ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ ಯೂನಿಟ್ ಘಟಕ ಸ್ಥಾಪನೆಗೆ ಗ್ರಾಮ ಪಂಚಾಯಿತಿಯಿಂದ ಪರವಾನಗಿ ನೀಡಬಾರದೆಂದು ಮನವಿ

ವಿಜಯ ದರ್ಪಣ ನ್ಯೂಸ್……

ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ ಯೂನಿಟ್ ಘಟಕ ಸ್ಥಾಪನೆಗೆ ಗ್ರಾಮ ಪಂಚಾಯಿತಿಯಿಂದ ಪರವಾನಗಿ ನೀಡಬಾರದೆಂದು ಮನವಿ

ಶಿಡ್ಲಘಟ್ಟ : ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಪುರಬೈರೇನಹಳ್ಳಿ ಬಳಿ ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ ಯೂನಿಟ್ ಘಟಕ ಸ್ಥಾಪನೆಗೆ ಸರ್ಕಾರದ ವಿವಿಧ ಇಲಾಖೆಗಳು ಅನುಮತಿ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ಯಾವುದೆ ರೀತಿಯ ಪರವಾನಗಿ ನೀಡಬಾರದು ಎಂದು ಪುರಬೈರೇನಹಳ್ಳಿ ಸುತ್ತ ಮುತ್ತಲ ಗ್ರಾಮಸ್ಥರು ದಿಬ್ಬೂರಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಬೈರೇನಹಳ್ಳಿ ಬಳಿ ಸರ್ಕಾರಿ ಜಮೀನಿನಲ್ಲಿ ಈಗಾಗಲೇ ಸಾಂಪ್ರದಾಯಿಕವಾಗಿ ಕಲ್ಲು ತೆಗೆಯುತ್ತಿರುವ ಕಲ್ಲು ಕುಟುಕರು ಪಂಚಾಯಿತಿಗೆ ಆಗಮಿಸಿ ಪಿಡಿಒ ರಮೇಶ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಮನವಿ ಸಲ್ಲಿಸಲು ಆಗಮಿಸಿದ್ದ ಕಲ್ಲು ಕುಟುಕರ ಪರವಾಗಿ ಮುಖಂಡರಾದ ಡಿ.ಎಸ್.ಎನ್. ರಾಜು ಮಾತನಾಡಿ , ಪುರಬೈರೇನಹಳ್ಳಿಯ ಸರ್ಕಾರಿ ಗೋಮಾಳದಲ್ಲಿ ಐವತ್ತು ಅರವತ್ತು ವರ್ಷಗಳಿಂದಲೂ ಅನೇಕರು ಸಾಂಪ್ರದಾಯಿಕವಾಗಿ ಕಲ್ಲು ಹೊಡೆದು ಮಾರಾಟ ಮಾಡಿ ಬದುಕನ್ನು ಕಟ್ಟಿಕೊಂಡಿದ್ದಾರೆ,ಆದರೆ ಇದೀಗ ಉದ್ಯಮಿ ಡಿ.ಗೋವಿಂದರಾಜು ಎನ್ನುವವರು ಗ್ರಾನೈಟ್ ಕಟ್ಟಿಂಗ್ ಮತ್ತು ಕ್ರಷರ್ ಆರಂಭಿಸಲು ಸರ್ಕಾರದ ನಾನಾ ಇಲಾಖೆಗಳ ಅನುಮತಿ ಪಡೆದು ಇದೀಗ ಗ್ರಾಮ ಪಂಚಾಯಿತಿಗೆ ಪರವಾನಗಿ ನೀಡಲು ಮತ್ತು ಪರಿವರ್ತಿತ ಜಮೀನಿಗೆ ಇ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು, ನೀಡದಿರಲು ಮನವಿ ಮಾಡಿದರು.

ಇದುವರೆಗೂ ಕ್ಷೇತ್ರದಲ್ಲಿ ಶಾಸಕರಾಗಿದ್ದ ವಿ.ಮುನಿಯಪ್ಪ, ಎಸ್.ಮುನಿಶಾಮಪ್ಪ, ಎಂ.ರಾಜಣ್ಣ ಹಾಗು ಈಗಿನ ಶಾಸಕರಾದ ಬಿ.ಎನ್.ರವಿಕುಮಾರ್ ಕೂಡ ಕ್ರಷರ್, ಕಲ್ಲು ಗಣಿಗಾರಿಕೆಗೆ ವಿರೋಧವಿದ್ದು ರೈತರ ಪರವಾಗಿಯೆ ಧ್ವನಿ ಎತ್ತಿದ್ದಾರೆ ಎಂದರು.

ಆದರೆ ಗ್ರಾಮ ಪಂಚಾಯಿತಿಯಲ್ಲಿನ ಜನಪ್ರತಿನಿಧಿಗಳು ಮಾತ್ರ ಇಲ್ಲಿನ ರೈತರು ಹಾಗೂ ಸಾಂಪ್ರದಾಯಿಕ ಕಲ್ಲು ಕುಟುಕರ ಹಿತ ಮರೆತು ಕೇವಲ ಪಂಚಾಯಿತಿಗೆ ಆದಾಯ ಬರುತ್ತದೆ ಎನ್ನುವ ಕಾರಣಕ್ಕೆ ಕ್ರಷರ್ ಮತ್ತು ಗ್ರಾನೈಟ್ ಕಟ್ಟಿಂಗ್ ಪ್ರೊಸೆಸ್ ಯೂನಿಟ್ ಆರಂಭಕ್ಕೆ ಪರವಾನಗಿ ನೀಡಲು ಹೊರಟಿರುವುದು ಸರಿಯಲ್ಲ ರೈತರು, ಕಲ್ಲು ಕುಟುಕರ ಹಿತದಷ್ಟಿಯಿಂದ ಪರವಾನಗಿ ನೀಡಬಾರದು ಎಂದು ಅವರು ತಾಕೀತು ಮಾಡಿದರು.

ಈ ವೇಳೆ ಅಹವಾಲು ಆಲಿಸಿದ ಪಿಡಿಒ ರಮೇಶ್ ಅವರು, ಡಿ.ಗೋವಿಂದರಾಜು ಎನ್ನುವವರು ಪುಬೈರೇನಹಳ್ಳಿ ಸರ್ವೆ ನಂಬ‌ರ್ 43ರಲ್ಲಿ 2 ಎಕರೆಯನ್ನು ಕಾರ್ಖಾನೆ ಆರಂಭ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿದ್ದು ಅದಕ್ಕೆ ಇ ಖಾತೆ ಮಡಿಕೊಡುವಂತೆ ಮತ್ತು ಸರ್ವೆ ನಂಬರ್ 45ರಲ್ಲಿ ಭೂ ಪರಿವಗರ್ತನೆಗೊಂಡ 1 ಎಕರೆ 30 ಗುಂಟೆಯಲ್ಲಿ ಗ್ರಾನೈಟ್ ಕಟ್ಟಿಂಗ್ ಅಂಡ್ ಪ್ರೊಸ್ಸೆಸ್ಸಿಂಗ್ ಯೂನಿಟ್ ಆರಂಭಿಸಲು ಸಾಮಾನ್ಯ ಪರವಾನಗಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಸಾಂಪ್ರದಾಯಿಕ ಕಲ್ಲು ಕುಟುಕ,ಈ ವಿಷಯವನ್ನು ಗ್ರಾಮ ಸಭೆಯಲ್ಲಿ ಮಂಡಿಸಿದ್ದು 8 ಮಂದಿ ಸದಸ್ಯರು ಪರವಾನಗಿ ನೀಡಲು ಮತ್ತು ಇ ಖಾತೆ ಮಾಡಲು ಒಮ್ಮತ ಸೂಚಿಸಿದ್ದು ಇನ್ನುಳಿದ 6 ಮಂದಿ ವಿರೋಧ ವ್ಯಕ್ತಪಡಿಸಿದರು ಬಹುಮತದ ಆಧಾರದಲ್ಲಿ ಡಿ.ಗೋವಿಂದರಾಜು ನೀಡಿದ ಅರ್ಜಿಯನ್ನು ಪುರಸ್ಕರಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಒಂದು ಅರ್ಜಿಯನ್ನು ಪರಿಶೀಲಿಸಿ ಕಾನೂನು ಬದ್ದವಾಗಿದ್ದರೆ ಪುರಸ್ಕರಿಸಬೇಕು ಇಲ್ಲವೇ ಸೂಕ್ತ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಬೇಕು. ಈ ಎರಡು ಅಂಶಗಳಷ್ಟೆ ನಮ್ಮ ಸಭೆಯ ಮುಂದಿದ್ದ ಆಯ್ಕೆಗಳಾಗಿತ್ತು ಎಂದು ವಿವರಿಸಿದರು.

ಕೊಂಡಪ್ಪಗಾರಹಳ್ಳಿ ವಿಜಯ ಕುಮಾರ್ ಮಾತನಾಡಿ
ನಾವು ನಮ್ಮಪ್ಪ ತಾತನ ಕಾಲದಿಂದಲೂ ಪುರಬೈರೇನಹಳ್ಳಿಯಲ್ಲಿ ಕಲ್ಲು ಹೊಡೆದು ಅದರಿಂದ ಬರುವ ಕೂಲಿ ಹಣದಿಂದ ಬದುಕನ್ನು ಕಟ್ಟಿಕೊಂಡಿದ್ದೇವೆ ನಾವು ಓದಿಲ್ಲ ಕಲ್ಲು ಹೊಡೆಯುವುದು ಬಿಟ್ಟು ಬೇರೇನೂ ಕೆಲಸ ಗೊತ್ತಿಲ್ಲ. ಆದರೆ ಇದೀಗ ಇಲ್ಲಿ ಗ್ರಾನೈಟ್ ಕಟ್ಟಿಂಗ್ ಯೂನಿಟ್ ಕ್ರಷರ್ ಗಳು ಬಂದರೆ ನಮಗೆ ತೊಂದರೆ ಆಗಲಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಡಿ.ಪಿ.ನಾಗರಾಜ್ ಮಾತನಾಡಿ, ಪುರಬೈರೇನಹಳ್ಳಿ ಬಳಿ ಐವತ್ತು ಅರವತ್ತು ವರ್ಷಗಳಿಂದಲೂ ಅನೇಕ ಮಂದಿ ಕಲ್ಲು ಹೊಡೆದು ಜೀವನ ಸಾಗಿಸುತ್ತಿದ್ದಾರೆ. ಅನುಮತಿಯನ್ನು ಪಡೆದುಕೊಂಡಿಲ್ಲ ಸರಕಾರಕ್ಕಾಗಲಿ, ಪಂಚಾಯಿತಿಗಾಗಲಿ ಒಂದೇ ಒಂದು ಪೈಸೆ ಆದಾಯವಿಲ್ಲ ಎಂದರು.

ಹಿರಿಯ ಸದಸ್ಯ ಡಾ.ಧನಂಜಯರೆಡ್ಡಿ ಮಾತನಾಡಿ, ಸಭೆಯಲ್ಲಿ ನಾವು 6 ಮಂದಿ ಸದಸ್ಯರು ಸ್ಥಳೀಯರ ಹಾಗೂ ಪರಿಸರದ ಹಿತ ದೃಷ್ಟಿಯಿಂದ ಗಾನೈಟ್ ಕಟ್ಟಿಂಗ್ ಯೂನಿಟ್ ಪರವಾನಗಿ ನೀಡಲು ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ ಆದರೂ ಬಹುಮತ ಇದ್ದ ಕಾರಣ ಗ್ರಾನೈಟ್ ಪ್ರೊಸೆಸ್ಸಿಂಗ್ ಯೂನಿಟ್ ಪರವಾನಗಿ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಸಭೆಯಲ್ಲಿನ ವಿವರ ತಿಳಿಸಿದರು.

ಚರ್ಚೆ, ವಾದ ವಿವಾದಗಳ ನಂತರ ಅಂತಿಮವಾಗಿ, ಸಾರ್ವಜನಿಕರು ಮನವಿ ಮೇರೆಗೆ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ಇ – ಖಾತೆ ಮಾಡಿಕೊಡುವುದು ಮತ್ತು ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ಸಿಂಗ್ ಯೂನಿಟ್ ಪರವಾನಗಿ ನೀಡುವ ತೀರ್ಮಾನವನ್ನು ಮರು ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.