ವಾಲ್ಮಿಕಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಶೀಘ್ರ ಕ್ರಮ: ಸಚಿವ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್….
ವಾಲ್ಮಿಕಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಶೀಘ್ರ ಕ್ರಮ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 25, 2024 : ದೇವನಹಳ್ಳಿ ತಾಲ್ಲೂಕಿನ ಹುರುಳುಗುರ್ಕಿ ಬಳಿ ವಾಲ್ಮೀಕಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಜಾಗ ಗುರ್ತಿಸಲಾಗಿದ್ದು ಜಾಗಕ್ಕೆ ಕಂಪೌಂಡ್ ನಿರ್ಮಾಸಲು ಶಾಸಕರ ನಿಧಿಯಿಂದ 10 ಲಕ್ಷ ರೂ. ಬಿಡುಗಡೆಗೊಳಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.
ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ‘ಶ್ರೀ ಮಹರ್ಷಿ ವಾಲ್ಮೀಕಿ’ರವರ ಜಯಂತ್ಯೋತ್ಸವ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ರವರು ಮಹಾನ್ ವ್ಯಕ್ತಿ, ಕಾಲಜ್ಞಾನಿ. ಅವರು ನಡೆದ ಹಾದಿ ನಮ್ಮೆಲ್ಲರಿಗೂ ಮಾರ್ಗದರ್ಶನ ವಾಗಬೇಕು. ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಎಂದೆಂದಿಗೂ ಸಾರ್ವಕಾಲಿಕ. ಪ್ರತಿಯೊಬ್ಬರೂ ವಾಲ್ಮೀಕಿಯವರ ಆದರ್ಶ ಜೀವನವನ್ನು ತಮ್ಮ ಬದುಕಿನಲ್ಲಿ ರೂಡಿಸಿಕೊಂಡು ನಡೆಯಬೇಕಿದೆ ಎಂದರು.
ನಾನು ಲೋಕಸಭಾ ಸದಸ್ಯನಾಗಿದ್ದಾಗ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ವಾಲ್ಮೀಕಿ ವಸತಿ ಶಾಲೆಗಳನ್ನು ಆರಂಭಿಸಿದೆ. ಇದರಿಂದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ರಾಜ್ಯದ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ. ಹೆಚ್ಚಿನ ಒತ್ತು ನೀಡುತ್ತಿದೆ. ವಾಲ್ಮೀಕಿ ವಸತಿ ಶಾಲೆಗಳು ಆರಂಭಿಸುವ ಮೂಲಕ ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳ ಸರ್ವೋತೋಮುಖ ಅಭಿವೃದ್ಧಿ ಮಾಡುವ ಕನಸು ಕಂಡಿದ್ದೇವೆ.
ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಬಾಲಕಿಯರ ವಸತಿ ಶಾಲೆ ಶೀಘ್ರದಲ್ಲೇ ಆರಂಭಿಸಲಾಗುವುದು. ದೇವನಹಳ್ಳಿ ತಾಲ್ಲೂಕಿನ ಗೋಕರೆ ಬಳಿಯ ವಾಲ್ಮೀಕಿ ಭವನದ ಬಾಕಿ ಉಳಿದಿರುವ ಕಾಮಗಾರಿಗೆ 1 ಕೋಟಿ ರೂಗಳ ಅನುದಾನ ಬೇಕಿದ್ದು, ತಕ್ಷಣ 50 ಲಕ್ಷ ರೂಗಳ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ವಿಜಯಪುರದಲ್ಲಿ ವಾಲ್ಮೀಕಿ ಬಾಲಕಿಯರ ವಸತಿ ಶಾಲೆ ನಿರ್ಮಿಸಲು, ವಾಲ್ಮೀಕಿ ಸಂಶೋಧನಾ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಶೀಘ್ರದಲ್ಲೇ ಅನುದಾನವನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ ಹಾಗೂ ಸಮಾಜಕ್ಕೆ ಕೊಡುಗೆ ಕುರಿತು ವಿಶೇಷ ಉಪನ್ಯಾಸವನ್ನು ತಿಮ್ಮೇಶ ಪ್ರಭು ಅವರು ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನದ ವರೆಗೆ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಮೆರವಣಿಗೆ ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿ. ಶಾಂತಕುಮಾರ್, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ , ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ದೇವನಹಳ್ಳಿ ತಾಲೂಕು ಸಮುದಾಯದ ಅಧ್ಯಕ್ಷ ಜಿ.ನಾಗೇಶ್ ಬಾಬು ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಮುದಾಯದ ವಿವಿಧ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.
&&&&&&&&&&&&&&&&&&&&&&&&
ಪ್ರಧಾನ ಮಂತ್ರಿಗಳ ಸೃಜನ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್. 25, :- ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿಗಳ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ)ಯಡಿ ನಿರುದ್ಯೋಗ ಯುವಕ-ಯುವತಿಯರಿಗೆ ಆರ್ಥಿಕ ಸಾಲ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
18 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು /ಪ.ಜಾ, ಪ.ಪಂ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು ಅರ್ಜಿ ಸಲ್ಲಿಸಬಹುದು. ವಿವಿಧ ಹಣಕಾಸು ಸಂಸ್ಥೆಗಳು (ಬ್ಯಾಂಕುಗಳ) ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಯಾವುದೇ ಆದಾಯದ ಮಿತಿ ಇರುವುದಿಲ್ಲ.
ಅಸಕ್ತಿ ಹೊಂದಿರುವ ಉದ್ಯಮಶೀಲರು www.kviconline.gov.in ವೆಬ್ ಸೈಟ್ ನಲ್ಲಿ kvib ಏಜೆನ್ಸಿ ಲಾಗಿನ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಕಛೇರಿ ದೂರವಾಣಿ ಸಂಖ್ಯೆ. 9480825612 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.