ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ……..

ವಿಜಯ ದರ್ಪಣ ನ್ಯೂಸ್…

ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ……..

ಅಲೆಮಾರಿಗಳ ಅಲೆದಾಟಕ್ಕೆ ಪೂರ್ಣವಿರಾಮ ನೀಡಬೇಕಾದ ಸಮಯ ಬಂದಿದೆ.

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಊಟ, ಬಟ್ಟೆ ಮತ್ತು ವಸತಿ ಬಹಳ ಮುಖ್ಯವಾದದ್ದು. ಆಧುನಿಕ ನಾಗರಿಕ ಸಮಾಜ ಅಭಿವೃದ್ಧಿ ಹೊಂದಿದಂತೆ ಊಟ, ಬಟ್ಟೆಗಿಂತ ಮನೆ ಎಂಬ ವಾಸ ಸ್ಥಳವೇ ಬಹುಮುಖ್ಯವಾಯಿತು. ಪ್ರತಿಯೊಬ್ಬರೂ ಮುಖ್ಯವಾಗಿ ಮಧ್ಯಮ ವರ್ಗದವರು ಮತ್ತು ಬಡವರ ಜೀವನದ ಬಹುದೊಡ್ಡ ಆಸೆ ಸ್ವಂತ ಮನೆ ಹೊಂದುವುದು. ಆದರೆ ಇಲ್ಲಿ ನೆಲೆಯೇ ಇಲ್ಲದ ಅಲೆಮಾರಿ ಬುಡಕಟ್ಟು ಜನಾಂಗದ ಈಗ ಮುಖ್ಯ ವಾಹಿನಿಯ ಗಮನ ಸೆಳೆಯುತ್ತಿದೆ.

ಇಂತಹ ಸನ್ನಿವೇಶದಲ್ಲಿ ಒಳ ಮೀಸಲಾತಿಯ ವಿಷಯ ವಿವಾದವಾಗಿ, ಕೊನೆಗೆ ಪರಿಹಾರ ರೂಪದಲ್ಲಿ ಒಂದು ಸೂತ್ರ ಸಿದ್ಧವಾಗಿದೆ. ಆ ಸೂತ್ರದ ಪ್ರಕಾರ ಅಲೆಮಾರಿ ಜನಾಂಗವನ್ನು ಮೂರನೇ ವರ್ಗಕ್ಕೆ ಸೇರಿಸಿ ಅಲ್ಲಿಯ ಬಲಿಷ್ಠರೊಂದಿಗೆ ಸ್ಪರ್ಧಿಸಲು ಹೇಳಿರುವುದರಿಂದ ಅಲೆಮಾರಿ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂಬ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿದೆ ಮತ್ತು ಹೋರಾಟ ನಡೆಯುತ್ತಿದೆ.

ಅಲೆಮಾರಿಗಳೆಂದರೆ ಅದೊಂದು ಸಮುದಾಯ. ನಿರ್ಧಿಷ್ಟವಾಗಿ ವಾಸಿಸಲು ಯಾವುದೇ ಸ್ಥಳ ಅಥವಾ ಪ್ರದೇಶವಿಲ್ಲದೆ ಊರಿಂದ ಊರಿಗೆ ಅಲೆಯುತ್ತಾ, ಸಣ್ಣಪುಟ್ಟ ಕಾಡಿನ, ನಾಡಿನ, ಕೈಕಸುಬಿನ ವಸ್ತುಗಳನ್ನು ಮಾರಾಟ ಮಾಡುತ್ತಾ, ಕೆಲವೊಮ್ಮೆ ಭಿಕ್ಷೆ ಬೇಡುತ್ತಾ, ಹಲವೊಮ್ಮೆ ಕೂಲಿ ಕೆಲಸ ಮಾಡುತ್ತಾ, ಎಲ್ಲೆಂದರಲ್ಲಿ ಊರು ಸುತ್ತುತ್ತಾ ಅಲೆಯುವ ಸಮುದಾಯವನ್ನು ಅಲೆಮಾರಿ ಸಮುದಾಯ ಎಂದು ಕರೆಯಲಾಗುತ್ತದೆ.

ಈ ಅಲೆದಾಟದ ಕಾರಣದಿಂದ ಅವರಿಗೆ ಒಂದು ನಿರ್ದಿಷ್ಟ ಮನೆಯಾಗಲಿ, ಅವರ ಮಕ್ಕಳಿಗೆ ಶಿಕ್ಷಣವಾಗಲಿ, ಒಂದು ಪರಂಪರಾಗತವಾದ ಉದ್ಯೋಗವಾಗಲಿ ಇರುವುದಿಲ್ಲ. ಜೀವನಪೂರ್ತಿ ಹೀಗೆಯೇ ಅಲೆಯುತ್ತಾರೆ.

ಇಂತಹ ಒಂದು ಸಮುದಾಯ ಈಗಲೂ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ ಎಂಬುದಕ್ಕೆ ನಿಜಕ್ಕೂ ನಾವೆಲ್ಲರೂ ತಲೆತಗ್ಗಿಸಲೇಬೇಕಾಗಿದೆ. ಮುಖ್ಯವಾಗಿ ಕರ್ನಾಟಕದ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ವಸತಿ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಮುಖ್ಯ ನ್ಯಾಯಾಧೀಶರು, ಮಾಧ್ಯಮಗಳವರು, ಧಾರ್ಮಿಕ ಮುಖಂಡರು ಮುಂತಾದವರು ಹೆಚ್ಚು ಸಂಕೋಚದಿಂದ ತಲೆತಗ್ಗಿಸಬೇಕಾದ ವಿಷಯವಿದು. ಏಕೆಂದರೆ ನಮ್ಮ ನಡುವಿನ ಒಂದು ಸಮುದಾಯವೇ ಇನ್ನು ಅಲೆಮಾರಿಯಾಗಿ ಜೀವನ ಸಾಗಿಸುತ್ತಿದೆ ಎಂದರೆ ಅದು ಅದು ಶೋಚನೀಯ ಪರಿಸ್ಥಿತಿ. ಅದಕ್ಕೆ ನಾವೆಲ್ಲರೂ ಹೊಣೆ ಹೊರಬೇಕಿದೆ‌.

ಅಲೆಮಾರಿಗಳಿಗೆ ಒಂದು ನೆಲೆ ಕಲ್ಪಿಸಲಾಗದ, ಅವರ ಕಡಿಮೆ ಸಂಖ್ಯೆಯ ಕಾರಣಕ್ಕೆ ರಾಜಕೀಯ ಮತ್ತು ಆಡಳಿತಾತ್ಮಕವಾಗಿ ಯಾವುದೇ ನ್ಯಾಯಯುತ ಸ್ಥಾನಮಾನ ನೀಡದ, ಅವರ ಮಕ್ಕಳನ್ನು ಬೀದಿಯಲ್ಲಿ ಬೆಳೆಸುತ್ತಿರುವ ಈ ಸಮಾಜ ಮತ್ತು ಸರ್ಕಾರ ನಿಜಕ್ಕೂ ಕ್ಷಮಿಸಲಾರದ ತಪ್ಪು ಮಾಡಿದೆ. ಈಗ ಅದಕ್ಕೆ ಒಂದು ಪರಿಹಾರ ನೀಡುವ ಸಮಯ ಬಂದಿದೆ.

ಮುಖ್ಯವಾಗಿ ವಸತಿ ಇಲಾಖೆ ತನ್ನ ಇತರೆ ಕಾರ್ಯಯೋಜನೆಗಳನ್ನು ಕಡಿಮೆ ಮಾಡಿ ಅಲೆಮಾರಿಗಳಿಗೆ ಒಂದು ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅವರಿಗಾಗಿ ಪ್ರತ್ಯೇಕವಾಗಿ ಹಣ ನಿಗದಿ ಮಾಡಿ ಅವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿ, ಅವರಿಗೆ ಉದ್ಯೋಗ ಒದಗಿಸಿ, ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಯುದ್ದೋಪಾದಿಯ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಐಎಎಸ್ ಅಧಿಕಾರಿ ಒಬ್ಬರನ್ನು ನಿಯೋಜನೆ ಮಾಡಬೇಕು. ಒಂದು ವೇಳೆ ಈಗಾಗಲೇ ಆ ರೀತಿಯ ಯೋಜನೆಗಳು ಇದ್ದರೆ ಅದನ್ನು ಆಸಕ್ತಿಯಿಂದ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಅವರಿಗಾಗಿಯೇ ಪ್ರತ್ಯೇಕ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಅದು ಸರ್ಕಾರದ ಬಹುದೊಡ್ಡ ಕರ್ತವ್ಯ.

ಈ ನಡುವಿನ ಮತ್ತೊಂದು ವಿಷಯವೆಂದರೆ, ಒಳ ಮೀಸಲಾತಿಯ ಅನುಷ್ಠಾನದಲ್ಲಿ ದಲಿತ ಸಮುದಾಯಗಳ ನಡುವೆ ಸಂಘರ್ಷಕ್ಕೆ ಬದಲು ಸೌಹಾರ್ದತೆ, ಸಹೋದರತೆ, ಸಹಕಾರ ಮತ್ತು ಸಮನ್ವಯತೆ ಇರಲಿ…..

ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷಗಳ ನಂತರ ಕರ್ನಾಟಕದಲ್ಲಿ ಮೀಸಲಾತಿ ಮತ್ತೊಂದು ರೂಪದಲ್ಲಿ ಮಗ್ಗಲು ಬದಲಾಯಿಸಿದೆ……

ಎದೆಗೆ ಬಿದ್ದ ಅಕ್ಷರ ಪ್ರಜ್ಞೆಯಾಗಿ ಜಾಗೃತಗೊಳ್ಳಲು ಸುಮಾರು 25 – 30 ವರ್ಷಗಳು ಉರುಳಿದವು. ಅಂದರೆ ಸ್ವತಂತ್ರ ಬಂದು ಸುಮಾರು 25 – 30 ವರ್ಷಗಳ ನಂತರ ಅಂಬೇಡ್ಕರ್ ಚಿಂತನೆಗಳು ವ್ಯಾಪಕವಾಗಿ ಸಮಾಜದಲ್ಲಿ ಬಂಡಾಯ ಚಳುವಳಿಯಾಗಿ ರೂಪಗೊಂಡವು. ಎಪ್ಪತ್ತು ಎಂಬತ್ತರ ದಶಕದ ಆ ಸಂದರ್ಭದಲ್ಲಿ ಅದೇ ಜಾಗೃತ ಮನಸ್ಥಿತಿ ನಿಧಾನವಾಗಿ ಒಳ ಮೀಸಲಾತಿಯ ಅವಶ್ಯಕತೆ ಮತ್ತು ಅನಿವಾರ್ಯತೆ ಮೊಳಕೆಯೊಡೆಯಲು ಕಾರಣವಾಯಿತು. ಅದರಲ್ಲೂ ಈ ಬಂಡಾಯ ಚಳುವಳಿ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು.

ಆಂಧ್ರದ ಮಾದಿಗ ದಂಡೋರ ಹೋರಾಟ ಅತ್ಯಂತ ಪ್ರಭಾವಶಾಲಿಯಾಗಿ ತನ್ನ ಹಕ್ಕುಗಳಿಗಾಗಿ ಹೋರಾಡಿತು. ಆಗಲೇ ಕರ್ನಾಟಕದಲ್ಲೂ ನಿಧಾನವಾಗಿ ಚರ್ಚೆಗಳು ಪ್ರಾರಂಭವಾಗಿ ಅದು ವಿವಿಧ ಹಂತಗಳನ್ನು ದಾಟಿ ಇದೀಗ 35 ವರ್ಷಗಳ ನಂತರ ವಿಧಾನಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಳ ಮೀಸಲಾತಿಯ ಬದಲಾದ ರೂಪುರೇಷೆಗಳನ್ನು ಒಳಗೊಂಡ ಘೋಷಣೆಯೊಂದಿಗೆ ಒಂದು ಹಂತ ತಲುಪಿದೆ.

ಭಾರತದಂತ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ, ಅತ್ಯಂತ ಅಸಮಾನತೆಯ ಜಾತಿ ಪದ್ಧತಿಯ ಆಚರಣೆ ರಕ್ತಗತವಾಗಿ ಇರುವಾಗ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ, ಸರಳವಲ್ಲ ಮತ್ತು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ನೀತಿ ನಿಯಮಗಳು ಕೆಲವರಿಗೆ ಅನುಕೂಲಕರವಾದರೆ ಮತ್ತೆ ಕೆಲವರಿಗೆ ಅನಾನುಕೂಲವಾಗುತ್ತದೆ. ಜೊತೆಗೆ ಈ ಅನಾನುಕೂಲ ಆದವರು ಕಿಡಿ ಹೊತ್ತಿಸಿ ಬೆಂಕಿ ಹಚ್ಚಲು ಇಲ್ಲಿನ ರಾಜಕೀಯ ವ್ಯವಸ್ಥೆ ಸದಾ ಕಾಯುತ್ತಿರುತ್ತದೆ. ಇದು ತನ್ನ ಸ್ವಾರ್ಥಕ್ಕಾಗಿ ಪ್ರತಿಯೊಂದನ್ನೂ ವಿಭಜಿಸುವ ಮನಸ್ಥಿತಿ ಹೊಂದಿರುತ್ತದೆ.

ಈ ನಿಟ್ಟಿನಲ್ಲಿ ಈಗಿನ ಮೀಸಲಾತಿ ಪ್ರಮಾಣದ ಅಂಕಿ ಅಂಶಗಳನ್ನು ನೋಡಬೇಕಾಗುತ್ತದೆ. ಖಂಡಿತವಾಗಲೂ ಒಳ ಮೀಸಲಾತಿಯ ಅವಶ್ಯಕತೆ ಇದ್ದೇ ಇತ್ತು. ಅದನ್ನು ಬಹುತೇಕ ಎಲ್ಲರೂ ಒಪ್ಪುತ್ತಿದ್ದರು. ಮುಖ್ಯವಾಗಿ ಗೊಂದಲವಿದ್ದದ್ದು ಯಾವ ಜಾತಿಗಳನ್ನು ಒಳಮಿಸಲಾತಿಯ ವ್ಯಾಪ್ತಿಗೆ ಒಳಪಡಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಅದನ್ನು ನೀಡಬೇಕು ಎಂದು. ಏಕೆಂದರೆ ಪರಿಶಿಷ್ಟ ಜಾತಿಗಳಲ್ಲಿಯೇ ಇದ್ದ 100 ಕ್ಕೂ ಹೆಚ್ಚು ಉಪಜಾತಿಗಳಲ್ಲಿ ಅವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ಸ್ಪರ್ಶ, ಅಸ್ಪ್ರಶ್ಯ, ಮುಂತಾದ ಸ್ಥಿತಿಗಳನ್ನು ಪರಿಗಣಿಸಬೇಕಾಗಿತ್ತು. ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ನಾನಾ ಕಾರಣಗಳಿಗಾಗಿ ಇಂದಿನ ಕಾಲಘಟ್ಟದಲ್ಲಿ ಇದನ್ನು ನೂರಕ್ಕೆ ನೂರರಷ್ಟು ಖಚಿತವಾಗಿ ಲೆಕ್ಕ ಹಾಕುವುದು ಅಷ್ಟು ಸುಲಭವಾಗಿರಲಿಲ್ಲ.

ಆದರೂ ಎಲ್ಲಾ ಒತ್ತಡಗಳ ನಡುವೆ ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ಅವರು ಒಂದಷ್ಟು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು, ಮಾಹಿತಿಯನ್ನು ಹಂಚಿಕೊಂಡು ಕೆಲವು ಸಲಹೆಗಳನ್ನು ನೀಡಿದ್ದರು. ಅವರು ಶಿಫಾರಸು ಮಾಡಿದ್ದ ಸಲಹೆಗಳನ್ನು ಸಂಪುಟದಲ್ಲಿ ಚರ್ಚೆ ಮಾಡಿ ಮೂರು ವಿಭಾಗಗಳಿಗೆನ್ನಾಗಿ ಮಾಡಿ ಹಂಚಲಾಗಿದೆ. ಇದು ಸಂಪೂರ್ಣ ವಾಸ್ತವಕ್ಕೆ ಹತ್ತಿರದ ಅತ್ಯುತ್ತಮ ಎಂದು ಹೇಳಲಾಗದು. ಏಕೆಂದರೆ ಆಯಾಯ ಕಾಲಘಟ್ಟದಲ್ಲಿ ಏನೇನೋ ಬದಲಾವಣೆಗಳಾಗಬಹುದು.

ಈಗಿನ 6/6/5 ಪ್ರಮಾಣದ ಹಂಚಿಕೆ
ಸ್ವಲ್ಪ ಮಟ್ಟಿಗೆ ಎಡ ಸಮುದಾಯದ ತೀವ್ರವಾದಿಗಳಲ್ಲಿ ಅಲ್ಪ ಅಸಮಾಧಾನ ಇದ್ದರೆ ಉಳಿದ ಎಲ್ಲರೂ ಸಮಾಧಾನವಾಗಿದ್ದಾರೆ. ಅಲೆಮಾರಿ ಸಮುದಾಯಗಳಲ್ಲಿ ಒಂದಷ್ಟು ಬೇಸರವಿದೆ ಎಂಬುದನ್ನು ಗಮನಿಸುತ್ತಿದ್ಧೇವೆ. ಮುಂದಿನ ದಿನಗಳಲ್ಲಿ ಹೇಗಿದ್ದರೂ ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚನೆ ಮಾಡಿರುವುದರಿಂದ ಅದು ಮತ್ತೆ ಪುನರ್ ವಿಮರ್ಶೆ ಮಾಡಲು ಅವಕಾಶವಿದೆ. ಅಲ್ಲಿ ಅದನ್ನು ಕೂಡ ಸರಿಪಡಿಸುವ ಕೆಲಸವಾಗಲಿ.

ಮುಖ್ಯವಾಗಿ ಈ ಒಳ ಮೀಸಲಾತಿ ಹೋರಾಟದ ಪರಿಣಾಮವಾಗಿ ದಲಿತ ಚಳುವಳಿ, ದಲಿತ ಸಂಘಟನೆ, ದಲಿತ ಶಕ್ತಿ ಒಡೆದು ಹೋಗದಿರುವಂತೆ ಕಾಯುವ ಜವಾಬ್ದಾರಿ ಹೋರಾಟಗಾರರಿಗೆ ಇರಬೇಕಾಗಿದೆ. ದಲಿತ ಪ್ರಜ್ಞೆ ಎಂಬುದು ಕೇವಲ ಈ ರೀತಿಯ ಮೀಸಲಾತಿ ವಿಷಯಕ್ಕೆ ಮಾತ್ರ ಸೀಮಿತವಾಗಬಾರದು. ಅದು ಸಂವಿಧಾನ ರಕ್ಷಣೆಯ ಎಲ್ಲ ಶೋಷಿತ ಸಮುದಾಯಗಳ ಆಶಾಕಿರಣವಾಗಿ ಮೂಡಿ ಬರುತ್ತಿರುವ ಸಂದರ್ಭದಲ್ಲಿ ಒಳ ಮೀಸಲಾತಿಯ ವಿಷಯವೇ ಪ್ರಧಾನವಾದರೆ ಮೇಲ್ವರ್ಗದ ಮೀಸಲಾತಿ ವಿರೋಧಿ ಮನಸ್ಥಿತಿಗೆ ಪರೋಕ್ಷ ನೈತಿಕ ಬೆಂಬಲ ನೀಡಿದಂತಾಗುತ್ತದೆ.

ಈಗಿನ ಖಾಸಗೀಕರಣದ ಕಾರ್ಪೊರೇಟ್ ಸಂಸ್ಕೃತಿಯ ಸಂದರ್ಭದಲ್ಲಿ ಸರ್ಕಾರಗಳು ಬಂಡವಾಳಶಾಹಿಗಳ ಹಣತಿಯಂತೆ ಕೆಲಸ ಮಾಡುತ್ತಿರುವಾಗ ಮೀಸಲಾತಿಯ ವಾಸ್ತವದ ಪ್ರಯೋಜನ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ದಲಿತ ಸಂವೇದನೆ ಮುಖ್ಯವಾಗಬೇಕೆ ಹೊರತು ಮೀಸಲಾತಿ ಅದರ ಒಂದು ಭಾಗವಾಗಬೇಕು ಅಷ್ಟೇ.

ಇಲ್ಲಿ ಸಮಗ್ರ ಚಿಂತನೆ ಮತ್ತು ದೂರ ದೃಷ್ಟಿ ಮುಖ್ಯವಾಗಬೇಕು. ಬಾಬಾ ಸಾಹೇಬರು ಹೇಳಿರುವಂತೆ ಹೋರಾಟದ ರಥವನ್ನು ನಾವು ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಯಾವ ಕಾರಣಕ್ಕೂ ಅದನ್ನು ಹಿಂದಕ್ಕೆ ಚಲಿಸಲು ಬಿಡಬಾರದು. ಆ ಜವಾಬ್ದಾರಿಯನ್ನು ಎಲ್ಲಾ ಶೋಷಿತ ಸಮುದಾಯಗಳು ಹೊರಬೇಕು.

ಸಂವಿಧಾನ ರಕ್ಷಣೆಯ ಕೂಗು ಎಲ್ಲೆಡೆ ಕೇಳಿ ಬರುತ್ತಿರುವಾಗ, ದಲಿತ ಪ್ರಜ್ಞೆಯ ಜಾಗೃತಾವಸ್ಥೆ ಎಷ್ಟು ಕ್ರಿಯಾತ್ಮಕವಾಗಿ, ಕ್ರಿಯಾಶೀಲವಾಗಿ ಇರಬೇಕೆಂಬುದನ್ನು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ಅರಿತುಕೊಳ್ಳಬೇಕು. ಒಂದಷ್ಟು ಕೊಡು ಕೊಳ್ಳುವಿಕೆಯಲ್ಲಿ ವ್ಯತ್ಯಾಸಗಳಾಗಬಹುದು. ಅದೊಂದು ವ್ಯವಹಾರಿಕ ಅನುಕೂಲಗಳಷ್ಟೇ. ಅದನ್ನು ಮೀರಿ ಸಹನೆ, ಸಂಯಮ ಮತ್ತು ತ್ಯಾಗ ಒಳ ಮೀಸಲಾತಿ ಜಾರಿಯ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ. ಕಾರಣ ಇದನ್ನು ಒಂದು ಬಹುದೊಡ್ಡ ಘೋಷಣೆಯನ್ನಾಗಿ ಮಾರ್ಪಡಿಸಿದರೆ ವಿರೋಧಿ ಶಕ್ತಿಗಳು ಮೇಲುಗೈ ಪಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸುತ್ತಾ,

ಸದ್ಯ ಅಲೆಮಾರಿ ಸಮುದಾಯ ಹೊರತುಪಡಿಸಿ ಇತರರು ಇದನ್ನು ಸಂಪೂರ್ಣ ಒಪ್ಪಿಕೊಳ್ಳಲಿ. ಅಲೆಮಾರಿ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗಲಿ ಎಂದು ಆಶಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…..
9844013068……