ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೇ ಕಂತಿನ ಹಣ : ಪ್ರಧಾನಿ ವಿಡಿಯೋ ಕಾನ್ಸರೆನ್ಸ್ ನೇರ ಪ್ರಸಾರ ವೀಕ್ಷಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಸಚಿವ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್….
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೇ ಕಂತಿನ ಹಣ : ಪ್ರಧಾನಿ ವಿಡಿಯೋ ಕಾನ್ಸರೆನ್ಸ್ ನೇರ ಪ್ರಸಾರ ವೀಕ್ಷಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಸ್ಟ್, 02 : ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಕಾರ್ಯಕ್ರಮದ ಸಚಿವರೊಟ್ಟಿಗೆ ಉದ್ಘಾಟನೆ ಮಾಡಿದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ಸಚಿವ ವಿ ಸೋಮಣ್ಣ ಅವರು, ಬಳಿಕ ಪ್ರಧಾನಿ ಮಂತ್ರಿಯ ವಿಡಿಯೋ ಕಾನ್ಫರೆನ್ಸ್ ನೇರ ಪ್ರಸಾರದ ಕಾರ್ಯಕ್ರಮವನ್ನು ಸಚಿವ ಮುನಿಯಪ್ಪ, ರೈತರೊಂದಿಗೆ ವೀಕ್ಷಿಸಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ಸಚಿವ ವಿ ಸೋಮಣ್ಣ ಅವರು, ರೈತರು ಸುಖಿಯಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 6 ಸಾವಿರ ರೂ,ಹಣ ಯಾವುದೇ ಮಧ್ಯವರ್ತಿಗಳಿಲ್ಲದೇ ರೈತರ ಖಾತೆಗೆ ನೇರವಾಗಿ ತಲುಪುತ್ತಿದ್ದು, ಪಿ.ಎಂ ಕಿಸಾನ್ ಯೋಜನೆಯಲ್ಲಿ 20ನೇ ಕಂತು ಒಳಗೊಂಡು ಇಲ್ಲಿಯ ತನಕ ದೇಶದಾದ್ಯಂತ 3.89 ಲಕ್ಷ ಕೋಟಿ ರೂ ಹಣವನ್ನು ರೈತರಿಗೆ ಸಂದಾಯ ಮಾಡಲಾಗಿದೆ. ಇಲ್ಲಿಯ ತನಕ ಕರ್ನಾಟಕ ರಾಜ್ಯದಲ್ಲಿ ರೂ,18.922 ಸಾವಿರ ಕೋಟಿ ಹಣ ಈ ಯೋಜನೆಯಲ್ಲಿ ರೈತರ ಖಾತೆಗೆ ಜಮೆ ಆಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 43.28.905 ಲಕ್ಷ ಕೋಟಿ ಅರ್ಹ ರೈತ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. 2013-14ರಲ್ಲಿ ಕೇಂದ್ರದ ಕೃಷಿ ಬಜೆಟ್ ನಲ್ಲಿ ರೂ.21.933 ಸಾವಿರ ಕೋಟಿ ಇತ್ತು. ಈಗ ನರೇಂದ್ರ ಮೋದಿಯವರ ಸರ್ಕಾರದಲ್ಲಿ 2025-26ರಲ್ಲಿ 1,27,209 ಲಕ್ಷ ಕೋಟಿ ರೂ,ಗಳ ಕೃಷಿ ಬಜೆಟ್‌ನ್ನು ನೀಡಲಾಗಿದೆ. ಇಂದಿನ 20ನೇ ಕಂತಿನಲ್ಲಿ ದೇಶದಾದ್ಯಂತ ಸುಮಾರು 9.7 ಕೋಟಿ ರೈತರ ಖಾತೆಗೆ ಸುಮಾರು 20,800 ಕೋಟಿ ಹಣ ಸಂದಾಯವಾಗಲಿದೆ. ಅಂದಿನ ನಮ್ಮ ಸರ್ಕಾರದಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರೂ,6 ಸಾವಿರ ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ನೀಡುತ್ತಿತ್ತು, ಇದನ್ನು ಈಗಿನ ಸರ್ಕಾರ ಜಾರಿಗೊಳಿಸಬೇಕಿದೆ ಎಂದರು. ಈ ಯೋಜನೆಯು ಮಹಿಳಾ ರೈತರ ಸಬಲೀಕರಣಕ್ಕೂ ಸಹಾಯಕಾರಿಯಾಗಿದ್ದು, 20ನೇ ಕಂತಿನಲ್ಲಿ ದೇಶದಾದ್ಯಂತ ಸುಮಾರು 2.26 ಕೋಟಿ ಮಹಿಳಾ ರೈತರು ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.
ರೈತರಿಗೆ ರಸಗೊಬ್ಬರದ ಸಮಸ್ಯೆಯಿಲ್ಲ: ರೈತರಿಗೆ ಯೂರಿಯ ಗೊಬ್ಬರ ಕೊರತೆಯನ್ನು ನಿವಾರಿಸಿದ್ದೇವೆ 6.52 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯತೆಯಿದ್ದು, ರಾಜ್ಯಕ್ಕೆ 15,825 ಸಾವಿರ ಮೆಟ್ರಿಕ್ ಟನ್ ಲಭ್ಯವಿದ್ದು, ಯೂರಿಯಾ ಮಾರಾಟ ಬೇಡಿಕೆಗಿಂದ ಹೆಚ್ಚಿದೆ ಎಂದರು.
ಇನ್ನೂ ಕೊರತೆ ಇದ್ದರೆ ಸರ್ಕಾರಕ್ಕೆ ತಿಳಿಸಬೇಕು. ನಮ್ಮ ಭಾರತ ಸರ್ಕಾರದ ಕಡೆಯಿಂದ ಉತ್ತಮ ಕೆಲಸಗಳಾಗಿವೆ,
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇಶದ ಪ್ರಗತಿಯನ್ನು ಬಹುಶ 100 ರಿಂದ 500 ವರ್ಷಗಳ ಮೇಲ್ಪಂತಿಗೆ ಕೊಂಡೊಯ್ಯುತ್ತಿದ್ದಾರೆ. ರೈತರಿಗೆ 20,000 ಕೋಟಿಯನ್ನು ನೀಡುತ್ತಿದ್ದೇವೆ ಇದಕ್ಕೆ ಸಹಕರಿಸಿದ ಎಲ್ಲಾ ರೈತರಿಗೂ ಅಭಿನಂದನೆಗಳು ತಿಳಿಸುತ್ತೇನೆ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿದು ಕೆಲಸ ಮಾಡಬೇಕು ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಮಾತನಾಡಿ, ರೈತರಿಗೆ ಯಾವುದೇ ಸಂಕಷ್ಟ ಆಗದಂತೆ ಅವರಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರ ಸಂಕಷ್ಟದ ಕಣ್ಣಿರು ಒರೆಸಬೇಕಿದೆ. ಈ ದಿಸೆಯಲ್ಲಿ ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿದೆ. ಇದರೊಂದಿಗೆ ಈ ಹಿಂದೆ ಪರಮಶಿವಯ್ಯ ಅವರ ವರದಿಯನ್ನು ಸಹ ನಾವು ಜಾರಿಗೊಳಿಸಬೇಕಿದ್ದು, ಇದರಿಂದ ವ್ಯರ್ಥವಾಗಿ ಸಮುದ್ರ ಸೇರುವ 500 ಟಿಎಂಸಿ ನೀರು ಲಭ್ಯವಾಗಲಿದೆ. ಪ್ರಧಾನಿ ಮೋದಿ ಅವರಿಗೆ ಆಪ್ತರಾಗಿರುವ ಜಲಶಕ್ತಿ ಖಾತೆ ಹೊಂದಿರುವ ಸಚಿವ ಸೋಮಣ್ಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಸಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಗಳಿಂದ ವಸ್ತು ಪ್ರದರ್ಶನ ಮಳಿಗೆಗಳು ಹಾಗೂ ಕೃಷಿ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಸದಸ್ಯ ಡಾ. ಕೆ.ಸುಧಾಕರ್, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಚನ್ನಹಳ್ಳಿ ರಾಜಣ್ಣ ಹಾಡೋನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಬಿ.ಜಿ ಕಲಾವತಿ, ಉಪನಿರ್ದೇಶಕರು ಗಾಯಿತ್ರಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ. ಹನುಮಂತರಾಯ, ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.