ಪತ್ರಕರ್ತ ಕರಾಟೆ ರಾಜುರವರ ಮಗ ಮತ್ತು ಸೊಸೆ ರಸ್ತೆ ಅಪಘಾತದಲ್ಲಿ ಧಾರುಣ ಸಾವು.

ವಿಜಯ ದರ್ಪಣ ನ್ಯೂಸ್…                            ನಂದಗುಡಿ, ಹೊಸಕೋಟೆ ತಾಲೂಕು.

ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ದಂಪತಿ ಮೇಲೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು  ಬನಹಳ್ಳಿಯಲ್ಲಿ ವಾಸವಾಗಿರುವ ವಿಜಯಪುರ ವಾಣಿ ಪತ್ರಿಕೆ ಸಂಪಾದಕ ಎಂ ಕರಾಟೆ ರಾಜು ಅವರ ಮಗ ಆರ್ ಮುರುಗೇಶ್ ಮತ್ತು ಸೊಸೆ ಎಂ ಶಿಲ್ಪ ಎಂದು ಗುರುತಿಸಲಾಗಿದೆ. ಎಂ ಶಿಲ್ಪ ತನ್ನ ಗಂಡನ ಜೊತೆ ಊಟ ಮುಗಿಸಿ ವಾಕಿಂಗ್ ಹೋಗಿ ಬರುತ್ತೇವೆ ಎಂದು ಹೋದವರು  ಮನೆಗೆ  ವಾಪಸ್ಸು  ಬರಲು ರಸ್ತೆ ದಾಟಲು ನಿಂತಿದ್ದಾಗ ಈ ಘಟನೆ ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಸಂಭವಿಸಿದೆ .

ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ದಂಪತಿಗೆ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ, ಅಪಘಾತ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿ ಚಾಲಕನ ಬಂಧನಕ್ಕೆ ಬಲೆ ಬಿಸಿದ್ದಾರೆ.

ಒಂದು ವರ್ಷದ ಹಿಂದೆಯಷ್ಟೇ ಜೀವನದಲ್ಲಿ ಹಲವಾರು ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು  , ಎಂ ಶಿಲ್ಪ ಗರ್ಭಿಣಿ ಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಧಾರುಣವಾಗಿ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಒಂದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು , ಈ ಜೋಡಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ಆರ್  ಮುರುಗೇಶ್ ಮತ್ತು ಎಂ ಶಿಲ್ಪ ಸಾವಿನಲ್ಲೂ ಒಂದಾಗಿದ್ದಾರೆ.