ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು……

ವಿಜಯ ದರ್ಪಣ ನ್ಯೂಸ್….

ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು……

ಭಾರತದ ವಿದೇಶ ( ಫಾರಿನ್ ) ಗೋವಾ,

ಕಡಲ ತೀರದ ಪರ್ಯಾಯ ದ್ವೀಪ ಗೋವಾ,
ಮೋಜು,

ಮಸ್ತಿ, ಮನರಂಜನೆ, ಕ್ಯಾಸಿನೋಗಳ ಪ್ರದೇಶ ಗೋವಾ,

ದೇಶದ ಅತ್ಯಂತ ದುಬಾರಿ ಬೆಲೆಯ ಪ್ರವಾಸಿ ಕೇಂದ್ರ ಗೋವಾ,

ಭ್ರಷ್ಟ, ದುಷ್ಟ ದುಡ್ಡಿನ ಪ್ರದರ್ಶನದ ಮಜಾ ನಗರಿ ಗೋವಾ,

ಪ್ರವಾಸಿಗರ ರಜಾ ದಿನಗಳ ಸುಂದರ ತಾಣ ಗೋವಾ,

ಭಾರತದ ಸುರಕ್ಷತೆಯ, ಸ್ವಚ್ಛ ನಗರಗಳಲ್ಲಿ ಒಂದು ಗೋವಾ,

ಪೋರ್ಚುಗೀಸರಿಂದ ಸುಮಾರು 500 ವರ್ಷಗಳಷ್ಟು ದೀರ್ಘಕಾಲದವರೆಗೆ ಆಡಳಿತಕ್ಕೊಳಪಟ್ಟ ಮತ್ತು ಈಗಲೂ ಅದರ ಕುರುಹುಗಳ ಸಂಕೇತವಾಗಿ ಉಳಿದಿರುವ ಹೆರಿಟೇಜ್ ಸಿಟಿ ಗೋವಾ,

ಸಮುದ್ರದ ಜಲಚರಗಳ ಖಾದ್ಯದ, ಮದ್ಯಗಳ ಪಾನಪ್ರಿಯರ ಸ್ವರ್ಗ ಗೋವಾ,

ಸಿನಿಮಾ, ಸಾಹಿತ್ಯ, ಸಂಗೀತ ಮುಂತಾದ ಲಲಿತಕಲೆಗಳ ಉತ್ಸವದ ನಗರ ಗೋವಾ.

ಇಂತಹ ಗೋವಾದಲ್ಲಿ ಅಂತರಾಷ್ಟ್ರೀಯ ದಿವ್ಯಾಂಗ ಚೇತನರ ಮೂರನೇ ಅಂತರಾಷ್ಟ್ರೀಯ ಸಮ್ಮೇಳನ ಇದೇ ಅಕ್ಟೋಬರ್ ಒಂಬತ್ತರಿಂದ ಹನ್ನೆರಡರವರೆಗೆ ( 9th to 12th ) ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಸಭಾಂಗಣದಲ್ಲಿ ನಡೆಯಿತು. ಸಂಘಟಕರೇ ನೀಡಿದ ಮಾಹಿತಿಯಂತೆ 15 ಸಾವಿರಕ್ಕೂ ಹೆಚ್ಚು ಜನ ಅಧಿಕೃತವಾಗಿಯೇ ನೋಂದಾಯಿಸಿಕೊಂಡಿದ್ದರು. ಈ ನಾಲ್ಕು ದಿನಗಳಲ್ಲಿ ಸ್ಥಳೀಯರೂ ಸೇರಿದಂತೆ ಅದಕ್ಕಿಂತಲೂ ಹೆಚ್ಚು ಜನ ಅದರಲ್ಲಿ ಭಾಗವಹಿಸಿದ್ದರು.

ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಕೇಂದ್ರ ಸಚಿವರಾದ ಶ್ರೀ ರಾಮದಾಸ್ ಅಠಾವಳೆ, ಶ್ರೀ ಶ್ರೀಪಾದ ನಾಯಕ್, ಗೋವಾ ಸರ್ಕಾರದ ಸಚಿವ ಸಂಪುಟದ ಕೆಲವು ಸದಸ್ಯರು ಈ ಕಾರ್ಯಕ್ರಮದ ಉದ್ಘಾಟನಾ ಸಮಯದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಶ್ವಸಂಸ್ಥೆಯ ದಿವ್ಯಾಂಗ ಚೇತನರ ವಿಭಾಗ, ಭಾರತ ಸರ್ಕಾರ, ಗೋವಾ ಸರ್ಕಾರ ಹಾಗೂ ಕೇಂದ್ರ ವಿಶೇಷ ಚೇತನರ ಇಲಾಖೆಯ ಪ್ರಾಯೋಜಕತ್ವದಲ್ಲಿ ಆ ಇಲಾಖೆಗಳ ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮ ಸಂಯೋಜಿಸಿದ್ದರು.

ಕಾರ್ಯಕ್ರಮ ಪ್ರತಿ ವರ್ಷ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುವ ಆ ಜಾಗದಲ್ಲಿಯೇ ನಡೆಯಿತು. ಕಾರ್ಯಕ್ರಮಗಳಂತೂ ವೈವಿಧ್ಯಮಯವಾಗಿದ್ದವು. ಇದು ದಿವ್ಯಾಂಗ ಚೇತನರಿಗೆ ಸಂಬಂಧಪಟ್ಟದ್ದಾಗಿದ್ದರಿಂದ ಅತಿ ಹೆಚ್ಚು ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿತ್ತು. ಬಹುತೇಕ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದವು.

ದಿವ್ಯಾಂಗ ಚೇತನರಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ನಾಲ್ಕು ದಿನಗಳ ಕಾಲ ಅದಕ್ಕೆ ಸಂಬಂಧಪಟ್ಟ ವಿಷಯ ತಜ್ಞರೊಂದಿಗೆ ನಿರಂತರ ಚರ್ಚೆ, ಸಂವಾದ, ಉಪನ್ಯಾಸ ಕಾರ್ಯಕ್ರಮಗಳು ನಡೆದವು. ದಿವ್ಯಾಂಗ ಚೇತನರಿಗೆ ಅಗತ್ಯವಿರುವ ಅತ್ಯುತ್ತಮ ಮತ್ತು ಆಧುನಿಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು‌

ದಿವ್ಯಾಂಗರಿಗೆ ಬೇಕಾದ ಅನೇಕ ವಸ್ತುಗಳ ಪ್ರದರ್ಶನ ಮಳಿಗೆಗಳು ಅಲ್ಲಿದ್ದವು. ಸುಮಾರು ಮೂರು ಜಾಗದಲ್ಲಿ ನಿರಂತರವಾಗಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಿನಿಮಾ ಮತ್ತು ವಿವಿಧ ನೃತ್ಯಗಳನ್ನು, ದಿವ್ಯಾಂಗರಿಗಾಗಿಯೇ ಲಲಿತ ಕಲೆಗಳ ಕಲಿಕಾ ಕೇಂದ್ರಗಳು ಇದ್ದವು.

ಕೊನೆಯ ದಿನ ಭಾಗವಹಿಸಿದ ಎಲ್ಲರಿಗೂ ಸಾಹಸ ಕ್ರೀಡೆಗಳಾದ ಬೋಟಿಂಗ್, ಮ್ಯಾರಥಾನ್, ವಾಕ್ಥಾನ್, ಮಜಾ ರನ್ ಮುಂತಾದ ಕ್ರೀಡಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಬಗ್ಗೆ ಸಂಪೂರ್ಣವಾಗಿ ಲೇಖನಗಳ ಸರಣಿಯನ್ನು ಬರೆಯುವ ಆಸಕ್ತಿ ಹೊಂದಿದ್ದೇನೆ. ಆ ಅಧ್ಯಯನಕ್ಕಾಗಿಯೇ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ದಿವ್ಯಾಂಗ ಚೇತನರ ವಿವಿಧ ಸಮಸ್ಯೆಗಳ ಜೊತೆಗೆ, ಸರ್ಕಾರದ ಗಮನ ಸೆಳೆಯಲು ದಿವ್ಯಾಂಗ ಚೇತನರಿಗೆ ದೊರೆಯಬೇಕಾದ ಸೌಕರ್ಯಗಳನ್ನು ಕುರಿತು ಒಂದು ವರದಿಯನ್ನು ತಯಾರಿಸುವ ಆಸಕ್ತಿ ಹೊಂದಿದ್ದೇನೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿ ನನ್ನೆಲ್ಲಾ ಖರ್ಚು ವೆಚ್ಚಗಳನ್ನು ನಿಭಾಯಿಸಿ, ಅತ್ಯುತ್ತಮ ಆತಿಥ್ಯ ನೀಡಿದ ಶ್ರೀ ವಿಕ್ಟರಿ ವೀರೇಶ್ ಅವರನ್ನು ಇದಕ್ಕಾಗಿ ಸ್ಮರಿಸುತ್ತಾ ಅವರಿಗೆ ಧನ್ಯವಾದಗಳು ಅರ್ಪಿಸುತ್ತಾ,

ಮಾನವೀಯ ಮೌಲ್ಯಗಳ ಪುನರುತ್ಥಾನದ ಮನಸ್ಸುಗಳ ಅಂತರಂಗದ ಚಳವಳಿಯ ಹಾದಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ದಿನನಿತ್ಯದ ಬರಹಗಳು, ರಾಜ್ಯದಾದ್ಯಂತ 385 ದಿನಗಳ, 11500 ಕಿಲೋಮೀಟರ್ಗಳ ಪಾದಯಾತ್ರೆ, ಅದರ ಜೊತೆಗೆ ನಿರಂತರವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ನಡೆಸುತ್ತಿರುವ ಚರ್ಚೆ, ಸಂವಾದ, ಉಪನ್ಯಾಸ ಕಾರ್ಯಕ್ರಮಗಳು, ಅಸ್ಪೃಶ್ಯತಾ ಮುಕ್ತ ಸಮಾಜ ನಿರ್ಮಿಸಲು ಕೋಲಾರದ ಶ್ರೀ ಅರಿವು ಶಿವಪ್ಪನವರ ಅರಿವು ಸಂಸ್ಥೆಯೊಂದಿಗೆ
” ಸಮತೆಯ ಟೀ ”
” ಗೃಹಪ್ರವೇಶ ”
” ಸಹಭೋಜನ ”
” ಅಸ್ಪೃಶ್ಯತೆ ಮುಕ್ತ ಮನೆಯ ಘೋಷಣೆ ” ಮುಂತಾದ ಕಾರ್ಯಕ್ರಮಗಳಲ್ಲಿ ಸಮಯಾವಕಾಶವಾದಾಗಲೆಲ್ಲಾ ಮಾಡುತ್ತಿರುತ್ತೇವೆ.

ಹಾಗೆಯೇ ರಾಜ್ಯದಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು
ಎಂ. ಯುವರಾಜ್ ಅವರ ಆಹಾರ ಸುರಕ್ಷತಾ ಅಭಿಯಾನ ಸಂಸ್ಥೆಯೊಂದಿಗೆ ” ಆಹಾರ ನೀತಿ ಸಂಹಿತೆ ” ರಚಿಸಲು ಒತ್ತಡ ಹೇರಿ ನಿರಂತರವಾಗಿ ಯೋಜನೆಗಳನ್ನು ರೂಪಿಸುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಜೊತೆಗೆ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯು ಸೇರಿ ಅನೇಕ ಸಂಸ್ಥೆಗಳೊಂದಿಗೆ ಸಮಾಜ ಸೇವೆ, ಪರಿಸರ ಜಾಗೃತಿ, ಗಿಡ ನೆಡುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ.

ಹಾಗೆಯೇ ಭ್ರಷ್ಟಾಚಾರದ ವಿರುದ್ಧ ನಡೆಯುವ ಅನೇಕ ಹೋರಾಟಗಳು, ಮೌಢ್ಯ, ಅಜ್ಞಾನದ ವಿರುದ್ಧ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಅಖಿಲ ಕರ್ನಾಟಕ ವೈಜ್ಞಾನಿಕ ವಿಚಾರವಾದಿಗಳ ವೇದಿಕೆ ನಡೆಸುವ ಚಳವಳಿಗಳಿಗೂ, ಗ್ರಹಣದ ಸಮಯದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳಲ್ಲೂ ನಿರಂತರವಾಗಿ ಭಾಗವಹಿಸುತ್ತಾ ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ನಡೆಯುತ್ತಿದ್ದೇವೆ.

ಕನ್ನಡ ಭಾಷಾ ಚಳುವಳಿಗಳಲ್ಲಿ, ಆಹಾರ ಕಲಬೆರಕೆ ತಡೆಯುವ ನಿಟ್ಟಿನಲ್ಲಿ, ಸಹಜ ಕೃಷಿ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ, ಸಾಹಿತ್ಯ ಚಟುವಟಿಕೆಗಳಲ್ಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರಗಳಲ್ಲಿ ಆಗಾಗ ಭಾಗವಹಿಸುತ್ತಿರುತ್ತೇವೆ.

ಹೀಗೆ ಬದುಕಿನ ಸಮಯವನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ಕಳೆಯುತ್ತಾ, ಮಾನವೀಯ ಮೌಲ್ಯಗಳ ಪುನರುಜ್ಜೀಕರಣದ ಆಶಯದಲ್ಲಿ ನಿರಂತರ ಪ್ರಯತ್ನದಲ್ಲಿ ನಾವು ನೀವು ಅವರು ಇವರು ಮತ್ತು ಎಲ್ಲಾ ಪ್ರಬುದ್ಧ ಮನಸ್ಸುಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……