ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಗ್ರಹಣ: ಬಣಗಳ ರಾಜಕೀಯ ಗುದ್ದಾಟ
ವಿಜಯ ದರ್ಪಣ ನ್ಯೂಸ್…
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಗ್ರಹಣ: ಬಣಗಳ ರಾಜಕೀಯ ಗುದ್ದಾಟ
ಶಿಡ್ಲಘಟ್ಟ : ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಗ್ರಹಣ ಹಿಡಿದಿದ್ದು ಆರಂಭವಾದ ಸಭೆ ಹತ್ತೇ ನಿಮಿಷಕ್ಕೆ ದಿಢೀರ್ ರದ್ದಾಗಿ ಸಮಿತಿ ಸದಸ್ಯರು ವಾಪಸ್ಸಾದ್ದರಿಂದ ಕಾಂಗ್ರೆಸ್ ನ ಎರಡು ಬಣಗಳ ರಾಜಕೀಯ ಗುದ್ದಾಟ ತಾರಕಕ್ಕೇರಿದೆ.
ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಮೊದಲ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಚರ್ಚೆ ಆರಂಭವಾದ ಹತ್ತೇ ನಿಮಿಷಕ್ಕೆ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯತಿ ಇಒ ಆರ್.ಹೇಮಾವತಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಭೆಯನ್ನು ರದ್ದುಗೊಳಿಸಿದರು.
ಸಮಿತಿಯ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಡಿಸಿ, ಸಿಇಒ ಹಾಗೂ ಸಚಿವ ಎಚ್.ಎಂ.ರೇವಣ್ಣ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಭೆ ಆರಂಭವಾಗಿದೆ ,ಸಮಿತಿಯ ಎಲ್ಲಾ ಸದಸ್ಯರು ಆಗಮಿಸಿದ್ದು ಏಕಾಏಕಿ ಸಭೆ ರದ್ದುಪಡಿಸಿದರೆ ಹೇಗೆ? ಸಭೆ ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುವ ಪ್ರಯತ್ನ ನಡೆಸಿದರೂ ಉಪಯೋಗವಾಗಲಿಲ್ಲ , ಸಮಿತಿಯ ಮೊದಲ ಸಭೆಗೆ ಆರಂಭದಲ್ಲಿಯೇ ವಿಘ್ನ ಎದುರಾದ ಘಟನೆ ಎರಡು ಬಣಗಳ ಮುಸುಕಿನ ಗುದ್ದಾಟವು ಯಾವ ಹಂತಕ್ಕೆ ತಲಪುವುದು ಕಾದು ನೋಡಬೇಕು.
ಈ ವೇಳೆ ಪ್ರತಿಭಟನೆ ನಡೆಸಲು ಮುಂದಾದ ಐಎನ್‌ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಜಯ್ಯದ್ ಅಪ್ನಾನ್, ಮುಖಂಡರಾದ ನಾಗನರಸಿಂಹ,ಕೆ.ನಾರಾಯಣಸ್ವಾಮಿ,ದೇವರಮಳ್ಳೂರು ರವಿ, ಮುತ್ತೂರುವೆಂಕಟೇಶ್, ಆನೂರು ರವಿ, ಚಲಪತಿ ಮತ್ತಿತರರನನ್ನು ಪೊಲೀಸರು ವಶಕ್ಕೆ ಪಡೆದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ದರಖಾಸ್ತು ಸಮಿತಿ, ಆರೋಗ್ಯ ರಕ್ಷಾ ಸಮಿತಿ, ಆರಾಧನಾ ಸಮಿತಿ ಸೇರಿ 12ಕ್ಕೂ ಹೆಚ್ಚು ಸಮಿತಿಗಳಿಗೆ ರಾಜೀವ್‌ಗೌಡ ಮತ್ತು ಆಂಜಿನಪ್ಪ (ಪುಟ್ಟು) ಇಬ್ಬರು ಕೂಡ ಪ್ರತ್ಯೇಕ ಪಟ್ಟಿ ಸಲ್ಲಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಆಂಜಿನಪ್ಪ(ಪುಟ್ಟು) ಬಣ ನೀಡಿದ ಪಟ್ಟಿಗೆ ಅನುಮೋದನೆ ಕೊಡಿಸಿದ್ದರು,ಇದರಿಂದ ಕುಪಿತಗೊಂಡ ಮುಖಂಡ ರಾಜೀವ್ ಗೌಡ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಕೂತು ಡಾ.ಎಂ.ಸಿ.ಸುಧಾಕರ್ ಏಕಪಪಕ್ಷೀಯವಾಗಿ ಅಂತಿಮಗೊಳಿಸಿದ್ದ ಎಲ್ಲಾ ಸಮಿತಿಗಳ ನೇಮಕಾತಿ ರದ್ದುಪಡಿಸಿ ಹೊಸ ಸಮಿತಿ ಪಟ್ಟಿ ಆಯಾ ಸಚಿವಾಲಯಕ್ಕೆ ಕಳುಹಿಸಿ ಅಂತಿಮಗೊಳಿಸಿ ಆದೇಶಿಸುವಂತೆ ಮನವಿ ಮಾಡಿದ್ದರು.
ಈ ಮಧ್ಯೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮೊದಲ ಸಭೆ ರದ್ದುಪಡಿಸುವಂತೆ ಸಂಬಂಧಿಸಿದ ಸಚಿವರ ಮೂಲಕ ಡಿಸಿಗೆ ಸೂಚಿಸಿ ಸಭೆ ರದ್ದುಪಡಿಸುವಲ್ಲಿ ರಾಜೀವ್‌ಗೌಡ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಸಭೆ ನಡೆಯುತ್ತಿರುವುದನ್ನು ತಿಳಿದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆಂಬಲಿಗರು ತಾಲ್ಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಜಮಾಯಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರಿಲ್ಲ ಜೆಡಿಎಸ್ ಹಾಗು ಬಿಜೆಪಿಯಿಂದ ವಲಸೆ ಬಂದವರಿಗೆ ಸಮಿತಿಯಲ್ಲಿ ಅವಕಾಶ ನೀಡಿದ್ದು, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದು, ಅವರು ಹೊಸ ಸಮಿತಿ ರಚನೆಗೆ ಸಂಬಂಧಿಸಿದ ಸಚಿವರಿಗೆ ಶಿಫಾರಸು ಮಾಡಿದ್ದಾರೆ ,ಶೀಘ್ರದಲ್ಲೇ ಹೊಸ ಸಮಿತಿ ರಚನೆಯಾಗಲಿದ್ದು ಅದುವರೆಗೂ ಈ ಸಮಿತಿಯ ಸಭೆ ನಡೆಸಬೇಡಿ ಎಂದು ಪ್ರತಿಭಟನೆ ನಡೆಸಿ, ಸಮಿತಿ ಸಭೆ ನಡೆಸದಂತೆ ಪಟ್ಟು ಹಿಡಿದರು.
ಇದೇ ವೇಳೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಆರಂಭವಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ವಿರೋಧಿಸಿ ರಾಜೀವ್ ಗೌಡ ಬಣದ ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ತಾಲ್ಲೂಕು ಪಂಚಾಯತಿ ಇಒ ಹೇಮಾವತಿ ಅವರಿಗೆ ಮನವಿ ಸಲ್ಲಿಸಿದರು.