40 ಬಾಲ-ಕಿಶೋರ ಕಾರ್ಮಿಕರ ರಕ್ಷಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

ವಿಜಯ ದರ್ಪಣ ನ್ಯೂಸ್….

ಅನಿರೀಕ್ಷಿತ ತಪಾಸಣೆ ಹಾಗೂ ದಾಳಿ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ

40 ಬಾಲ-ಕಿಶೋರ ಕಾರ್ಮಿಕರ ರಕ್ಷಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 27: ಜಿಲ್ಲೆಯಾದ್ಯಂತ ಹೋಟೆಲ್, ಗ್ಯಾರೇಜ್, ವಾಣಿಜ್ಯ ಸಂಸ್ಥೆ, ಕಾರ್ಖಾನೆಗಳ ಮೇಲೆ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ಮತ್ತು ದಾಳಿಯನ್ನು ನಡೆಸಿ ಮೂವರು ಬಾಲ ಕಾರ್ಮಿಕರು ಹಾಗೂ 37 ಕಿಶೋರ ಕಾರ್ಮಿಕರು ಸೇರಿ 40 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ನಿರಂತರವಾಗಿ ಹೋಟೆಲ್, ಗ್ಯಾರೇಜ್, ಬೇಕರಿ, ವಾಣಿಜ್ಯ ಸಂಸ್ಥೆ, ಕೈಗಾರಿಕೆ ಮುಂತಾದ ಸ್ಥಳಗಳಿಗೆ ಅನಿರೀಕ್ಷಿತ ತಪಾಸಣೆ, ದಾಳಿ ನಡೆಸಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗುತ್ತಿದೆ. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು, ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸಂಬಂಧಪಟ್ಟ ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

40 ಬಾಲ-ಕಿಶೋರ ಕಾರ್ಮಿಕರ ರಕ್ಷಣೆ

2024-25 ನೇ ಸಾಲಿನಲ್ಲಿ 03 ಬಾಲ ಹಾಗೂ 37 ಕಿಶೋರ ಕಾರ್ಮಿಕರು ಸೇರಿ ಒಟ್ಟು 40 ಮಕ್ಕಳ ರಕ್ಷಣೆ ಮಾಡಲಾಗಿದ್ದು  11 ಪ್ರಕರಣಗಳಲ್ಲಿ 2,20,000 ರೂ.ಗಳ ದಂಡ ವಸೂಲಾತಿ ಮಾಡಲಾಗಿದೆ.

ಕಾನೂನು ಕ್ರಮ
ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು ಅಂತಹವರಿಗೆ ಕನಿಷ್ಠ 06 ತಿಂಗಳಿಂದ ಮತ್ತು ಗರಿಷ್ಠ 02 ವರ್ಷದವರೆಗೂ ಜೈಲು ಶಿಕ್ಷೆ ಅಥವಾ 20,000 ರೂ. ಗಳಿಂದ 50,000 ರೂಗಳ ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ. ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಕಾರ್ಖಾನೆ ಅಥವಾ ಅಂಗಡಿ ಮುಂಗಟ್ಟುಗಳಲ್ಲಿ ಮಕ್ಕಳನ್ನು ದುಡಿಮೆಗೆ ನೇಮಿಸಿ ಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ದೂರು ನೀಡಿ ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ನ್ಯಾಯಮೂರ್ತಿ ಬೋಲಾ ಪಂಡಿತ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕಿನ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.

&&&&&&&&&&&&&&&&&&&&&&&

ಡೇ ಕೇರ್ ಸೆಂಟರ್ ಗೆ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಮೇ27: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತೀವ್ರತರವಾದ ಮಾನಸಿಕ ರೋಗಿಗಳ ಪುನಶ್ವೇತನಕ್ಕೆ “ಡೇ ಕೇರ್ ಸೆಂಟರ್”(ಮಾನಸದಾರ) ಕೇಂದ್ರವನ್ನು ನಿರ್ದಿಷ್ಟ ಗೊತ್ತುಪಡಿಸಿದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಿ ನಿರ್ವಹಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರೇತರ ಸಂಸ್ಥೆ/ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಅರ್ಜಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಕೊಠಡಿ ಸಂಖ್ಯೆ:207, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ. ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್-26 ರೊಳಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೊಠಡಿ ಸಂಖ್ಯೆ:207, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ,ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂರವಾಣಿ ಸಂಖ್ಯೆ:080-29787452 ಸಂಪರ್ಕೀಸಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.