ತಂತ್ರಜ್ಞಾನದಲ್ಲಿ ಇಸ್ರೇಲ್ ದೇಶವನ್ನು ಮೀರಿಸುವಂತಹ ರೈತರು  ಮಾದರಿ ಕೃಷಿ ಮಾಡುತ್ತಿದ್ದಾರೆ : ಬೆಂಗಳೂರು ಕೃಷಿ ವಿ ವಿ ಕುಲಪತಿ ಸುರೇಶ್ 

ವಿಜಯ ದರ್ಪಣ ನ್ಯೂಸ್…

ತಂತ್ರಜ್ಞಾನದಲ್ಲಿ ಇಸ್ರೇಲ್ ದೇಶವನ್ನು ಮೀರಿಸುವಂತಹ ರೈತರು  ಮಾದರಿ ಕೃಷಿ ಮಾಡುತ್ತಿದ್ದಾರೆ : ಬೆಂಗಳೂರು ಕೃಷಿ ವಿ ವಿ ಕುಲಪತಿ ಸುರೇಶ್

ಶಿಡ್ಲಘಟ್ಟ : ತಂತ್ರಜ್ಞಾನದಲ್ಲಿ ಇಸ್ರೇಲ್ ದೇಶವನ್ನು ಮೀರಿಸುವಂತಹ ಮಟ್ಟಿಗೆ ನಮ್ಮ ಚಿಕ್ಕಬಳ್ಳಾಪುರ ,ಕೋಲಾರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ನಿಪುಣರು ,ತಂತ್ರಜ್ಞಾನಿಗಳು ಹಾಗು ಶ್ರಮಿಕರಾಗಿ ಮಾದರಿ ಕೃಷಿ ಮಾಡುತ್ತಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ತಿಳಿಸಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕೃಷಿ ಕ್ಷೇತ್ರೋತ್ಸವ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಭಾಗದಲ್ಲಿ ರೈತರು ನೈಸರ್ಗಿಕ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ವ್ಯವಸಾಯವನ್ನು ಮಾಡುತ್ತಿದ್ದು ,
ಇಸ್ರೇಲ್ ದೇಶವು ಕೃಷಿ ತಂತ್ರಜ್ಞಾನದಲ್ಲಿ ವಿಶ್ವದ ಗಮನ ಸೆಳೆದರೆ, ಬಯುಸೀಮೆ ಭಾಗದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಕೃಷಿ ತಂತ್ರಜ್ಞಾನದಲ್ಲೂ ಮುಂದುವರಿದು ಇತರೆ ಜಿಲ್ಲೆ ರಾಜ್ಯ ಮತ್ತು ದೇಶದವರಿಗೆ ಮಾದರಿಯಾಗಿದ್ದಾರೆ ಎಂದು ಹಿತನುಡಿಗಳನ್ನು ನುಡಿದರು.

ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದ್ದಲ್ಲಿ ಲಾಭದಾಯಕ ಎಂಬುದನ್ನು ಸಾಬೀತು ಪಡಿಸಿ ,ಕೃಷಿಯು ನಷ್ಟದಾಯಕವಲ್ಲ ಎಂದು ತೋರಿಸುತ್ತಿದ್ದಾರೆ ರೈತರ ಶ್ರಮ, ತಾಂತ್ರಿಕತೆ ಬಳಕೆಗೆ ಅವರು ಶ್ಲಾಘಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಎಂ.ಭೀಮೇಶ್ ಮಾತನಾಡಿ, ಜಿಕೆವಿಕೆ ಕೃಷಿ ವಿಭಾಗದ ವಿದ್ಯಾರ್ಥಿಗಳು ಕೃಷಿಯಲ್ಲಿ ಅವರು ಕೂಡ ಕಲಿತು ನಮಗೂ ಕಲಿಸಿದ್ದಾರೆ ಕಲಿಕೆಗೆ ವಯಸ್ಸು, ಜಾತಿ, ಅಧಿಕಾರ ಮುಖ್ಯವಲ್ಲ, ಎಲ್ಲರೂ ಕೂಡ ಕಲಿಯಬಹುದು , ಕಲಿಸಬಹುದು , ಕಲಿಯುವುದು ಸಾಗರದಷ್ಟಿದೆ ಎಂಬುದನ್ನು ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ ಎಂದರು.

ನಮ್ಮೂರಲ್ಲಿ 3 ತಿಂಗಳ ಕಾಲ ನೆಲೆಸಿದ್ದು, ತಮ್ಮ ನಡೆ ನುಡಿಯಿಂದಾಗಿ ಅವರು ನಮ್ಮ ಗ್ರಾಮದ ಪ್ರತಿಯೊಬ್ಬರ ಮನೆ ಮಕ್ಕಳಂತಾಗಿದ್ದಾರೆ ಎಂದು ವಿದ್ಯಾರ್ಥಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಈ ಕಾಲದಲ್ಲಿ ಯುವಕರನ್ನು ಕೃಷಿಯತ್ತ ಸೆಳೆಯಲು ಸರ್ಕಾರವು ಉತ್ತೇಜಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿಸಬೇಕು ಎಂದು ಮನವಿ ಮಾಡಿದರು.

ಕಳೆದ 3 ತಿಂಗಳಿಂದ ಗ್ರಾಮಸ್ಥರು ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಂಡರು ಎಂದು ಕೃಷಿ ವಿಭಾಗದ ವಿದ್ಯಾರ್ಥಿಗಳು ಗ್ರಾಮದ ಬಗ್ಗೆ ಅಭಿಂದನೀಯ ಮಾತುಗಳನ್ನಾಡಿದರು.
ಇದೇ ವೇಳೆ ವಿವಿಧ ರೀತಿಯ ಕ್ಷೇತ್ರೋತ್ಸವ ,ವಸ್ತು ಪ್ರದರ್ಶನ , ಮುರ್ರಾ ಹೆಮ್ಮೆಗಳು ,ಮಲೆನಾಡು ಗಿಡ್ಡ ತಳಿಯ ಹಸುಗಳು ಹಾಗು ಡ್ರೋನ್ ಮ‌ೂಲಕ ಔಷಧಿ ಸಿಂಪಡಣೆ ಪ್ರಾತಕ್ಷ್ಯತೆ ಗಮನ ಸೆಳೆದವವು.

ವಿದ್ಯಾರ್ಥಿಗಳು ಪಂಚೆ ,ಶರ್ಟ್ ಹಾಗು ವಿದ್ಯಾರ್ಥಿನಿಯರು ಸೀರೆ ಉಟ್ಟು, ಸಾಂಪ್ರದಾಯಿಕವಾಗಿ ಹಳ್ಳಿಯ ರೈತರ ಮಕ್ಕಳಂತೆ ಶಿಸ್ತು ಬದ್ದವಾಗಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಕೆಎಂಎಫ್ ಮಾಜಿ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ, ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು), ಜಿಕೆವಿಕೆಯ ಡಾ.ಎನ್.ಬಿ.ಪ್ರಕಾಶ್, ವ್ಯವಸ್ಥಾಪಕ ಗೋಪಾಲ ಮೂರ್ತಿ, ಹರೀಶ್ ರೆಡ್ಡಿ, ರೇಷ್ಮೆ ಇಲಾಖೆ ಸೋಮಣ್ಣ, ಡಾ.ಮಂಜುನಾಥ್,ಡಾ.ಚನ್ನಕೇಶವ ಡಾ.ಕವಿತಾ, ಡಾ.ಸಿ.ಎಂ.ಸವಿತಾ, ಗ್ರಾಮದ ಮುಖಂಡರಾದ ಮಂಜಯ್ಯ,ಗಂಗಾಧರ್, ಮನು, ನಾರಾಯಣಸ್ವಾಮಿ, ವಿದ್ಯಾರ್ಥಿಗಳು ಹಾಗು ರೈತ ಬಾಂಧವರು ಪಾಲ್ಗೊಂಡಿದ್ದರು.