ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್

ವಿಜಯ ದರ್ಪಣ ನ್ಯೂಸ್…

ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ನಮ್ಮ ಭಾಗದ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ನಾನೂ ಒಬ್ಬ ರೈತನಾಗಿ ಸರ್ಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದ ಜಂಗಮಕೋಟೆ ಹೋಬಳಿಯ 2823 ಎಕರೆ ಜಮೀನಿನಲ್ಲಿ ಕೃಷಿಯೋಗ್ಯವಾದ 471 ಎಕರೆ ಕೃಷಿ ಭೂಮಿಯನ್ನು ಬಿಡಿಸಿಕೊಟ್ಟಿದ್ದೇನೆ ಎಂದು ಶಾಸಕರಾದ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಮೇಲೂರಿನಲ್ಲಿ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳಲ್ಲಿ 2823 ಎಕರೆ ಜಮೀನು, ಭೂಸ್ವಾದೀನಕ್ಕೆ ಪ್ರಾಥಮಿಕ ಅಧಿಸೂಚನೆ ಸರ್ಕಾರ ಹೊರಡಿಸಿತ್ತು ಆ ಭಾಗದಲ್ಲಿನ ರೈತರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಡುವಂತೆ ಕೋರಿದ್ದರು ,ಅವರಿಗೆ ಕೊಟ್ಟ ಮಾತಿನಂತೆ ಪ್ರಾಮಾಣಿಕವಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ 471 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನದಿಂದ ಹೊರತುಪಡಿಸಲು ಯಶಸ್ವಿಯಾಗಿದ್ದೇನೆ ಎಂದು ಅವರು ಹೇಳಿದರು.

ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಅವರನ್ನು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಮತ್ತು ಕೆಐಎಡಿಬಿ ಅಧಿಕಾರಿಗಳೊಂದಿಗೆ ಹಲವು ಬಾರಿ ಮಾತನಾಡಿ, ನಮ್ಮ ಭಾಗದ ರೈತರ ಕೃಷಿ ಸಮಸ್ಯೆಗಳನ್ನು ವಿವರಿಸಿ, ನಡಿಪಿನಾಯಕನಹಳ್ಳಿ, ಯಣ್ಣಂಗೂರು, ತಾದೂರು ಹಾಗು ಬಸವಾಪಟ್ಟಣ ಮುಂತಾದ ಗ್ರಾಮಗಳ ಸುತ್ತ ಮುತ್ತ ಒಂದು, ಎರಡು, ಮೂರು ಎಕರೆ ಜಮೀನುಗಳುಳ್ಳ ರೈತರು ರೇಷ್ಮೆ, ಮಾವು, ದ್ರಾಕ್ಷಿ ಮುಂತಾದ ಕೃಷಿಯನ್ನೇ ನಂಬಿದ್ದಾರೆ, ಅವರುಗಳಿಗೆ ಮಾತುಕೊಟ್ಟಂತೆ ಕೆಐಎಡಿಬಿಯಿಂದ ಅವರುಗಳ ಕೃಷಿ ಜಮೀನನ್ನು ಉಳಿಸಿಕೊಟ್ಟು ನಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದರು.

ಕೆಐಎಡಿಬಿಯನ್ನು ತರಲಾಗಲಿ, ನಿಲ್ಲಿಸಲಾಗಲಿ ನನಗೆ ಶಕ್ತಿಯಿಲ್ಲ ಆದರೆ ಕೈಗಾರಿಕೆಗಳ ಸಚಿವರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಕೆಐಎಡಿಬಿ ಅಧಿಕಾರಿಗಳನ್ನು ಮನವೊಲಿಸಿ ರೈತರ 473 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರೈತರ ಜಮೀನುಗಳನ್ನು ಉಳಿಸಿಕೊಡುವಲ್ಲಿ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.