ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಇಂದಿಗೂ ಜೀವಂತ: ಜಿಲ್ಲಾಧಿಕಾರಿ ಬಸವರಾಜು
ವಿಜಯ ದರ್ಪಣ ನ್ಯೂಸ್……
ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಇಂದಿಗೂ ಜೀವಂತ: ಜಿಲ್ಲಾಧಿಕಾರಿ ಬಸವರಾಜು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜನವರಿ 14, (ಕರ್ನಾಟಕ ವಾರ್ತೆ):
ನಮ್ಮ ಕಾಯಕವನ್ನು ಶ್ರದ್ಧೆಯಿಂದ, ನಿಷ್ಟೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಇಂದಿಗೂ ಜೀವಂತ ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ತಿಳಿಸಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಭಕ್ತಿಯ ಪರಾಕಾಷ್ಟೆಯು ಭಕ್ತಿ ಚಳುವಳಿ ಮೂಲಕ ಕನ್ನಡೀಕರಣ ಗೊಳಿಸಲಾಯಿತು. ಜಾತಿ, ಧರ್ಮ ದಿಂದ ಒಬ್ಬರನ್ನು ಅಳೆಯಬಾರದು, ಮಾನವೀಯತೆಗೆ ಬೆಲೆ ಕೊಡಬೇಕು. ಎಲ್ಲರೂ ಸಮಾನತೆ, ಅನೋನ್ಯತೆಯಿಂದ ಜೀವಿಸಬೇಕು ಎನ್ನುವುದು ಅವರ ಆಶಯವಾಗಿತ್ತು. ಜಾತಿ ರಹಿತ, ಮಾನವೀಯ ಮೌಲ್ಯಗಳಿಂದ ಕೂಡಿದ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಿದರು. ಅವರ ತತ್ವಾದರ್ಶಗಳನ್ನು, ಚಿಂತನೆಗಳು ಇಂದಿಗೂ ಜೀವಂತವಾಗಿದೆ, ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಡಿಸಿ ಹೇಳಿದರು.
ಬಯಪ ಅಧ್ಯಕ್ಷ ಶಾಂತ ಕುಮಾರ್ ಅವರು ಮಾತನಾಡಿ ಭೋವಿ ಸಮುದಾಯದ ಸಂಘದ ಕಚೇರಿಗೆ ಜಾಗ ಮಂಜೂರು ಮಾಡಲು ಹಾಗೂ ದೇವನಹಳ್ಳಿ ಟೌನ್ ನಲ್ಲಿ ಒಂದು ವೃತ್ತಕ್ಕೆ ಶಿವಯೋಗಿ ಸಿದ್ದರಾಮರ ಹೆಸರಿಡಲು ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕರಾದ ಶರಣಯ್ಯ ಹಿರೇಮಠ್ ಅವರು ಕರ್ಮದ ತತ್ವದಡಿ ಸಮಾಜದ ಓರೆ-ಕೋರೆಗಳನ್ನು ಸುಧಾರಿಸಲು ಶರಣ ಸಿದ್ಧರಾಮೇಶ್ವರರು ವಚನಗಳ ಮೂಲಕ ಪ್ರಯತ್ನಿಸಿದ್ದರು. ಕರ್ಮಜೀವಿಯಾಗಿ ಸ್ವಾವಲಂಬನೆಯ ಜೀವನ ನಡೆಸುವಂತೆ ಪ್ರೇರಣೆ ನೀಡಿದ್ದ ಇವರು, ಸದೃಢ ಸಮಾಜ ನಿರ್ಮಾಣದ ಕನಸು ಕಂಡಿದ್ದರು.
ಕೆರೆ-ಕಟ್ಟೆ, ಬಾವಿಗಳನ್ನು ನಿರ್ಮಿಸುವ ಮೂಲಕ ಅನೇಕ ಗ್ರಾಮಗಳ ಅಭಿವೃದ್ದಿಗೆ ಕಾರಣರಾಗಿದ್ದರು. ಅವರ ವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಅಂಕಿತದ ಮೂಲಕ ಸ್ವಾವಲಂಬನೆ, ಕರ್ಮಯೋಗ, ಮತ್ತು ಬಸವಣ್ಣನ ತತ್ವಗಳ ಅನುಸರಣೆಯನ್ನು ಸಾರಿದ್ದಾರೆ.
1,96,000 ವಚನಗಳು ರಚಿಸಿದ್ದಾರೆ ಎಂದು ಉಲ್ಲೇಖಗಳಿವೆ, 68000 ವಚನಗಳು ಸಿಕ್ಕಿದ್ದವು ಎಂದು, ಪ್ರಸ್ತುತ 650 ವಚನಗಳು ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಬಸವಣ್ಣನವರು, ಅಕ್ಕಮಹಾದೇವಿ, ಅಲ್ಲಮ ಪ್ರಭು, ಚನ್ನಬಸವ ಹಾಗೂ ಶಿವಯೋಗಿ ಸಿದ್ದರಾಮರು ವಚನ ಸಾಹಿತ್ಯದಲ್ಲಿ ಮೊದಲಿಗರಾಗಿ ಕಾಣಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ , ಸಮಾಜದ ಮುಖಂಡ ವೆಂಕಟೇಶ್ ಭೋವಿ,ಮುನಿಯಪ್ಪ, ರಾಮಕೃಷ್ಣಪ್ಪ, ಶ್ರೀನಿವಾಸ್ , ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಭೋವಿ ಸಮಾಜದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜ. 23 ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ: ಮರೆತು ಹೋದ ಖಾದ್ಯ ಹಾಗೂ ಸಿರಿಧಾನ್ಯ ಪಾಕ ಸ್ಪರ್ಧೆ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜ. 14 :
ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಮತ್ತು ರೈತರು ತಯಾರಿಸುವ ಸಿರಿಧಾನ್ಯದ ಉತ್ಪನ್ನಗಳ ಮೌಲ್ಯವರ್ಧಿತ ಪದಾರ್ಥಗಳ ಕುರಿತು ಜನಸಾಮಾನ್ಯರ ಅರಿವು ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ-2026 ರ ಅಂಗವಾಗಿ “ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಫರ್ಧೆ”ಯನ್ನು ಜನವರಿ 23 ರಂದು ಬೆಳಿಗ್ಗೆ 9.00 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಜಿಲ್ಲೆಯ ಆಸಕ್ತ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಲು ನೋಂದಣಿಗಾಗಿ ಜ. 21 ರ ಮಧ್ಯಾಹ್ನ 03 ಗಂಟೆಯೊಳಗಾಗಿ ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು ಭರ್ತಿ ಮಾಡಿ ತಮ್ಮ ಭಾವಚಿತ್ರದೊಂದಿಗೆ ಮಾಹಿತಿಯನ್ನು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ನಮೂನೆ ಸಲ್ಲಿಸಬಹುದು.
ಪ್ರತಿ ಸ್ಫರ್ಧೆಗೆ ಒಂದೇ ತಿನಿಸು ಮಾಡಲು (ಸಸ್ಯಹಾರಿ ಸಿರಿಧಾನ್ಯ ತಿನಿಸುಗಳಿಗೆ ಮಾತ್ರ) ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳ ತಿನಿಸು ಮಾಡಲು ಅವಕಾಶವಿದ್ದು, ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ಅಧಿಕೃತ ತರಬೇತಿ/ಪದವಿ/ಶಿಕ್ಷಣ ಪಡೆದವರನ್ನು ಹೊರತುಪಡಿಸಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಸ್ಫರ್ಧಿಸಬಹುದಾಗಿದೆ.
ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯದ ಖಾದ್ಯ ಪ್ರದರ್ಶಿಸುವುದಕ್ಕೆ ಬಳಸುವ ಸಾಮಗ್ರಿಗಳ ಮಾದರಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಒಂದು ಸಿಹಿ, ಖಾರ ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ ಮತ್ತು ಮರೆತುಹೋದ ಖಾದ್ಯಗಳ ತಿನಿಸನ್ನು ಆಯ್ಕೆ ಮಾಡಲಾಗುತ್ತದೆ.
ಜಿಲ್ಲಾ ಮಟ್ಟದ ಪ್ರಥಮ ಸ್ಥಾನಕ್ಕೆ ಸಿಹಿ, ಖಾರದ ತಿನಿಸು (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಅಥವಾ ಮರೆತುಹೋದ ಖಾದ್ಯದ ತಿನಿಸುಗಳಿಗೆ ತಲಾ ರೂ. 5000/-, ದ್ವಿತೀಯ ಸ್ಥಾನಕ್ಕೆ ರೂ.3000/-, ತೃತೀಯ ಸ್ಥಾನಕ್ಕೆ ರೂ. 2000/- ಗಳನ್ನು ಬಹುಮಾನ ನೀಡಲಾಗುತ್ತದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಜಿ. ಕಲಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
