ನಮ್ಮ ಮಗನ ನೆನಪು ಈ ಶಾಲೆಯ ಮಕ್ಕಳ ನಗುವಿನಲ್ಲಿ ಕಾಣಬೇಕು:  ಭಾವುಕರಾದ ಚೇತನ್ ಪೋಷಕರು 

ವಿಜಯ ದರ್ಪಣ ನ್ಯೂಸ್….

ನಮ್ಮ ಮಗನ ನೆನಪು ಈ ಶಾಲೆಯ ಮಕ್ಕಳ ನಗುವಿನಲ್ಲಿ ಕಾಣಬೇಕು:  ಭಾವುಕರಾದ ಚೇತನ್ ಪೋಷಕರು

ಶಿಡ್ಲಘಟ್ಟ : ನಮ್ಮ ಮಗನ ನೆನಪು ಈ ಶಾಲೆಯ ಮಕ್ಕಳ ನಗುವಿನಲ್ಲಿ ಕಾಣಬೇಕು ಎಂಬ ಉದ್ದೇಶದಿಂದ ಈ ಪುಟ್ಟ ಸೇವೆ ಮಾಡಿದ್ದೇವೆ ಎಂದು ಚೇತನ್ ಅವರ ಪೋಷಕರು ಭಾವುಕರಾಗಿ ತಿಳಿಸಿದರು.

ತಾಲ್ಲೂಕಿನ ಬಸವಾಪಟ್ಟಣ ಗ್ರಾಮದ ಆಂಜಿನಪ್ಪ ಮತ್ತು ನೇತ್ರಾವತಿ ದಂಪತಿ. ತಮ್ಮ ಪುತ್ರ ದಿ.ಚೇತನ್ ಅವರ 4ನೇ ವರ್ಷದ ಸ್ಮರಣಾರ್ಥವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

ಅಗಲಿದ ಜೀವದ ನೆನಪನ್ನು ಕೇವಲ ಕಣ್ಣೀರಿನಲ್ಲಿ ಕಳೆಯದೆ, ಶಾಲಾ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ನೀರಿನ ಬಾಟಲಿ, ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಮಕ್ಕಳಿಗೆ ಸಿಹಿ ಹಂಚಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಪ್ರತೀಶ್‌ ಮಾತನಾಡಿ ವಾರ್ಷಿಕ ಸ್ಮರಣೋತ್ಸವಗಳನ್ನು ದುಂದುವೆಚ್ಚ ಮಾಡಿ ಆಚರಿಸುವ ಬದಲು, ಇಂತಹ ಶೈಕ್ಷಣಿಕ ಸೇವಾ ಕಾರ್ಯಗಳ ಮೂಲಕ ಆಚರಿಸುವುದು ನಿಜಕ್ಕೂ ಶ್ಲಾಘನೀಯ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾಳಮಾಚನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಶೈಲಜಾ, ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಡಿಪಿನಾಯಕನಹಳ್ಳಿ ಸುಬ್ರಮಣಿ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ಉಮಾದೇವಿ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ರಾಮದಾಸ್‌ ಇನ್ನಿತರರು ಹಾಜರಿದ್ದರು.

ಜ್ಞಾನಾರ್ಜನೆಗೆ ನಿರಂತರ ಅಧ್ಯಯನ ಮಾಡಿ

ಶಿಡ್ಲಘಟ್ಟ : ನಿರಂತರ ಅಭ್ಯಾಸ, ಪುನರಾವರ್ತನೆ, ಗುಂಪು ಅಧ್ಯಯನ, ಬೆಳಗ್ಗೆ 4 ಗಂಟೆಗೆ ಎದ್ದು ಓದುವುದರಿಂದ ಜ್ಞಾನ ಹೆಚ್ಚುತ್ತದೆ ಎಂದ ಅವರು, ಶಿಸ್ತು, ಸಂಯಮ ಹಾಗು ದೇಶಕ್ಕೆ ಸೇವೆ ಸಲ್ಲಿಸಿದ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡು, ವಿದ್ಯಾರ್ಥಿಗಳನ್ನು ಸೇನೆಗೆ ಸೇರಿ ಎಂದು ವಾಯುಸೇನೆಯ ನಿವೃತ್ತ ಯೋಧ ಹಾಗು ಹಿರಿಯ ಪತ್ರಕರ್ತ ಎಸ್.ವೆಂಕಟೇಶ್‌ಅಯ್ಯರ್ ಮನವಿ ಮಾಡಿದರು.

ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ
ಅವರು ತಮ್ಮ ಪತ್ನಿ ದಿ.ಪ್ರಭಾವತಿ ಅವರ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಸಮಯವನ್ನು ವ್ಯರ್ಥ ಮಾಡದೇ ಸಮಯಕ್ಕೆ ಬೆಲೆ ಕೊಡಿ ಕಳೆದ ಹೋದ ಸಮಯ ಮತ್ತೆ ಬರುವುದಿಲ್ಲ ,ಶಿಸ್ತನ್ನು ಪಾಲನೆ ಮಾಡಿ, ಶಿಕ್ಷಕರು ಶಾಲೆಯಲ್ಲಿ ಹೇಳಿದ ಪಾಠವನ್ನು
ಗಮನವಿಟ್ಟು ಕೇಳಿ ಅರ್ಥ ಮಾಡಿಕೊಂಂಡಲ್ಲಿ ಅಂಕ ಗಳಿಸುವುದು ಕಷ್ಟವೇನು ಆಗಲ್ಲ ಎಂದು ಕಿವಿಮಾತು ಹೇಳಿದರು.

ಮುಖ್ಯ ಶಿಕ್ಷಕರಾದ ಮುನಿನಾರಾಯಣಸ್ವಾಮಿ ಮಾತನಾಡಿ, ಹಿರಿಯರ ಅನುಭವದ ಮಾತುಗಳು ನಮಗೆ ಸದಾ ದಾರಿದೀಪವಿದ್ದಂತೆ, ಅವರ ಕೊಡುಗೆ ನಮಗೆ ಸದಾ ಆಶೀರ್ವಾದ ಪ್ರತಿಯೊಬ್ಬರು ಯೋಧರ ಗುಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಶಿಕ್ಷಕಿಯಾದ ಮಾಲತಿ ಮಾತನಾಡಿ, ತನ್ನಲ್ಲಿ ಶಿಸ್ತು ಸಮಯ ಪಾಲನೆಯ ಗುಣ, ನಮ್ಮ ತಂದೆಯಿಂದಲೇ ಬಂದಿದ್ದು, ಅವರು ಆದರ್ಶ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ ಎಂದರು.

10ನೇ ತರಗತಿ ವಿದ್ಯಾರ್ಥಿಗಳಾದ ಎಸ್.ಎಂ.ನರಸಿಂಹ, ಲಿಖಿತಾ ಮಾತನಾಡಿ ಗಡಿ ಕಾಯುವ ಯೋಧರನ್ನು ಭೇಟಿ ಮಾಡುವುದು ಅಪರೂಪ ದೇಶಕ್ಕಾಗಿ ಹೋರಾಡಿದವರಿಂದ ಮಾರ್ಗದರ್ಶನ ಮತ್ತು ಕಾಣಿಕೆ ಪಡೆದ ನಾವು ಧನ್ಯರು ನಾವು ಇವರ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶ ಪಡೆದು ಶಾಲೆಗೆ, ಶಿಕ್ಷಕರಿಗೆ ಗೌರವ ತರುತ್ತೇವೆ ಎಂದರು.

ಈ ವೇಳೆ ನಿವೃತ್ತ ಯೋಧರಾದ ವೆಂಕಟೇಶ್ ಅಯ್ಯಂಗಾರ್ ಅವರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮುನಿನಾರಾಯಣಸ್ವಾಮಿ, ಶಿಕ್ಷಕರಾದ ಹೇಮಾವತಿ, ಮಾಲತಿ ಹಾಗು ಪಾಲಣ್ಣ ಹಾಜರಿದ್ದರು.