೂರು ಆಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಅರಣ್ಯ ಇಲಾಖೆಯ ಸೆಟ್ಲಮೆಂಟ್ ಅಧಿಕಾರಿಗಳಿಂದಲೂ 21 ಎಕರೆ ಜಮೀನು 7 ಮಂದಿ ದಲಿತ ಕುಟುಂಬಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದ್ದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ತಮ್ಮ ತಮ್ಮಲ್ಲಿ ಒಮ್ಮತವಿಲ್ಲದೆ ವಿನಾಕಾರಣ ದಲಿತ ರೈತ ಕುಟುಂಬಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಜೂರಾದ ಭೂಮಿ ನಮ್ಮದು ಎಂದು ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಹಿಂದೆ ಇದು ಅರಣ್ಯ ಇಲಾಖೆಗೆ ಸೇರಿಲ್ಲ ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿದರೆ, ಇನ್ನೊಮ್ಮೆ ಇದು ಅರಣ್ಯ ಇಲಾಖೆಗೆ ಸೇರಿದ ಭೂಮಿ ಎನ್ನುತ್ತಾರೆ ,ಅಧಿಕಾರಿಗಳ ಧೋರಣೆ ವಿರೋಧಿಸಿ ಜೂನ್-29ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ದೊಡ್ಡತಿರುಮಳಪ್ಪ, ಸಂಘಟನಾ ಸಂಚಾಲಕ ರಾಜ್ ಕುಮಾರ್, ಡಿ.ಎಂ.ವೆಂಕಟೇಶ್, ಮುನಿಕದರಿಪ್ಪ, ಸದಸ್ಯರಾದ ರಾಮಕೃಷ್ಣಪ್ಪ, ರಾಮದಾಸ್ ಹಾಜರಿದ್ದರು.











