ಕಿರು ಹೆಜ್ಜೆಯಲ್ಲೇ ಯಶಸ್ಸಿನ ಸಾಧ್ಯತೆ ಹೆಚ್ಚು!!

ಲೇಖನ:
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ಮೊ: ೯೪೪೯೨೩೪೧೪೨

ಜೀವನವೆಂಬುದು ಆಟವಿದ್ದಂತೆ ಎಂದು ಹೇಳುತ್ತಾರೆ. ಆಟ ಎಲ್ಲರಿಗೂ ಇಷ್ಟ ಆದರೂ ಕೆಲವರು ಮಾತ್ರ ಗೆಲ್ಲುತ್ತಾರೆ ಏಕೆ ಎಂಬ ಪ್ರಶ್ನೆಯು ಕಾಡುತ್ತದೆಯಲ್ಲವೇ? ಹೌದು, ಉನ್ನತ ಸಾಧಕರು ಈ ಆಟದ ರಹಸ್ಯ ನಿಯಮಗಳನ್ನು ತಿಳಿದಿದ್ದಾರೆ. ಹಾಗಾದರೆ ಅವರು ತಿಳಿದ ನಿಯಮಗಳಾವವು ಅಂತ ನೋಡುವುದಾದರೆ ಹೀಗಿವೆ.

ಸ್ಪಷ್ಟ ಮತ್ತು ಸಶಕ್ತ ಗುರಿ
ಗುರಿಯೇ ನಿಮ್ಮ ಕಿರು ಹೆಜ್ಜೆ ಆಗಿರಲಿ ಅದುವೇ ದೃಢ ಹೆಜ್ಜೆ. ಕಿರು ಹೆಜ್ಜೆಯಲ್ಲೇ ಯಶಸ್ಸಿನ ಸಾಧ್ಯತೆ ಹೆಚ್ಚು! ಏಕೆಂದರೆ, ಗುರಿಗಳನ್ನು ಹೊಂದಿಸಿದಾಗ ಹೆಚ್ಚು ತುರ್ತು ಮತ್ತು ಉದ್ದೇಶದಿಂದ ಕೆಲಸ ಮಾಡಬಲ್ಲಿರಿ. ನಿಗದಿ ಪಡಿಸಿದ ಆದ್ಯತೆಗಳಿಂದ ನಿಗದಿತ ಗಡುವಿನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.. ಗುರಿಗಳು ಗೆಲುವಿನ ಬಾಗಿಲಿಗೆ ಕರೆದೊಯ್ಯುತ್ತವೆ ಎಂಬುದನ್ನು ಮರೆಯದಿರಿ.

ಮನಸ್ಸನ್ನು ಗುರಿಯ ಕಡೆ ಮಾತ್ರ ಅಂದರೆ ಒಂದೆಡೆ ನಿಲ್ಲಿಸುವುದು ಕಷ್ಟದ್ದು ಅನಿಸುತ್ತದೆ. ಹೀಗಾಗಿ ಗುರಿ ಸಾಧನೆಯನ್ನು ಮುಂದೂಡಲಾಗುತ್ತದೆ. ತನ್ನ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸಲು ಮಹಾ ಜೆನ್ ಗುರು ರಿನಜಯ್ ಆಗಾಗ್ಗೆ ತನ್ನ ಬೆರಳನ್ನು ಮೇಲಕ್ಕೆತ್ತುತ್ತಿದ್ದ ಮತ್ತು ನಿಧಾನವಾಗಿ ಪ್ರಶ್ನಿಸುತ್ತಿದ್ದ ‘ಈ ಕ್ಷಣದಲ್ಲಿ ಯಾವುದರ ಕೊರತೆಯಿದೆ?’ ಮನಸ್ಸಿನ ಮಟ್ಟದಲ್ಲಿ ಇದಕ್ಕೆ ಉತ್ತರದ ಅವಶ್ಯಕತೆಯಿಲ್ಲ. ನಿಮ್ಮ ಗಮನವನ್ನು ಈ ಹೊತ್ತಿನಲ್ಲಿ ಗಾಢವಾಗಿ ತೆಗೆದುಕೊಂಡು ಹೋಗುವಂತೆ ವಿನ್ಯಾಸಗೊಳಿಸಲಾಗಿದೆ. ಜೆನ್ ಸಂಪ್ರದಾಯದಲ್ಲಿ ಅದೇ ರೀತಿಯ ಪ್ರಶ್ನೆಯೊಂದಿದೆ. “ಈ ಹೊತ್ತಿನಲ್ಲಿ ಅಲ್ಲದಿದ್ದರೆ ಯಾವಾಗ?” ಗಮನವನ್ನು ಕೇಂದ್ರೀಕರಿಸದೇ ಇದ್ದರೆ ಮಾರ್ಗವನ್ನು ಮರೆತುಬಿಡಬಹುದು. ಆದ್ದರಿಂದ ಗುರಿಯತ್ತ ಗುರಿಯಿಡಿ.

ಆರಾಮ ವಲಯವನ್ನು ಬಿಟ್ಟು ಹೊರ ಬರುವುದು

ನೀವು ಬಯಸುವ ಎಲ್ಲವೂ ನಿಮ್ಮ ಆರಾಮ ವಲಯದ ಗಡಿಯ ಹೊರಗೆ ಇರುತ್ತದೆ. ನಮ್ಮಲ್ಲಿ ಬಹಳಷ್ಟು ಜನರು ಆಟ ಗೆಲ್ಲಲು ಬಯಸುತ್ತಾರೆ. ಆದರೆ, ಸೌಕರ್ಯ ವಲಯದಿಂದ ಹೊರಬರಲು ಹೆದರುತ್ತಾರೆ. ಏಕೆಂದರೆ ಗುರಿಗಳ ಸಾಧನೆಯು ಸಮಸ್ಯೆಗಳಿಂದ ಕೂಡಿರುತ್ತದೆ. ಸಮಸ್ಯೆಗಳಿಂದ ದೂರವಿದ್ದರೆ ಬಹುಮಾನದ ಹತ್ತಿರ ಚಲಿಸಲು ಆಗುವುದಿಲ್ಲ. ‘ಕಲ್ಪನೆಗಳಿಂದ ತುಂಬಿದ ಮನಸ್ಸನ್ನು ಹೊಂದಿರುವುದಕ್ಕಿಮತ ವಾಸ್ತವವವನ್ನು ಎದುರಿಸುವುದು ಉತ್ತಮ.’ ಜೀವನವು ಒಂದು ಸಂಖ್ಯೆಯ ಆಟವಾಗಿದೆ. ಪದೇ ಪದೇ ಅವಕಾಶಗಳನ್ನು ಬಳಸಿಕೊಳ್ಳಲು ಹಿಂಜರಿಯದಿರಿ. ‘ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.’

ತಪ್ಪುಗಳನ್ನು ಮಾಡಿ ಅದರಿಂದ ಕಲಿಯುವುದು ಸಹ ಆಟದ ನಿಯಮವಾಗಿದೆ. ‘ಕೆಳಗೆ ಬಿದ್ದ ನಂತರ ಮತ್ತೆ ಮೇಲೇಳುವುದು ಒಂದು ಯಶಸ್ಸು.’ ಮೇಲಿಂದ ಮೇಲೆ ಹೊಸ ವಿಷಯಗಳನ್ನು ಪ್ರಯತ್ನಿಸುತ್ತಿರುವಾಗ ತಪ್ಪುಗಳಾಗುವುದು ಸೋಲನ್ನು ಅನುಭವಿಸುದೂ ಸಹಜ. ‘ಜನರು ಸೋಲನ್ನು ಅನುಭವಿಸಿದರೆ ಮಾತ್ರ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ.’ಎಂದಿದ್ದಾರೆ ಬಲ್ಲವರು. ತಪ್ಪುಗಳು ಆಟದ ಅವಿಭಾಜ್ಯ ಅಂಗಗಳು. ಜೀವನವೆಂಬ ಆಟದಲ್ಲಿ ಗೆಲ್ಲದವರು ತಮ್ಮ ತಪ್ಪುಗಳಿಂದ ಪಾಠವನ್ನು ಕಲಿಯಲು ಸಮಯವನ್ನು ತೆಗೆದುಕೊಳ್ಳುವುದಿಲ್ಲ. ‘ತಪ್ಪುಗಳಿಂದ ಕಲಿಯುವವರಿಗೆ ಮಾತ್ರ ಜೀವನವು ಪ್ರತಿಫಲ ನೀಡುತ್ತದೆ.’

ಕೆಲವು ಸಲ ನಂತರ (ಲೇಟರ್) ಅಂದಿದ್ದು ನೆವರ್ ಆಗಿ ಬಿಡುತ್ತದೆ. ನಿನ್ನೆಗಿಂತ ಇಂದು ಚುರುಕಾಗಿ ಮತ್ತು ಕಠಿಣವಾಗಿ ಕೆಲಸ ಮಾಡಲು ಬೇಕಾಗಿರುವುದನ್ನು ನಿರಂತರವಾಗಿ ಕಲಿಯುತ್ತಿರುವುದು ಸಹ ಆಟ ಗೆಲ್ಲುವ ನಿಯಮವಾಗಿದೆ. ನಿರಂತರವಾಗಿ ಕಲಿಯುವ ಬೆಳೆಯುವ ಮತ್ತು ಸುಧಾರಿಸುವ ಉತ್ಸಾಹ ಮನದಲ್ಲಿರಬೇಕು. ಇದರಿಂದ ಉತ್ತಮವಾಗಿ ಮಾಡಲು ವೇಗವಾಗಿ ಯೋಚಿಸಲು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ. ಹಾಗೆಯೇ ಆ ನೋವಿನ ಕತೆಗೂ ಯಶಸ್ವಿ ಅಂತ್ಯವಿರುತ್ತದೆ. ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಹಾಕಿ.

ಜೀವನವೆಂದರೆ ನಿಮ್ಮನ್ನು ನೀವು ಹುಡುಕುವುದಲ್ಲ ನಿಮ್ಮನ್ನು ನೀವು ಸೃಷ್ಟಿಸಿಕೊಳ್ಳುವುದು ಎಂದಿದ್ದಾರೆ ಜಾರ್ಜ್ ಬರ್ನಾಡ್ ಷಾ. ಅದರಂತೆ ಹೊಸ ಆಲೋಚನೆಗಳು, ಜನರು, ಮತ್ತು ಸ್ಥಳಗಳಿಗೆ ಒಡ್ಡಿಕೊಳ್ಳುವುದೂ ಸಹ ಜೀವನವೆಂಬ ಆಟದ ನಿಯಮವಾಗಿದೆ. ಹೊಸತನಕ್ಕೆ ಒಡ್ಡಿಕೊಳ್ಳದಿರುವುದಕ್ಕೆ ಕಾರಣ ನಮ್ಮೊಳಗಿರುವ ಭಯ ‘ಧೈರ್ಯದ ಕೊರತೆಯೇ ನಿಮ್ಮನ್ನು ಉತ್ತುಂಗಕ್ಕೇರದಂತೆ ತಡೆಯುತ್ತದೆ..’ಈ ಪ್ರಪಂಚದಲ್ಲಿ ನಾವು ಭಯಪಡಬೇಕಾಗಿರುವುದು ನಮ್ಮ ಭಯಕ್ಕೆ ಮಾತ್ರವೇ ಎಂದು ಅಮೇರಿಕಾ ಅಧ್ಯಕ್ಷ ರೂಸವೆಲ್ಟ್ ಎಂದೋ ಹೇಳಿದ್ದಾರೆ. ’ಭಯವನ್ನು ಆಭಯವಾಗಿ ಬದಲಾಯಿಸಿಕೊಳ್ಳಬೇಕು’ ರೋಮನ್ ಸಾಮ್ರಾಜ್ಯಾಧಿಪತಿ ಜೂಲಿಯಸ್ ಸೀಸರ್‌ಗೆ ಮಿಂಚು ಗುಡುಗು ಎಂದರೆ ವಿಪರೀತ ಭಯವಿತ್ತು. ಎಂದರೆ ನೀವು ನಂಬುತ್ತೀರಾ? ಪರಿಧಿಯನ್ನು ವಿಸ್ತರಿಸಬೇಕು. ಹೊಸ ದೃಷ್ಟಿಕೋನಗಳು ಮತ್ತಷ್ಟು ಬೆಳವಣಿಗೆಗೆ ಅವಕಾಶ ಒದಗಿಸುತ್ತವೆ. ಬೆಳೆದಂತೆ ಆಳವಾದ ಒಳನೋಟ ಪಡೆಯುತ್ತೀರಿ.

ಮಂದ ಬೆಳಕಿನಲ್ಲಿ ನೀವು ನೋಡಬಹುದು, ಆದರೆ ನಿಮ್ಮ ದೃಷ್ಟಿಯನ್ನು ಬೆಳಗಿಸಲು ನಿಮಗೆ ಸ್ವಲ್ಪ ಪ್ರೇರಣೆ ಬೇಕು. ಇಚ್ಛಾಶಕ್ತಿ ಇಲ್ಲದಿದ್ದರೆ ಪ್ರೇರಣೆ ಕೆಲಸ ಮಾಡುವುದಿಲ್ಲ. ಕೀಲಿಯಿಲ್ಲದೆ ಬೀಗ ಹಾಕಿದ ಬಾಗಿಲು ತೆರೆಯಲು ಸಾಧ್ಯವಿಲ್ಲ. ಸರಿಯಾದ ಪ್ರೇರಣೆಯೊಂದಿಗೆ ಸರಿಯಾದ ಜನರ ಸಹಾಯದಿಂದ ಸರಿಯಾದ ಕೆಲಸಗಳನ್ನು ಮಾಡಲು ನೀವು ಜೀವನದ ಆಟದಲ್ಲಿ ಜನಿಸಿದ್ದೀರಿ. ಹಾಗಿದ್ದರೆ ತಡವೇಕೆ?. ಪ್ರೇರಣೆ ಇಲ್ಲದೆ ಜೀವನದ ಆಟವನ್ನು ಗೆಲ್ಲಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮೊದಲು ನಿಮ್ಮನ್ನು ನೀವು ನಂಬಿ. ಮೊದಲು ನಿಮ್ಮನ್ನು ನೀವು ಗೆಲ್ಲಿ. ಅನಂತರ ಜಗತ್ತು ನಿಮ್ಮ ಕಾಲ ಕೆಳಗಿರುತ್ತದೆ.