ವಿಶೇಷ ತನಿಖಾ ತಂಡ ( S I T )

ವಿಜಯ ದರ್ಪಣ ನ್ಯೂಸ್……

ವಿಶೇಷ ತನಿಖಾ ತಂಡ
( S I T )
**********************
ಅವರಿಗೆ,
ಡಾಕ್ಟರ್ ಪ್ರಣವ್ ಮೊಹಾಂತಿ,
ಮುಖ್ಯಸ್ಥರು
ಹಾಗು
ಸಹ ಸದಸ್ಯರುಗಳು,
ವಿಶೇಷ ತನಿಖಾ ತಂಡ,
ಧರ್ಮಸ್ಥಳದ ಅಸಹಜ ಸಾವಿನ ಶವಗಳ ಪ್ರಕರಣ,
ಕರ್ನಾಟಕ ಸರ್ಕಾರ ಬೆಂಗಳೂರು………..

ಮಾನ್ಯ ಮೊಹಾಂತಿಯವರೇ ,… ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಅತ್ಯಂತ ಪ್ರಮುಖವಾದ ಅಪರಾಧ ಕೃತ್ಯಗಳ ಪೊಲೀಸ್ ತನಿಖಾ ತಂಡದ ನೇತೃತ್ವವನ್ನು ತಾವು ವಹಿಸಿದ್ದೀರಿ. ತಮಗೆ ಅಭಿನಂದನೆಗಳು. ಸರ್ಕಾರದ ದೃಷ್ಟಿಯಲ್ಲಿ ತಾವು ರಾಜ್ಯದ ಉನ್ನತ ಪೋಲಿಸ್ ಅಧಿಕಾರಿಗಳ ಹಂತದಲ್ಲಿ ಹೆಚ್ಚು ದಕ್ಷ ಮತ್ತು ಪ್ರಾಮಾಣಿಕರಲ್ಲಿ ಒಬ್ಬರು. ಅದಕ್ಕಾಗಿಯೇ ನಿಮ್ಮನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕದಲ್ಲಿ ಧರ್ಮಸ್ಥಳ ಎಂಬುದು ಒಂದು ಅತ್ಯಂತ ಮಹತ್ವದ ಧಾರ್ಮಿಕ ಕ್ಷೇತ್ರ. ಕರ್ನಾಟಕದ ಬಹುತೇಕ ಜನ ಒಂದಲ್ಲಾ ಒಂದು ಬಾರಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುತ್ತಾರೆ. ಇನ್ನೂ ಕೆಲವರು ಅನೇಕ ಹರಕೆಗಳನ್ನು ಹೊತ್ತಿರುತ್ತಾರೆ. ಅಲ್ಲದೆ ಅದು ಪ್ರಾಕೃತಿಕವಾಗಿ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳ. ಜೊತೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಉಚಿತವಾಗಿ, ನಿರಂತರವಾಗಿ ಅನ್ನದಾನ ಮಾಡುವ ಕೇಂದ್ರವೂ ಹೌದು.

ಧರ್ಮಸ್ಥಳದ ಅನೇಕ ಉಪ ಸಂಸ್ಥೆಗಳು ಆರ್ಥಿಕ ಚಟುವಟಿಕೆ, ಆರೋಗ್ಯ ಚಟುವಟಿಕೆ, ಶಿಕ್ಷಣ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿಯೇ ನಡೆಸುತ್ತಿದೆ. ಹಾಗೆಯೇ ಧರ್ಮಸ್ಥಳದ ಸಂಸ್ಥೆ ದೇಶದ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಹತ್ತಿರದ ಸಂಬಂಧ ಹೊಂದಿದ್ದು ರಾಜಕೀಯ ಕ್ಷೇತ್ರದಲ್ಲೂ ತುಂಬಾ ಪ್ರಭಾವವನ್ನು ಹೊಂದಿದೆ.

ಇಂತಹ ಸನ್ನಿವೇಶದಲ್ಲಿ ಧರ್ಮಸ್ಥಳದ ಸೌಜನ್ಯ ಎಂಬ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ನಂತರ ಆ ಕ್ಷೇತ್ರದಲ್ಲಿ ಅದಕ್ಕಿಂತ ಬಹುದೊಡ್ಡ ಆರೋಪಗಳು ಕೇಳಿ ಬಂದಿವೆ. ಮುಖ್ಯವಾಗಿ ಅನೇಕ ಅಮಾಯಕ ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ನಡೆದಿದೆ ಎಂಬುದು ಅತ್ಯಂತ ಗಂಭೀರ ಸಂಗತಿ. ಒಂದು ಧಾರ್ಮಿಕ ಕ್ಷೇತ್ರದಲ್ಲಿ ಇಷ್ಟೊಂದು ಹಿಂಸೆ ನಡೆದಿದೆ ಎಂದರೆ ಅದು ಕೇವಲ ಆರೋಪವಾಗಿದ್ದರೂ ಸಹ ತುಂಬಾ ಖೇದಕರ ಸಂಗತಿ.

ಏಕೆಂದರೆ ರಾಜ್ಯದ ಅಥವಾ ನೆರೆಹೊರೆ ರಾಜ್ಯಗಳ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಇದಕ್ಕಿಂತ ಹೆಚ್ಚು ಭಕ್ತಾದಿಗಳು ಸೇರುವ ಜಾಗದಲ್ಲಿ ಈ ರೀತಿಯ ಅಸಹಜ ಪ್ರಕರಣಗಳು ಎಲ್ಲಿಯೂ ಈ ಪ್ರಮಾಣದಲ್ಲಿ ನಡೆದಿಲ್ಲ. ಅದು ಧರ್ಮಸ್ಥಳಕ್ಕೆ ಮಾತ್ರ ಸೀಮಿತವಾಗಿದೆ.

ಈಗ ಅದರ ಪರ ಮತ್ತು ವಿರೋಧದ ಸಮರ್ಥಕರು, ಹೋರಾಟಗಾರರನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಸಾಮಾನ್ಯ ಜನರಿಗೆ ತುಂಬಾ ಗೊಂದಲವಾಗಿದೆ. ಏನಿದು, ಇಷ್ಟು ವರ್ಷಗಳು ಕಾಲ ನಾವು ಭಕ್ತಿಯಿಂದ ನಡೆದುಕೊಂಡ ಈ ಸ್ಥಳದಲ್ಲಿ ಇಷ್ಟೊಂದು ಹತ್ಯಾಕಾಂಡಗಳು ನಡೆದಿದೆಯೇ, ಇದು ಆರೋಪವೇ, ಕುತಂತ್ರವೇ ಅಥವಾ ನಿಜವೇ ಎಂಬ ಪ್ರಶ್ನೆ ಕಾಡುತ್ತಿದೆ. ಅನೇಕರಿಗೆ ಅಲ್ಲಿ ಆದ ಕೆಲವು ಕೆಟ್ಟ ಅನುಭವಗಳ ಆಧಾರದ ಮೇಲೆ ನಡೆದಿದ್ದರೂ ನಡೆದಿರಬಹುದು ಎಂಬ ಅನುಮಾನವಿದ್ದರೆ, ಇನ್ನೂ ಕೆಲವರಿಗೆ ಇಲ್ಲ ಹಾಗೆ ನಡೆದಿರಲು ಸಾಧ್ಯವೇ ಇಲ್ಲ ಎಂದು ಸಹ ಹೇಳುವವರಿದ್ದಾರೆ. ಇದೀಗ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಬಹುದೊಡ್ಡ ಜವಾಬ್ದಾರಿ ನಿಮಗಿದೆ.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಿನ್ನ-ಭಿನ್ನ ಅಭಿಪ್ರಾಯಗಳು, ಕಾರಣಗಳು, ಸಾಕ್ಷಿಗಳನ್ನು ತಮಗೆ ತೋಚಿದಂತೆ ನೀಡುತ್ತಿದ್ದಾರೆ. ನ್ಯಾಯಾಲಯ ಸಹ ಒಂದು ರೀತಿಯಲ್ಲಿ ಗೊಂದಲಕ್ಕೆ ಒಳಗಾಗಿರುವುದನ್ನು ಗಮನಿಸಬಹುದು.

ಭಾರತೀಯ ಪೊಲೀಸ್ ಸೇವೆ ಎಂಬ ಅತ್ಯುನ್ನತ ವಿದ್ಯಾರ್ಹತೆಯ ಮೂಲಕ ಈ ರಾಷ್ಟ್ರದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುವವರು ನೀವು. ಈ ರಾಷ್ಟ್ರದ ಸಂವಿಧಾನವನ್ನು, ಈ ನೆಲದ ಮಾನವೀಯ ಮೌಲ್ಯಗಳನ್ನು, ಈ ಮಣ್ಣಿನ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು, ಮುಗ್ಧ ಜನರ ಪ್ರಶ್ನೆಗಳಿಗೆ ಸತ್ಯದ ಉತ್ತರವನ್ನು ಕೊಡಬೇಕಾದ ಜವಾಬ್ದಾರಿಯ ಸ್ಥಾನದಲ್ಲಿದ್ದೀರಿ.

ಈ ಸಮಾಜದಲ್ಲಿ ಧಾರ್ಮಿಕ ಮುಖಂಡರಿಗೆ ಇರುವ ಪ್ರಭಾವ, ರಾಜಕೀಯ ವ್ಯಕ್ತಿಗಳಿಗಿರುವ ಪ್ರಭಾವ, ಉದ್ಯಮಿಗಳಿರುವ ಪ್ರಭಾವ, ಸುಪಾರಿ ಕೊಲೆಗಾರರಿಗೆ ಇರುವ ಪ್ರಭಾವ ಎಲ್ಲವನ್ನು ಮೀರಿ ಸತ್ಯದ ಹುಡುಕಾಟ ಮಾಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ, ಕಾನೂನಾತ್ಮಕವಾಗಿ ಮಾತ್ರ ತನಿಖೆ ಸೀಮಿತವಾಗಬಾರದು. ಅದೆಲ್ಲವನ್ನು ಮೀರಿ ಇಡೀ ವ್ಯವಸ್ಥೆ ಈ ಘಟನೆಯನ್ನು ಹೇಗೆ ನೋಡುತ್ತಿದೆ, ಅದನ್ನು ನಾವು ಹೇಗೆ ನಿರ್ವಹಿಸಬೇಕು ಎಂದು ಪ್ರತಿ ಹೆಜ್ಜೆಯಲ್ಲೂ ತಾವು ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ.

ಇಂತಹ ತನಿಖೆಗಳಲ್ಲಿ ಕರ್ನಾಟಕದ ಪೊಲೀಸ್ ವ್ಯವಸ್ಥೆಗೆ ರಾಷ್ಟ್ರದಲ್ಲಿಯೇ ದೊಡ್ಡ ಹೆಸರಿದೆ. ಎಂತಹುದೇ ಕ್ಲಿಷ್ಟಕರ ಅಪರಾಧಗಳನ್ನು ಭೇಧಿಸಿರುವ ಇತಿಹಾಸವಿದೆ. ಆ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯೂ ನಿಮಗಿದೆ.

ಹಾಗೆಂದು ನಿರಪರಾಧಿಗಳನ್ನು ಅಪರಾಧಿಗಳನ್ನಾಗಿ ಅಥವಾ ಅಪರಾಧಿಗಳನ್ನು ನಿರಪರಾಧಿನಗಳನ್ನಾಗಿ ಮಾಡುವ ಯಾವುದೇ ರೀತಿಯ ಒತ್ತಡಕ್ಕೆ ತಾವು ಒಳಗಾಗಬಾರದು. ಪ್ರಧಾನಮಂತ್ರಿ ಅಥವಾ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು, ಮುಖ್ಯಮಂತ್ರಿ ಅಥವಾ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಅಥವಾ ಖ್ಯಾತ ಉದ್ಯಮಿಗಳು ಅಥವಾ ಮಾಫಿಯಾ ಡಾನ್ಗಳು ಅಥವಾ ಹಿರಿಯ ಅಧಿಕಾರಿಗಳು ಯಾರೇ ಒತ್ತಡ ಹೇರಿದರು ತಾವು ಇದನ್ನು ಅತ್ಯಂತ ಪವಿತ್ರ ಕರ್ತವ್ಯ, ಈ ನೆಲದ ಋಣ ತೀರಿಸಲು ಒದಗಿರುವ ಅವಕಾಶ ಎಂದು ಭಾವಿಸಿ ಯಾವುದೇ ಒತ್ತಡಕ್ಕೆ ಮಣಿಯದೆ ಸತ್ಯದ ಹುಡುಕಾಟ ನಡೆಸಬೇಕಿದೆ.

ಜನರಲ್ಲಿ ಇರುವ ಒಂದು ಅನುಮಾನವೆಂದರೆ ಧರ್ಮಸ್ಥಳ ಸಂಸ್ಥೆಯವರು ದೇಶದಲ್ಲಿ ಅತ್ಯಂತ ಪ್ರಭಾವಶಾಲಿಗಳು, ಹಣ ಹೊಂದಿರುವವರು. ಆದ್ದರಿಂದ ಈ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಅಭಿಪ್ರಾಯವನ್ನು ತಾವು ಸುಳ್ಳಾಗಿಸಿ, ಕೆಲವು ಪೊಲೀಸರು ಒತ್ತಡಕ್ಕೆ ಒಳಗಾಗುವ ಸಾಮಾನ್ಯ ಜನರಲ್ಲ. ಅಲ್ಲಿಯೂ ಅತ್ಯಂತ ದಕ್ಷ, ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯಗಳ ಜನರಿದ್ದಾರೆ, ಯಾವ ತ್ಯಾಗಕ್ಕೂ ಸಿದ್ಧ ಎನ್ನುವ ಸಿದ್ದಾಂತವನ್ನು ಎತ್ತಿ ಹಿಡಿಯಬೇಕಿದೆ.

ಹೆಚ್ಚು ಕಡಿಮೆ ಕೆಲವೇ ವರ್ಷಗಳ ಸೇವಾ ಅವಧಿ ಇದ್ದು ನಿವೃತ್ತಿ ಅಂಚಿನಲ್ಲಿರುವ ತಾವು ಈ ಕೆಲಸವನ್ನು ಖಂಡಿತ ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎಂಬ ಆಶಾವಾದ ನಮ್ಮಲ್ಲಿದೆ. ನಿಜಕ್ಕೂ ಇದು ಸಾಮಾನ್ಯ ಘಟನೆಯಲ್ಲ. ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ. ಅದನ್ನು ತಾವು ಯಶಸ್ವಿಯಾಗಿ ಭೇದಿಸುತ್ತೀರಿ.

ಒಂದು ವೇಳೆ ಆರೋಪ ಸುಳ್ಳಾದರೆ ಧರ್ಮಸ್ಥಳದ ಮೇಲಿನ ಸಾಮಾನ್ಯ ಜನರ ನಂಬಿಕೆ ಬಲವಾಗುತ್ತದೆ ಅಥವಾ ಆರೋಪ ಸಾಬೀತಾದರೆ ಅವರ ಎಲ್ಲಾ ಮುಖವಾಡ ಕಳಚಿ ಬೀಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಜನರಿಗೆ ಸತ್ಯವನ್ನು ತಿಳಿಸಿದಂತಾಗುತ್ತದೆ. ಆದಷ್ಟು ಬೇಗ ತಾವು ತಮ್ಮ ಕೆಲಸದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತಾ….

ಕರ್ನಾಟಕದ ಎಲ್ಲಾ ಪ್ರಬುದ್ಧ ಮನಸ್ಸುಗಳ ನೈತಿಕ ಬೆಂಬಲ ನಿಮಗಿದೆ, ಸಾಮಾನ್ಯ ಜನರ ಮನಸ್ಸುಗಳಲ್ಲಿ ನಿಜವಾದ ಹೀರೋ ಆಗುವ ಸುವರ್ಣಾವಕಾಶ ನಿಮಗಿದೆ ಎಂದು ನೆನಪಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9663750451..Watsapp)
9844013068……