ಭತ್ತದ ರಾಶಿಯ ರೈತ, ಚಿನ್ನದ ಅಂಬಾರಿಯ ರಾಜ, ದಸರಾ ಉದ್ಘಾಟನೆಯ ರಾಜಕೀಯ……..

ವಿಜಯ ದರ್ಪಣ ನ್ಯೂಸ್…

ಭತ್ತದ ರಾಶಿಯ ರೈತ,
ಚಿನ್ನದ ಅಂಬಾರಿಯ ರಾಜ,
ದಸರಾ ಉದ್ಘಾಟನೆಯ ರಾಜಕೀಯ……..

ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ,
ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ…….

ನಾನು ರಾಜನಲ್ಲ,
ನಾನೊಬ್ಬ ಸಾಮಾನ್ಯ ಕೃಷಿಕ,

ನನಗೆ ಅರಮನೆ ಇಲ್ಲ,
ನನಗಿರುವುದು ಹೆಂಚಿನ ಮನೆ,

ನಾನು ಆನೆಯ ಮೇಲೆ ಕುಳಿತು ಓಡಾಡುವವನಲ್ಲ,
ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವವನು ನಾನು,

ಸಿಂಹಾಸನ ಮೇಲೆ ಕುಳಿತುಕೊಳ್ಳುವವ ನಾನಲ್ಲ,
ಹುಲ್ಲು ಹಾಸಿನ ಮೇಲೆ ಮಲಗುವವ ನಾನು,

ಛತ್ರ ಚಾಮರ ಬೀಸಣಿಕೆಯ ತಂಪು ಗಾಳಿ ನನಗಿಲ್ಲ,
ಬಿಸಿಲಿನ ಝಳದಲ್ಲಿ, ಗಾಳಿಯ ರಭಸಕ್ಕೆ ಭತ್ತದ ರಾಶಿಯ ಹೊಟ್ಟು ತೂರುವವನು ನಾನು,

ಭಕ್ಷ್ಯ ಭೋಜನ ತಿನ್ನುವವನಲ್ಲ,
ರಾಗಿ, ರೊಟ್ಟಿ, ಜೋಳ, ಮೆಣಸಿನಕಾಯಿ, ಸೊಪ್ಪು, ಗೊಜ್ಜು ತಿನ್ನುವವನು ನಾನು,

ಆಳು ಕಾಳು, ಸೇವಕ, ಸೈನಿಕರು ನನಗಿಲ್ಲ,
ನನಗೆ ನಾನೇ ಕಾಲಾಳು,

ಮೈತುಂಬ ವೈಭವೋಪೇತ ಬಟ್ಟೆ ತೊಡಲು ನಾನು ಅರಸನಲ್ಲ,
ಪಂಚೆ, ಜುಬ್ಬ ಕೆಲವೊಮ್ಮೆ ಬರಿಮೈ ಫಕೀರ ನಾನು,

ಸುಗಂಧ ದ್ರವ್ಯಗಳ ವಾಸನೆ ನನಗಿಲ್ಲ, ನನಗಿರುವುದು ನನ್ನದೇ ಬೆವರಿನ ಘಮಲು, ಈ ಮಣ್ಣಿನ ಸುವಾಸನೆ,

ತಲೆಯ ಮೇಲೆ ವಜ್ರಖಚಿತ ಕಿರೀಟ ನನಗಿಲ್ಲ,
ಟವಲು ಸುತ್ತಿ, ರುಮಾಲು ಕಟ್ಟಿ
ಎಲ್ಲಾ ಕಾಲಕ್ಕೂ ಸಲ್ಲುವ ಕಿರೀಟ ಈ ನನ್ನ ವಸ್ತ್ರ,

ಟಿವಿ ಪತ್ರಿಕೆಗಳಲ್ಲಿ ಮಹಾರಾಜರು, ಸ್ವಾಮಿಗಳು, ಬುದ್ದಿಗಳು, ಧಣಿಗಳು ಎನ್ನುವ ಹೆಸರಿಲ್ಲ ನನಗೆ,
ಹೆಂಡತಿ ಕರೆಯುವ ಏನ್ರೀ, ಮಗಳು ಕರೆಯುವ ಅಪ್ಪ, ಗೆಳೆಯರು ಕರೆಯುವ ಲೇ ಎನ್ನುವುದೇ ನನ್ನ ಗುರುತು,

ಸರ್ವ ಋತುವಿನ ಹವಾ ನಿಯಂತ್ರಣ ವಾತಾವರಣ ನನಗಿಲ್ಲ,
ಬೇಸಿಗೆ, ಚಳಿ, ಮಳೆ, ಗಾಳಿಗಳೇ ನನಗೆ ಅಪ್ಯಾಯಮಾನ,

ಯಾವುದೇ ಉತ್ಸವ, ಸಂಭ್ರಮ, ಹಬ್ಬ, ಮಹೋತ್ಸವಗಳ, ಜನಜಂಗುಳಿಯ ನೂಕಾಟ, ಕರ್ಕಶ ಧ್ವನಿಗಳು ಕೇಳಿಸುವುದಿಲ್ಲ ನನಗೆ,
ಈ ಬೆಳದಿಂಗಳಲ್ಲಿ ತೋಟದ ಮನೆಯ ರಾತ್ರಿಯ ನೀರವ ಮೌನದ ಏಕಾಂತವೇ ನನ್ನ ಧ್ಯಾನ,

ದಸರಾ ಅಂಬಾರಿಯ ಮೇಲೆ ಸವಾರಿ ಮಾಡುವವರು ನೀವು,
ಪ್ರಕೃತಿಯೇ ಸವಾರಿ ಮಾಡಲು ಹೆಗಲು ನೀಡುವವರು ನಾವು,

ವೇದಘೋಷಗಳ ಮಧ್ಯೆ, ಹೋಮ ಹವನಗಳ ನಡುವೆ, ಧೂಪದ ಹೊಗೆಯ ಮಬ್ಬಿನಲಿ ಪೂಜೆ ಮಾಡುವವರು ನೀವು,
ಪ್ರಕೃತಿಯ ಎಲ್ಲಾ ಶಬ್ದ ತರಂಗಗಳಿಗೆ ಕಿವಿಯಾಗುವವರು ನಾವು,

ನಿಮ್ಮ ಬಗ್ಗೆ ಮಾತನಾಡುವವರು ಕೋಟ್ಯಂತರ ಮಂದಿ ಸದಾ ನಿಮ್ಮ ಸುತ್ತಲೂ,
ನಮ್ಮ ಬಗ್ಗೆ ನಮ್ಮದೇ ಮಾತು ನಮ್ಮ ಆತ್ಮಸಾಕ್ಷಿ, ನಾನು ಏಕಾಂಗಿ,

ಚೆನ್ನಾಗಿ ತಿಂದುಂಡವರ ಆದ್ಯತೆಗಳೇ ಬೇರೆ,
ಶ್ರಮಜೀವಿಗಳ ಅವಶ್ಯಕತೆಗಳೇ ಬೇರೆ,

ಸರ್ಕಾರಕ್ಕೊಂದು ಚೇಷ್ಟೆ, ಅರಮನೆಗೊಂದು ಕುಚೇಷ್ಟೆ, ಸಾಮಾನ್ಯರಿಗೆ ಬದುಕೇ ಒಂದು ನಿಷ್ಠೆ,

ಒಂದು ಕ್ಷಣದ ಉದ್ಘಾಟನೆಗೆ ಇಷ್ಟೆಲ್ಲಾ ರಂಪಾಟಗಳ ಗೊಡವೆ ನಮಗೇಕೆ,
ನಮಗೆ ನಾವೇ ಚಕ್ರವರ್ತಿ,
ಬೇಡ ನಮಗೆ ಹೆಸರಿನ ಕೀರ್ತಿಶನಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……