ದೀಪಾವಳಿ ಹಬ್ಬ: ಐದು ದಿನ ಸುರಕ್ಷಿತ ಕ್ರಮಗಳೊಂದಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ
ವಿಜಯ ದರ್ಪಣ ನ್ಯೂಸ್…
ದೀಪಾವಳಿ ಹಬ್ಬ: ಐದು ದಿನ ಸುರಕ್ಷಿತ ಕ್ರಮಗಳೊಂದಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ
ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಅಕ್ಟೋಬರ್. 08: ದೀಪಾವಳಿ ಹಬ್ಬದ ಸಂಭ್ರಮ ಸಮೀಪಿಸಿದ್ದು, ಜಿಲ್ಲೆಯಲ್ಲಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ಕಲ್ಪಿಸಲಾಗಿದ್ದು ಸುರಕ್ಷಿತ ಕ್ರಮಗಳೊಂದಿಗೆ ಪಟಾಕಿ ಮಾರಾಟ ಮಾಡಲು ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಟಾಕಿ ಮಾರಾಟ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಯಾವುದೇ ಭಾಗದಲ್ಲಿ ಪಟಾಕಿ ದುರಂತಗಳು ಸಂಭವಿಸದಂತೆ ಪಟಾಕಿ ಮಾರಾಟಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಪಟಾಕಿಯನ್ನು ಬಳಸಿ, ವಾಯುಮಾಲಿನ್ಯ ತಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ಮಾಡುತ್ತಿದ್ದಲ್ಲಿ, ಕೂಡಲೇ ಅದನ್ನು ಪರಿಶೀಲಿಸುವ ಜತೆಗೆ ಅಲ್ಲಿ ಹಸಿರು ಪಟಾಕಿಯಲ್ಲದೆ, ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು.
ಜಿಲ್ಲೆಯಲ್ಲಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ಅನಧಿಕೃತವಾಗಿ ಪಟಾಕಿ ಸಂಗ್ರಹಣೆ ಮಾಡಿಕೊಂಡರೆ, ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕು ಎಂದರು.
ಹಬ್ಬದ ಸಂದರ್ಭದಲ್ಲಿ ರಾತ್ರಿ 08 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದು ಸಂಪೂರ್ಣ ನಿಷೇಧಿಸಿದೆ. ಹಸಿರು ಪಟಾಕಿಗಳನ್ನು ಬಿಟ್ಟು ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಡಿವೈಎಸ್ಪಿ ರವಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.