ಪರಂಪರಾಗತ ಕೃಷಿ ವಿಕಾಸ ಯೋಜನೆ: ಸಾವಯವ ಕೃಷಿಗೆ ಆದ್ಯತೆ
ವಿಜಯ ದರ್ಪಣ ನ್ಯೂಸ್….
ಪರಂಪರಾಗತ ಕೃಷಿ ವಿಕಾಸ ಯೋಜನೆ: ಸಾವಯವ ಕೃಷಿಗೆ ಆದ್ಯತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಟಾನ
ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂದು ಅನಾದಿಕಾಲದಿಂದಲೂ ನಾವೆಲ್ಲರು ಹೇಳಿಕೊಂಡು ಬರುತ್ತಾ ಇದ್ದೇವೆ. ತಂತ್ರಜ್ಞಾನ, ಆಧುನಿಕತೆ ಬೆಳೆದಂತೆಲ್ಲ ಕೃಷಿಯಲ್ಲಿ ಯಂತ್ರೋಪಕರಣಗಳು, ರಾಸಾಯಿನಿಕ ರಸಗೊಬ್ಬರ, ಕೀಟನಾಶಕಗಳು ಯೆತೇಚ್ಚವಾಗಿ ಬಳಕೆಯಾಗುತ್ತಿದೆ. ತರಕಾರಿ, ಹಣ್ಣು ಹಂಪಲುಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ಹಿಂದೆ ಇದ್ದ ಸಾಂಪ್ರದಾಯಿಕ ಕೃಷಿ ಪದ್ದತಿ ಮರೆಮಾಚಿದೆ.
ಹೀಗಾಗಿ ರೈತರು ಕೃಷಿಯಲ್ಲಿ ಸಾಂಪ್ರದಾಯಿಕ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರವು ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ 2025-26 ನೇ ಸಾಲಿಗೆ ಅನುಷ್ಟಾನಗೊಳಿಸುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಸುಮಾರು 500 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಎಫ್.ಪಿ.ಒ, ಬೆಂಬಲ ಸಂಸ್ಥೆ ಹಾಗೂ ರೈತರ ಬೆಂಬಲದೊಂದಿಗೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಯೋಜನೆ ಅವಧಿ ಮೂರು ವರ್ಷ.
ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ರೈತರು ಸಂಪೂರ್ಣವಾಗಿ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಕೃಷಿ ಅಥವಾ ತೋಟಗಾರಿಕೆ ಯಾವುದೇ ಬೆಳೆ ಬೆಳೆಯಬಹುದು. ಕೊಟ್ಟಿಗೆ ಗೊಬ್ಬರ/ದನದ ಗೊಬ್ಬರ, ಹಸಿರೆಲೆ ಗೊಬ್ಬರ, ಅಮೃತ ಪಾನಿ, ಗೋಮೂತ್ರ, ಜೀವಾಮೃತ-ಬೀಜಾಮೃತ, ಪಂಚಗೈವ್ಯ, ಬಯೋಡೀಜೆಸ್ಟರ್, ಜೈವಿಕ ಗೊಬ್ಬರಗಳು ಬಳಸಬೇಕು. ರಾಸಾಯಿನಿಕ ಗೊಬ್ಬರ ,ಕೀಟನಾಶಕಗಳನ್ನು ಬಳಸುವಂತಿಲ್ಲ.
ಪಾರಂಪರಿಕ ಕೃಷಿ ವಿಕಾಸ ಯೋಜನೆ ಅನುಷ್ಟಾನದ ಉದ್ದೇಶವೇನು? ಈ ಯೋಜನೆಯ ಮಹತ್ವವೇನು? ಎಲ್ಲಿ ಹೇಗೆ, ಅನುಷ್ಟಾನ ಮಾಡಲಾಗುತ್ತಿದೆ? ಪ್ರಯೋಜನೆಗಳೇನು? ಮುಂತಾದ ಮಾಹಿತಿಗಳು ಮುಂದೆ ನೋಡಬಹುದು.
*ಪಾರಂಪರಿಕ ಕೃಷಿ ವಿಕಾಸ ಯೋಜನೆ ಅನುಷ್ಟಾನದ ಉದ್ದೇಶ*
• ಸಾವಯವ ಕೃಷಿಯನ್ನು ಕೈಗೊಳ್ಳಲು ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
• ಗುಣಮಟ್ಟದ ಮತ್ತು ಸುರಕ್ಷಿತ ಸಾವಯವ ಉತ್ಪನ್ನಗಳ ಉತ್ಪಾದನೆ.
• ಮಣ್ಣಿನ ಫಲವತ್ತತೆ ಮತ್ತು ಉತ್ಪಾದ್ಕತೆಯನ್ನು ಉಳಿಸಿಕೊಳ್ಳಲು
• ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆದಾಯವನ್ನು ಸುಧಾರಿಸಲು
• ಸಾವಯವ ಕೃಷಿಯ ಬಗ್ಗೆ ರೈತರಿಗೆ, ಗ್ರಾಹಕರಿಗೆ ಅರಿವು
• ಸುರಕ್ಷಿತ ಮತ್ತು ಮಾಲಿನ್ಯ ಮುಕ್ತ ಪರಿಸರ
• ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ನೈಸರ್ಗಿಕ ವಿಧಾನಗಳನ್ನು ಬಳಸಿ ಬೆಳೆಗಳನ್ನು ಬೆಳೆಯಲು ರೈತರಿಗೆ ಅನುವು ಮಾಡಿಕೊಡುವುದು.
• ಕೃಷಿ, ಸಂಸ್ಕರಣೆ ಮತ್ತು ಪ್ರಮಾಣೀಕರಣಕ್ಕಾಗಿ ರೈತ ಸಂಘಗಳನ್ನು ಬೆಂಬಲಿಸುವುದು.
• ಸ್ಥಳೀಯ ಮತ್ತು ರಾಷ್ಟ್ರೀಯ ಮಾರುಕಟ್ಟೆಗಳಿಗೆ ರೈತರನ್ನು ನೇರವಾಗಿ ಸಂಪರ್ಕಿಸುವ ಮೂಲಕ ಉದ್ಯಮಶೀಲತೆಯನ್ನು ಬೆಳೆಸುವುದು.
ಯೋಜನೆಯ ಚೌಕಟ್ಟು
ಪರಂಪರಾಗತ ಕೃಷಿ ವಿಕಾಸ ಯೋಜನೆಯ ಕಾರ್ಯಗತಗೊಳಿಸಲು ಗುಚ್ಚ(ಕ್ಲಸ್ಟರ್) ಮಾದರಿ ಅನುಸರಿಸಲಾಗಿದೆ. ಸಾವಯವ ಕೃಷಿ ಪದ್ಧತಿಗಳನ್ನು ಸಾಮೂಹಿಕವಾಗಿ ರೈತರು ಅಳವಡಿಸಿಕೊಳ್ಳಲು ಪ್ರತಿ 10 ಹಳ್ಳಿಯಿಂದ ತಲಾ 20 ಹೆಕ್ಟೇರ್ನ ಗುಂಪುಗಳಾಗಿ (ಕ್ಲಸ್ಟರ್ಗಳಾಗಿ) ರೈತರನ್ನು ಸಂಘಟಿಸಲಾಗುತ್ತದೆ. ಅದಕ್ಕಾಗಿ ತೂಬಗೆರೆ ಹಾಗೂ ಕಸಬಾ ಹೋಬಳಿಗಳ 15 ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ 500 ಹೆಕ್ಟೇರ್ ಅಂದರೆ 1250 ಎಕರೆ ಕೃಷಿ ಭೂಮಿಯನ್ನು ಆಯ್ಕೆ ಮಾಡಲಾಗುತ್ತದೆ.
• ಆಯ್ಕೆಯಾದ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತನೆ ಮಾಡಲಾಗುತ್ತದೆ.
• ಸಹಭಾಗಿತ್ವ ಖಾತರಿ ವ್ವವಸ್ಥೆ
• ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ, ಮೈಲ್ವರ್ಧನೆ ಹಾಗೂ ಮಾರುಕಟ್ಟೆಗೆ ಅನುಕೂಲ ಕಲ್ಪಿಸುವುದು.
• ಬೆಂಬಲ ಸಂಸ್ಥೆ ಹಾಗೂ ಪ್ರಾಂತೀಯ ಪರಿಷತ್ತುಗಳ ಸಹಕಾರದೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸುವುದು.
ಬೆಂಬಲ ಸಂಸ್ಥೆಗಳ ಪಾತ್ರ
ಯೋಜನೆ ಅನುಷ್ಟಾನದಲ್ಲಿ 2 ತರಹದ ಬೆಂಬಲ ಸಂಸ್ಥೆಗಳು ಪಾಲ್ಗೊಳ್ಳುತ್ತವೆ. 1. ಬೆಂಬಲ ಸಂಸ್ಥೆ(ಸರ್ವಿಸ್ ಪ್ರೊವೈಡರ್) 2. ಪ್ರಾಂತೀಯ ಪರಿಷತ್ತು(ರೀಜನಲ್ ಕೌನ್ಸಿಲರ್ಸ್).
• ಬೆಂಬಲ ಸಂಸ್ಥೆಗಳನ್ನು ರಾಜ್ಯವು ನೇಮಕ ಮಾಡಲಿದ್ದು, ಇವು ಗುಂಪು ಹಾಗೂ ಗುಚ್ಚಗಳ ರಚನೆ, ರೈತರಿಗೆ ತರಬೇತಿ ಹಾಗೂ ಸಾಮರ್ಥ್ಯಾಭಿವೃದ್ಧಿ, ಕೃಷಿ ಭೂಮಿಯನ್ನು ಸಾವಯವ ಪರಿವರ್ತನೆಗೆ ಅನುಕೂಲ ಕಲ್ಪಿಸುವುದು, ದತ್ತಾಂಶ ನಿರ್ವಣೆ, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಕಾರ್ಯ ನಿರ್ವಹಿಸಲಿದೆ.
• ಪ್ರಾಂತೀಯ ಪರಿಷತ್ತುಗಳನ್ನು ಕೇಂದ್ರ ಸರ್ಕಾರದಿಂದ ಎಂಪೆನಲ್ ಮಾಡಲಾಗಿದ್ದು ಸಾವಯವ ಪರಿವರ್ತನೆಗೆ ಉತ್ತೇಜನ, ದಾಖಲಾತಿ ನಿರ್ವಹಣೆ, ದತ್ತಾಂಶ ನಿರ್ವಹಣೆ, ಕೃಷಿ ಉತ್ಪನ್ನಗಳ ಪ್ರಮಾಣಿಕರಣ, ವಾರ್ಷಿಕ ಸಾವಯವ ಪ್ರಮಾಣ ಪತ್ರಗಳನ್ನು ಅಚ್ಚುಮಾಡಿ ಪ್ರತಿ ರೈತ ಸದಸ್ಯರಿಗೆ ವಿತರಿಸುವುದು.
ರೈತರಿಗೆ ಪ್ರೋತ್ಸಾಹಧನ
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ರೈತರಿಗೆ ಸಾವಯವ ಉತ್ಪನ್ನಗಳ ಉತ್ಪಾದನೆಗೆ ಬೇಕಾಗುವ ಮೂಲಭೂತ ಸೌಕರ್ಯ ಹಾಗೂ ಸಾವಯವ ಪರಿಕರಗಳ ಖರೀದಿಗೆ ಪರ್ತಿ ವರ್ಷ 5000/- ರೂ.ಗಳಂತೆ ಮೂರು ವರ್ಷಗಳ ಕಾಲ 15000/- ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಜೊತೆಗೆ ಸಾವಯವ ಉತ್ಪನ್ನಗಳಿಗೆ ಪ್ರಮಾಣಿಕರಣ, ಪ್ಯಾಕಿಂಗ್, ಲೇಬಲ್ ಮತ್ತು ಬ್ರ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಕೋಟ್
ಸಾವಯವ ಕೃಷಿ ವಿಧಾನದ ಮೂಲಕ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವುದು. ಮಣ್ಣಿನ ಫಲವತ್ತತೆ ಕಾಪಾಡುವುದು, ಸೂಕ್ಷಾಣು ಜೀವಿಗಳ ರಕ್ಷಣೆ ಮಾಡುವುದು. ಉತ್ಪಾದನೆ ವೆಚ್ಚ ಕಡಿಮೆ ಮಾಡಿ ಅದಾಯ ಹೆಚ್ಚಿಸುವುದು, ಗುಣಮಟ್ಟದ ಉತ್ಪನ್ನಗಳನ್ನು ಬೆಳೆದು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ-
ಎ.ಬಿ ಬಸವರಾಜು, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಮತ್ತು ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ 500 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ರೈತರಿಗೆ ಅಗತ್ಯ ಪ್ರೊತ್ಸಾಹ ಕಲ್ಪಿಸಲಾಗುವುದು.
ಗುಣವಂತ ಜೆ. ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ, ಬೆಂ.ಗ್ರಾ. ಜಿಲ್ಲೆ
