ವಿಜಯ ದರ್ಪಣ ನ್ಯೂಸ್……
ಕೊಡಗು ಪ್ರವಾಸಿಗರ ಸ್ವರ್ಗವೇ ಹೊರತು ನಿಯಮ ಉಲ್ಲಂಘಿಸುವವರ ಆಟದ ಮೈದಾನವಲ್ಲ
ಪ್ರವಾಸೋದ್ಯಮದ ಹೆಸರಿನಲ್ಲಿ ಅಶಿಸ್ತು ಸಹಿಸುವುದಿಲ್ಲ ಡಿಜೆ ಹಾವಳಿ ಮದ್ಯಪಾನ ಚಾಲನೆ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹ

ಕೊಡಗು : ಪ್ರಕೃತಿಯ ಸೌಂದರ್ಯ ಹಚ್ಚಹಸಿರಿನ ಕಾಫಿ ತೋಟಗಳು ಮಂಜಿನ ಬೆಟ್ಟಗಳು ಜಲಪಾತಗಳು ಹಾಗೂ ಕಾವೇರಿ ನದಿಯ ಒಡಲಿನಿಂದ ವಿಶ್ವದ ಗಮನ ಸೆಳೆದಿರುವ ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಸರಿ. ಪ್ರವಾಸೋದ್ಯಮವು ಜಿಲ್ಲೆಯ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ಹೋಟೆಲ್ ಉದ್ಯಮಿಗಳು ಹೋಂಸ್ಟೇ ಮಾಲೀಕರು ಟ್ಯಾಕ್ಸಿ ಚಾಲಕರು ಪ್ರವಾಸಿ ವಾಹನಗಳ ಮಾಲೀಕರು ಸಣ್ಣ ವ್ಯಾಪಾರಿಗಳು ಹಾಗೂ ಸ್ಥಳೀಯ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಬೇಕು ಪ್ರವಾಸೋದ್ಯಮ ಬೆಳೆಯಬೇಕು ಮತ್ತು ಸ್ಥಳೀಯ ಉದ್ಯಮಿಗಳ ಬದುಕು ಸಮೃದ್ಧವಾಗಬೇಕು ಎಂಬುದು ಎಲ್ಲರ ಆಶಯವಾಗಿದೆ.
ಆದರೆ ಪ್ರವಾಸೋದ್ಯಮದ ಬೆಳವಣಿಗೆಯ ಹೆಸರಿನಲ್ಲಿ ಜಿಲ್ಲೆಯ ಸಂಸ್ಕೃತಿ ಪ್ರಕೃತಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗುವ ಘಟನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೊಡಗು ಜನ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಎಂ.ಎಂ. ದಾವೂದ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ಪ್ರವಾಸಿಗರಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಅಪಾಯಕಾರಿ ತಿರುವುಗಳಲ್ಲಿ ಅತಿವೇಗ ಸ್ಥಳೀಯರೊಂದಿಗೆ ಅಸಭ್ಯ ವರ್ತನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗದ್ದಲ ಸೃಷ್ಟಿಸುವಂತಹ ಘಟನೆಗಳ ಕುರಿತು ದೂರುಗಳು ಕೇಳಿಬರುತ್ತಿವೆ. ಕೊಡಗಿನ ರಸ್ತೆಗಳು ಕಿರಿದಾಗಿದ್ದು, ಅನೇಕ ಕಡೆ ಕಡಿದಾದ ಇಳಿಜಾರುಗಳು ಮತ್ತು ಅಪಾಯಕಾರಿ ತಿರುವುಗಳಿವೆ. ಇಂತಹ ಪ್ರದೇಶಗಳಲ್ಲಿ ಅಜಾಗರೂಕ ಚಾಲನೆ ಅಮಾಯಕ ಜನರ ಜೀವಕ್ಕೆ ಅಪಾಯ ತಂದೊಡ್ಡಬಹುದು ಆದ್ದರಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
🚎 ಕೇರಳ ಸೇರಿದಂತೆ ಹೊರರಾಜ್ಯದ ಪ್ರವಾಸಿ ಬಸ್ಗಳ ಡಿಜೆ ಹಾವಳಿಗೆ ಕಡಿವಾಣ ಹಾಕಲಿ
ಹೊರರಾಜ್ಯಗಳಿಂದ ಕೊಡಗಿಗೆ ಆಗಮಿಸುವ ಕೆಲವು ಪ್ರವಾಸಿ ಬಸ್ಗಳಲ್ಲಿ ಅತಿಯಾದ ಶಬ್ದದ ಡಿಜೆ ವ್ಯವಸ್ಥೆ ತೀವ್ರ ಲೇಸರ್ ಲೈಟ್ಗಳು ಹಾಗೂ ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಬೆಳಕಿನ ವ್ಯವಸ್ಥೆಗಳ ಬಳಕೆಯ ಕುರಿತು ದೂರುಗಳು ವ್ಯಕ್ತವಾಗುತ್ತಿವೆ ಇಂತಹ ವಾಹನಗಳ ನಿಯಮಬಾಹಿರ ಉಪಕರಣಗಳ ಬಗ್ಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಶೀಲಿಸಬೇಕು.
ಒಂದು ರಾಜ್ಯದಲ್ಲಿ ವಾಹನ ಸುರಕ್ಷತೆ ಮತ್ತು ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳು ಜಾರಿಯಲ್ಲಿರುವಾಗ ಮತ್ತೊಂದು ರಾಜ್ಯಕ್ಕೆ ಬಂದ ತಕ್ಷಣ ಅವುಗಳನ್ನು ಉಲ್ಲಂಘಿಸಲು ಅವಕಾಶವಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ ದಂಡ ಪಾವತಿಸಿ ಮತ್ತೆ ಅದೇ ತಪ್ಪು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಆರ್ಟಿಒ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ವಿಶೇಷ ತಪಾಸಣೆ ನಡೆಸಿ, ನಿಯಮಬಾಹಿರ ಡಿಜೆ ಉಪಕರಣಗಳು ಹಾಗೂ ಅಪಾಯಕಾರಿ ಬೆಳಕಿನ ವ್ಯವಸ್ಥೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜನ ಅಭಿವೃದ್ಧಿ ಸಮಿತಿ ಆಗ್ರಹಿಸಿದೆ.
ಸ್ವಚ್ಛ ಕೊಡಗು ಕೇವಲ ಘೋಷಣೆಯಾಗಬಾರದು
ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಆಹಾರದ ಪೊಟ್ಟಣಗಳು ಮದ್ಯದ ಬಾಟಲಿಗಳು ಸೇರಿದಂತೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಬರುವವರು ಅದೇ ಪ್ರಕೃತಿಯನ್ನು ಹಾಳುಮಾಡಿ ಹೋಗುವುದು ಸರಿಯಲ್ಲ. ಪ್ರವಾಸಿ ತಾಣಗಳಲ್ಲಿ ಸಮರ್ಪಕ ಕಸದ ನಿರ್ವಹಣೆ ಶೌಚಾಲಯ ಕುಡಿಯುವ ನೀರು ವಾಹನ ನಿಲುಗಡೆ ಮತ್ತು ಮಾಹಿತಿ ಫಲಕಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಕಲ್ಪಿಸಬೇಕು ಪ್ರವಾಸಿಗರೂ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ
ಅಧಿಕಾರಿಗಳ ಜವಾಬ್ದಾರಿ ಏನು?
ಜಿಲ್ಲೆಗೆ ಆಗಮಿಸುವ ಪ್ರವಾಸಿ ವಾಹನಗಳ ಸುರಕ್ಷತಾ ತಪಾಸಣೆ ನಿರಂತರವಾಗಿ ನಡೆಯುತ್ತಿದೆಯೇ? ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಏಕೆ ನಡೆಯಬಾರದು? ನಿಯಮಬಾಹಿರ ಡಿಜೆ ಮತ್ತು ಲೇಸರ್ ಲೈಟ್ಗಳ ಬಳಕೆಗೆ ಶಾಶ್ವತ ಕಡಿವಾಣ ಯಾವಾಗ? ಪ್ರವಾಸಿಗರಿಂದ ಸ್ಥಳೀಯರಿಗೆ ತೊಂದರೆಯಾದಾಗ ತಕ್ಷಣ ಸ್ಪಂದಿಸುವ ವ್ಯವಸ್ಥೆ ಇದೆಯೇ? ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಚಾರ ನಿಯಂತ್ರಣ ಮತ್ತು ಸ್ವಚ್ಛತೆಗೆ ಅಗತ್ಯ ಸಿಬ್ಬಂದಿಯನ್ನು ಏಕೆ ನಿಯೋಜಿಸಬಾರದು? ಎಂಬ ಪ್ರಶ್ನೆಗಳನ್ನು ಕೊಡಗು ಜನ ಅಭಿವೃದ್ಧಿ ಸಮಿತಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಂದಿಟ್ಟಿದೆ.
ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಪ್ರವಾಸೋದ್ಯಮ ಇಲಾಖೆಯ ಸಾಧನೆಯಾಗಬಾರದು. ಪ್ರವಾಸಿಗರ ಸುರಕ್ಷತೆ ಸ್ಥಳೀಯರ ನೆಮ್ಮದಿ ಪರಿಸರ ಸಂರಕ್ಷಣೆ ಮತ್ತು ಉದ್ಯಮಿಗಳ ಬದುಕಿನ ಭದ್ರತೆಗೂ ಸಮಾನ ಆದ್ಯತೆ ನೀಡಬೇಕು. ಘಟನೆ ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಆಡಳಿತ ವ್ಯವಸ್ಥೆ ಅಗತ್ಯವಾಗಿದೆ.
ಕೊಡಗು ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸುವ ನಾಡು ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರೂ ಜಿಲ್ಲೆಯ ಸಂಸ್ಕೃತಿ ಕಾನೂನು ಮತ್ತು ಸ್ಥಳೀಯರ ಗೌರವವನ್ನು ಕಾಪಾಡಬೇಕು ಪ್ರವಾಸೋದ್ಯಮ ಬೆಳೆಯಲಿ ಉದ್ಯಮಿಗಳ ಬದುಕು ಬೆಳಗಲಿ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯಲಿ ಆದರೆ ಪ್ರವಾಸಿಗರ ಅಶಿಸ್ತಿನಿಂದ ಕೊಡಗಿನ ಶಾಂತಿ ಮತ್ತು ನೆಮ್ಮದಿ ಕಳೆದುಹೋಗಬಾರದು.
ಕೊಡಗಿಗೆ ಪ್ರವಾಸಿಗರು ಬರಲಿ ಇಲ್ಲಿನ ಸೌಂದರ್ಯವನ್ನು ಆಸ್ವಾದಿಸಲಿ ಆದರೆ ಕೊಡಗಿನ ನೆಮ್ಮದಿಯನ್ನು ಕಸಿದುಕೊಂಡು ಹೋಗಬಾರದು ಪ್ರವಾಸೋದ್ಯಮದ ನಿಜವಾದ ಹಿತಾಸಕ್ತಿ ಮತ್ತು ಜಿಲ್ಲೆಯ ಗೌರವವನ್ನು ಉಳಿಸುವ ಉದ್ದೇಶದಿಂದ ಈ ಮನವಿಯನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುತ್ತಿದೆ ಎಂದು ಕೊಡಗು ಜನ ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಚಿಕ್ಕಂಡ ಪ್ರಭು ಮಾದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
✍🏽ಎಂ.ಎಂ. ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ
9945375180











