ಸರ್ಕಾರಿ ಶಾಲೆಯ ಕಿಟಕಿ ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯ : ಮಕ್ಕಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಭೇಟಿ
ವಿಜಯ ದರ್ಪಣ ನ್ಯೂಸ್ ……
ಸರ್ಕಾರಿ ಶಾಲೆಯ ಕಿಟಕಿ ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯ : ಮಕ್ಕಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಭೇಟಿ
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.26: ದೇವನಹಳ್ಳಿಯ ಕೋಟೆ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಕಟ್ಟಡದ ಕಿಟಕಿ ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸೋಮವಾರ ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು ನಮ್ಮ ಸರ್ಕಾರ ಮತ್ತು ಆಯೋಗವು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ, ಆದರೆ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡದ ಕಾಮಗಾರಿ ಸರಿಯಾಗಿ ಮಾಡಿಲ್ಲ, ಶಾಲೆಯ ಗೋಡೆಗೆ ಮತ್ತು ಸಜ್ಜೆಗೆ ಯಾವುದೇ ರೀತಿಯ ಲಿಂಕ್ ಇಲ್ಲದೆ ಕಟ್ಟಿದ್ದಾರೆ, ಕಂಬಿ ಕಟ್ಟದೆ ಸುಮ್ಮನೆ ಎರಡು ಇಂಚು ಇಟ್ಟಿಗೆ ಸಿಮೆಂಟ್ ಹಾಕಿ ಬಿಟ್ಟಿದ್ದಾರೆ, ಇದು ಹೆಚ್ಚಿನ ದಿನಗಳು ನಿಲ್ಲುವುದಿಲ್ಲ, ಆದರೆ ಇಷ್ಟು ವರ್ಷ ಹೇಗೆ ತಡೆದಿತ್ತು ಎನ್ನುವುದು ಆಶ್ಚರ್ಯ, ಈ ರೀತಿ ಆಗದಂತೆ ಮುಂದೆ ನೋಡಿಕೊಳ್ಳಬೇಕು.
ಶಿಕ್ಷಕರು ಸಹ ನಮಗೆ ತಿಳಿಸಿದ್ದಾರೆ, ಮುಂಜಾಗ್ರತೆ ಕ್ರಮ ವಹಿಸಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ, ನಮಗೆ 2016ರಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಈ ರೀತಿ ಕಾಮಗಾರಿ ಮಾಡುವ ಬಗ್ಗೆ ದೂರು ನೀಡುತ್ತಾರೆ. ಮಕ್ಕಳು ನಮ್ಮ ದೇಶದ ಆಸ್ತಿ, ಅದಕ್ಕಾಗಿ ಗುಣಮಟ್ಟದ ಕಾಮಗಾರಿ ಮಾಡಬೇಕು, ಆದರೆ ಅವರು ಕಟ್ಟಡ ಕಾಮಗಾರಿ ಮಾಡುವ ಇಂಜಿನಿಯರ್ ಗಳು ಬೇಜವಾಬ್ದಾರಿ ಕೆಲಸ ಮಾಡಿದ್ದಾರೆ.
ಶಾಲೆಯಲ್ಲಿ ಮಕ್ಕಳು ಓದುವುದಕ್ಕೆ ಬರುತ್ತಾರೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು, ಮೂರು ಮಕ್ಕಳಿಗೆ ಬೇಕಾದ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ. ಇದು ದುಃಖಕರ ಸಂಗತಿ, ಈಗಾಗಲೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಲ್ಲಾ ಹಳೆ ಮತ್ತು ಹೊಸ ಶಾಲೆಗಳ ಕಟ್ಟಡದ ಗುಣಮಟ್ಟವನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರನ್ನು ಒದಗಿಸಲು ಉಮಾ ಮಹಾದೇವನ್ ಅವರು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ನಾವು ಮಕ್ಕಳ ಸುರಕ್ಷತೆಗೆ ಮೊದಲು ಆದ್ಯತೆ ನೀಡುತ್ತೇವೆ. ಹಾಗೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟವನ್ನು ನೀಡುವಾಗ ಶುಚಿತ್ವವನ್ನು ಕಾಪಾಡಬೇಕು, ಮಕ್ಕಳಿಗೆ ಕುಡಿಯುವ ನೀರು ಮತ್ತು ಉತ್ತಮ ಗುಣಮಟ್ಟದ ಊಟವನ್ನು ನೀಡಿದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಹಾಗೂ ಶಿಕ್ಷಣದಲ್ಲಿ ಉತ್ತಮವಾಗಿ ಕಲಿಯುತ್ತಾರೆ. ಸೇವಾ ಮನೋಭಾವನೆ ಮನಸ್ಥಿತಿಯಿಂದ ಶಾಲಾ ಕಟ್ಟಡ ನಿರ್ಮಿಸಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಸಭೆ ನಡೆಸಿ ಇನ್ನೂ ಮುಂದೆ ಈ ರೀತಿ ಆಗದಂತೆ ಇಂತವಹರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಸೇರಿದಂತೆ ಶಾಲಾ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.